More

    Web Exclusive | ಇಳಿವಯಸ್ಸಿನವರಲ್ಲೀಗ ನವೋಲ್ಲಾಸ: ಮತ್ತೆ ಹರಟಲು ಹೊರಟ ಹಿರಿಯರು, ಕರೊನಾ ಆತಂಕದ ಕಂಡೀಷನ್ ಮುಕ್ತರು..

    ಸಹದ್ಯೋಗಿ, ಸಹಪಾಠಿಗಳ ಹಂಬಲದ ಭೇಟಿ | ಕಷಾಯಗಳ ರೆಸಿಪಿ ವಿನಿಮಯ | ಕರೊನಾ ಅವಧಿಯಲ್ಲಿನ ಬದಲಾವಣೆ ಬಗ್ಗೆ ಚರ್ಚೆ | ಅನ್ಯರೊಂದಿಗೆ ಕುಟುಂಬದ ಕುಡಿಗಳ ಗುಣಗಾನ | ಹಳೇ ಹಾಡು ಗುನುಗುತ್ತ, ಸಿನಿ ಮೂಡ್​ನಲ್ಲಿ ವಾಕಿಂಗ್

    | ರವಿ ಗೋಸಾವಿ ಬೆಳಗಾವಿ

    11 ತಿಂಗಳಿಂದ ಕೈಯಲ್ಲಿ ಜೀವ ಹಿಡಿದು ಕೋವಿಡ್-19 ಸೋಂಕಿನ ಆತಂಕದಲ್ಲಿ ಮನೆಯೊಳಗೇ ದಿನ ಕಳೆದಿದ್ದ ಹಿರಿಯ ನಾಗರಿಕರಲ್ಲಿ ಮತ್ತೆ ಲವಲವಿಕೆ ಮೂಡಿದೆ. ಕರೊನಾ ನಿಯಂತ್ರಿಸುವ ಲಸಿಕೆ ಇದೀಗ ಲಭ್ಯವಾಗಿರುವ ಭರವಸೆಯೇ ಹಿರಿಯರಲ್ಲಿ ನವ ಚೈತನ್ಯ ತಂದಿದೆ. ವರ್ಷದ ಬಳಿಕ ತಮ್ಮ ‘ಹರಟೆ ಬಳಗ’ ಸೇರಿ ಹಳೇ ದಿನಗಳನ್ನು ಮೆಲಕು ಹಾಕುತ್ತಿದ್ದಾರೆ.

    ಮಹಾಮಾರಿ ಕರೊನಾ ಭಯದಿಂದ ವರ್ಷದಿಂದ ಕಣ್ಮರೆಯಾಗಿದ್ದ ‘ಹಿರಿಯರ ಕೂಟ’ಗಳು ಕಳೆದೊಂದು ವಾರದಿಂದ ಪ್ರತಿ ಸಂಜೆ ಕಾಣಸಿಗುತ್ತಿವೆ. ಅಷ್ಟೇ ಅಲ್ಲದೆ, ಮಾರಕಟ್ಟೆಗೂ ಇದೀಗ ವೃದ್ಧರು ನಿಶ್ಚಿಂತೆಯಿಂದ ಆಗಮಿಸುತ್ತಿದ್ದಾರೆ. ಉದ್ಯಾನಗಳಲ್ಲಿ ವಾಯುವಿಹಾರದ ಹೊರತಾಗಿಯೂ ಅಲ್ಲಿರುವ ಕಲ್ಲು ಹಾಸುಗಳ ಮೇಲೆ ಕುಳಿತು ಕುಶಲೋಪರಿ ವಿಚಾರಿಸುತ್ತಿರುವ ದೃಶ್ಯ ಕಾಣಿಸುತ್ತಲಿದೆ. ದೇಶ-ವಿದೇಶದಲ್ಲಿರುವ ತಮ್ಮ ಕುಟುಂಬದ ಸದಸ್ಯರ ಕಷ್ಟ-ನಷ್ಟಗಳ ಮಾಹಿತಿ ವಿನಿಮಯ ಮಾಡಿಕೊಳ್ಳುವುದರಲ್ಲಿಯೂ ವೃದ್ಧೆಯರೂ ತಲ್ಲೀನರಾಗಿದ್ದಾರೆ.

    ಮತ್ತೆ ಶುರು ನಿವೃತ್ತಿಯ ಪ್ರವೃತ್ತಿ: ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಾನದಲ್ಲಿ ಸಂಜೆ ವೇಳೆ ಇದೀಗ ವೃದ್ಧರು ಹೆಜ್ಜೆ ಹಾಕುತ್ತ ಸ್ನೇಹಿತರೊಂದಿಗೆ ಮತ್ತೆ ಹರಟೆ ಆರಂಭಿಸಿದ್ದಾರೆ. ‘ಸೌದಿ ಅರೇಬಿಯಾದಿಂದ ಬಂದಿರುವ ಕಿರಿ ಮಗ ಇನ್ಮೇಲೆ ಊರಲ್ಲೇ ಇರ್ತಾನಂತ. ಮೊನ್ನೆ ಹೊಸ ಟ್ರ್ಯಾಕ್ಟರ್ ತಂದಾನ. ಮಗನ ಇಡೀ ಕುಟುಂಬ ಮನೆಗೆ ಬಂದ್ಮೇಲೆ ಮನಸ್ಸಿಗೆ ಭಾಳ ನೆಮ್ಮದಿ ಅನಿಸಾಕ ಹತೆôತಿ’ ಎನ್ನುತ್ತಲೇ ಕಣ್ಣಿಗೆ ಹಾಕಿದ್ದ ಛಸ್ಮಾ ಮೇಲೇರಿಸಿ, ಊರುಗೋಲು ಹಿಡಿದು ಗತ್ತಿನಿಂದಲೇ ಹೆಜ್ಜೆ ಮುಂದಿಟ್ಟರು ನಿವೃತ್ತ ಶಿಕ್ಷಕ ಮಹಾದೇವ ಕುಲಕರ್ಣಿ. ಅವರ ಮಾತಿಗೆ ತಲೆಯಾಡಿಸುತ್ತಿದ್ದ ಬೆನ್ನು ಬಾಗಿದ್ದ ವೃದ್ಧರೊಬ್ಬರು, ‘ ಇಲ್ಲಿಯೇ ಕೂಡೋಣ’ ಎಂದರು. ಮತ್ತೆ ಅಲ್ಲಿಗೆ ಆಗಮಿಸಿದ ಇನ್ನಷ್ಟು ವೃದ್ಧರು ಕುಳಿತು ಹಳೇ ನೆನಪು, ಜೋಕು ಹೇಳಿಕೊಂಡು ನಗಲಾರಂಭಿಸಿದರು.

    Web Exclusive | ಇಳಿವಯಸ್ಸಿನವರಲ್ಲೀಗ ನವೋಲ್ಲಾಸ: ಮತ್ತೆ ಹರಟಲು ಹೊರಟ ಹಿರಿಯರು, ಕರೊನಾ ಆತಂಕದ ಕಂಡೀಷನ್ ಮುಕ್ತರು..
    ಬೆಳಗಾವಿಯ ಶಿವಾಜಿ ಉದ್ಯಾನದಲ್ಲಿ ಕುಶಲೋಪರಿಯಲ್ಲಿ ತೊಡಗಿದ ವೃದ್ಧರು.

    ಕರೊನಾ ಚರ್ಚೆ: ಇಂಥದ್ದೇ ಮತ್ತೊಂದು ಗುಂಪು ಅಲ್ಲಿ ‘ಕರೊನಾ ಪರಿಪಾಟಲು’ ಚರ್ಚೆಯಲ್ಲಿತ್ತು. ‘ನನಗೆ ಕರೊನಾ ಬಂದಿದೆ ಎಂದಾಗ ನಿಮ್ಮನ್ನೆಲ್ಲಾ ಭೇಟಿಯಾಗದೆ ಎಲ್ಲಿ ಕಾಲವಾಗುತ್ತೇನೊ ಎಂಬ ಭಯವಿತ್ತು. ಆದರೆ, ಔಷಧ ಸಿಗದಿದ್ರೂ ಮನೆಯಲ್ಲೇ ಮೊಮ್ಮಗಳು ಮಾಡಿದ ಉಪಚಾರ ಬದುಕಿಸಿತು’ ಎಂದು ಭಾವುಕರಾದರು ಎನ್.ಡಿ. ಜಾಧವ್. ಅಷ್ಟರಲ್ಲಾಗಲೇ ಮಾತಿಗೆ ಇಳಿದಿದ್ದ ನಿವೃತ್ತ ಸೈನಿಕ ಸಂಪತ್ ಅಣ್ವೇಕರ್ ಎಂಬುವರು, ‘ಅಯ್ಯೋ ನಮ್ಮ ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸುವುದೇ ಒಂದು ದೊಡ್ಡ ಕೆಲಸವಾಗಿ ಬಿಟ್ಟಿತ್ತು. ಒಂದಲ್ಲ ಒಂದು ತರಲೆ ಮಾಡುತ್ತಿದ್ದ ‘ಚಿನ್ನಾರಿ’ಗೆ ಸೊಸೆ ಗದರಿಸುತ್ತಿದ್ದ ಪರಿ ಹೇಳುತ್ತಲೇ.. ‘ಈಗಿನ ತಾಯಂದಿರು ಮಕ್ಕಳನ್ನು ಬೆಳೆಸಲು ಹೆಣಗಾಡುತ್ತಾರೆ. ನಮ್ಮ ಆಯಿ(ಅಮ್ಮ)ಗೆ ನಾವು 9 ಮಂದಿ ಮಕ್ಕಳು. ನಮ್ಮ ಪಾಡಿಗೆ ಆಡಲು ಬಿಟ್ಟು ಆಕೆ ಕೆಲಸ ಮಾಡುತ್ತಿದ್ದಳು’ ಎಂದು ತಾಯಿಯ ನೆನೆಯುವುದೇ ತಡ.. ಗುಂಪಿನಲ್ಲಿದ್ದವರೆಲ್ಲ ತಮ್ಮ ಬಾಲ್ಯದಲ್ಲಿ ಹೀಗೆ-ಹಾಗೆ ಇತ್ತು ಎಂದು ಬಾಲ್ಯದ ಸ್ಮರಣೆಗಿಳಿದರು.

    ಗೃಹ ಬಂಧನದಿಂದ ಬಿಡುಗಡೆ: ‘ಹೊರ ಹೋಗದಿರಿ, ಮನೇಲಿ ಸ್ಮುಮನಿರಿ’ ಎಂದು ಹೊರ ಊರಿನಲ್ಲಿರುವ ಮಕ್ಕಳ ಅಥವಾ ಮೊಮ್ಮಕ್ಕಳ ಕಾಳಜಿಯ ಕಿರಿಕಿರಿಯಿಂದ ಈಗ ಹಿರಿಯರು ಮುಕ್ತರಾದಂತಿದೆ. ವರ್ಷಗಳ ಕಾಲ ಮನೆಯಲ್ಲೇ ಬಂಧಿಯಾಗಿದ್ದ ಅವರೆಲ್ಲ ಮಕ್ಕಳ ಜಂಜಾಟದ ಹೊರೆಯಿಂದ ಹೊರ ಬಂದಿದ್ದಾರೆ. ಮನೆಯಲ್ಲಿದ್ದುಕೊಂಡೇ ಫೋನ್​ನಲ್ಲಿ ಸ್ನೇಹಿತರ ಯೋಗಕ್ಷೇಮ ವಿಚಾರಿಸಿದರೂ ಮನೆಯಲ್ಲಿ ಮುಕ್ತ ಹರಟೆಗೆ ಅವಕಾಶವೇ ಇರಲಿಲ್ಲ. ಇದೀಗ ಎಲ್ಲೆಡೆ ಕರೊನಾ ಭಯ ತುಸು ಇಳಿದಿದ್ದು, ಹಿರಿಯ ಜೀವಿಗಳ ಸಂಚಾರಕ್ಕೆ ಮಕ್ಕಳು ಹಾಕುತ್ತಿದ್ದ ‘ಕಂಡೀಷನ್’ ಕಡಿಮೆಯಾಗಿವೆ.

    ಕರೊನಾ ಬರುತ್ತೆ ಎಂದು ಇಷ್ಟು ದಿನ ಮನೆಯವರು ಹೊರಗಡೆ ಬಿಡುತ್ತಿರಲಿಲ್ಲ. ಈಗ ಲಸಿಕೆ ಬಂದಿದೆ ಎಂಬ ಧೈರ್ಯದಿಂದ ಸುಮ್ಮನಾಗುತ್ತಿದ್ದಾರೆ. ನೌಕರಿಗೆ ಹೋಗುವ ಮಗ-ಸೊಸೆ ಸಂಜೆ ಮನೆಗೆ ಬಂದ ನಂತರ ನಾನು ವಾಕಿಂಗ್ ಹೊರಡುತ್ತೇನೆ. ಬಹುತೇಕ ಎಲ್ಲರೂ ಇದೇ ನಿಯಮ ಪಾಲಿಸುತ್ತಿದ್ದೇವೆ. ಎಲ್ಲರೂ ಮತ್ತೆ ಸೇರುತ್ತಿರುವುದು ಖುಷಿ ಕೊಡುತ್ತಿದೆ.

    | ಶಾರದಾ ಜೈನ್ ಶಹಾಪುರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts