More

    Web Exclusive | ಕಲ್ಲು ಗಣಿಗಾರಿಕೆಗೆ ಬೆಚ್ಚಿ ನಾಡಿನತ್ತ ಚಿರತೆಗಳ ದೌಡು; ಕಾಡಂಚಿನ ಜನರಲ್ಲಿ ಆತಂಕ

    | ಪರಶುರಾಮ ಕೆರಿ ಹಾವೇರಿ

    ಜಿಲ್ಲೆಯ ಕಾಡಿನಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿದ್ದ ಚಿರತೆಗಳೀಗ ನಾಡಿಗೆ ಲಗ್ಗೆಯಿಡುತ್ತಿವೆ. ಆಹಾರ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿರುವ ಜತೆಗೆ, ಅಕ್ರಮ ಕಲ್ಲು ಗಣಿಗಾರಿಕೆಯೂ ಚಿರತೆಗಳು ನಾಡಿನತ್ತ ಮುಖ ಮಾಡಲು ಕಾರಣವಾಗಿದೆ.

    ಚಿರತೆಗಳು ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಜತೆಗೆ ದಾಳಿಯನ್ನೂ ನಡೆಸುತ್ತಿರುವುದರಿಂದ ರೈತರು, ಕೃಷಿ ಕಾರ್ವಿುಕರು, ಮಹಿಳೆಯರು, ಮಕ್ಕಳು ಮನೆಯಿಂದ ಹೊರ ಬರಲು ಹೆದರುವಂತಾಗಿದೆ. ಮೂರು ದಿನಗಳ ಹಿಂದಷ್ಟೇ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಪ್ರಾಣ ರಕ್ಷಣೆಗಾಗಿ ಅವರು ಕಾದಾಡಿ ಚಿರತೆಯನ್ನೇ ಕೊಂದು ಹಾಕಿದ್ದಾರೆ. ಇದಾದ ಮರುದಿನವೇ ಬ್ಯಾಡಗಿ ತಾಲೂಕು ಶಿಡೇನೂರ ಹಾಗೂ ಕದಮನಹಳ್ಳಿ ಬಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಸಹ ಹಾಕಿದೆ. ಆದರೂ ಈವರೆಗೆ ಚಿರತೆ ಬಲೆಗೆ ಬಿದ್ದಿಲ್ಲ. ವಾರದ ಹಿಂದೆ ಗುತ್ತಲ ಭಾಗದಲ್ಲಿಯೂ ಚಿರತೆ ಪ್ರತ್ಯಕ್ಷವಾಗಿತ್ತು. ಹೀಗಾಗಿ ಗ್ರಾಮೀಣ ಪ್ರದೇಶದ ಜನರು ರಾತ್ರಿಯಾದರೆ ಸಾಕು ಮನೆಬಿಟ್ಟು ಹೊರಗಡೆ ಸಂಚಾರಕ್ಕೆ ಬರದಂತಹ ಸ್ಥಿತಿ ನಿರ್ವಣವಾಗಿದೆ.

    ಆಹಾರ ಅರಸಿ ನಾಡಿಗೆ: ಚಿರತೆಗಳು ಮುಖ್ಯವಾಗಿ ಕಲ್ಲು ಬಂಡೆಗಳು, ನೀರಿರುವ ಸ್ಥಳದಲ್ಲಿ ಹೆಚ್ಚಾಗಿ ವಾಸವಿರುತ್ತವೆ. ಬಿಸಿಲಿನ ತಾಪ ಹೆಚ್ಚಾಗಿ ಕಾಡಿನಲ್ಲಿಯೂ ನೀರು ಒಣಗುತ್ತಿದೆ. ಹಸಿರು ಮಾಯವಾಗುವ ಜತೆಗೆ ಆಹಾರ ಸಮಸ್ಯೆ ಚಿರತೆಯನ್ನು ಕಾಡಲಾರಂಭಿಸಿದೆ. ಹೀಗಾಗಿ, ಆಹಾರಕ್ಕಾಗಿ ಮುಖ್ಯವಾಗಿ ನಾಯಿ, ಮೇಕೆ, ಕುರಿಯಂತಹ ಪ್ರಾಣಿಗಳ ಮೇಲೆಯೇ ಹೆಚ್ಚಾಗಿ ದಾಳಿ ನಡೆಸುತ್ತದೆ. ಮನುಷ್ಯರ ಮೇಲೆ ಆಹಾರ ಉದ್ದೇಶದಿಂದ ದಾಳಿ ಮಾಡುವುದಿಲ್ಲ. ಆದರೆ, ಒಮ್ಮೆ ಮನುಷ್ಯನ ಮೇಲೆ ದಾಳಿ ಮಾಡಿ ರಕ್ತದ ರುಚಿ ನೋಡಿದರೆ, ಅಂತಹ ಚಿರತೆ ಮತ್ತೆ ಆಹಾರಕ್ಕಾಗಿ ಮನುಷ್ಯರ ಮೇಲೆ ದಾಳಿ ಮಾಡುವುದು ಸಹಜ. ಹೆಣ್ಣು ಚಿರತೆ ಮರಿ ಹಾಕಿದ ಸ್ಥಳದ ಅಕ್ಕಪಕ್ಕದಲ್ಲಿ ಮನುಷ್ಯರು ಸಂಚರಿಸಿದರೂ ದಾಳಿ ಮಾಡುತ್ತವೆ.

    ಅಕ್ರಮ ಗಣಿಗಾರಿಕೆ ಕಾಟ: ಇತ್ತೀಚೆಗೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರ ಹಾವಳಿ ಹೆಚ್ಚುತ್ತಿದೆ. ಹೀಗಾಗಿ ಚಿರತೆಗಳು ಅಲ್ಲಿನ ಜನರಿಂದ ತಪ್ಪಿಸಿಕೊಳ್ಳಲು ನಾಡಿನತ್ತ ಬರತೊಡಗಿವೆ. ಜಿಲ್ಲೆಯಲ್ಲಿ ಯುಟಿಪಿ ಕಾಲುವೆ ನಿರ್ಮಾಣ ಸಮಯದಲ್ಲಿ ದೊರೆತ ದೊಡ್ಡದೊಡ್ಡ ಕಲ್ಲುಬಂಡೆಗಳನ್ನು ಅಲ್ಲಿಯೇ ಬಿಡಲಾಗಿದೆ. ಆ ಕಲ್ಲು ಬಂಡೆಗಳ ಬಳಿಯಲ್ಲಿಯೇ ಗುಹೆ ಆಕಾರದಲ್ಲಿ ನೆಲ ಅಗೆದು ಅಲ್ಲಿಯೇ ಹೆಚ್ಚಾಗಿ ಚಿರತೆಗಳು ವಾಸವಾಗಿವೆ. ಅನೇಕ ಚಿರತೆಗಳು ಇಂತಹ ಕಲ್ಲುಬಂಡೆಗಳ ಬಳಿಯಲ್ಲಿಯೇ ಸೆರೆಸಿಕ್ಕಿವೆ ಎನ್ನುತ್ತಾರೆ ಕಡೂರ ಗ್ರಾಮದ ಪ್ರಗತಿಪರ ರೈತ ಶಂಕರಗೌಡ ಶಿರಗಂಬಿ. ಇವು ಇದೀಗ ಆಹಾರ ಹಾಗೂ ವಾಸದ ಸಮಸ್ಯೆಯಿಂದಾಗಿ ನಾಡಿಗೆ ಲಗ್ಗೆ ಇಡುತ್ತಿವೆ.

    ಪರಿಹಾರ ವಿತರಣೆ: ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 8 ಸಾಕು ಪ್ರಾಣಿಗಳ (ಕುರಿ, ಮೇಕೆ, ಆಕಳು, ಎತ್ತು) ಮೇಲೆ ಚಿರತೆಗಳು ದಾಳಿ ನಡೆಸಿ ಹತ್ಯೆಗೈದಿವೆ. ಇವುಗಳಿಗೆ ಅರಣ್ಯ ಇಲಾಖೆ ಈವರೆಗೆ ಪರಿಹಾರವಾಗಿ 87 ಸಾವಿರ ರೂಪಾಯಿ ನೀಡಿದೆ. ಅಲ್ಲದೆ, ಹಾವೇರಿ ತಾಲೂಕಿನಲ್ಲಿ ಇಬ್ಬರು, ಹಿರೇಕೆರೂರ ತಾಲೂಕಿನಲ್ಲಿ ಒಬ್ಬ ಮನುಷ್ಯರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು, 36 ಸಾವಿರ ರೂ.ಗಳ ಚಿಕಿತ್ಸಾ ವೆಚ್ಚವನ್ನು ಅರಣ್ಯ ಇಲಾಖೆಯಿಂದ ಕೊಡಲಾಗಿದೆ. ಮೂರು ದಿನಗಳ ಹಿಂದೆ ರಟ್ಟಿಹಳ್ಳಿ ತಾಲೂಕು ಬುಳ್ಳಾಪುರದಲ್ಲಿ ಚಿರತೆ ದಾಳಿಯಿಂದ ಇಬ್ಬರಿಗೆ ಗಾಯವಾಗಿದ್ದು, ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಅರಣ್ಯ ಇಲಾಖೆ ಘೊಷಿಸಿದೆ.

    ಚಿರತೆಗಳು ಕಾಡಿನಿಂದ ನಾಡಿಗೆ ಇತ್ತೀಚೆಗೆ ಆಹಾರ ಅರಸಿ ಬರುತ್ತಿರುವುದು ಕಂಡುಬಂದಿದೆ. ಮುಖ್ಯವಾಗಿ ಪೌಲ್ಟ್ರಿ ಫಾಮರ್್​ಗಳು ಇರುವ ಸ್ಥಳಗಳಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಚಿರತೆಗೆ ಪ್ರಿಯವಾದ ಆಹಾರ ಎಂದರೆ ನಾಯಿ. ನಾಯಿಗಳು ಕೂಗುವ ಶಬ್ದ ಅರಸಿಯೂ ಅವು ಜನ ವಾಸಸ್ಥಳದತ್ತ ಬರುತ್ತಿವೆ. ಚಿರತೆಯ ಸೆರೆಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಲಾ 2ರಂತೆ ಬೋನು ಇಡಲಾಗಿದೆ. ಚಿರತೆ ಪ್ರತ್ಯಕ್ಷವಾದ ಭಾಗದಲ್ಲಿ ಜನರು ಒಬ್ಬಂಟಿಯಾಗಿ ತಿರುಗಾಡಬಾರದು. ಗುಂಪಾಗಿ ಸಂಚರಿಸಬೇಕು. ಕೈಯಲ್ಲಿ ದೊಣ್ಣೆಯಂತಹ ವಸ್ತುಗಳನ್ನು ಹಿಡಿದುಕೊಂಡಿರಬೇಕು. ಈ ಕುರಿತು ಜನರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

    | ಎನ್.ಇ. ಕ್ರಾಂತಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾವೇರಿ ಪ್ರಾದೇಶಿಕ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts