More

    Web Exclusive | ‘ಮುಚ್ಚಿದ ಬಾಗಿಲು’ ತೆರೆಸುವವರು ಯಾರು?

      ಕನ್ನಡದ ಕೆಲಸಗಳಿಗೆ ಹಿನ್ನಡೆ | ಕೆಲಸ ಕಳೆದುಕೊಂಡ 22 ಸಿಬ್ಬಂದಿ

    ಶಾಸ್ತ್ರೀಯ ಭಾಷೆಗಳ ನಡುವೆ ಸಿಐಐಎಲ್ ತಾರತಮ್ಯ

    | ಮುಳ್ಳೂರು ರಾಜು ಮೈಸೂರು

    ಹಿಂದಿನಿಂದಲೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ದ ಬಾಗಿಲು ಮುಚ್ಚಿದೆ. ಆದರೆ, ರಾಜ್ಯ ಸರ್ಕಾರವಾಗಲಿ, ಸಂಬಂಧಪಟ್ಟ ಆಡಳಿತಗಾರರಾಗಲಿ ಅಥವಾ ಕನ್ನಡ ಪರ ಸಂಘ-ಸಂಸ್ಥೆಗಳಾಗಲಿ ಕೇಂದ್ರದ ಬಾಗಿಲು ತೆರೆಸುವ ಪ್ರಯತ್ನಕ್ಕೆ ಮುಂದಾಗಿಲ್ಲ. ಇದರಿಂದ ಕನ್ನಡದ ಕೆಲಸಗಳಿಗೆ ಹಿನ್ನಡೆಯಾಗಿದೆ. ಅಲ್ಲದೆ, ಕೇಂದ್ರದ ಸಿಬ್ಬಂದಿ ಕೆಲಸ ಕಳೆದುಕೊಂಡು ಮನೆಯಲ್ಲೇ ಕೂರುವಂತಾಗಿದೆ.

    ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ, ತೆಲುಗು, ಮಲಯಾಳಂ ಮತ್ತು ಒರಿಯಾ ಅತ್ಯುನ್ನತ ಅಧ್ಯಯನ ಕೇಂದ್ರಗಳಿಗೆ ಕೇಂದ್ರ ಸರ್ಕಾರ ನೀಡಿದ್ದ ಅನುಮತಿ 2021 ಮಾರ್ಚ್ 31ಕ್ಕೆ ಅಂತ್ಯಗೊಂಡಿದೆ. ಆದ್ದರಿಂದ ಮುಂದಿನ ಆದೇಶದವರೆಗೆ ಈ ಕೇಂದ್ರಗಳ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವಂತೆ ಸಿಐಐಎಲ್ ಮಾ. 30ರಂದು ಆದೇಶ ಹೊರಡಿಸಿದೆ. ಪರಿಣಾಮ, ಏಪ್ರಿಲ್ 1ರಿಂದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಬಂದ್ ಆಗಿದೆ.

    ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳಿಗೆ ನೀಡಲಾಗಿರುವ ಅನುಮತಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ಪ್ರತಿವರ್ಷ ನವೀಕರಿಸುತ್ತದೆ. ಅದರಂತೆ, ಪ್ರಸ್ತುತ 2021 ಏಪ್ರಿಲ್ 1ರಿಂದ 2022 ಮಾರ್ಚ್ 31ರವರೆಗೆ ನವೀಕರಣ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಕೆಲಸ ಇನ್ನೂ ಆಗಿಲ್ಲ. ಹೀಗಾಗಿ, ಮುಂದಿನ ಆದೇಶದವರೆಗೆ ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವಂತೆ ಸಿಐಐಎಲ್ ಆದೇಶಿಸಿದೆ. ಆದ್ದರಿಂದ ಏ. 1ರಿಂದ ಕಚೇರಿಯನ್ನು ಮುಚ್ಚಲಾಗಿದೆ ಎಂಬುದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪೊ›.ಬಿ.ಶಿವರಾಮಶೆಟ್ಟಿ ಅವರ ಸಮರ್ಥನೆಯಾಗಿದೆ.

    ಸಿಐಐಎಲ್ ಹೊರಡಿಸಿರುವ ಆದೇಶ ಶಾಸ್ತ್ರೀಯ ತೆಲುಗು, ಮಲಯಾಳಂ ಮತ್ತು ಒರಿಯಾ ಅತ್ಯುನ್ನತ ಅಧ್ಯಯನ ಕೇಂದ್ರಗಳಿಗೂ ಅನ್ವಯವಾಗುತ್ತದೆ. ಆದರೆ ಆ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳು ಬಾಗಿಲು ಮುಚ್ಚಿಲ್ಲ. ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳಿಗೆ ನೀಡಿರುವ ಅನುಮತಿಯನ್ನು ಪ್ರತಿವರ್ಷ ಏಪ್ರಿಲ್ 1ರಿಂದ ಪೂರ್ವಾನ್ವಯ ಆಗುವಂತೆ ನವೀಕರಿಸುತ್ತದೆ. ಆದ್ದರಿಂದ ಅನುಮತಿಯ ಅವಧಿ ಮುಗಿದಿದ್ದರೂ ಇತರ ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳನ್ನು ಬಂದ್ ಮಾಡದೆ, ಕಾರ್ಯನಿರ್ವಹಿಸಲಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವೂ ಹೀಗೆಯೇ ಮಾಡುತ್ತಿತ್ತು. ಆದರೆ ಮೊದಲ ಬಾರಿಗೆ ಈ ವರ್ಷ ಕೇಂದ್ರದ ಬಾಗಿಲು ಮುಚ್ಚಲಾಗಿದೆ. ಇದಕ್ಕೆ ಯೋಜನಾ ನಿರ್ದೇಶಕರ ನಿರಾಸಕ್ತಿ ಮತ್ತು ಪಲಾಯನವಾದವೇ ಕಾರಣ ಎಂದು ಕೇಂದ್ರದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೆಲಸ ಕಳೆದುಕೊಂಡ ಸಿಬ್ಬಂದಿ: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಯೋಜನಾ ನಿರ್ದೇಶಕರೂ ಸೇರಿದಂತೆ 22 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 15 ಜನ ಸಂಶೋಧಕರು, ಒಬ್ಬರು ಕಚೇರಿ ಅಧೀಕ್ಷಕರು, ತಲಾ ಒಬ್ಬರು ಹಿರಿಯ ಮತ್ತು ಕಿರಿಯ ಸಹಾಯಕರು, ಇಬ್ಬರು ಡಿ ಗ್ರೂಪ್ ನೌಕರರು ಮತ್ತು ಒಬ್ಬರು ಸ್ವಚ್ಛತಾ ಸಿಬ್ಬಂದಿ ಸೇರಿದ್ದಾರೆ. ಇನ್ನೂ ಒಂದೆರಡು ಹುದ್ದೆಗಳು ಖಾಲಿಯಿದ್ದು, ಅವುಗಳನ್ನು ಭರ್ತಿ ಮಾಡಿಲ್ಲ. ಈ ಎಲ್ಲ ಹುದ್ದೆಗಳೂ ತಾತ್ಕಾಲಿಕವೇ ಆಗಿದ್ದು, ಎಲ್ಲರೂ ಗೌರವಧನದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಎಲ್ಲರಿಗೂ ಈಗ ಕೆಲಸ ಇಲ್ಲದಂತಾಗಿದೆ.

    ಸ್ವಾಯತ್ತತೆಯೇ ಶಾಶ್ವತ ಪರಿಹಾರ: ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತು 12 ವರ್ಷಗಳೇ ಕಳೆದಿವೆ. ಅಂದಿನಿಂದಲೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ಅದರಿಂದ ಕನ್ನಡಕ್ಕೆ, ಕನ್ನಡಿಗರಿಗೆ ಆಗಿರುವ ಉಪಯೋಗವೇನು ಎಂಬುದು ಯಾರಿಗೂ ಗೊತ್ತಿಲ್ಲ. ಒಂದಷ್ಟು ಕನ್ನಡಿಗರಿಗೆ ಕೆಲಸ ಸಿಕ್ಕಿದೆ (ಅದೂ ತಾತ್ಕಾಲಿಕ) ಅನ್ನುವುದರ ಹೊರತಾಗಿ, ಬೇರೇನೂ ಉಪಯೋಗ ಆದಂತೆ ಕಾಣುತ್ತಿಲ್ಲ. ಆದ್ದರಿಂದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಪಡೆದುಕೊಳ್ಳುವುದೊಂದೇ ಈ ಎಲ್ಲ ಸಮಸ್ಯೆಗಳಿಗೆ ಇರುವ ಪರಿಹಾರ. ಆದರೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಕೇಂದ್ರದ ಯೋಜನಾ ನಿರ್ದೇಶಕರು ಮತ್ತು ಕನ್ನಡ ಪರ ಸಂಘ-ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕಿದೆ.

    ಪ್ರತಿಕ್ರಿಯೆಗೆ ಆಸಕ್ತಿ ತೋರದ ನಿರ್ದೇಶಕರು: ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳಿಗೆ ನೀಡಿರುವ ಅನುಮತಿಯನ್ನು ಕೇಂದ್ರ ಸರ್ಕಾರ ಪೂರ್ವಾನ್ವಯ ಆಗುವಂತೆ ನವೀಕರಿಸುತ್ತದೆ ಮತ್ತು ಕನ್ನಡ ಹೊರತಾದ ಇತರ ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವಾಗ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಮಾತ್ರ ಮುಚ್ಚಲಾಗಿದೆ. ಈ ತಾರತಮ್ಯ ಕುರಿತ ಪ್ರತಿಕ್ರಿಯೆಗಾಗಿ ‘ವಿಜಯವಾಣಿ’ ಸಿಐಐಎಲ್ ನಿರ್ದೇಶಕ ಡಾ.ವೆಂಕಟೇಶಮೂರ್ತಿ ಅವರನ್ನು ಸಂರ್ಪಸಿತು. ಆದರೆ ಅವರು, ಸಭೆಯೊಂದರಲ್ಲಿ ಭಾಗವಹಿಸಿರುವುದಾಗಿ ಮೊದಲಿಗೆ ತಿಳಿಸಿದರು. ಸಭೆ ಮುಗಿದ ಬಳಕ ಸಂರ್ಪಸಬಹುದೇ ಎಂಬ ಪ್ರಶ್ನೆಗೆ, ಏ.10ರವರೆಗೂ ತಾನು ಬ್ಯುಸಿ ಆಗಿರುವುದಾಗಿ ಹೇಳಿ ಏಕಪಕ್ಷೀಯವಾಗಿ ಮೊಬೈಲ್ ಸಂಪರ್ಕ ಕಡಿತಗೊಳಿಸಿದರು. ಒಂದೆರಡು ನಿಮಿಷದಲ್ಲಿ ಉತ್ತರಿಸಬಹುದಾಗಿದ್ದ ವಿಷಯಕ್ಕೆ ವಾರಗಟ್ಟಲೆ ಬ್ಯುಸಿ ಎಂಬ ನೆಪ ಹೇಳಿದ್ದು, ಸ್ವತಃ ಕನ್ನಡಿಗರೇ ಆಗಿರುವ ಅವರ ಕನ್ನಡ ಪರ ಕಾಳಜಿಗೆ ನಿದರ್ಶನದಂತಿತ್ತು.

    ಇದು ಆಡಳಿತಾತ್ಮಕ ವಿಷಯ. ನಮ್ಮ ಕೆಲಸ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ. ಆದ್ದರಿಂದ ಸಿಐಐಎಲ್ ನಿರ್ದೇಶನ ಪಾಲಿಸುವುದರ ಹೊರತಾಗಿ ಈ ವಿಷಯದಲ್ಲಿ ನಾವು ಅಸಹಾಯಕರು. ಸಿಐಐಎಲ್ ಸೂಚನೆ ನೀಡಿದ ದಿನದಿಂದಲೇ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಎಂದಿನಂತೆ ಕಾರ್ಯನಿರ್ವಹಿಸಲಿದೆ.

    | ಪ್ರೊ. ಬಿ.ಶಿವರಾಮಶೆಟ್ಟಿ ಯೋಜನಾ ನಿರ್ದೇಶಕರು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts