More

    ಅನಿಸಿಕೆ: ಚೀನಾವನ್ನು ಕಟ್ಟಿಹಾಕಲು ಸಮರ್ಥವಾಗಿದೆ ಭಾರತ

    ಅನಿಸಿಕೆ: ಚೀನಾವನ್ನು ಕಟ್ಟಿಹಾಕಲು ಸಮರ್ಥವಾಗಿದೆ ಭಾರತ

    ಹಿಮಾಲಯದ ಬೆಟ್ಟಗಳ ಮಧ್ಯೆ ಇರುವ ಸುಂದರ ಮತ್ತು ಉದ್ದನೆಯ ನೀಲಿ ಸರೋವರವೇ ಪ್ಯಾಂಗೊಂಗ್. ಹೋಗಲು ದುರ್ಗಮ ದಾರಿ. ವರ್ಷದ ಕೆಲವೇ ತಿಂಗಳು ಇಲ್ಲಿಗೆ ಬರುವ ಪ್ರವಾಸಿಗರು, ಅದೂ ಅತೀ ವಿರಳ. ವರ್ಷ ಪೂರ್ತಿ ಮೈನಸ್ ಸೆಂಟಿಗ್ರೇಡಿನಲ್ಲಿ ಕೆಲಸ ಮಾಡುತ್ತಿರುವ ನಮ್ಮ ಹೆಮ್ಮೆಯ ಸೈನಿಕರು. ಯಾರೂ ಮನುಷ್ಯರೇ ಇಲ್ಲ ಅಂದ್ರೂ ಸೈನಿಕರೇ ಅಲ್ಲಿ ದೇವರಂತೆ ಇರುತ್ತಾರೆ.

    ಈ ಸರೋವರದ ದಾರಿಯಲ್ಲಿ ಸ್ವಲ್ಪ ದೂರ ಕ್ರಮಿಸಿದರೆ 1962ರ ಭಾರತ-ಚೀನಾ ಯುದ್ಧದ ನೆನಪುಗಳು ಮರುಕಳಿಸುತ್ತವೆ. ಈ ವ್ಯಾಲಿ, ಪ್ಯಾಂಗೊಂಗ್ ಸರೋವರದ ಕೆಲ ಭಾಗ ಉಳಿದಿದ್ದರೆ ಅದಕ್ಕೆ ಕಾರಣಿಕರ್ತರು ನಮ್ಮ ಕನ್ನಡದವರೇ ಆದ ಜನರಲ್ ಕೆ ಎಸ್ ತಿಮ್ಮಯ್ಯ. ದೇಶದ ಮೊದಲ ಪ್ರಧಾನ ಮಂತ್ರಿಗೆ ಎಲ್ಲ ಜವಾಬ್ದಾರಿಗಳನ್ನೂ ಬಿಟ್ಟು ಜನರಲ್ ತಿಮ್ಮಯ್ಯ ಸುಮ್ಮನಿದ್ದು ಬಿಟ್ಟಿದ್ದರೆ ಪ್ಯಾಂಗೊಂಗ್ ಸರೋವರ, ಗಾಲ್ವಾನ್ ವ್ಯಾಲಿಗಳು ಭಾರತದ ಭಾಗವಾಗಿ ನಮ್ಮ ಭೂಪಟಗಳಲ್ಲಿ ರಾರಾಜಿಸುತ್ತಿರಲಿಲ್ಲ.

    ಬ್ರಿಟಿಷರ ಕಾಲದಿಂದಲೂ ಲೇಹ್, ಲಡಾಖ್ ಹಾಗೂ ಟಿಬೆಟ್ ಭಾಗಗಳ ಮೇಲೆ ಕಣ್ಣಿಟ್ಟಿದ್ದ ಚೀನಾ ಕೊನೆಗೂ ಟಿಬೆಟನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಟಿಬೆಟ್ ನಮಗೆ ಸಂಬಂಧಪಟ್ಟಿದ್ದು ಅಲ್ಲವೇ ಅಲ್ಲವೆಂದು ಮೈಮರೆತು ಕುಳಿತ ಸ್ವತಂತ್ರ ಭಾರತದ ಸರ್ಕಾರ ಟಿಬೆಟಿಯನ್ ಸ್ವಾಯತ್ತತೆಯನ್ನು ಉಳಿಸಲು ಪ್ರಯತ್ನ ಮಾಡಲಿಲ್ಲ. ಭಾರತ ಮತ್ತು ಟಿಬೆಟ್ ಒಂದೇ ಮಾನಸಿಕತೆಯ ರಾಷ್ಟ್ರಗಳು. ಲೇಹ್-ಲಡಾಖಿನಂತೆ, ಟಿಬೆಟ್ ನಮ್ಮ ದೇಶದ ಆಚಾರ-ವಿಚಾರ ಹಾಗೂ ಸಾಂಸ್ಕೃತಿಕತೆಗೆ ಪೂರಕವಾಗಿದ್ದ ದೇಶ.

    ಮಾನಸ ಸರೋವರ, ಕೈಲಾಸದ ಬಗ್ಗೆ ಎರಡೂ ದೇಶಗಳದ್ದು ಸಮಾನವಾದ ಭಕ್ತಿ, ಶ್ರದ್ಧೆ. ಕೋಟ್ಯಂತರ ಭಾರತೀಯರ ಪವಿತ್ರ ಕ್ಷೇತ್ರ ಮಾನಸ ಸರೋವರ ಹಾಗೂ ಕೈಲಾಸಕ್ಕೆ ಹೋಗಬೇಕಾದರೆ ಚೀನಾ ದೇಶದ ವೀಸಾ ಪಡೆದು, ರಾಯಲ್ಟಿ ಕಟ್ಟಿ, ಗಡಿಯಲ್ಲಿ ಭಿಕ್ಷುಕರಂತೆ ಕಾದು, ಚೀನಿ ಗಡಿ ಭದ್ರತಾ ದಳದ ದರ್ಪವನ್ನು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ. ಟಿಬೆಟಿನ ದೊರೆಯಾಗಿದ್ದ ದಲೈಲಾಮಾ ಭಾರತದಲ್ಲಿ ಆಶ್ರಯ ಪಡೆದಿದ್ದು, ಸಾವಿರಾರು ಟಿಬೆಟಿಯನ್ನರು ಕರ್ನಾಟಕ ಸೇರಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಾಸಮಾಡುತ್ತಿದ್ದಾರೆ. ಇಂಥ ದಲೈಲಾಮರ ಹೆಸರನ್ನು ಹೇಳುವುದು ಈಗಿನ ಟಿಬೆಟಿನಲ್ಲಿ ಶಿಕ್ಷಾರ್ಹ ಅಪರಾಧ! ಟಿಬೆಟಿನ ಮೂಲ ನಾಗರಿಕರಿಗೆ ಪಾಸ್​ಪೋರ್ಟ್ ಸೌಲಭ್ಯ ಸಿಗುತ್ತಿಲ್ಲ, ಅವರು ಯಾವುದೇ ದೇಶಕ್ಕೆ ಹೋಗುವ ಹಾಗಿಲ್ಲ, ನಿತ್ಯ ದೌರ್ಜನ್ಯ; ಒಂದು ರೀತಿಯ ನರಕ ಅದು. ಟಿಬೆಟಿನ ಶೆರ್ಪಾಗಳಿಗೆ ಶಿಕ್ಷಣ ಇಲ್ಲ, ಉದ್ಯೋಗ ಇಲ್ಲ, ಆಸ್ಪತ್ರೆ ಇಲ್ಲ, ಮೂಲ ಟಿಬೆಟಿಯನ್ನರು ಸಾಯುವುದಕ್ಕೆ ಅಥವಾ ಸಾಯಿಸುವುದಕ್ಕೆ ಚೀನಾ ಪ್ರತಿನಿತ್ಯ ದುಡಿಯುತ್ತಿದೆ.

    ಟಿಬೆಟನ್ನು ಪಡೆದಮೇಲೆ ಚೀನಾಕ್ಕೆ ಸಾಮ್ರಾಜ್ಯ ವಿಸ್ತರಣೆಯ ದುರಾಸೆ ಜಾಸ್ತಿಯಾಗಿದೆ. ಹಾಂಕಾಂಗ್ ದೇಶದ ಸ್ವಾಯತ್ತತೆಯನ್ನು ಕಿತ್ತುಕೊಂಡು ಆ ದೇಶದ ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಹಾಂಕಾಂಗ್ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ-ಮಾಡಿ ಮಡಿಯುತ್ತಿದ್ದಾರೆ. ಚೀನಾ ತನ್ನ ಸುತ್ತಮುತ್ತ ಇರುವ ಎಲ್ಲ ದೇಶಗಳಿಗೂ ತೊಂದರೆ ಮಾಡುತ್ತಿದೆ. ತನ್ನ ಜತೆ ಗಡಿ ಹಂಚಿಕೊಂಡಿರುವ ಎಲ್ಲ ದೇಶಗಳ ಮೇಲೆ ಚೀನಾ ಕಾಲ್ಕೆರೆದು ಜಗಳಕ್ಕೆ ಹೋಗಿರುವ ಉದಾಹರಣೆಗಳಿವೆ. ಜಪಾನ್, ರಷ್ಯಾ, ಭಾರತ, ಮ್ಯಾನ್ಮಾರ್, ತೈವಾನ್, ಫಿಲಿಪೈನ್ಸ್ ಸೇರಿ 14 ದೇಶಗಳು ಚೀನಾದ ದರ್ಪಕ್ಕೆ ಸಾಕ್ಷಿಯಾಗಿವೆ.

    ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದರೆ ಚೀನಾ ಆಕ್ಷೇಪ ಎತ್ತಿತ್ತು. ಸಿಕ್ಕಿಂ ರಾಜ್ಯದ ನಾಥುಲಾ ಪಾಸ್ ಮೇಲೂ ಚೀನಾದ ಕಣ್ಣು; ಇದು ಆಯಕಟ್ಟಿನ ಪ್ರದೇಶ. ಆದರೆ ದುರದೃಷ್ಟ ಎಂದರೆ ನಮ್ಮ ಸೈನಿಕರು ಬೆಟ್ಟದ ಕೆಳಗಿನಿಂದ ಹೋರಾಟ ಮಾಡಬೇಕು. ಪ್ರಾಕೃತಿಕವಾಗಿ ತುಂಬ ದುರ್ಗಮ ಪ್ರದೇಶ.

    ಕಾರ್ಗಿಲ್ ಜಿಲ್ಲೆಯ ದ್ರಾಸ್ ಯುದ್ಧ ಕೂಡ ಇದೇ ರೀತಿಯದ್ದಾಗಿತ್ತು. ನಮ್ಮ ಸೈನಿಕರು ಬೆಟ್ಟ ಏರಿದ ನಂತರ ಯುದ್ಧ ಮಾಡಬೇಕಾದ ಕಠಿಣ ಸ್ಥಿತಿ, ಆದರೂ ಭಾರತ ಗೆಲುವನ್ನು ಕಂಡಿತು. ಪ್ರಸಕ್ತ ಚರ್ಚೆ ಗಾಲ್ವಾನ್ ವ್ಯಾಲಿಯದ್ದು, ಸ್ವಾತಂತ್ರ್ಯ ನಂತರದ ಸರ್ಕಾರಗಳು ಮಾಡಿದ್ದ ತಪ್ಪಿನ ಪರಿಣಾಮವಾಗಿ, ದೇಶದ ಬಹಳಷ್ಟು ಪ್ರದೇಶಗಳನ್ನು ನಾವು ಕಳೆದುಕೊಂಡೆವು. ಕಳೆದುಕೊಂಡ ಭಾಗಗಳಲ್ಲಿ ಕಾಶ್ಮೀರದ ಕೆಲ ಪ್ರದೇಶಗಳು, ಪ್ಯಾಂಗೊಂಗ್ ಸರೋವರದ ಬಹುಭಾಗ ಹಾಗೂ ಅರುಣಾಚಲ ಪ್ರದೇಶದ ದೊಡ್ಡ ಭೂಭಾಗ ಸೇರಿದೆ.

    ಭಾರತದ ಕೊನೆಯ ವೈಸರಾಯ್ ಮೌಂಟ್ ಬ್ಯಾಟನ್ ಜನರಲ್ ತಿಮ್ಮಯ್ಯರನ್ನು ಅಂದೇ ಎಚ್ಚರಿಸಿ, ಚೀನಾ ನಂಬಿಕೆಗೆ ಯೋಗ್ಯವಾದ ದೇಶ ಅಲ್ಲ, ಲಡಾಖ್ ಪ್ರದೇಶದ ಬಗ್ಗೆ ಗಮನವಹಿಸಿ ಎಂದೂ ಹೇಳಿದ್ದರು. ಜನರಲ್ ತಿಮ್ಮಯ್ಯ ಇದನ್ನು ಸರ್ಕಾರದ ಗಮನಕ್ಕೆ ತಂದಾಗ ಅವರಿಗೆ ವರ್ಗಾವಣೆಯ ದೊಡ್ಡ ‘ಪ್ರಶಸ್ತಿ’ ದೊರಕಿತು. ಅದು, ಭಾರತದ ಗಡಿ ಪ್ರದೇಶದಿಂದ ದಕ್ಷಿಣದ ಪುಣೆಗೆ.

    1957ರಲ್ಲಿ ತಿಮ್ಮಯ್ಯ ಸೇನಾಮುಖ್ಯಸ್ಥರಾದಾಗ ಮಾಡಿದ ಮೊದಲ ಕೆಲಸವೇ ಲಡಾಖಿನ ಗಾಲ್ವಾನ್ ಪ್ರದೇಶಕ್ಕೆ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದ್ದು. 1962ರ ಯುದ್ಧದಲ್ಲಿ ಈ ಭಾಗದ ಹಲವು ಪ್ರದೇಶ ಚೀನಾಕ್ಕೆ ಬಿಟ್ಟುಕೊಡಲಾಯಿತು. ತಿಮ್ಮಯ್ಯನವರ ದೂರದೃಷ್ಟಿಯ ಯೋಚನೆ ಪರಿಣಾಮ ಪ್ಯಾಂಗೊಂಗ್ ಸರೋವರದ ಆಯಕಟ್ಟಿನ ಪ್ರದೇಶದ ಒಂದು ಭಾಗ ನಮ್ಮಲ್ಲಿ ಉಳಿದಿದೆ. ಮೊನ್ನೆಯ ಘಟನೆಯಲ್ಲಿ ನಮ್ಮ ಸೈನಿಕರ ಬಲಿದಾನ ಇದೇ ಪ್ರದೇಶದ ಸಲುವಾಗಿ ಆಗಿದೆ. ಭಾರತಕ್ಕೆ ಹೊಂದಿಕೊಂಡಿರುವ ಗಡಿಪ್ರದೇಶದ ಉದ್ದಕ್ಕೂ ಚೀನಾ ಹೈವೇಗಳನ್ನು ನಿರ್ಮಾಣ ಮಾಡಿದೆ, ಆದರೆ ನಮ್ಮ ದೇಶದ ಗಡಿಭಾಗದ ರಸ್ತೆಗಳು ಕೇವಲ ಮಣ್ಣು ರಸ್ತೆಗಳಾಗಿದ್ದವು. ಹೈವೇ ಎಂದು ಘೊಷಣೆಯಾಗಿದ್ದರೂ ಹೈವೇ ನಿರ್ಮಾಣ ಆಗಿರಲಿಲ್ಲ. ಚೀನಾಕ್ಕೆ ಹಿತವಾಗುವ ರೀತಿಯಲ್ಲಿ ಹಿಂದಿನ ಸರ್ಕಾರಗಳು ನಡೆದುಕೊಂಡಿದ್ದವು. ಈಗಿನ ಕೇಂದ್ರ ಸರ್ಕಾರ ಎಲ್ಲ ಗಡಿ ರಸ್ತೆಗಳಿಗೆ ಆದ್ಯತೆ ನೀಡಿ ಉತ್ತಮ ರಸ್ತೆ ಮತ್ತು ಹೈವೇಗಳನ್ನು ನಿರ್ವಿುಸಲು ಆರಂಭಿಸಿದ್ದು ಚೀನಾದ ಕಣ್ಣು ಕೆಂಪಾಗಿಸಿದೆ.

    ಪಂಚಶೀಲ ತತ್ತ್ವಗಳನ್ನು (ಸಹಿ ಬಿದ್ದದ್ದು 1954) ಚೀನಾ ಎಲ್ಲ ಕಾಲದಲ್ಲೂ ಗಾಳಿಗೆ ತೂರಿದೆ.

    1. ಪರಸ್ಪರ ರಾಷ್ಟ್ರಗಳ ಸ್ವಾಯತ್ತತೆ ಹಾಗೂ ಸಾರ್ವಭೌಮತೆಯನ್ನು ಗೌರವಿಸುವುದು.

    2. ಪರಸ್ಪರ ಆಕ್ರಮಣ ಮಾಡದಿರುವುದು.

    3. ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವುದು.

    4. ಸಹಕಾರ ಮತ್ತು ಸಾರ್ವಭೌಮತೆ.

    5. ಶಾಂತಿಯುತ ಸಹಬಾಳ್ವೆ.

    ಈ ಪಂಚಶೀಲ ತತ್ತ್ವಗಳಿಗೆ ಚೀನಾ ಬೆಲೆ ಕೊಟ್ಟಿಲ್ಲ, ಇತ್ತೀಚೆಗೆ ನಡೆದ ಗಾಲ್ವಾನ್ ಕಣಿವೆ ಸಮಸ್ಯೆಯಲ್ಲೂ ಅದು ಈ ಎಲ್ಲ ಒಪ್ಪಂದಗಳನ್ನು ಮುರಿದಿದೆ.

    ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಿ ಸೈನಿಕರು ಅಕ್ರಮವಾಗಿ ಬಂಕರುಗಳನ್ನು ನಿರ್ವಿುಸಿದ್ದರು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಿರಾಯುಧ ಭಾರತೀಯ ಸೈನಿಕರ ಮೇಲೆ ಚೀನಿ ಸೈನಿಕರು ಆಕ್ರಮಣ ಮಾಡಿದರು. ಸೈನಿಕರು ಯಾವಾಗಲೂ ಬಂದೂಕಿನೊಂದಿಗೆ ಇರುತ್ತಾರೆ, ಆದರೆ ಈ ಗಡಿಪ್ರದೇಶದ ಗಸ್ತುವಿನಲ್ಲಿರುವ ಸೈನಿಕರು ಭಾರತ-ಚೀನಾ ಒಪ್ಪಂದದಂತೆ ಗುಂಡಿನ ದಾಳಿ ನಡೆಸುವಂತಿಲ್ಲ. 3488 ಕಿ.ಮೀ. ಉದ್ದದ ಭಾರತ-ಚೀನಾ ಗಡಿಯ ಕಾವಲು ನಮ್ಮ ಸೈನಿಕರಿಗೆ ಬಹುದೊಡ್ಡ ಸವಾಲೇ ಹೌದು. ಎಲ್ಲ ಸಮಯದಲ್ಲೂ ಮೈನಸ್ ಡಿಗ್ರಿ ಸೆಂಟಿಗ್ರೇಡಿನಲ್ಲಿ, ಮೈ ಕೊರೆಯುವ ಚಳಿಯಲ್ಲಿ, ಇವರ ಬದುಕೇ ದುಸ್ತರ, ಹೋರಾಟ ಇನ್ನಷ್ಟು ಕಷ್ಟ. ಕರೊನಾವನ್ನು ಪ್ರಪಂಚದಲ್ಲೆಲ್ಲ ಹಬ್ಬಿಸಿದ ಚೀನಾ, ಲಕ್ಷಾಂತರ ಜನರ ಸಾವಿನ ಬೆಂಕಿಯಲ್ಲೂ ಸಾಮ್ರಾಜ್ಯ ವಿಸ್ತರಣೆಯ ಕನಸನ್ನು ಕಾಣುತ್ತಿದೆ.

    ಕರೊನಾ ವಿರುದ್ಧದ ಹೋರಾಟ, ಆರ್ಥಿಕತೆಯ ಚೇತರಿಕೆಗಾಗಿ ಹೋರಾಟ ನಡೆಯುತ್ತಿದ್ದರೆ, ಕರೊನಾ ಸೋಂಕನ್ನು ಪ್ರಪಂಚಕ್ಕೆ ಕೊಟ್ಟು ವಿಶ್ವ ಆರೋಗ್ಯ ಸಂಸ್ಥೆಯನ್ನು ತನ್ನ ಪ್ರಭಾವದ ಮೂಲಕ ದಾರಿತಪ್ಪಿಸಿ, ಈಗ ತಾನು ಏನು ಮಾಡೇ ಇಲ್ಲ ಎಂಬಂತೆ ಧಾಷ್ಟ್ಯ ತೋರುತ್ತಿರುವ ಡ್ರಾ್ಯಗನ್ ರಾಷ್ಟ್ರಕ್ಕೆ ಪಾಠ ಕಲಿಸಲು ಇದು ಸಕಾಲ.

    ಪ್ರಪಂಚ ಒಟ್ಟಾಗಿ ಚೀನಾದ ಸೊಕ್ಕು ಮುರಿಯಬೇಕಿದೆ. ಚೀನಾ ಭಾರತದಲ್ಲಿ ವರ್ಷಕ್ಕೆ 5 ಲಕ್ಷ ಕೋಟಿಗಿಂತಲೂ ಹೆಚ್ಚು ವ್ಯಾಪಾರ ವಹಿವಾಟನ್ನು ಹೊಂದಿದೆ. ಭಾರತದ ಮಾರ್ಕೇಟುಗಳಲ್ಲಿ ಚೀನಾ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿವೆ. ಮೊಬೈಲ್, ಕಂಪ್ಯೂಟರ್, ಯಂತ್ರೋದ್ಯಮ ಮಾತ್ರವಲ್ಲದೆ ನಮ್ಮ ದೇವರಮನೆ, ಅಡುಗೆಮನೆ, ಡ್ರಾಯಿಂಗ್​ರೂಮ್ ಬೆಡ್​ರೂಮ್ಳಿಗೂ ಚೀನಾ ಉತ್ಪನ್ನಗಳು ಆವರಿಸಿಕೊಂಡಿವೆ. ಅರಿಶಿಣ, ಕುಂಕುಮ, ಪಟಾಕಿ, ಮಕ್ಕಳ ಆಟಿಕೆ ಎಲ್ಲವೂ ಚೀನಾಮಯವೇ. ಹೊಸಮನೆ, ಹೋಟೆಲ್, ಕಾಲೇಜ್, ಆಸ್ಪತ್ರೆ ಏನೇ ಕಟ್ಟಲಿ ಚೀನಾದಿಂದಲೇ ಇಂಟೀರಿಯರ್ಸ್ ಬರಬೇಕು ಎಂಬಂಥ ದುಸ್ಥಿತಿ.

    ನಮ್ಮ ನೆರೆರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿರುವ ಚೀನಾ ನಮ್ಮ ದೇಶದ ಭದ್ರತೆಗೆ ಎಂದೆಂದಿಗೂ ಅಪಾಯಕಾರಿಯೇ. ಮ್ಯಾನ್ಮಾರ್, ಭೂತಾನ್, ಶ್ರೀಲಂಕಾ, ನೇಪಾಳದಲ್ಲಿ ತನ್ನ ನೆಲೆ ಗಟ್ಟಿಗೊಳಿಸಿರುವ ಚೀನಾ, ದಕ್ಷಿಣ ಸಮುದ್ರದಲ್ಲಿ ಬಹುತೇಕ ಹಿಡಿತ ಸಾಧಿಸಿದೆ. ಟಿಬೆಟಿನಂತೆ ನೇಪಾಳವನ್ನು ನುಂಗಲು ಸಜ್ಜಾಗಿದೆ. ನೇಪಾಳದಲ್ಲಿ ಅರಾಜಕತೆ ಸೃಷ್ಟಿಸಿ ಅದರ ದುರ್ಲಾಭ ಪಡೆಯುವುದು ಚೀನಾದ ಉದ್ದೇಶ. ಇದು ನೇಪಾಳಕ್ಕೆ ಎಷ್ಟು ಬೇಗ ಅರ್ಥ ಆಗುತ್ತದೆಯೋ ಅಷ್ಟು ಕಾಲ ನೇಪಾಳ ಉಳಿಯುತ್ತದೆ.

    ಭಾರತ ಸರ್ಕಾರ ತನ್ನ ಕಾರ್ಯಗಳ ಮೂಲಕವೇ ಚೀನಾಕ್ಕೆ ಸವಾಲೊಡ್ಡುತ್ತಿದೆ. ಆಯಕಟ್ಟಿನ ಪ್ರದೇಶಗಳಲ್ಲಿ 66 ಪ್ರಮುಖ ರಸ್ತೆಗಳ ಕೆಲಸ ಕೈಗೆತ್ತಿಕೊಂಡಿದೆ. ಸೈನ್ಯವನ್ನು ಬಲಗೊಳಿಸುತ್ತಿದೆ, ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸುತ್ತಿದೆ, ಅದಕ್ಕಿಂತ ಮುಖ್ಯವಾಗಿ ಸೈನಿಕನ ಬಂದೂಕಿಗೆ ಗುಂಡುಹಾರಿಸುವ ಸ್ವಾತಂತ್ರ್ಯ ಕೊಟ್ಟಿದೆ. ಹಿಂದಿನಂತೆ ದೆಹಲಿಯ ಆದೇಶಕ್ಕಾಗಿ ಕಾಯುವ ಅಗತ್ಯವಿಲ್ಲ. ಸೈನ್ಯ ಸ್ವತಂತ್ರ, ಸ್ವಾವಲಂಬಿಯಾದರೆ ಭಾರತದ ಗೆಲುವಿನ ಹಾದಿ ಇನ್ನಷ್ಟು ಸುಗಮ, ಇದೇ ಇವತ್ತಿನ ಅನಿವಾರ್ಯತೆ. ಇದನ್ನು ಭಾರತ ಸರ್ಕಾರ ಅರ್ಥಮಾಡಿಕೊಂಡಿರುವುದು, ಅಂತಹ ಸರ್ಕಾರ ಇರುವುದು ನಮ್ಮ ಧೈರ್ಯವನ್ನು ಹೆಚ್ಚು ಮಾಡಿದೆ.

    (ಲೇಖಕರು ಉಡುಪಿ-ಚಿಕ್ಕಮಗಳೂರು ಸಂಸದರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts