More

    ನಂದಿಗಿರಿಯಲ್ಲಿ ವೀಕೆಂಡ್ ಕರ್ಫ್ಯೂ ; ಹೊಸ ವರ್ಷಾಚರಣೆಗೂ ಇಲ್ಲ ಅವಕಾಶ 

    ಚಿಕ್ಕಬಳ್ಳಾಪುರ: ನಂದಿ ಬೆಟ್ಟದಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕ್ರಿಸ್ಮಸ್ ರಜೆಯ ಮೋಜಿನಲ್ಲಿರುವ ಪ್ರವಾಸಿಗರು ಜಿಲ್ಲೆಯ ಇತರ ತಾಣಗಳಲ್ಲಿ ಸುತ್ತಾಡಿ ಮುದ ಅನುಭವಿಸಿದರು.

    ಕರೊನಾ ಹೊಸ ತಳಿ ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ನೈಟ್‌ಕರ್ಫ್ಯೂ ಸೇರಿ ಹಲವು ಮುಂಜಾಗ್ರತೆ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಇದರ ನಡುವೆ ಜಿಲ್ಲಾಡಳಿತ ಸಹ ಪ್ರವಾಸಿಗರ ದಟ್ಟಣೆಗೆ ಕಡಿವಾಣ ಹಾಕುವ ಉದ್ದೇಶದಿಂದ ವೀಕೆಂಡ್ ಕರ್ಫ್ಯೂ ಜತೆಗೆ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದೆ.

    ಬೆಂಗಳೂರು ಸುತ್ತಲಿನ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಐಟಿಬಿಟಿ ನೌಕರರು ಸೇರಿದಂತೆ ಭಾನುವಾರ ಗಿರಿಧಾಮಕ್ಕೆ ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರನ್ನು ಚೆಕ್ ಪೋಸ್ಟ್‌ನಲ್ಲಿ ಪೊಲೀಸ್ ಸಿಬ್ಬಂದಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ಮಾಹಿತಿ ನೀಡಿ ವಾಪಸ್ ಕಳುಹಿಸಿದರು.

    ಬೇಸರಗೊಂಡ ಹಲವರು ಜಿಲ್ಲೆಯ ವಿವಿಧ ತಾಣಗಳತ್ತ ಮುಖ ಮಾಡಿದರು. ತಾಲೂಕಿನ ಸ್ಕಂದಗಿರಿ, ಆವಲಬೆಟ್ಟ, ದಂಡಿಗಾನಹಳ್ಳಿ ಮತ್ತು ಶ್ರೀನಿವಾಸ ಸಾಗರ ಜಲಾಶಯ ವೀಕ್ಷಣೆಯಲ್ಲಿ ಕಾಲಕಳೆದರು. ಕರೊನಾ ಮೊದಲ ಮತ್ತು ಎರಡನೇ ಅಲೆಯ ಬಳಿಕ ಗಿರಿಧಾಮದಲ್ಲಿ ಭೂ ಕುಸಿತ ಉಂಟಾಗಿ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಕೊನೆಗೆ 80 ಲಕ್ಷ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡು ಪ್ರವೇಶಕ್ಕೆ ಮುಕ್ತ ಅವಕಾಶ ನೀಡುವ ಸಂದರ್ಭದಲ್ಲಿ ಒಮಿಕ್ರಾನ್ ಆತಂಕ ಮತ್ತೆ ಪ್ರವಾಸಿಗರ ಆಸೆಗೆ ತಣ್ಣೀರು ಎರಚಿದೆ.

    ಹೊಸ ವರ್ಷಾಚರಣೆ ಸಂಭ್ರಮವಿಲ್ಲ: ಹಿಂದೆ ವರ್ಷದ ಮೊದಲ ದಿನ ಜ.1 ರಂದು ಬೆಳಗ್ಗೆ ಗಿರಿಧಾಮದ ಪ್ರವೇಶಕ್ಕೆ ಅವಕಾಶ ಇತ್ತು. ಆದರೆ, ಈ ಬಾರಿ ನಿರ್ಬಂಧ ಹೇರಲಾಗಿದೆ. ಡಿ.30ರ ಸಂಜೆ 6 ರಿಂದ ಜ.2ರ ಬೆಳಗ್ಗೆ 6ರವರೆಗೆ ಸಾರ್ವಜನಿಕರಿಗೆ ಗಿರಿಧಾಮಕ್ಕೆ ಪ್ರವೇಶಿಸಲು ಅವಕಾಶ ಇಲ್ಲ. ಹೊಸ ವರ್ಷದ ಆಚರಣೆಗೆ ಬೆಂಗಳೂರು, ಗ್ರಾಮಾಂತರ ಮತ್ತು ತುಮಕೂರು ಸೇರಿ ಇತರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಕರೊನಾ ರೂಪಾಂತರಿ ಓಮಿಕ್ರಾನ್ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಿದ್ದು ಇದಕ್ಕೆ ಕಡಿವಾಣ ಹಾಕಲು ಪರಿಸರವನ್ನು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿರ್ಬಂಧದ ಆದೇಶ ಹೊರಡಿಸಲಾಗಿದೆ.

    ಒಮಿಕ್ರಾನ್ ಆತಂಕದ ಸಂದರ್ಭದಲ್ಲಿ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ಜನಸಂದಣಿ ಸೇರುವುದನ್ನು ತಡೆಯುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಡಿ.30ರ ಸಂಜೆ 6 ರಿಂದ ಜ.2ರ ಬೆಳಗ್ಗೆ 6ರವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
    ಆರ್.ಲತಾ, ಜಿಲ್ಲಾಧಿಕಾರಿ

    ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಗೆಳೆಯರೊಂದಿಗೆ ನಂದಿ ಗಿರಿಧಾಮಕ್ಕೆ ಆಗಮಿಸಿದಾಗ ಪ್ರವೇಶ ಸಿಗಲಿಲ್ಲ. ಇದಕ್ಕೆ ಸಮೀಪದ ಸ್ಕಂದಗಿರಿಗೆ ತೆರಳಬೇಕಾಯಿತು.
    ರಾಣಿ, ಪ್ರವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts