More

    10ರಿಂದ ಭದ್ರಾ ನಾಲೆಗೆ ನೀರು: ಆಫ್ ಆ್ಯಂಡ್ ಆನ್ ವ್ಯವಸ್ಥೆ

    ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯದಿರುವಂತೆ ರೈತರಲ್ಲಿ ಮನವಿ ಮಾಡಲು ಶನಿವಾರ ಏರ್ಪಡಿಸಿದ್ದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ತೋಟಗಾರಿಕೆ ಬೆಳೆಗಳಿಗೆ ಎಡದಂಡೆ ನಾಲೆಯಲ್ಲಿ ಜ.10ರಿಂದ ಹಾಗೂ ಬಲದಂಡೆ ನಾಲೆಯಲ್ಲಿ ಜ.20ರಿಂದ ಆಫ್ ಆ್ಯಂಡ್ ಆನ್ ವ್ಯವಸ್ಥೆಯಲ್ಲಿ ನೀರು ಹರಿಸಲು ನಿರ್ಧರಿಸಲಾಗಿದೆ.

    ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಎಡದಂಡೆ ನಾಲೆಗೆ ಜ.10ರಿಂದ 16 ದಿನ ನೀರು ಹರಿಸಲಾಗುವುದು. ನಂತರ 15 ದಿನ ನೀರು ಸ್ಥಗಿತಗೊಳಿಸಿ ಮತ್ತೆ 17 ದಿನ ನೀರು ಬಿಡಲಾಗುವುದು. ಬಳಿಕ 15 ದಿನ ನೀರು ಸ್ಥಗಿತಗೊಳಿಸಿ ನಂತರದ 18 ದಿನ ನೀರು ಬಿಡಲಾಗುತ್ತದೆ. ಇದಾದ ಬಳಿಕ ಮತ್ತೆ 15 ದಿನ ನೀರು ನಿಲ್ಲಿಸಿ ಬಳಿಕ 20 ದಿನ ನೀರು ಹರಿಸಲಾಗುವುದು ಎಂದು ತಿಳಿಸಿದರು.
    ಬಲದಂಡೆ ನಾಲೆಗೆ ಜ.20ರಿಂದ 12 ದಿನ ನೀರು ಹರಿಸಲಾಗುತ್ತಿದ್ದು ಬಳಿಕ 20 ದಿನ ಸ್ಥಗಿತಗೊಳಿಸಲಾಗುವುದು. ನಂತರ 12 ದಿನ ನೀರು ಬಿಟ್ಟು 20 ದಿನ ನಿಲ್ಲಿಸಲಾಗುವುದು. ಆಮೇಲೆ 14 ದಿನ ನೀರು ಹರಿಯಲಿದ್ದು, 20 ದಿನ ಬಂದ್ ಆಗಲಿದೆ. ನಂತರ ಪುನಃ 15 ದಿನ ನೀರು ಹರಿಸಲಾಗುತ್ತದೆ ಎಂದು ಹೇಳಿದರು.
    ಜಲಾಶಯದ ಈಗಿನ ನೀರಿನ ಸಂಗ್ರಹದಂತೆ ನೀರಾವರಿ ಬಳಕೆಗೆ 12.50 ಟಿಎಂಸಿ ನೀರು ಸಿಗಲಿದೆ. ಬಲದಂಡೆ ನಾಲೆಗೆ 2,650 ಕ್ಯೂಸೆಕ್, ಎಡದಂಡೆ ನಾಲೆಗೆ 380 ಕ್ಯೂಸೆಕ್, ಗೊಂದಿ ಮತ್ತಿತರ ನಾಲೆಗಳಿಗೆ ಪ್ರತಿ ದಿನ 0.27 ಟಿಎಂಸಿ ನೀರು ಹರಿಸಿದರೆ 47 ದಿನ ನೀರಿನ ನಿರ್ವಹಣೆ ಮಾಡಬಹುದಾಗಿದೆ ಎಂದರು.
    ಮಾರ್ಚ್ ಬಳಿಕ ಬೇಸಿಗೆ ಹೆಚ್ಚಲಿದ್ದು, ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು. ತೋಟಗಾರಿಕೆ ಬೆಳೆ ಉಳಿಸಿಕೊಳ್ಳುವುದೂ ಕಷ್ಟವಾಗಬಹುದು. ಹೀಗಾಗಿ ರೈತರು ಭತ್ತ ಬೆಳೆಯದಿರುವುದೇ ಉತ್ತಮ ಎಂದು ಅಭಿಪ್ರಾಯಪಟ್ಟರು.
    ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಲತಾ ಮಲ್ಲಿಕಾರ್ಜುನ್, ಬಿ.ಕೆ.ಸಂಗಮೇಶ್ವರ್, ಡಿ.ಜಿ. ಶಾಂತನಗೌಡ, ಬಸವರಾಜು ಶಿವಗಂಗಾ, ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ರೈತ ಮುಖಂಡ ಕೆ.ಟಿ.ಗಂಗಾಧರ್, ಶಿವಮೊಗ್ಗ ಡಿಸಿ ಡಾ. ಆರ್.ಸೆಲ್ವಮಣಿ, ದಾವಣಗೆರೆ ಡಿಸಿ ವೆಂಕಟೇಶ್, ಭದ್ರಾ ಕಾಡಾ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಆಡಳಿತಾಧಿಕಾರಿ ಮುರಳೀಧರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts