More

    ಬಿಎಸ್‌ವೈ ಅವರನ್ನು ಬದಲಿಸಲು ಮುಂದಾದರೆ ಸಾಮೂಹಿಕ ಹೋರಾಟ: ನಾಡಿನ ಮಠಾಧೀಶರನೇಕರ ಎಚ್ಚರಿಕೆ

    ಹಿಂದುಳಿದ-ಶೋಷಿತ ಸಮುದಾಯದ ಶ್ರೀಗಳಿಂದಲೂ ಬೆಂಬಲ

    ಚಿತ್ರದುರ್ಗ: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸುವ ನಿರ್ಣಯ ಕೈಗೊಂಡರೆ, ನಾಡಿನ ಮಠಾಧೀಶರನೇಕರು ಸಾಮೂಹಿಕ ಹೋರಾಟಕ್ಕೆ ಚಿಂತನೆ ನಡೆಸುವರು ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಬಿಜೆಪಿ ಹೈಕಮಾಂಡ್‌ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು. ಹಿಂದುಳಿದ-ಶೋಷಿತ ಸಮುದಾಯದ ಮಾದಾರ ಚನ್ನಯ್ಯ, ಕುಂಚಿಟಿಗ ಶ್ರೀಗಳು ಸೇರಿ ಹಲವು ಮಠಾಧೀಶರು ಕೂಡ ಶರಣರ ಅಭಿಪ್ರಾಯಕ್ಕೆ ದನಿಗೂಡಿಸಿದ್ದು, ಈ ವಿಷಯದಲ್ಲಿ ಬಿಎಸ್‌ವೈ ಪರ ನಿಲ್ಲುವುದಾಗಿ ಇದೇ ಗೋಷ್ಠಿಯಲ್ಲಿ ಘೋಷಿಸಿದರು.

    ಆರಂಭದಲ್ಲಿ ಶರಣರು ಮಾತನಾಡಿ, ಬಿಎಸ್‌ವೈ ಅವರನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ಬೇಡ. ನಾವೆಲ್ಲ ಮಠಾಧೀಶರು ಅವರ ಬೆನ್ನ ಹಿಂದಿದ್ದೇವೆ. ಅವರೂ ತಮ್ಮ ಶಕ್ತಿ ತೋರಿಸಬಲ್ಲರು ಎಂದು ಎಚ್ಚರಿಸಿದರು. ಯಡಿಯೂರಪ್ಪ ಇದ್ದಕ್ಕಿದ್ದಂತೆ ಉದ್ಭವಿಸಿದ ನಾಯಕರಲ್ಲ. ತಳಮಟ್ಟದಿಂದ ಬೆಳೆದು ಬಂದವರು. ಎಲ್ಲ ಜಾತಿ, ಧರ್ಮ, ವರ್ಗದವರನ್ನು ಸಮನಾಗಿ ಕಾಣುತ್ತಿರುವ ಅವರು ಈ ನಾಡು ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ದಿ, ಮಾಸ್ ಲೀಡರ್. ಇಂಥ ಜನನಾಯಕರನ್ನು ಪಕ್ಷದಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ಇದಲ್ಲ. ಹೊಸ ನಾಯಕ ಬೇಕೆಂಬ ಕಾರಣಕ್ಕೆ ಅರ್ಧದಲ್ಲಿ ಅವರನ್ನು ಇಳಿಸುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.

    ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಸತ್ತಿಮಠದ ಸ್ವಾಮೀಜಿ, ಚಳ್ಳಕೆರೆಯ ಬಸವಕಿರಣ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಮತ್ತಿತರರು ಇದ್ದರು.

    ಪದೇಪದೆ ಬಿಎಸ್‌ವೈಗೆ ಏಕೆ ತೊಂದರೆ?

    ಪದೇಪದೆ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಏಕೆ ಹೀಗೆ ನಡೆಸಿಕೊಳ್ಳಲಾಗುತ್ತಿದೆ ಎಂದು ಶರಣರು ಗರಂ ಆದರು. ಅವರ ಗೌರವ , ಘನತೆಗೆ ಯಾರೂ ಧಕ್ಕೆ ತರಬಾರದರು. ನಿರಾತಂಕವಾಗಿ ಆಡಳಿತ ನಡೆಸುವ ವಾತಾವರಣ ಸೃಷ್ಟಿಸಿ ಅವರನ್ನೇ ಮುಂದುವರಿಸಬೇಕು. ಏಕವ್ಯಕ್ತಿಯಿಂದ ರಾಜಕಾರಣ ಆರಂಭಿಸಿ 4 ಬಾರಿ ಮುಖ್ಯಮಂತ್ರಿ ಆಗಿರುವ ಬಿಎಸ್‌ವೈ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಕೇಂದ್ರದಿಂದ ಶ್ಲಾಘನೆ ಪಡೆದಿದ್ದಾರೆ. ಬಿಎಸ್‌ವೈ ಅಧಿಕಾರ ಕಳೆದುಕೊಂಡರೆ ಪಕ್ಷಕ್ಕೆ ಹಾನಿ ಆಗಲಿದೆಯೇ ಹೊರತು ಅವರಿಗೆ ಆಗುವ ವೈಯಕ್ತಿಕ ನಷ್ಟವೇನೂ ಇಲ್ಲ ಎಂದರು.

    ಮುಕ್ತ ಅವಕಾಶ ಕೊಡಿ

    ಯಡಿಯೂರಪ್ಪ ಅವರಿಗೇನಾದರೂ ತೊಂದರೆ ನೀಡಿದರೆ ಕರ್ನಾಟಕ ಬಿಜೆಪಿ ಮೇಲೆ ಅದರ ನೇರ ಪರಿಣಾಮ ಬೀರಲಿದೆ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.
    ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿಎಸ್‌ವೈ ಎಲ್ಲ ಶೋಷಿತ ಸಮುದಾಯಗಳ ಮಠಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅದೇಕೋ ಅವರು ಅಧಿಕಾರಕ್ಕೆ ಬಂದಾಗಲೆಲ್ಲ ಅನೇಕ ಸಮಸ್ಯೆ ಎದುರಿಸಿದ್ದಾರೆ. ಪ್ರವಾಹ, ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ್ದಾರೆ. ಅಧಿಕಾರಾವಧಿ ಪೂರ್ಣಗೊಳಿಸಲು ಮುಕ್ತ ಅವಕಾಶ ನೀಡಬೇಕು. ಪಕ್ಷದ ಆಂತರಿಕ ಬೇಗುದಿ ಇತ್ಯರ್ಥಗೊಳಿಸಬೇಕು ಎಂದರು.

    ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ ಎಂದಾದರೆ ಅದಕ್ಕೆ ಯಡಿಯೂರಪ್ಪ ಅವರ ಶ್ರಮ ಕಾರಣ. ಎಲ್ಲ ಸಮುದಾಯವನ್ನು ತಮ್ಮೊಟ್ಟಿಗೆ ಕರೆದೊಯ್ಯುತ್ತಿದ್ದಾರೆ. ಈ ಹಂತದಲ್ಲಿ ಅವರ ಗೌರವಕ್ಕೆ ಧಕ್ಕೆ ತರಬಾರದು. ನಾವೆಲ್ಲ ಅವರ ಜತೆ ನಿಲ್ಲುತ್ತೇವೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು. ಮುರುಘಾ ಶರಣರು ಹಿಂದುಳಿದ ದಲಿತ ವರ್ಗಗಳ ಸಮುದಾಯಗಳಿಗೆ ಮಠ ಕಟ್ಟಿಕೊಡುವ ಮೂಲಕ ಧಾರ್ಮಿಕ ನೆಲೆ ಒದಗಿಸಿದರೆ, ಯಡಿಯೂರಪ್ಪ ಮಠಗಳ ಅಭಿವೃದ್ಧಿಗೆ ನೆರವಾಗುವ ಮೂಲಕ ಸಮುದಾಯಗಳ ಹಿತಕ್ಕೆ ಶ್ರಮಿಸಿದ್ದಾರೆ ಎಂದರು.

    ಯಡಿಯೂರಪ್ಪ ಅವರ ಹಿಂದೆ ನಾಡಿನ ಮಠಾಧೀಶರು ಹಾಗೂ ಸಮುದಾಯದ ಜನಬೆಂಬಲ ಇದೆ. ನಾವೆಲ್ಲ ಅವರ ಜತೆಗಿದ್ದೇವೆ. ಅವರಿಗೆ ತೊಂದರೆ ಕೊಡದೆ ಅಧಿಕಾರ ನಡೆಸಲು ಅವಕಾಶ ಕೊಡಿ. ಬಿಎಸ್‌ವೈ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ.
    | ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಭೋವಿ ಗುರುಪೀಠ ಚಿತ್ರದುರ್ಗ

    ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸುವುದು ಎಂದಾದರೆ ಅದು ಅವರನ್ನು ಪ್ರೀತಿಸುವ ನಾಡಿನ ಕೋಟ್ಯಂತರ ಜನರಿಗೆ ಮಾಡಿದ ಅವಮಾನ. ಅವರಿಗೆ ಅಧಿಕಾರಾವಧಿ ಪೂರ್ಣಗೊಳಿಸಲು ಬಿಡಬೇಕು.
    | ಶ್ರೀ ಗುರುಮಹಾಂತೇಶ್ವರ ಸ್ವಾಮೀಜಿ ಇಳಕಲ್

    ಪಂಚಪೀಠಗಳೂ ಯಡಿಯೂರಪ್ಪ ಅವರ ಪರ ಇವೆ: ಶ್ರೀಶೈಲ ಜಗದ್ಗುರು

    ಸಿಎಂ ಬಿಎಸ್​ವೈ ವಿರುದ್ಧ ಸ್ವಪಕ್ಷದಲ್ಲೇ ಸಂಚು? ರಾಜಕೀಯ ಆಟ ಆಡ್ತಿರೋ ಕಾಣದ ಕೈ ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts