More

    Web Exclusive | ಮಹಿಳಾ ನೌಕರರಿಗೆ ಸಿಹಿ ಸುದ್ದಿ; ಹೆರಿಗೆ ಜತೆ ಶಿಶುಪಾಲನಾ ರಜೆಗೂ ಓಕೆ, ಪ್ರಸ್ತಾವನೆಗೆ ಗ್ರೀನ್​ಸಿಗ್ನಲ್

    | ಜಯತೀರ್ಥ ಪಾಟೀಲ ಕಲಬುರಗಿ

    ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಅಪರ ಆಯುಕ್ತ ನಲೀನ್ ಅತುಲ್ ಸಲ್ಲಿಸಿದ್ದ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ, ಮಕ್ಕಳಿಗೆ ಪ್ರತ್ಯೇಕ ಆಯವ್ಯಯ ಪ್ರಸ್ತಾವನೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಸಕ್ತ ಬಜೆಟ್​ನಲ್ಲಿ ಈ ಎರಡೂ ಮಹತ್ವದ ಅಂಶಗಳನ್ನು ಸೇರ್ಪಡೆ ಮಾಡಿದ್ದಾರೆ.

    ರಾಜ್ಯ ಬಜೆಟ್​ಗೂ ಮುನ್ನ ಅಪರ ಆಯುಕ್ತರು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಈ ಪ್ರಸ್ತಾವನೆ ಸಲ್ಲಿಸಿದ್ದರು. ಕೇಂದ್ರದಂತೆ ರಾಜ್ಯದಲ್ಲೂ ಮಹಿಳಾ ನೌಕರರಿಗೆ ಹೆರಿಗೆ ರಜೆ ಜತೆಗೆ ಶಿಶುಪಾಲನಾ ರಜೆ ಮಂಜೂರು ಮಾಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು.

    ರಾಜ್ಯ ಸರ್ಕಾರ ಈಗಾಗಲೇ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ನೀಡುತ್ತಿದೆ. ಆರು ತಿಂಗಳ ನಂತರ ಪುಟ್ಟ ಮಗುವನ್ನು ಸಂರಕ್ಷಿಸುವವರು ಯಾರು? ತಾಯಿ ಆದವಳೇ ಈ ಮಗುವಿನ ಆರೈಕೆ ಮಾಡಬೇಕು. ಕೇಂದ್ರ ಸರ್ಕಾರ 6ನೇ ವೇತನ ಆಯೋಗದ ಶಿಫಾರಸಿನಲ್ಲಿ ಮಹಿಳಾ ನೌಕರರಿಗೆ ಸಂಬಂಧಿಸಿದಂತೆ ಸೆಂಟ್ರಲ್ ಸಿವಿಲ್ ಸರ್ವೀಸಸ್ (ಲೀವ್) ರೂಲ್ಸ್ 1972 ಹಾಗೂ ನಂತರದ ತಿದ್ದುಪಡಿಗಳಲ್ಲಿ ಶಿಶುಪಾಲನೆ ರಜೆ ಮಂಜೂರಿಗೆ ಅವಕಾಶ ಕಲ್ಪಿಸಿದೆ. ಮೊದಲ ಒಂದು ವರ್ಷ ಶೇ.100 ಸಂಬಳ, ನಂತರ ಒಂದು ವರ್ಷ ಶೇ.80 ಸಂಬಳ ನೀಡಲು ಕೇಂದ್ರ ಸರ್ಕಾರದ ನಿಯಮಾವಳಿಯಲ್ಲಿ ಅವಕಾಶವಿದೆ ಎಂಬುದನ್ನು ಉಲ್ಲೇಖಿಸಿ ಆಯುಕ್ತ ನಲಿನ್ ಅತುಲ್ ಮನವರಿಕೆ ಮಾಡಿಕೊಟ್ಟಿದ್ದರು.

    ಕೇಂದ್ರ ಸರ್ಕಾರದ ಜತೆಗೆ ಪಶ್ವಿಮ ಬಂಗಾಳ, ಪಂಜಾಬ್ ಇತರ ರಾಜ್ಯಗಳಲ್ಲೂ ಶಿಶುಪಾಲನಾ ರಜೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ನೌಕರರಲ್ಲಿ ಶೇ.65 ಮಹಿಳೆಯರಿದ್ದಾರೆ. ಶಿಕ್ಷಕಿಯರು/ಮಹಿಳಾ ಸಿಬ್ಬಂದಿ ತಾವು ವಾಸಿಸುವ ಮತ್ತು ಕರ್ತವ್ಯನಿರ್ವಹಿಸುವ ಸ್ಥಳ ಬೇರೆ ಬೇರೆ ಆಗಿದ್ದರಿಂದ ಶಾಲೆ/ಕಚೇರಿ ಸಮಯದಲ್ಲಿ ಶಿಶುಗಳ ಆರೈಕೆ ಕಷ್ಟಕರವಾಗುತ್ತಿದೆ. ಹೀಗಾಗಿ ಕೇಂದ್ರದ ಮಾದರಿಯಲ್ಲಿ ಸೌಲಭ್ಯ ನೀಡದಿದ್ದರೆ ಸಂವಿಧಾನದ ಮೂಲಭೂತ ಹಕ್ಕುಗಳ ಕಲಂ 14 ಉಲ್ಲಂಘಿಸಿದಂತಾಗುತ್ತದೆ. ಮಹಿಳಾ ಸಿಬ್ಬಂದಿ/ಶಿಕ್ಷಕಿ ಕೆಲಸ ಮಾಡುವ ಕಚೇರಿ/ಸ್ಥಳದಲ್ಲಿ ಶಿಶು/ಮಕ್ಕಳ ಆರೈಕೆ ಕೋಣೆ ಸ್ಥಾಪಿಸಬೇಕು ಎಂಬ ಅಂಶವನ್ನು ಪ್ರಸ್ತಾವನೆಯಲ್ಲಿ ಸೇರಿಸಿದ್ದರು.

    ನಲೀನ್ ಅತುಲ್ ಅವರ ಪ್ರಸ್ತಾವನೆಗೆ ಸೈ ಎಂದಿರುವ ರಾಜ್ಯ ಸರ್ಕಾರ ಈ ಮೊದಲಿನ ಆರು ತಿಂಗಳ ಹೆರಿಗೆ ರಜೆ ಜತೆಗೆ ಹೆಚ್ಚುವರಿ ಆರು ತಿಂಗಳ ಶಿಶುಪಾಲನೆ ರಜೆ ನೀಡಲು ಸಮ್ಮತಿಸಿದೆ. ಶಿಕ್ಷಕಿಯರು/ಮಹಿಳಾ ಸಿಬ್ಬಂದಿ ಕೆಲಸ ಮಾಡುವ ಸ್ಥಳ/ಕಚೇರಿಗಳಲ್ಲಿ ಶಿಶು ಪಾಲನಾ ಕೇಂದ್ರ/ಕೋಣೆ ಪ್ರಾರಂಭಿಸುವುದರ ಜತೆಗೆ ಮಕ್ಕಳ ಉದ್ದೇಶಿತ ಆಯವ್ಯಯಕ್ಕೂ ಸಮ್ಮತಿ ಸೂಚಿಸಿ ಬಜೆಟ್​ನಲ್ಲಿ ಅವಕಾಶ ಕಲ್ಪಿಸಿದೆ.

    ಮಕ್ಕಳ ಉದ್ದೇಶಿತ ಆಯವ್ಯಯ

    ಮಕ್ಕಳ ಉದ್ದೇಶಿತ ಆಯವ್ಯಯ ಹಂಚಿಕೆ ಮತ್ತು ವೆಚ್ಚ ಆರೋಗ್ಯ, ಕುಟುಂಬ ಕಲ್ಯಾಣ, ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಇರುವುದಾದರೂ ಇತರ ಇಲಾಖೆಗಳಲ್ಲೂ ಮಕ್ಕಳು ನೇರ ಅಥವಾ ಪರೋಕ್ಷವಾಗಿ ಪ್ರಯೋಜನ ಪಡೆಯುತ್ತಾರೆ. ಮಕ್ಕಳ ಉದ್ದೇಶಿತ ಆಯವ್ಯಯ ತಖ್ತೆ ರೂಪಿಸಿ ಅನುಷ್ಠಾನಗೊಳಿಸಿ ಮೇಲ್ವಿಚಾರಣೆ ಮತ್ತು ಅನುಪಾಲನಾ ಕಾರ್ಯದ ಅಗತ್ಯವಿದೆ. ಮಕ್ಕಳು ಮತ ಚಲಾಯಿಸುವ ಹಕ್ಕು ಹೊಂದದ್ದರಿಂದ ಅವರು ಸಾಂವಿಧಾನಿಕ ಅನೇಕ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಕೇಂದ್ರ ಸರ್ಕಾರ 14ನೇ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ 2015-16ರಿಂದ ತನ್ನ ಆಯವ್ಯಯದಲ್ಲಿ ಮಕ್ಕಳ ಉದ್ದೇಶಿತ ಬಜೆಟ್​ಗೆ ಸ್ಥಾನ ಕಲ್ಪಿಸಿ ಶೇ.3.3 ಅನುದಾನ ಮೀಸಲಿಡುತ್ತ ಬಂದಿದೆ. ಇದರಂತೆ ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳಬೇಕು ಎಂದು ಅತುಲ್ ಮನವರಿಕೆ ಮಾಡಿಕೊಟ್ಟಿದ್ದರು.

    ಕೆಲ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದಲ್ಲಿ ಮಹಿಳಾ ನೌಕರರು/ಸಿಬ್ಬಂದಿಗೆ ಈ ಅವಕಾಶ ಕಲ್ಪಿಸಲಾಗಿದೆ. ಈ ಮಾದರಿಯಲ್ಲೇ ಕರ್ನಾಟಕದಲ್ಲೂ ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಪ್ರಸ್ತಾವನೆಯಾಗಿತ್ತು. ಶಿಕ್ಷಣ, ಡಿಪಿಎಆರ್ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಪ್ರಸ್ತಾವನೆಗೆ ರಾಜ್ಯ ಸರ್ಕಾರವೂ ಸ್ಪಂದಿಸಿದೆ.

    | ನಲೀನ್ ಅತುಲ್ ಅಪರ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ

    ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು ಸಲ್ಲಿಸಿದ ಈ ಪ್ರಸ್ತಾವನೆಗೆ ಸರ್ಕಾರ ಸ್ಪಂದಿಸಿ ಬಜೆಟ್​ನಲ್ಲಿ ಅಳವಡಿಸಿರುವುದು ಸಂತಸದ ವಿಷಯ. ಹೆರಿಗೆ ರಜೆ ಹೊರತುಪಡಿಸಿ ಹೆಚ್ಚುವರಿಯಾಗಿ ಒಂದು ವರ್ಷ ಶಿಶುಪಾಲನೆ ರಜೆ ನೀಡಬೇಕಿತ್ತು. ಸರ್ಕಾರ ಆರು ತಿಂಗಳು ರಜೆಗೆ ಒಪ್ಪಿದೆ. ಮಹಿಳಾ ನೌಕರರಿಗೆ ಇದೊಂದು ಸಂತಸದ ವಿಚಾರ.

    | ಸಂಗೀತಾ ಕಟ್ಟಿಮನಿ ಶಿಕ್ಷಣ ತಜ್ಞೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts