ಬೆಂಗಳೂರಿನಂತಹ ಮಹಾನಗರದಲ್ಲೂ ಕಾಡಾನೆ ದಾಳಿಗೆ ಕಾರ್ವಿುಕನೊಬ್ಬ ಬಲಿಯಾಗಿರುವುದು ಆತಂಕಕಾರಿ ಬೆಳವಣಿಗೆ. ರಾಜರಾಜೇಶ್ವರಿ ನಗರ ಸಮೀಪದ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದ ಈ ಘಟನೆ, ನಗರ ವಿಸ್ತರಣೆ ಮತ್ತು ವನ್ಯಜೀವಿಗಳ ವಾಸಸ್ಥಾನಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಕಾಡುಪ್ರಾಣಿಗಳು ತಮ್ಮ ಸಹಜ ವಾಸಸ್ಥಾನದಿಂದ ಹೊರಬಂದು ನಗರ ಪ್ರದೇಶಗಳಿಗೆ ನುಗ್ಗುತ್ತಿವೆ ಎಂಬುದನ್ನಷ್ಟೇ ಸಮಸ್ಯೆಯಾಗಿ ಬಿಂಬಿಸುವುದು ಸರಿಯಲ್ಲ. ಅವುಗಳ ವಾಸಸ್ಥಾನ ಮತ್ತು ಸಂಚಾರ ಮಾರ್ಗಗಳಲ್ಲಿ ಮಾನವ ಚಟುವಟಿಕೆ ಹೆಚ್ಚುತ್ತಿರುವುದೂ ಸಂಘರ್ಷಕ್ಕೆ ಪ್ರಮುಖ ಕಾರಣ.
ರಾಜ್ಯ ರಾಜಧಾನಿಯ ಸುತ್ತಮುತ್ತ ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿವೆ. ರಸ್ತೆ, ವಸತಿ ಬಡಾವಣೆ, ಕೈಗಾರಿಕಾ ಚಟುವಟಿಕೆ ಹಾಗೂ ಇತರ ನಿರ್ಮಾಣ ಕಾರ್ಯಗಳು ಹೆಚ್ಚುತ್ತಿವೆ. ಇದರಿಂದ ವನ್ಯಜೀವಿಗಳ ಸಂಚಾರ ಮಾರ್ಗಗಳಿಗೆ ಅಡ್ಡಿಯಾಗುತ್ತಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಲು ಪ್ರಾಣಿಗಳು ಬಳಸುತ್ತಿದ್ದ ದಾರಿಗಳಲ್ಲಿ ಮನುಷ್ಯರ ವಸತಿ ಮತ್ತು ಚಟುವಟಿಕೆಗಳು ಬಂದಾಗ, ಇಂತಹ ಮುಖಾಮುಖಿ ಸಾಧ್ಯತೆ ಸಹಜವಾಗಿಯೇ ಹೆಚ್ಚುತ್ತದೆ. ಹಾಗಾಗಿ ವನ್ಯಪ್ರಾಣಿಗಳ ಸಂಚಾರಕ್ಕೆ ಅಗತ್ಯವಿರುವ ಸುರಕ್ಷಿತ ಮಾರ್ಗಗಳನ್ನು ಉಳಿಸುವುದು ಅತ್ಯಗತ್ಯ.
ಇದೇ ವೇಳೆ, ವನ್ಯಜೀವಿಗಳಿಂದ ಮಾನವ ಜೀವಕ್ಕೂ ಅಪಾಯ ಎದುರಾಗುತ್ತಿರುವುದನ್ನು ಕಡೆಗಣಿಸಲಾಗದು. ಅರಣ್ಯದಂಚಿನಲ್ಲಿ ವಾಸಿಸುವವರು, ಕಾರ್ವಿುಕರು, ರೈತರು ಮತ್ತು ಅರಣ್ಯಕ್ಕೆ ಕೆಲಸದ ನಿಮಿತ್ತ ತೆರಳುವವರಿಗೆ ಅಪಾಯದ ಬಗ್ಗೆ ಮುಂಚಿತ ಮಾಹಿತಿ ದೊರೆಯಬೇಕು. ಆನೆಗಳ ಚಲನವಲನವನ್ನು ಪತ್ತೆ ಹಚ್ಚಲು ತಂತ್ರಜ್ಞಾನ ಆಧಾರಿತ ನಿಗಾ ವ್ಯವಸ್ಥೆ, ತ್ವರಿತ ಎಚ್ಚರಿಕೆ ಸಂದೇಶಗಳು ಮತ್ತು ಸ್ಥಳೀಯ ಮಟ್ಟದ ಮಾಹಿತಿ ಜಾಲವನ್ನು ಬಲಪಡಿಸಬೇಕು. ಅಪಾಯಕಾರಿ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜತೆಗೆ ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು. ಇದರ ಜತೆಗೆ ಅರಣ್ಯ ಪ್ರದೇಶಗಳ ಸುತ್ತ ಅನಧಿಕೃತ ನಿರ್ಮಾಣ ಮತ್ತು ಒತ್ತುವರಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ನೀಡುವ ಮೊದಲು ಪರಿಸರದ ಮೇಲಿನ ಪರಿಣಾಮವನ್ನು ಕೂಲಂಕಷವಾಗಿ ಅಭ್ಯಸಿಸಬೇಕು. ವನ್ಯಜೀವಿಗಳ ಸಂಚಾರ ಮಾರ್ಗಗಳು ಮತ್ತು ಆವಾಸಸ್ಥಾನಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸುವುದು ಅಗತ್ಯ. ಈಗಾಗಲೇ ಛಿದ್ರಗೊಂಡಿರುವ ಸಂಚಾರ ಮಾರ್ಗಗಳನ್ನು ಸಾಧ್ಯವಾದಲ್ಲಿ ಮರುಸಂರ್ಪಸುವ ಕ್ರಮವೂ ಆಗಬೇಕು.
ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರವೆಂದರೆ ಪ್ರಾಣಿಗಳನ್ನು ಕಾಡಿಗೆ ಓಡಿಸುವುದಲ್ಲ. ಅವುಗಳ ಸಹಜ ವಾಸಸ್ಥಾನವನ್ನು ಉಳಿಸುವುದು, ಮಾನವ ಚಟುವಟಿಕೆಗಳನ್ನು ನಿಯಂತ್ರಿಸುವುದು ಮತ್ತು ಜನರ ಸುರಕ್ಷತೆಗೆ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು- ಈ ಮೂರೂ ಕ್ರಮಗಳು ಒಟ್ಟಿಗೆ ಸಾಗಬೇಕು. ವನ್ಯಜೀವಿಗಳ ಬದುಕನ್ನೂ ಗೌರವಿಸುವುದು ಪರಿಸರ ಸಮತೋಲನಕ್ಕೆ ಅತ್ಯಗತ್ಯ.
ಬೆಂಗಳೂರಿನ ವಿಸ್ತರಣೆ ಅನಿವಾರ್ಯವಾದರೂ ಅದು ಅರಣ್ಯದ ಅಸ್ತಿತ್ವವನ್ನು ಅಳಿಸುವ ರೀತಿಯಲ್ಲಿ ಇರಬಾರದು. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಮಧ್ಯೆ ಪರಸ್ಪರ ವೈರುಧ್ಯ ಇರಬಾರದು. ನೀತಿ ರೂಪಿಸುವವರಲ್ಲೂ ಇದರ ಬಗ್ಗೆ ಅರಿವು ಮೂಡಬೇಕು. ಕಾಡು ಮತ್ತು ನಾಡಿನ ನಡುವಿನ ಗಡಿ ಅಳಿಸಿಹೋದರೆ ಎರಡೂ ಕಡೆಗೂ ಅಪಾಯ. ಮನುಷ್ಯನಿಗೂ ವನ್ಯಜೀವಿಗಳಿಗೂ ಸುರಕ್ಷಿತ ಅಂತರ ಮತ್ತು ಸಹಬಾಳ್ವೆಯ ವ್ಯವಸ್ಥೆ ರೂಪಿಸುವುದೇ ಇಂದಿನ ಅಗತ್ಯ.