More

    ಕಲ್ಲಂಗಡಿಗೂ ತಟ್ಟಿದ ಕರೊನಾ ಎಫೆಕ್ಟ್

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಮಹಾಮಾರಿ ಕರೊನಾ ವೈರಸ್ ಭೀತಿ ಇದೀಗ ಕಲ್ಲಂಗಡಿ ಹಾಗೂ ಎಳೆನೀರಿಗೂ ತಟ್ಟಿದೆ. ಮಾರುಕಟ್ಟೆಯಲ್ಲಿ ಸದ್ಯ ಕೆಜಿ ಗಾತ್ರದ ಕಲ್ಲಂಗಡಿ 50 ರಿಂದ 60 ರೂ.ಗೆ ಮಾರಾಟವಾದರೆ, ಒಂದು ಎಳನೀರಿನ ದರ 30 ರೂ. ಗಡಿದಾಟಿದೆ.

    ಬಿಸಿಲು ಹಾಗೂ ಕರೊನಾ ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಜನರು ಕಲ್ಲಂಗಡಿ ಹಣ್ಣು ಹಾಗೂ ಎಳೆನೀರಿನ ಮೊರೆ ಹೋಗುತ್ತಿದ್ದಾರೆ. ಆದರೆ, ಕರೊನಾ ಭೀತಿಯಿಂದ ರಸ್ತೆ ಸಾರಿಗೆ ಸಂಚಾರ, ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಿರುವುದರಿಂದ ಮಾರುಕಟ್ಟೆಗಳಲ್ಲಿ ಹಣ್ಣು ಮತ್ತು ಎಳನೀರು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ. ಬೇಸಿಗೆ ಮುನ್ನ ಒಂದು ಎಳನೀರಿನ ಬೆಲೆ 20 ರಿಂದ 25 ರೂ. ಇತ್ತು. ಆದರೆ, ಇದೀಗ ಕರೊನಾ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಎಳನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಇದರಿಂದ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದರಿಂದ ಮಾರುಕಟ್ಟೆಯಲ್ಲಿ ಎಳನೀರಿನ ಬೆಲೆ ದಿಢೀರ್ ಏರಿಕೆ ಕಂಡಿದೆ.

    ದರ ಇಳಿಕೆ ಸಂಭವ: ಬೆಳಗಾವಿ ಜಿಲ್ಲೆಗೆ ಪ್ರತಿದಿನ ತುಮಕೂರು, ಮೈಸೂರು, ಉತ್ತರ ಕನ್ನಡ, ಮಂಡ್ಯ ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶ, ಕೇರಳದಿಂದ ಸುಮಾರು 4,500 ಟನ್ ಎಳೆನೀರು ಸರಬರಾಜು ಆಗುತ್ತಿದೆ. ರೈತರಿಂದ 10 ರಿಂದ 12 ರೂ.ಗೆ ಒಂದು ಎಳನೀರು ಖರೀದಿಸಲಾಗುತ್ತಿದೆ. ಆದರೆ, ಸಾರಿಗೆ, ಕೂಲಿ ಕಾರ್ಮಿಕರ ವೇತನ ಹಾಗೂ ಮತ್ತಿತರ ಖರ್ಚು-ವೆಚ್ಚಗಳನ್ನೆಲ್ಲ ಕಳೆದು ಮಾರುಕಟ್ಟೆಯಲ್ಲಿ ಒಂದು ಎಳನೀರು ಕನಿಷ್ಠ 25ರಿಂದ 35 ರೂ.ಗೆ ಮಾರಾಟವಾಗುತ್ತಿದೆ. ಆದರೆ, ನಾಲ್ಕೈದು ದಿನಗಳ ಬಳಿಕ ಸಮರ್ಪಕವಾಗಿ ಎಳನೀರು ಪೂರೈಕೆಯಾದರೆ ಮಾರುಕಟ್ಟೆಯಲ್ಲಿ ದರ ಇಳಿಯುವ ಸಂಭವವಿದೆ.

    ಕಲ್ಲಂಗಡಿಯೂ ತುಟ್ಟಿ: ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಧಾರವಾಡ ಸೇರಿ ವಿವಿಧ ಜಿಲ್ಲೆಗಳ ರೈತರು ಮಾರ್ಚ್ ಆರಂಭದಲ್ಲಿ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬಿತ್ತನೆ ಮಾಡಿದ್ದಾರೆ. ಸಾವಿರಾರು ಟನ್ ಕಲ್ಲಂಗಡಿ ಒಮ್ಮೆಲೇ ಕಟಾವಿಗೆ ಬಂದಿದೆ. ಆದರೆ, ಮಹಾಮಾರಿ ಕರೊನಾ ವೈರಸ್‌ನಿಂದ ಮಾರುಕಟ್ಟೆಗೆ ಸರಕು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಅಲ್ಲದೆ ಕೆಲ ದಿನಗಳಿಂದ ಸಾರಿಗೆ ಸಂಪರ್ಕ ಸಂಪೂರ್ಣ ಬಂದ್ ಮಾಡಿದ್ದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬರುತ್ತಿಲ್ಲ. ಹಾಗಾಗಿ ಕೇವಲ ಆವಕದಲ್ಲಿರುವ ಹಣ್ಣುಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

    ಹೊಲದಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ: ಕರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸಾರಿಗೆ ವಾಹನಗಳು ಹಾಗೂ ಮಾರುಕಟ್ಟೆಗಳನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ಸಾವಿರಾರು ಟನ್ ಕಲ್ಲಂಗಡಿ ಹಣ್ಣು ಕಟಾವು ಮಾಡದೆ ಹೊಲದಲ್ಲೇ ಕೊಳೆಯುತ್ತಿದೆ. ಅಳಿದುಳಿದ ಕಲ್ಲಂಗಡಿ ಹಣ್ಣುಗಳನ್ನು ವಾರದ ಒಳಗೆ ಕಟಾವು ಮಾಡದಿದ್ದರೆ ರೈತನಿಗೆ ನಷ್ಟವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರಕು ಸಾಗಣೆ, ಮಾರುಕಟ್ಟೆ ಹಾಗೂ ವ್ಯಾಪಾರ-ವಹಿವಾಟುಗಳನ್ನು ಬಂದ್ ಮಾಡಿದ್ದರಿಂದ ಸಮಸ್ಯೆ ಉಂಟಾಗಿದೆ. ರೈತರು ಹಾಗೂ ವ್ಯಾಪಾರಿಗಳು ಸಹಕರಿಸಬೇಕು.
    | ಡಾ.ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

    ಕಳೆದ ನಾಲ್ಕೈದು ದಿನಗಳಿಂದ ಸರಕು ಸಾಗಣೆ ಮತ್ತು ಮಾರುಕಟ್ಟೆ ಬಂದ್ ಮಾಡಿದ್ದರಿಂದ ಕಲ್ಲಂಗಡಿ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಬೇಸಿಗೆಯಲ್ಲಿ ಪ್ರತಿ ವರ್ಷ ವ್ಯಾಪಾರಿಗಳು ತೋಟಕ್ಕೇ ಬಂದು ಖರೀದಿಸುತ್ತಿದ್ದರು. ಆದರೆ, ಈ ಬಾರಿ ಕರೊನಾ ವೈರಸ್‌ನಿಂದ ವ್ಯಾಪಾರಿಗಳು ಹೊಲಗಳತ್ತ ಸುಳಿಯುತ್ತಿಲ್ಲ.
    | ಮಹಾಂತೇಶ ಪಾಟೀಲ ಕಲ್ಲಂಗಡಿ ಬೆಳೆಗಾರ, ಮೂಡಲಗಿ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts