More

    Web Exclusive | ಗಣಿತದಲ್ಲಿ ಟ್ಯಾಲೆಂಟ್: ಅರಳು ಹುರಿದಂತೆ ಮಾತಾಡುವ ಶಶಿಧರ

    | ಶಶಿಧರ ಕುಲಕರ್ಣಿ ಮುಂಡಗೋಡ

    ನಾಡಿನ ಶರಣರ ವಚನಗಳನ್ನು ಅರಳು ಹುರಿದಂತೆ ಪಠಣ. ಬಸವ ತತ್ವಗಳ ಬಗ್ಗೆ ಪ್ರಚಾರ. ರಾಷ್ಟ್ರೀಯ ಹಬ್ಬಗಳಲ್ಲಿ ವಿವಿಧ ಸಾಧಕರ ಕುರಿತು ಭಾಷಣ. ಹೀಗೆ ಬಹುಮುಖ ಪ್ರತಿಭೆಯುಳ್ಳ ಬಾಲಕನೊಬ್ಬ ಗ್ರಾಮೀಣ ಭಾಗದಲ್ಲಿ ‘ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು’ ಎಂಬಂತೆ ಅರಳುತ್ತಿದ್ದಾನೆ. ತಾಲೂಕಿನ ಹುನಗುಂದ ಗ್ರಾಮದ 12 ವರ್ಷದ ಶಶಿಧರ ಹಡಪದ ಬಾಲ ಪ್ರತಿಭೆ. ಸಿದ್ದಪ್ಪ ಮತ್ತು ರೇಣುಕಾ ದಂಪತಿಯ ಪುತ್ರ. ಸದ್ಯ ಹುಬ್ಬಳ್ಳಿ ಬೈರಿದೇವರಕೊಪ್ಪದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾನೆ.

    3ನೇ ತರಗತಿಯಿಂದಲೇ ಹಲವಾರು ಪ್ರಶಸ್ತಿಗಳನ್ನು ಈತ ಬಾಚಿಕೊಂಡಿದ್ದಾನೆ. ಬಾಲ್ಯದಲ್ಲಿ ಅಜ್ಜಿ ಬಸಮ್ಮಳ ಮಡಿಲಲ್ಲಿ ಜೋಗುಳ ಪದಗಳನ್ನು ಕೇಳುತ್ತ ಬೆಳೆದ. ಅಜ್ಜಿಯ ಸಲಹೆಯಂತೆ ಬಸವಣ್ಣ, ಹಡಪದ ಅಪ್ಪಣ್ಣ, ಅಕ್ಕಮಹಾದೇವಿ ಮುಂತಾದ ಶರಣ- ಶರಣೆಯರ ವಚನಗಳನ್ನು ಕಲಿತು, ನಿರರ್ಗಳವಾಗಿ ಪಠಿಸುತ್ತಾನೆ. ರಾಷ್ಟ್ರ ಕವಿ ಕುವೆಂಪು, ಶಿವರಾಮ ಕಾರಂತ, ದ.ರಾ. ಬೇಂದ್ರೆ, ಕುಮಾರವ್ಯಾಸ, ಕನಕದಾಸ ಹೀಗೆ ಹಲವಾರು ಸಾಧಕರ ಕುರಿತು ಭಾಷಣ ಮಾಡುತ್ತಾನೆ. ಬಸವ ಕೇಂದ್ರಗಳಲ್ಲಿ ಬಸವ ತತ್ವಗಳ ಬಗ್ಗೆ ಪ್ರಚಾರ ಮಾಡುತ್ತಾನೆ. ರೈತರ ಈಗಿನ ಸ್ಥಿತಿಗತಿಗಳ ಬಗ್ಗೆ ಇಂಗ್ಲಿಷ್​ನಲ್ಲಿ ಉಪನ್ಯಾಸ ನೀಡುತ್ತಾನೆ.

    Web Exclusive | ಗಣಿತದಲ್ಲಿ ಟ್ಯಾಲೆಂಟ್: ಅರಳು ಹುರಿದಂತೆ ಮಾತಾಡುವ ಶಶಿಧರ
    ಮುಂಡಗೋಡದ ಪ.ಪಂ. ಸಭಾಭವನದಲ್ಲಿ ಜರುಗಿದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಾಲಕ ಶಶಿಧರನನ್ನು ಆಗಿನ ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಸನ್ಮಾನಿಸಿದರು.

    ನಾಟಕ-ನೃತ್ಯ, ಕ್ರೀಡೆಗಳಲ್ಲಿ ಭಾಗವಹಿಸುವಿಕೆ, ಉತ್ತಮ ನಿರೂಪಣೆ, ಅಬಾಕಸ್ ಪರೀಕ್ಷೆಗಳಲ್ಲಿ ಹಲವು ಬಾರಿ ಪ್ರಥಮ ಸ್ಥಾನ. ಗಣಿತ ಟ್ಯಾಲೆಂಟ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ನನ್ನ ಎಲ್ಲ ಸಾಧನೆಗೆ ಅಜ್ಜಿ ಮತ್ತು ತಾಯಿ ಹೆಜ್ಜೆ- ಹೆಜ್ಜೆಗೂ ಉತ್ತೇಜನ ನೀಡುತ್ತ ಬಂದಿದ್ದಾರೆ. ಮುಂದೆ ಐಎಎಸ್ ಪರೀಕ್ಷೆ ಪಾಸ್ ಆಗುವ ಗುರಿ ಹೊಂದಿದ್ದೇನೆ ಎನ್ನುತ್ತಾನೆ ಶಶಿಧರ.

    ನನ್ನ ಮಗನ ಈ ಸಾಧನೆಯಲ್ಲಿ ನನ್ನದೇನೂ ಪಾತ್ರವಿಲ್ಲ. ಆತನ ಅಜ್ಜಿ ಮತ್ತು ತಾಯಿ ಆತನಿಗೆ ಪೋ›ತ್ಸಾಹ ನೀಡುತ್ತ ಬಂದಿದ್ದಾರೆ. ನನ್ನದು ಅಳಿಲು ಸೇವೆ ಮಾತ್ರ.

    | ಸಿದ್ದಪ್ಪ ಹಡಪದ ಶಶಿಧರನ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts