More

    ಜನಸ್ಪಂದನೆಗೆ ಜೈ ಅಭಿವೃದ್ಧಿ ಸಮರಕ್ಕೂ ನಾವು ಸೈ

    ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆಯಲಿರುವ ‘ಜನಸ್ಪಂದನ’ ಕಾರ್ಯಕ್ರಮವು ‘ಜನಸ್ಪಂದನೆಗೆ ಜೈ, ಅಭಿವೃದ್ಧಿ ಸಮರಕ್ಕೆ ಸೈ’ಗೆ ವೇದಿಕೆಯಾಗಲಿದೆ ಎಂದು ಕಾರ್ಯಕ್ರಮ ಸಂಘಟಕರಲ್ಲಿ ಒಬ್ಬರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ‘ವಿಜಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

     ಜವಾಬ್ದಾರಿ ನಿಮ್ಮನ್ನೇ ಅರಸಿಕೊಂಡು ಬಂದದ್ದು ಹೇಗೆ? ಇಂತಹ ಹೊಣೆಗಾರಿಕೆ ನಿರೀಕ್ಷಿಸಿದ್ದೀರಾ?

    -ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಪಕ್ಷ. ಪಕ್ಷದಲ್ಲಿ ನಾನೂ ಒಬ್ಬ ಸಾಮಾನ್ಯ ಕಾರ್ಯಕರ್ತ. ಕಾರ್ಯಕರ್ತರ ಶಕ್ತಿ, ಸಾಮರ್ಥ್ಯವನ್ನು ಗುರುತಿಸಿ ಪಕ್ಷ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡುತ್ತದೆ. ಜನಸ್ಪಂದನೆ ಎಲ್ಲಿ ಹಮ್ಮಿಕೊಳ್ಳಬೇಕು ಎಂಬ ಚರ್ಚೆ ಬಂದಾಗ ದೊಡ್ಡಬಳ್ಳಾಪುರದಲ್ಲಿ ನಡೆಸೋಣ ಎಂಬ ಸಲಹೆಗೆ ಮುಖ್ಯಮಂತ್ರಿ, ನಮ್ಮ ರಾಜ್ಯಾಧ್ಯಕ್ಷರು, ಪಕ್ಷದ ಮುಖಂಡರು ಒಪ್ಪಿದರು. ವಿಶೇಷವಾಗಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ.

    ಜನಸ್ಪಂದನೆ ಪರಿಕಲ್ಪನೆಯೇ ವಿಶಿಷ್ಟ ಅಲ್ಲವೇ?

    – ಮೊದಲನೆಯದಾಗಿ ಇದು ವ್ಯಕ್ತಿ ಆಧಾರಿತ ಕಾರ್ಯಕ್ರಮವಲ್ಲ. ಒಬ್ಬ ವ್ಯಕ್ತಿಯ ಮುಖಸ್ತುತಿ ಮಾಡಲು ಇರುವ ವೇದಿಕೆಯೂ ಅಲ್ಲ. ಅಧಿಕಾರ ದಾಹದಿಂದ ಮಾಡಿಕೊಂಡಿರುವ ಸ್ವಪ್ರತಿಷ್ಠೆಯ ಕಾರ್ಯಕ್ರಮವಲ್ಲ. 3 ಲಕ್ಷ ಜನರು ಸೇರುವ ಸಾಧ್ಯತೆ ಇದೆ. ನಮ್ಮ ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ನೀಡುವ, ವಿವಿಧ ಯೋಜನೆಗಳ ಫಲಾನುಭವಿಗಳ ಅಭಿಪ್ರಾಯ ಪಡೆಯುವ ಕಾರ್ಯಕ್ರಮ ಇದಾಗಿರಲಿದೆ.

    ದೊಡ್ಡಬಳ್ಳಾಪುರದಿಂದ ಮಹತ್ವದ ಕಾರ್ಯಕ್ರಮ ಚಾಲನೆ ಪಡೆಯುತ್ತಿದ್ದು ಹೆಚ್ಚಿನ ನಿರೀಕ್ಷೆ ಇರುವುದು ಸಹಜ ತಾನೇ?

    – ಖಂಡಿತಾ ಹೌದು. ರಾಜ್ಯದಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆಯಬೇಕು. ಪ್ರಮುಖವಾಗಿ ಈ ಮೂರು ಜಿಲ್ಲೆಗಳಲ್ಲಿ ಪಕ್ಷಕ್ಕೆ ಬೇರೆ ಕಡೆ ಇರುವಷ್ಟು ದೊಡ್ಡ ಶಕ್ತಿ ಇಲ್ಲ. ಬಿಜೆಪಿಯ ಅಭಿವೃದ್ಧಿ ಅಜೆಂಡಾವನ್ನು ನೋಡಿ ಜನರು ಖುಷಿಯಾಗಿದ್ದಾರೆ. ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಗುರಿ ಸಾಧನೆಗೆ ನಿರ್ಣಾಯಕ ಪಾತ್ರವಹಿಸಲಿದೆಯೇ?

    – ಕೇವಲ ಮಿಷನ್ 150 ಮಾತ್ರವಲ್ಲ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಗುರಿಯಿದೆ. ಕಾಂಗ್ರೆಸ್ , ಜೆಡಿಎಸ್ ಎಂದರೆ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಎಂದು ಜನರಿಗೆ ಗೊತ್ತಿದೆ. ನಮಗೆ ಪ್ರಧಾನಿ ಮೋದಿ ಅವರಂತಹ ದಿಟ್ಟ ನಾಯಕತ್ವ ಇದೆ. ಜನಪರ ಆಡಳಿತ ನೀಡಿದ ಟ್ರಾ್ಯಕ್ ರೆಕಾರ್ಡ್ ಇದೆ. ಜನ ನಮಗೆ ಮತ್ತೊಮ್ಮೆ ಆಶೀರ್ವಾದ ಮಾಡುವ ವಿಶ್ವಾಸವಿದೆ.

      ಭಾಗದಲ್ಲಿ ಪಕ್ಷದ ಸಂಘಟನೆ ಬಲವರ್ಧನೆ, ವಿಸ್ತರಣೆಗೆ ಅನುಕೂಲವಾದೀತೆ?

    – ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಉತ್ಸವವಾಗಿ ಇದನ್ನು ಆಚರಿಸಲಾಗುತ್ತಿದೆ. ಬಯಲುಸೀಮೆ ಅಂದರೆ ಅದು ಕರ್ನಾಟಕದ ವಿಶೇಷ ಪ್ರದೇಶ. ಈ ಕಾಯಕ್ರಮದಿಂದ ಕಾರ್ಯಕರ್ತರಲ್ಲಿ ಹೊಸ ಹುರುಪು ಬರಲಿದೆ. ಇದು ಪಕ್ಷಕ್ಕೆ ನೆರವಾಗಲಿದೆ.

    ಬಿಜೆಪಿ ಸರ್ಕಾರ ಮೂರು ವರ್ಷಗಳನ್ನು ಸಾಧಿಸಿದ್ದನ್ನು ವಿವರಿಸಲು ವೇದಿಕೆಯಾಗಲಿದೆಯೇ?

    – ಸರ್ಕಾರದ ಸಾಧನೆಯನ್ನು ನಾವು ಬಣ್ಣಿಸುವುದಿಲ್ಲ. ಜನರೇ ಬಣ್ಣಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಡೆವಲಪ್​ವೆುಂಟ್​ಗಳು, ಯೋಜನೆಗಳು ಜನರಿಗೆ ಹತ್ತಿರವಾಗಿದೆ. ದೇಶದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ.

      ಕಾರ್ಯಕ್ರಮದ ಮೂಲಕ ಪ್ರತಿಪಕ್ಷಗಳಿಗೆ ಉತ್ತರಿಸುವ ಉದ್ದೇಶವಿದೆಯೇ?

    ಪ್ರತಿಪಕ್ಷಗಳಿಗೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲ. ಬಿಜೆಪಿ ಮಾಡಿದ ಅಭಿವೃದ್ಧಿ ಕೆಲಸವನ್ನು ಟೀಕಿಸುವುದು ಮಾತ್ರ ಗೊತ್ತು. ಅಭಿವೃದ್ಧಿಯ ಕನಸು ಕಾಣದವರಿಗೆ ಜನರೇ ಪಾಠ ಕಲಿಸುತ್ತಾರೆ.

    ಸರ್ಕಾರ, ಪಕ್ಷದ ವರ್ಚಸ್ಸು ವೃದ್ಧಿಗೆ ನೆರವಾಗಲಿದೆಯೇ?

    – ಸರ್ಕಾರದ ಆಡಳಿತವನ್ನು ಜನರು ಮೆಚ್ಚಿಕೊಂಡಿದ್ದಾರೆ. ಇನ್ನೊಮ್ಮೆ ಇವರಿಗೆ ಅಧಿಕಾರ ಕೊಡಬೇಕು ಅನ್ನುವ ಮಾತು ಕೇಳಿದ್ದೇವೆ. ಪಕ್ಷಕ್ಕೆ ಸ್ವಂತ ನೆಲೆ ಇಲ್ಲದೆಡೆ ಅದನ್ನು ಬೆಳೆಸುವುದು ಆಗಿದೆ.

    ಪಕ್ಷದ ಮುಂದಿನ ನಡೆ, ರಣಕಹಳೆ ಮೊಳಗಲಿದೆಯೇ?

    – ಚುನಾವಣೆಯಲ್ಲಿ ರಾಜಕಾರಣ ಮಾಡಬೇಕು. ಆದರೆ ಅಭಿವೃದ್ಧಿಯಲ್ಲಿ ರಾಜಕಾರಣ ಸರಿಯಲ್ಲ. ವಿಪಕ್ಷಗಳು ಜನರ ಬಗ್ಗೆ ಎಂದೂ ಯೋಚಿಸಿಲ್ಲ. ಬಿಜೆಪಿಯನ್ನು ಟೀಕಿಸುವುದು ಅವರ 24/7 ಅಜೆಂಡಾ. ನಮ್ಮದು ಚುನಾವಣಾ ರಣಕಹಳೆಯಲ್ಲ, ಅಭಿವೃದ್ಧಿಯ ರಣಕಹಳೆ.

    ಸಿದ್ದರಾಮೋತ್ಸವಕ್ಕೆ ಇದು ಪರ್ಯಾಯ ಸಮಾವೇಶವೇ?

    – ಸಿದ್ದರಾಮೋತ್ಸವ ಎಂಬುದು ವ್ಯಕ್ತಿಪೂಜೆ. ಅಭಿಮಾನಿಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಜನರೇ ಮೆಚ್ಚಿ ಮಾಡುತ್ತಿರುವಂತಹ ಕಾರ್ಯಕ್ರಮವಿದು. ಅದಕ್ಕೂ ಇದಕ್ಕೂ ಹೋಲಿಕೆಯೇ ಇಲ್ಲ.

    ಸತತ ಮಳೆಯಿಂದ ಜನ ಸಂಕಷ್ಟಕ್ಕೆ ಒಳಗಾಗಿರುವಾಗ ಸಂಭ್ರಮದ ಅಗತ್ಯವೇನಿದೆ?

    – ಖಂಡಿತಾ, ಇದು ಉತ್ತಮ ಪ್ರಶ್ನೆ. ಯಾರ ಕಾಲದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂದು ಜನರಿಗೆ ಗೊತ್ತಾಗಬೇಕು. ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಭೂಗಳ್ಳರಿಗೆ, ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಮಾರಿದ್ದು ಯಾರು ? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳಲ್ಲಿ ಬೆಂಗಳೂರಿನ 15 ಕೆರೆಗಳು ಎಲ್ಲಿ ಮಾಯವಾದವು ಎಂದು ಹೈಕೋರ್ಟ್ ಪ್ರಶ್ನಿಸಿದ್ದು ಸುಳ್ಳೇ? ಇಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ನಾವೆಲ್ಲರೂ ಒಟ್ಟಾಗಿ ಪರಿಹರಿಸಿಕೊಳ್ಳಬೇಕೆ ಹೊರತು ರಾಜಕೀಯ ಸಲ್ಲದು.

    ಮೂರು ಜಿಲ್ಲೆಗಳಿಂದ ಬಿಜೆಪಿ ಎಷ್ಟು ಸ್ಥಾನಗಳನ್ನು ಈ ಸಮಾವೇಶದಿಂದ ನಿರೀಕ್ಷೆ ಮಾಡುತ್ತಿದೆ?

    – ಪ್ರಸ್ತುತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಈ ಮೂರು ಜಿಲ್ಲೆಗಳ 16 ಸೀಟುಗಳಲ್ಲಿ ಬಿಜೆಪಿಗೆ ಒಂದು ಸ್ಥಾನ ಇದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಲಿದೆ. ್ಲ ಅನೇಕ ನಾಯಕರು ಬಿಜೆಪಿ ಸೇರಲಿದ್ದಾರೆ. ಕಾದು ನೋಡಿ.

    ಎಲ್ಲಿ ಕಾರ್ಯಕ್ರಮ?

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ರಘುನಾಥಪುರ ಸಮೀಪ (ಎಲ್ ಆಂಡ್ ಟಿ ಕಾರ್ಖಾನೆ ಎದುರು) ಕಾರ್ಯಕ್ರಮ ಆರಂಭ ಯಾವಾಗ?

    ಸೆ.10ರಂದು ಬೆಳಗ್ಗೆ ವಿವಿಧ ಸಾಂಸ್ಕೃತಿಕ ಕಾರ್ಯರಂಭ ಆರಂಭವಾಗಲಿದೆ. 11 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದ್ದು, 1.30ಕ್ಕೆ ಸಮಾರೋಪ ಗೊಳ್ಳಲಿದೆ. 2 ಗಂಟೆಗೆ ಭೋಜನ ವ್ಯವಸ್ಥೆ ಇರಲಿದೆ.

    ವಾಹನ ನಿಲುಗಡೆ ಹೇಗೆ?

    ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಗ್ರಾಮಾಂತರ ಜಿಲ್ಲೆಯ ಪ್ರತಿ ಪಂಚಾಯಿತಿ ಮಟ್ಟದಿಂದಲೂ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ನಾಲ್ಕೂ ಜಿಲ್ಲೆಗಳಿಂದ ಬರೋಬ್ಬರಿ 8 ಸಾವಿರ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಬಸ್, ಕಾರು, ದ್ವಿಚಕ್ರವಾಹನ ಸೇರಿ ಇನ್ನಿತರ ವಾಹನಗಳಿಗೆ ಪ್ರತ್ಯೇಕ ರ್ಪಾಂಗ್ ವ್ಯವಸ್ಥೆ, ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ವಾಹನ ನಿಲುಗಡೆಗೆ ವಿಶಾಲ ಜಾಗದ ವ್ಯವಸ್ಥೆ.

    ನಿರ್ವಹಣೆ ಹೇಗೆ?

    ಕಾರ್ಯಕ್ರಮ ಬಂದೋಬಸ್ತ್​ಗೆ 4 ಸಾವಿರ ಪೊಲೀಸರ ನಿಯೋಜನೆ ಜತೆಗೆ 8 ಸಾವಿರ ಬಿಜೆಪಿ ಸ್ವಯಂಸೇವಕರನ್ನು ನೇಮಿಸಲಾಗಿದೆ. ಸ್ಥಳದಲ್ಲಿ ಆಂಬುಲೆನ್ಸ್, ಅಗ್ನಿಶಾಮಕ ವಾಹನ ಸೇರಿ ತುರ್ತು ನಿರ್ವಹಣಾ ವ್ಯವಸ್ಥೆಗೆ ವಿಶೇಷ ಗಮನ ನೀಡಲಾಗಿದೆ.

    ಕಾರ್ಯಕ್ರಮದ ಸ್ಥಳ ತಲುಪುವುದು ಹೇಗೆ?

    ಬೆಂಗಳೂರಿನಿಂದ ಯಲಹಂಕ, ಮಾರಸಂದ್ರ ಮೂಲಕ ರಘುನಾಥಪುರ ತಲುಪುವುದು.(40ಕಿ.ಮೀ ಅಂತರ) ಕೋಲಾರ ಕಡೆಯಿಂದ ಸೂಲಿಬೆಲೆ ರಸ್ತೆಯಲ್ಲಿ ಸಾಗಿ ದೇವನಹಳ್ಳಿ ಮಾರ್ಗದ ಮೂಲಕ ಕಾರ್ಯಕ್ರಮ ಸ್ಥಳ ತಲುಪುವುದು.(74 ಕಿ.ಮೀ) ನೆಲಮಂಗಲದಿಂದ (32 ಕಿ.ಮೀ) ಹಾಗೂ ತುಮಕೂರುನಿಂದ ( 52ಕಿ.ಮೀ) ಬರುವವರು ಮಧುರೆ ಮಾರ್ಗವಾಗಿ ದೇವನಹಳ್ಳಿ-ದೊಡ್ಡಬಳ್ಳಾಪುರ ಹೆದ್ದಾರಿಯಲ್ಲಿ ಸಾಗಿ ರಘುನಾಥಪುರ ತಲುಪಬಹುದು. ಚಿಕ್ಕಬಳ್ಳಾಪುರಿಂದ ಗೌರಿಬಿದನೂರು ಮಾರ್ಗವಾಗಿ ದೊಡ್ಡಬಳ್ಳಾಪುರ ಟಿಬಿ ಸರ್ಕಲ್ ದಾಟಿ ದೇವನಹಳ್ಳಿ-ದೊಡ್ಡಬಳ್ಳಾಪುರ ಹೆದ್ದಾರಿ ಮೂಲಕ ಕಾರ್ಯಕ್ರಮದ ಸ್ಥಳ ತಲುಪಬಹುದು.(29 ಕಿ.ಮೀ)

    ನಿಮ್ಮ ಪುಂಗಿ ನಮ್ಹತ್ರ ನಡೆಯಲ್ಲ; ಗಣೇಶ ಮಂಡಳಿಗಳಿಗೆ ಇನ್ಸ್‌ಪೆಕ್ಟರ್ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts