More

    Web Exclusive | ಅನ್ನಕ್ಕಾಗಿ ಊರೂರು ಅಲೆಯುವ ಆದಿವಾಸಿಗಳು: ಅರಣ್ಯದಿಂದ ಹೊರಬಂದು 2 ದಶಕವಾದರೂ ದಕ್ಕದ ನೆಲೆ

    | ಶಿವು ಹುಣಸೂರು

    ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದು ಎರಡು ದಶಕಗಳೇ ಕಳೆದರೂ ಮೂಲಸೌಕರ್ಯ ಹಾಗೂ ಆರ್ಥಿಕ ಭದ್ರತೆ ಸಿಗದೆ ಪರಿತಪಿಸುತ್ತಿರುವ ಆದಿವಾಸಿ ಗಿರಿಜನ ಸಮುದಾಯ ಇದೀಗ ತುತ್ತು ಅನ್ನಕ್ಕಾಗಿ ಊರೂರು ಅಲೆಯುವಂತಾಗಿದೆ.

    ಹುಣಸೂರು ಕಂದಾಯ ಉಪ ವಿಭಾಗ ವ್ಯಾಪ್ತಿಯ ಹುಣಸೂರು, ಪಿರಿಯಾಪಟ್ಟಣ ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ, ಯರವ, ಕಾಡುಕುರುಬ (ಬೆಟ್ಟಕುರುಬ), ಸೋಲಿಗ, ಹಕ್ಕಿಪಿಕ್ಕಿ ಮುಂತಾದ 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕಾಡಿನಿಂದ ಹೊರದಬ್ಬಿಸಿಕೊಂಡು ತ್ರಿಶಂಕು ಸ್ಥಿತಿಯಲ್ಲಿ ಬದುಕುತ್ತಿವೆ. ನಿತ್ಯದ ಅನ್ನಕ್ಕಾಗಿ ಕೊಡಗು, ಕೇರಳಕ್ಕೆ ಕುಟುಂಬ ಸಮೇತ ತಿಂಗಳುಗಟ್ಟಲೆ ತೆರಳಿ, ಹೊಟ್ಟೆ ತುಂಬಿಸಿಕೊಳ್ಳುವ ದುಸ್ಥಿತಿ ಬಂದೊದಗಿದೆ.

    ಅತಂತ್ರರಾದ ಆದಿವಾಸಿಗಳು: 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ನುಗು, ತಾರಕ, ಕಬಿನಿ, ಹೆಬ್ಬಾಳ ಅಣೆಕಟ್ಟುಗಳ ನಿರ್ಮಾಣ ಸಮಯದಲ್ಲಿ ಇವರಿಗೆ ಯಾವುದೇ ಪರ್ಯಾಯ ವಸತಿ ಕಲ್ಪಿಸದೆ, ಏಕಾಏಕಿ ಹೊರತಂದು ಮುಖ್ಯವಾಹಿನಿಗೆ ತರುವ ಯಾವುದೇ ಕಾರ್ಯವನ್ನು ನಡೆಸದ ಕಾರಣ ಇವರೆಲ್ಲರೂ ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದಾರೆ. ಉಪ ವಿಭಾಗ ವ್ಯಾಪ್ತಿಯಲ್ಲಿ ಮರು ವಸತಿ ಸೌಲಭ್ಯ ಪಡೆದಿರುವ ಆದಿವಾಸಿಗಳ ಸಮಸ್ಯೆ ಒಂದು ರೀತಿಯದ್ದಾದರೆ, ಮರು ವಸತಿ ಇಲ್ಲದೆ ಬೀದಿ ಪಾಲಾಗಿ ಬದುಕು ನಡೆಸುತ್ತಿರುವ ಈ ಸಮುದಾಯ ಸಾಮುದಾಯಿಕ, ಆರ್ಥಿಕ ಬೆಂಬಲ ಸಿಗದೆ ಪರಿತಪಿಸುತ್ತಿದೆ.

    ಅವಕಾಶವಿದ್ದರೂ ಪ್ರಯೋಜನವಾಗಿಲ್ಲ: ಕೇಂದ್ರ ಸರ್ಕಾರ 2006ರ ಅರಣ್ಯ ಹಕ್ಕು ಕಾಯ್ದೆಯಡಿ ತಿದ್ದುಪಡಿ ತಂದು 2008ರ ಪ್ರಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿ ಆದಿವಾಸಿಗಳಿಗೆ ನೈಸರ್ಗಿಕ ನ್ಯಾಯ ಒದಗಿಸಲು ಸೂಚಿಸಿದ್ದರೂ ಅಧಿಕಾರಿಗಳ ಅಸಡ್ಡೆಯಿಂದಾಗಿ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಪ್ರಾಧಿಕಾರಿಗಳು ದಿನಕ್ಕೊಂದು ನಡಾವಳಿ ಮಾಡಿ ಅರಣ್ಯ ಹಕ್ಕು, ಭೂ ಒಡೆತನದ ಹಕ್ಕು ಮತ್ತು ಸಾಮೂಹಿಕ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಒಮ್ಮೆಲೆ ತಿರಸ್ಕರಿಸುವ ಮೂಲಕ ಆದಿವಾಸಿಗಳ ಮೇಲೆ ಗದಾ ಪ್ರಹಾರವನ್ನೇ ನಡೆಸಿವೆ ಎನ್ನುವುದು ಆದಿವಾಸಿ ಮುಖಂಡರ ಆರೋಪವಾಗಿದೆ.

    5386 ಅರ್ಜಿಗಳು ತಿರಸ್ಕೃತ: ಭೂಮಿಯ ಹಕ್ಕುಪತ್ರಕ್ಕಾಗಿ ಎಚ್.ಡಿ.ಕೋಟೆ ತಾಲೂಕಿನ ವಿವಿಧ ಹಾಡಿಗಳಿಂದ ಒಟ್ಟು 3165 ಅರ್ಜಿಗಳು, ಹುಣಸೂರು ತಾಲೂಕಿನಿಂದ 1311 ಹಾಗೂ ಪಿರಿಯಾಪಟ್ಟಣ ತಾಲೂಕಿನ 930 ಅರ್ಜಿಗಳು ಜಿಲ್ಲಾ ಮಟ್ಟದಲ್ಲಿ ತಿರಸ್ಕೃತಗೊಂಡಿವೆ. ಈ ಕುಟುಂಬಗಳು ಕಾಡಿನಲ್ಲಿ ವಾಸಿಸುತ್ತಿದ್ದು, ತಮ್ಮ ಪೂರ್ವಜರೂ ಇಲ್ಲಿದ್ದರು ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ನೀಡಿದ್ದರೂ ಜಿಲ್ಲಾಡಳಿತ ಅರ್ಜಿ ತಿರಸ್ಕರಿಸಿರುವುದು ಆದಿವಾಸಿಗಳ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದೆ ಎಂದು ಆದಿವಾಸಿ ಮುಖಂಡ ನೇರಳೆಕುಪ್ಪೆ ಹಾಡಿಯ ಬಾಬು ಆಕ್ರೋಶ ವ್ಯಕ್ತಪಡಿಸುತ್ತಾರೆ.

    Web Exclusive | ಅನ್ನಕ್ಕಾಗಿ ಊರೂರು ಅಲೆಯುವ ಆದಿವಾಸಿಗಳು: ಅರಣ್ಯದಿಂದ ಹೊರಬಂದು 2 ದಶಕವಾದರೂ ದಕ್ಕದ ನೆಲೆ
    ಹುಣಸೂರು ತಾಲೂಕಿನ ವಿವಿಧ ಹಾಡಿಗಳ ನಿವಾಸಿಗಳು ಕೂಲಿಗಾಗಿ ಕೊಡಗಿನ ಕಡೆಗೆ ಹೊರಟಿರುವುದು.

    ವಲಸಿಗರಾಗಲು ಕಾರಣವೇನು?: ಒಂದು ಅಂದಾಜಿನ ಪ್ರಕಾರ, ಹುಣಸೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಶೇ.60ಕ್ಕೂ ಹೆಚ್ಚು ಕುಟುಂಬಗಳು ಬದುಕುವುದಕ್ಕಾಗಿ ಕೊಡಗಿನ ಕಾಫಿ ತೋಟಗಳಿಗೆ ಹಾಗೂ ಕೇರಳಕ್ಕೆ ಕುಟುಂಬ ಸಮೇತ ವಲಸೆ ಹೋಗುತ್ತಿದ್ದಾರೆ. 2-3 ತಿಂಗಳು ಅಲ್ಲಿದ್ದು, ದುಡಿದು ಮತ್ತೆ ತಮ್ಮ ಊರಿಗೆ ವಾಪಸ್ ಬಂದು ಮತ್ತೆ ಹೊರಡುತ್ತಾರೆ. ಇದೀಗ ಲಾಕ್​ಡೌನ್ ನಂತರ ಮಕ್ಕಳಿಗೆ ಶಾಲೆಯಿಲ್ಲ, ಅದರಿಂದ ಊಟವಿಲ್ಲ, ಆಶ್ರಮ ಶಾಲೆಗಳಲ್ಲಿ ಇಂದಿಗೂ ಊಟವಿಲ್ಲ. ಅಂತ್ಯೋದಯ ಕಾರ್ಡ್ ಇದೀಗ ಬಿಪಿಎಲ್ ಕಾರ್ಡ್ ಆಗಿದೆ. ಪೌಷ್ಟಿಕ ಆಹಾರ ವಿತರಣೆಯನ್ನು 15 ಕೆ.ಜಿ.ಯಿಂದ 8 ಕೆಜಿಗೆ ಇಳಿಸಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಗಳು ಅಯೋಮಯವಾಗಿವೆ. ಉಪ ವಿಭಾಗ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಇವೆಲ್ಲ ಅವಾಂತರಗಳಿಂದ ಬಳಲಿರುವ ಆದಿವಾಸಿ ಕುಟುಂಬಗಳು ಅನ್ನಕ್ಕಾಗಿ ವಲಸೆ ಹೋಗುತ್ತಿವೆ. ಹಾಡಿಗಳಲ್ಲಿ ಪ್ರತಿನಿತ್ಯ ನೂರಾರು ಜೀಪ್​ಗಳಲ್ಲಿ ಕೂಲಿಗಾಗಿ ಕೊಡಗಿಗೆ ಹೋಗುವ ದೃಶ್ಯ ಸಾಮಾನ್ಯವಾಗಿದೆ.

    9ರಿಂದ ನಿರಂತರ ಧರಣಿ: ಆಳುವ ಪ್ರಭುತ್ವದ ಆದಿವಾಸಿ ವಿರೋಧಿ ನೀತಿಯನ್ನು ಖಂಡಿಸಿ, ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಹಾಡಿ ಅರಣ್ಯ ಹಕ್ಕು ಸಮಿತಿಗಳ ಒಕ್ಕೂಟದ ವತಿಯಿಂದ ಮಾ.9ರಿಂದ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲು ತೀರ್ವನಿಸಿದ್ದಾರೆ. ಭೂಮಿಯ ಹಕ್ಕು ಸಿಗದ ಹೊರತು ಧರಣಿ ಕೈಬಿಡುವುದಿಲ್ಲವೆನ್ನುವುದು ಆಯೋಜಕರ ಸ್ಪಷ್ಟ ಮಾತಾಗಿದೆ.

    ನಮ್ಮ ಅಜ್ಜ, ಮುತ್ತಾತರು ಬಾಳಿ ಬದುಕಿದ ಭೂಮಿಯನ್ನು ಅಧಿಕಾರಿಗಳಿಗೆ ತೋರಿಸಿದರೂ ಒಪ್ಪುತ್ತಿಲ್ಲವೆಂದರೆ ಏನರ್ಥ? ನಮಗೆ ಈಗಿರುವಷ್ಟು ಬುದ್ದಿ 20 ವರ್ಷಗಳ ಹಿಂದೆ ಇದ್ದಿದ್ದರೆ ಅರಣ್ಯವನ್ನು ಬಿಟ್ಟು ಬರುತ್ತಲೇ ಇರಲಿಲ್ಲ. ನಿರಂತರ ಧರಣಿ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಸತ್ತು ಹೋಗುತ್ತೇವೆಯೇ ಹೊರತು ಹೋರಾಟದಿಂದ ಹಿಂದೆ ಸರಿಯುವುದಿಲ್ಲ.

    | ಜಾನಕಮ್ಮ ಅಬ್ಬಳತಿಹಾಡಿ, ಪಿರಿಯಾಪಟ್ಟಣ

    Web Exclusive | ಅನ್ನಕ್ಕಾಗಿ ಊರೂರು ಅಲೆಯುವ ಆದಿವಾಸಿಗಳು: ಅರಣ್ಯದಿಂದ ಹೊರಬಂದು 2 ದಶಕವಾದರೂ ದಕ್ಕದ ನೆಲೆನಮ್ಮದು ನ್ಯಾಯಯುತ ಬೇಡಿಕೆಯಾಗಿದೆ. 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಆದಿವಾಸಿಗಳೇ ಅಲ್ಲ ಎನ್ನುವಂತೆ ಜಿಲ್ಲಾಡಳಿತ ನಡೆದುಕೊಂಡಿರುವುದು ಖಂಡನೀಯ. ಹಾಗಿದ್ದರೆ ಈ ಕುಟುಂಬಗಳು ಎಲ್ಲಿಂದ ಬಂದವರು ಎನ್ನುವುದನ್ನು ಸರ್ಕಾರವೇ ತಿಳಿಸಲಿ. ಪೂರ್ವಜರು ಬಾಳಿ ಬದುಕಿನ ಭೂಮಿ, ಗುಡಿ, ಜಮ್ಮಾ, ಅಡುಗೆ ಮನೆ ಎಲ್ಲವನ್ನೂ ತೋರಿಸಿದರೂ ಒಪ್ಪುತ್ತಿಲ್ಲವೆಂದರೆ ಇದರ ಹಿಂದೆ ಷಡ್ಯಂತ್ರ ಅಡಗಿದೆ.

    | ಶೈಲೇಂದ್ರ ಕುಮಾರ್ ಅಧ್ಯಕ್ಷ, ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ, ಎಚ್.ಡಿ.ಕೋಟೆ

    Web Exclusive | ಅನ್ನಕ್ಕಾಗಿ ಊರೂರು ಅಲೆಯುವ ಆದಿವಾಸಿಗಳು: ಅರಣ್ಯದಿಂದ ಹೊರಬಂದು 2 ದಶಕವಾದರೂ ದಕ್ಕದ ನೆಲೆಒಕ್ಕೂಟಗಳು ಧರಣಿ ನಡೆಸಲು ಉದ್ದೇಶಿಸಿರುವುದು ಸರಿಯಲ್ಲ. ಸೂಕ್ತ ಸಾಕ್ಷ್ಯಳಿಲ್ಲದೆ ಅಧಿಕಾರಿಗಳು ಏನೂ ಮಾಡಲು ಸಾಧ್ಯವಿಲ್ಲ. ಇಷ್ಟಕ್ಕೂ ಸುಪ್ರೀಂಕೋರ್ಟ್ ಈ ಎಲ್ಲ ಕುಟುಂಬಗಳಿಗೆ ಸಮರ್ಪಕ ಸಾಕ್ಷ್ಯ ಒದಗಿಸಲು ಮತ್ತೊಂದು ಅವಕಾಶ ನೀಡಲು ಸೂಚಿಸಿದೆ. ಅದರಂತೆ, ಜಿಲ್ಲಾಧಿಕಾರಿ ಮಟ್ಟದಲ್ಲಿ ಅರ್ಜಿ ತಿರಸ್ಕೃತವಾಗಿದ್ದರೂ ಮತ್ತೊಮ್ಮೆ ದಾಖಲೆ ಒದಗಿಸಿದಲ್ಲಿ ಜಿಲ್ಲಾಡಳಿತ ಪರಿಶೀಲನೆ ನಡಸಲಿದೆ. ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿ.

    | ಬಿ.ಎನ್.ವೀಣಾ ಉಪ ವಿಭಾಗಾಧಿಕಾರಿ, ಹುಣಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts