More

    ವಾರಭವಿಷ್ಯ | ಸಿಂಹವೂ ನೀವೇ, ರಾಶಿಯೂ ನಿಮದೇ. ಹುಲಿವೇಷದ ಮರ್ಕಟವನ್ನು ನಂಬದಿರಿ.

    ವಾರಭವಿಷ್ಯ | ಸಿಂಹವೂ ನೀವೇ, ರಾಶಿಯೂ ನಿಮದೇ. ಹುಲಿವೇಷದ ಮರ್ಕಟವನ್ನು ನಂಬದಿರಿ.

    ಮೇಷ
    ರಾಶಿಯ ಸೂರ್ಯಪಥವು ವೃಶ್ಚಿಕಕ್ಕೆ ಬಂದು ಕೇವಲ ಎರಡು ಮಾಸಗಳಲ್ಲಿ ಧನಸ್ಸನ್ನು ಪ್ರವೇಶಿಸುತ್ತಾನೆ. 9 ರ ಸೂರ್ಯ, 10ರ ಶನಿ-ಗುರು ನಿಮಗೆ ಎಲ್ಲವನ್ನು ಕೊಟ್ಟು ಅನುಗ್ರಹಿಸುತ್ತಾರೆ. ದೈವಚಿಂತನೆ ಇರಬೇಕು. ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ. ಸೂರ್ಯನನ್ನು ಪ್ರಾರ್ಥಿಸಿ. ವಿಶೇಷವಾಗಿ ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ಅರ್ಚಿಸಿ ಪೂಜಿಸಿ.

    ವೃಷಭ
    ಅಷ್ಟಮ ಸೂರ್ಯ ಸಣ್ಣದಾದ ಸಂಕಟ, ವ್ಯಥೆಯನ್ನು ಶರೀರಕ್ಕೆ ಆಲಸ್ಯದಿಂದ ಕೂಡಿದ ಅನಾರೋಗ್ಯವನ್ನು ಸೂಚಿಸುತ್ತದೆ. ಆದರೆ 9 ರ ಗುರು ಸರ್ವಶ್ರೇಷ್ಠನು, ಎಲ್ಲಾ ಪಾಪಗಳನ್ನು ಕಳೆದು ಕಾಪಾಡುತ್ತಾನೆ. ನಿರಂತರ ಗುರು ಪ್ರಾರ್ಥನೆ ಇರಲಿ. ಧನ, ಸುಖ-ಸಂಪತ್ತು ಹಂಚಿಕೊಂಡು ಕುಲಗುರು, ಜನ್ಮದಾತರ ಅನುಗ್ರಹ ಪಡೆಯಿರಿ. ಮೀನಾಕ್ಷಿ ಸುಂದರೇಶ್ವರನನ್ನು ನೆನೆದು ಮನೆಯಲ್ಲೇ ಶಿವನನ್ನು ಅರ್ಚಿಸಿ.

    ಮಿಥುನ
    20ನೇ ತಾರೀಕಿನಿಂದ ಗುರುವಿನ ಬದಲಾವಣೆ ನಿಮ್ಮನ್ನು ಆರೋಗ್ಯದ ಬಗ್ಗೆ ಎಚ್ಚರ ವಹಿಸಲು ಸೂಚನೆ ನೀಡುತ್ತದೆ. ಶನಿಯು ಜೊತೆಯಿರುವುದರಿಂದ ಜಾಗರೂಕರಾಗಿದ್ದು, ಗುರುಸ್ಥಾನ ಪಲ್ಲಟಕ್ಕೆ ಕಾಯುವ ಸಮಯ ಬಂದಿದೆ. ಹಿರಿಯರ ಮಾರ್ಗದರ್ಶನದಲ್ಲಿ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಸನ್ನತಿಯ ಚಂದಲಾಪರಮೇಶ್ವರಿ ಸ್ತುತಿಸಿ. ಮನೆಯಲ್ಲಿರುವ ದೇವಿಗೆ ಆರತಿ ಬೆಳಗಿ ಬೆಳಕನ್ನು ಕಂಡುಕೊಳ್ಳಿ.

    ಕಟಕ
    ಶೀತಲ ರಾಶಿಯವರಾದ ನೀವು ಗುರುವಿನ ಅನುಗ್ರಹಕ್ಕೆ ಪಾತ್ರರಾಗಿ ಮನ್ನಣೆ ಪಡೆಯುತ್ತೀರ. ಆದರೆ ಸಪ್ತಮ ಶನಿಯು ಕೆಲವೊಂದು ಸಮಸ್ಯೆಗಳನ್ನು ತರಬಹುದು. ಧೈರ್ಯಕ್ಕೆ ಚ್ಯುತಿ ಬೇಡ. ಸಪ್ತಮ ಗುರುವೇ ಸರ್ವೆಶ್ವರನು. ನಿಮ್ಮ ಕುಲಗುರುಗಳನ್ನು ಪ್ರತ್ಯಕ್ಷವಾಗಿ ದರ್ಶನ ಮಾಡಿ, ಸೇವೆ ಮಾಡಿ. ಜೀವನವನ್ನು ಸುಖವಾಗಿಸಿಕೊಳ್ಳಿ.

    ಸಿಂಹ
    ಸಿಂಹವೂ ನೀವೇ, ರಾಶಿಯೂ ನಿಮದೇ. ಹುಲಿವೇಷದ ಮರ್ಕಟವನ್ನು ನಂಬದಿರಿ. ಅನಂತವಾಗಿ ಆದಿತ್ಯನನ್ನು ಅರ್ಚಿಸಿ. 6ರ ಶನಿ ನಿಮಗೆ ಕೀರ್ತಿ ಧನ, ಸುಖ ಕೊಡುತ್ತಾನೆ. ಮಹಾವಿಷ್ಣುವಿನ ಸೃಷ್ಟಿ ಕೇವಲ ಸ್ವಾರ್ಥಕ್ಕಾಗಿ ಅಲ್ಲ. ಕೈಲಾದ ಉಪಕಾರ ಮಾಡಿ. ಸಿಂಹ ರಾಶಿಯವರಿಗೆ ಪಿತೃಋಣ ತೀರಿಸಲಾಗದ ವಿಷಯ. ಆದರೆ ಜೀವಋಣವನ್ನು ಅಲ್ಪಮಟ್ಟಿಗೆ ತೀರಿಸಿ.

    ಕನ್ಯಾ
    ಪಂಚಮ ಗುರು ಬಂದರೂ, ಶನಿ ಪಂಚಮದಲ್ಲಿದ್ದುದರಿಂದ ವಿನಾಕಾರಣ ಚಿಂತೆ ಮಾಡದಿರಿ. ಶನಿಮಹಾರಾಜನ ಆಟವನ್ನು ಕಟ್ಟಿಹಾಕಲು ಗುರುವು ಸಮರ್ಥನು. ಶ್ರೀರಾಮನನ್ನು ಪೂಜಿಸಿ. ಸರ್ವಕಷ್ಟವೂ ಸುಖವಾಗಿ ಪರಿವರ್ತನೆಯಾಗುತ್ತದೆ. ಶನಿವಾರದಂದು ರಾಮನ ಪೂಜೆ ಮರೆಯದಿರಿ. ಹನುಮಂತನು ಬಂದು ನಿಮ್ಮ ಕಷ್ಟ ನೀಗುತ್ತಾನೆ.

    ತುಲಾ
    ಸೂರ್ಯನು ವೃಶ್ಚಿಕ ರಾಶಿಗೆ ಸಾಗಿದ್ದು, ನಿಮಗೆ ದ್ವಿತೀಯಕ್ಕೆ ಬಂದಿರುತ್ತಾನೆ. ಚತುರ್ಥ ಶನಿ, ಪಂಚಮ ಶನಿ ತುಲಾರಾಶಿಯಲ್ಲಿ ಜನಿಸಿದವರಿಗೆ ಕೇಡುಂಟು ಮಾಡುವುದಿಲ್ಲ. ಆದರೆ ತಾಳ್ಮೆ, ಜಾಣ್ಮೆಯ ಕೆಲಸವನ್ನು ಮಾಡಿರಿ. ಶನಿಯು ಪಾಪಗ್ರಹವೆಂದು ಕರೆಯಲ್ಪಟ್ಟರೂ ಅವನು ನಮ್ಮಲ್ಲಿರುವ ಧರ್ಮಶ್ರದ್ಧೆ, ದೈವಭಕ್ತಿ ಕಂಡರೆ ಇನ್ನೂ ಹೆಚ್ಚಿನ ರಕ್ಷಣೆ, ಪ್ರಗತಿ ಕೊಡುವನು. ಲಕ್ಷ್ಮೀನರಸಿಂಹನನ್ನು ಪ್ರಾರ್ಥಿಸಿ.

    ವೃಶ್ಚಿಕ
    ಸೂರ್ಯನು ಜೀವನ ಬೆಳಕನ್ನು ತರಲು ದೀಪಾವಳಿಯ ದಿನ ಪ್ರವೇಶ ಮಾಡಿದ್ದಾನೆ. ನಿಮ್ಮ ಸಮಯ ಸದುಪಯೋಗ ಮಾಡಿಕೊಳ್ಳಿ. ವ್ಯಾಪಾರ, ಉದ್ಯೋಗ ಎಲ್ಲದರಲ್ಲೂ ಉತ್ಸಾಹ, ಶ್ರದ್ಧೆಯಿಂದ ಕೆಲಸ ಮಾಡಿದಲ್ಲಿ ನೀವು ಅಪಸ್ವರ ಎತ್ತುವ ಅಗತ್ಯ ಬರುವುದಿಲ್ಲ. ಬರುವ ಧನಕ್ಕೆ ಲೆಕ್ಕವೂ ಬೇಕು, ಪಾಪಪುಣ್ಯಗಳ ಲೆಕ್ಕವೇ ನಿಮ್ಮನ್ನು ಕಾಪಾಡುತ್ತದೆ.

    ಧನಸ್ಸು
    ವೃಥಾ ಕೋಪವು ಶೂರ್ಪಣಕಿ ಮೂಗನ್ನು ಕೊಯ್ದುಕೊಂಡಂತೆ, ಉದ್ವೇಗವು ರೋಗವನ್ನು ತರುತ್ತದೆ. ತಾಳ್ಮೆ ಸಂತೋಷವನ್ನು ತರುತ್ತದೆ. ನಿಮಗೆ ಭಗವಂತನು ಏನನ್ನೂ ಕಡಿಮೆ ಮಾಡಿಲ್ಲ. ಮೂಲಾ ನಕ್ಷತ್ರದವರು ಸ್ವಾಭಾವಿಕವಾಗಿ ಕಷ್ಟಪಟ್ಟು, ರಾಜಯೋಗ ಅನುಭವಿಸುತ್ತೀರ. ನಿಮಗೆ ಎಲ್ಲವೂ ತಾನಾಗಿಯೇ ಸಿಗುತ್ತದೆ. ದತ್ತಾತ್ರೇಯ ಅಷ್ಟಕ ಪಠಿಸಿ.

    ಮಕರ
    ಗುರುವು ಶನಿಯೊಡನೆ ಇರುವುದರಿಂದ ಭೀತಿ ಬೇಕಿಲ್ಲ. ಆದರೂ ಶನಿಯು ಜನ್ಮದಲ್ಲೇ ಇರುವುದರಿಂದ ನಿಮ್ಮನ್ನು ಪೇಚಿಗೀಡು ಮಾಡಿ ಪರೀಕ್ಷಿಸುವ ಸಮಯ. ತೃಪ್ತಿ ಇದ್ದವನಿಗೆ ಆನಂದದ ಭಯವಿಲ್ಲ. ಆರೋಗ್ಯವಿದ್ದವನಿಗೆ ಆಯುಷ್ಯದ ಕೊರತೆಯಿಲ್ಲ. ದೇವರು ಕೊಟ್ಟ ವರವನ್ನು ಸರಿಯಾಗಿ ಯೋಚಿಸಿ ಉಪಯೋಗಿಸಿಕೊಳ್ಳಿ. ಶನಿ ಪ್ರಾರ್ಥನೆ ಹಾಗೂ ದಾರಿದ್ರ್ಯದಹನ ಶಿವಸ್ತೋತ್ರ, ದಕ್ಷಿಣಾಮೂರ್ತಿಯನ್ನು ಜಪಿಸಿ, ಪೂಜಿಸಿ.

    ಕುಂಭ
    ಗುರುವು ಹನ್ನೆರಡನೇ ಮನೆಯಲ್ಲಿದ್ದು ಶನಿ ಸಂಯೋಗದಲ್ಲಿ ನಿಮಗೆ ಋಣಬಾಧೆಯನ್ನು, ಧನಕ್ಕೆ ಕೊರತೆಯನ್ನು, ಖಿನ್ನಮನಸ್ಸಿನಿಂದ ಅನಾರೋಗ್ಯವನ್ನೂ ಸೂಚಿಸುತ್ತಾನೆ. ದೇಹವನ್ನೇ ಕೊಟ್ಟ ದೇವರು ಧೈರ್ಯವನ್ನೂ ಕೊಟ್ಟಿರುತ್ತಾನೆ. ನಿಮ್ಮ ಬುದ್ಧಿವಂತಿಕೆ ನಿರೂಪಿಸಬೇಕು. ಯಾರೂ ಉಪಕಾರ ಮಾಡದಿದ್ದರೂ ದೂಷಿಸಬೇಡಿ. ಶಾಂತಚಿತ್ತರಾಗಿ ಗುರು-ಶನಿಯನ್ನು ಅರ್ಚಿಸಿ. ಗುರು-ಶನಿ ಅಷ್ಟೋತ್ತರ, ಮಹಾಲಕ್ಷಿ್ಮೕ ಅಷ್ಟಕ ಪಾರಾಯಣ ಮಾಡಿ.

    ಮೀನ
    ಸುಖದ ಸುಪ್ಪತ್ತಿಗೆ ಮೇಲೆ ಕೂತಿರುವವರಿಗೆ ಮುಳ್ಳಿನ ದಾರಿ ಬರುವುದಿಲ್ಲ. ಚೂಪಾದ ಸೂಜಿಯೂ ಕಾಣುವುದಿಲ್ಲ. ಸುಖ-ಸಂಪತ್ತು ನಿಮ್ಮನ್ನು ಕೂಡಿಕೊಂಡೇ ಇದೆ. ಆದರೆ ಸುಖಬಂದಾಗ ಕಷ್ಟಕಾರ್ಪಣ್ಯ ಯೋಚಿಸುವುದು ನಿಮ್ಮ ಜೀವನಶೈಲಿ. ಧನ, ಸುಖವನ್ನು ಹಂಚಿ ಉಪಕಾರ ಉಳ್ಳವರಾಗಿ ಬಾಳುವುದೇ ಜೀವನಕ್ಕೆ ಸೌಂದರ್ಯ. ಶ್ರೀ ಅಧ್ಯಾತ್ಮ ರಾಮಾಯಣದ ಪಾರಾಯಣ ಮಾಡಿ ಮನುಜನು ಹೇಗಿರಬೇಕೆಂದು ಅಭ್ಯಾಸ ಮಾಡಿಕೊಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts