More

    Web Exclusive| ಮುಜುಗರದ ಸ್ಥಿತಿಯಲ್ಲಿ ಸೇವಾ ಹಿರಿತನ: ಕೆಎಟಿ ವಿಳಂಬ ಧೋರಣೆ; ಬಡ್ತಿ ತಾರತಮ್ಯ ನಿವಾರಣೆ ನಿರೀಕ್ಷೆಯಲ್ಲಿ ಪೊಲೀಸರು

    | ಅಶೋಕ ನೀಮಕರ್ ಬಳ್ಳಾರಿ

    ಪೊಲೀಸ್ ಇಲಾಖೆಯಲ್ಲಿ 2004ರ ಪೂರ್ವ ಇದ್ದ ಸೇವಾ ಜ್ಯೇಷ್ಠತೆ ಮತ್ತು ಬಡ್ತಿ ನಿಯಮಗಳಿಂದ ಸೇವಾ ಹಿರಿತನ ಹೊಂದಿರುವ ಪುರುಷ ಪೊಲೀಸ್ ಸಿಬ್ಬಂದಿ ಮುಜುಗರದ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯ ನಿಯಮಗಳಿಂದಾಗಿ ಸೇವಾವಧಿಯಲ್ಲಿ ತಮಗಿಂತ ಕಿರಿಯರಾದ ಮಹಿಳಾ ಸಿಬ್ಬಂದಿ ಅಧೀನದಲ್ಲಿ ಕೆಲಸ ಮಾಡುತ್ತಿರುವುದೇ ಇದಕ್ಕೆ ಕಾರಣ.

    2004ಕ್ಕೂ ಮುನ್ನ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯ ಜ್ಯೇಷ್ಠತೆಯನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿತ್ತು. ಇದರಿಂದಾಗಿ ಬಡ್ತಿಯನ್ನೂ ಪ್ರತ್ಯೇಕವಾಗಿ ನೀಡಲಾಗುತ್ತಿತ್ತು. ಮಹಿಳಾ ಸಿಬ್ಬಂದಿ ಕೆಲವೇ ವರ್ಷಗಳಲ್ಲಿ ಪದೋನ್ನತಿ ಪಡೆದರೆ, ಪುರುಷ ಸಿಬ್ಬಂದಿಯ ಬಡ್ತಿಯಲ್ಲಿ ವಿಳಂಬವಾಗುತ್ತಿತ್ತು. ಈ ಕಾರಣಗಳಿಂದಾಗಿ ಸೇವಾ ಹಿರಿತನ ಹೊಂದಿರುವ ಪುರುಷ ಸಿಬ್ಬಂದಿ ಇನ್ನೂ ಹೆಡ್ ಕಾನ್ಸ್​ಟೇಬಲ್, ಇಲ್ಲವೇ ಎಎಸ್​ಐ ಆಗಿದ್ದರೆ ಮಹಿಳಾ ಸಿಬ್ಬಂದಿ ಪಿಎಸ್​ಐ ಆಗಿ ಬಡ್ತಿ ಪಡೆದಿದ್ದಾರೆ.

    ಈ ಕುರಿತ ತಾರತಮ್ಯ ನಿವಾರಣೆಗೆ ಕಲಬುರಗಿ ಜಿಲ್ಲೆಯ ಮೂವರು ಸಿಬ್ಬಂದಿ 2018ರಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ (ಕೆಎಟಿ) ಮೊರೆ ಹೋಗಿದ್ದರು. ಕೆಎಟಿ ನಾಲ್ಕು ತಿಂಗಳ ಕಾಲಮಿತಿಯಲ್ಲಿ ತಾರತಮ್ಯ ನಿವಾರಿಸಿ ಬಡ್ತಿ ನೀಡುವಂತೆ 2020ರ ಜು.31ರಂದು ಆದೇಶ ಹೊರಡಿಸಿದ್ದರೂ ಅನುಷ್ಠಾನಕ್ಕೆ ಇಲಾಖೆ ಮುಂದಾಗಿಲ್ಲ. ಆದೇಶ ಜಾರಿ ಬಗ್ಗೆ ಪೊಲೀಸ್ ಇಲಾಖೆ ಗೊಂದಲದಲ್ಲಿ ಸಿಲುಕಿದೆ. ಕೆಎಟಿ ಆದೇಶವನ್ನು ಕೇವಲ ಕಲಬುರಗಿ ವಲಯಕ್ಕೆ ಸೀಮಿತಗೊಳಿಸಲು ಬರುವುದಿಲ್ಲ. ರಾಜ್ಯದ ಎಲ್ಲ ಪೊಲೀಸ್ ವಲಯಗಳಿಗೆ ಅನ್ವಯಿಸಿದರೆ ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಬೇಕಾಗುತ್ತದೆ. ಇದರಿಂದಾಗಿ ಈಗಾಗಲೇ ಮುಂಬಡ್ತಿ ಪಡೆದಿರುವ ಸಿಬ್ಬಂದಿ ಹಿಂಬಡ್ತಿಗೆ ಗುರಿಯಾಗಬೇಕಾಗುತ್ತದೆ. ಹಿಂಬಡ್ತಿ ನೀಡದೆ ಅದೇ ಹುದ್ದೆಯಲ್ಲಿ ಮುಂದುವರಿಸಿದರೆ ಸೂಪರ್ ನ್ಯೂಮರರಿ ಹುದ್ದೆಗಳನ್ನು ಸೃಷ್ಟಿಸಬೇಕಾಗುತ್ತದೆ. ಸೂಪರ್ ನ್ಯೂಮರರಿ ಹುದ್ದೆಗಳು ಆರ್ಥಿಕ ಹೊರೆಗೆ ಕಾರಣವಾಗಲಿವೆ ಎಂಬುದು ಪೊಲೀಸ್ ಇಲಾಖೆ ಅಭಿಪ್ರಾಯ.

    ಕೆಎಟಿ ಆದೇಶದ ವಿರುದ್ಧ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಸೂಕ್ತ ಪ್ರಕರಣ ಅಲ್ಲ ಎಂದು ಹೈಕೋರ್ಟ್​ನ ಸರ್ಕಾರಿ ವಕೀಲರು 2020ರ ಆ.26ರಂದು ಗೃಹ ಇಲಾಖೆಯ ಕಾನೂನು ಘಟಕಕ್ಕೆ ಪತ್ರ ಬರೆದಿದ್ದಾರೆ. ಆದರೂ, ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿ ಎಂದು ಪೊಲೀಸ್ ಮಹಾನಿರ್ದೇಶಕರು 2020ರ ಅ.16 ಹಾಗೂ ಡಿ.29ರಂದು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಮೇಲ್ಮನವಿ ಸಲ್ಲಿಸಲು ಅರ್ಹ ಪ್ರಕರಣ ಅಲ್ಲ ಎಂಬ ಸ್ಪಷ್ಟತೆ ಇರುವುದರಿಂದ ಕೆಎಟಿ ಆದೇಶದಂತೆ ಬಡ್ತಿ ನೀಡಬೇಕೆಂಬುದು ಪುರುಷ ಸಿಬ್ಬಂದಿ ಆಗ್ರಹ.

    ಈ ಕುರಿತ ಪ್ರತಿಕ್ರಿಯೆಗಾಗಿ ಎರಡು ಬಾರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕರೆ ಮಾಡಲಾಗಿತ್ತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

    ನಮ್ಮ ಅಧೀನದಲ್ಲಿ ಕೆಲಸ ಮಾಡಿರುವ ಮಹಿಳಾ ಸಿಬ್ಬಂದಿ ಇದೀಗ ನಮಗೆ ಹಿರಿಯ ಅಧಿಕಾರಿಗಳಾಗಿದ್ದಾರೆ. ಕೆಲವು ಮಹಿಳಾ ಅಧಿಕಾರಿಗಳು ಏಕವಚನದಲ್ಲಿ ಮಾತನಾಡಿ ನಮ್ಮ ಸೇವಾ ಹಿರಿತನವನ್ನೇ ಅವಮಾನಿಸುತ್ತಿದ್ದಾರೆ. ಇದು ನಮ್ಮನ್ನು ಮಾನಸಿಕವಾಗಿ ಘಾಸಿಗೊಳಿಸಿದೆ. ಇದರಿಂದಾಗಿ ನಮ್ಮ ಬಡ್ತಿ ಆದೇಶವನ್ನು ತ್ವರಿತವಾಗಿ ಜಾರಿಗೊಳಿಸಬೇಕು.

    | ಹೆಸರು ಹೇಳಲು ಇಚ್ಛಿಸದ ಪೊಲೀಸ್ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts