More

    20 ಕಡೆ ಜಲಸಂಗ್ರಹಾಗಾರ ಸ್ಥಾವರ

    ಹರೀಶ್ ಮೋಟುಕಾನ, ಮಂಗಳೂರು
    ನಗರ ನಿವಾಸಿಗಳಿಗೆ ಸುಧಾರಿತ ತಂತ್ರಜ್ಞಾನ ಆಧರಿತ ಕುಡಿಯುವ ನೀರು ಪೂರೈಕೆ ಸಲುವಾಗಿ 792 ಕೋಟಿ ರೂ.ವೆಚ್ಚದಲ್ಲಿ ‘ಜಲಸಿರಿ’ ಯೋಜನೆ ಅನುಷ್ಠಾನವಾಗುತ್ತಿದೆ. ಎಡಿಬಿ ನೆರವಿನ ಈ ಯೋಜನೆಯಲ್ಲಿ ನಗರದ 20 ಕಡೆ ಬೃಹತ್ ಜಲ ಸಂಗ್ರಹಾಗಾರ ಸ್ಥಾವರ ನಿರ್ಮಾಣವಾಗಲಿದೆ.

    ಪಾಲಿಕೆ ವ್ಯಾಪ್ತಿಯ ಲೇಡಿಹಿಲ್ ಸಮೀಪದ ಆಫೀಸರ್ಸ್‌ ಕ್ಲಬ್ ಬಳಿ ಹಾಗೂ ಬಾಳದಲ್ಲಿ ತಲಾ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ನೆಲ ಹಂತದ ಜಲಸಂಗ್ರಹ ಸ್ಥಾವರಗಳು ನಿರ್ಮಾಣವಾಗಲಿದೆ. ಲೇಡಿಹಿಲ್ ಬಳಿ ಜಲಸಂಗ್ರಹ ಸ್ಥಾವರಕ್ಕೆ 35 ಸೆಂಟ್ಸ್ ಜಾಗ ಗುರುತಿಸಲಾಗಿದೆ. ಈ ಜಲಸ್ಥಾವರದಿಂದ ಚಿಲಿಂಬಿ ಹಾಗೂ ಅಶೋಕನಗರ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಬಾಳದಲ್ಲಿ ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿಯ 75 ಸೆಂಟ್ಸ್ ಪ್ರದೇಶದಲ್ಲಿ ಸಂಗ್ರಹ ಸ್ಥಾವರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನಗರದಲ್ಲಿ ನೀರು ಸರಬರಾಜು ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ 8 ಇಂಟರ್ ಮೀಡಿಯೆಟ್ ಪಂಪ್‌ಹೌಸ್ ನಿರ್ಮಾಣಗೊಳ್ಳಲಿದೆ.

    ಎಲ್ಲೆಲ್ಲಿ 20 ಟ್ಯಾಂಕ್‌ಗಳ ನಿರ್ಮಾಣ?: ನಂದಿಗುಡ್ಡ ಮೈದಾನದ ಬಳಿ, ಉದಯನಗರ, ಕೊಡಿಪಾಡಿ, ನೆಹರು ಮೈದಾನ, ತಿರುವೈಲುವಿನ ಅಮೃತ ನಗರ, ಶಕ್ತಿನಗರ(ಹಾಲಿ ಇರುವ ಜಿಎಲ್‌ಎಸ್‌ಆರ್ ಹತ್ತಿರ), ಮೇರಿಹಿಲ್(ಹಾಲಿ ಇರುವ ಜಿಎಲ್‌ಎಸ್‌ಆರ್), ಕೃಷ್ಣಾಪುರ(ಸರ್ಕಾರಿ ಶಾಲೆ ಬಳಿ), ಮೋರ್ಗನ್ಸ್‌ಗೇಟ್(ಮಂಗಳೂರು ಕ್ಲಬ್ ಹತ್ತಿರ), ಪಣಂಬೂರಿನ ಮೀನಕಳಿಯ, ಕಂಕನಾಡಿ ವೆಲೆನ್ಸಿಯದ ಸಿಮೆಟ್ರಿ, ಕುಂಜತ್ತಬೈಲ್, ಪಚ್ಚನಾಡಿಯ ಸಂತೋಷ್‌ನಗರ, ಎನ್‌ಐಟಿಕೆ ಬಳಿ(ಹಾಲಿ ಇರುವ ಟ್ಯಾಂಕ್ ಬಳಿ), ಲೋಹಿತ್‌ನಗರದ ನೆಕ್ಕಿಲಗುಡ್ಡ, ಜಯನಗರದ ಹೋಲಿಹಿಲ್, ಬಜಾಲ್‌ನ ಜೆ.ಎಂ.ರೋಡ್ ಬಳಿ, ಕುಳಾಯಿಯ ಕಾನಾ, ಕಾವೂರಿನ ಎಂ.ವಿ.ಶೆಟ್ಟಿ ಕಾಲೇಜು ಹಾಗೂ ಕೋಡಿಕಲ್‌ನಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗಲಿದೆ.

    ತುಂಬೆಯಲ್ಲಿ ಎರಡು ಸ್ಥಾವರ: ತುಂಬೆ ವೆಂಟೆಡ್ ಡ್ಯಾಂ ಸಮೀಪ ರಾಮಲ್‌ಕಟ್ಟೆಯಲ್ಲಿ ಹೊಸದಾಗಿ 20 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಸ್ಥಾವರ ಹಾಗೂ ಶುದ್ಧೀಕರಣ ಪ್ರಕ್ರಿಯೆ ಸಂದರ್ಭ ಹೊರಬಿಡುವ ನೀರು ಮರುಬಳಕೆ ಘಟಕ(ಬ್ಯಾಕ್‌ವಾಶ್ ಟ್ರೀಟ್‌ಮೆಂಟ್ ಪ್ಲಾಂಟ್) ನಿರ್ಮಾಣವಾಗಲಿದೆ. ಪ್ರಸ್ತುತ ರಾಮಲ್‌ಕಟ್ಟೆಯಲ್ಲಿ 1971ರಲ್ಲಿ ನಿರ್ಮಾಣಗೊಂಡಿರುವ 80ಎಂಎಲ್‌ಡಿ, ಬಳಿಕ ಎಡಿಬಿ 1ರಲ್ಲಿ ನಿರ್ಮಾಣವಾದ 80 ಎಂಎಲ್‌ಡಿ ಸೇರಿ ಒಟ್ಟು ಎರಡು ನೀರು ಶುದ್ಧೀಕರಣ ಸ್ಥಾವರಗಳಿವೆ.

    ನೀರು ಸೋರಿಕೆ ತಡೆಗೆ ಬಲ್ಕ್ ಫ್ಲೋ ಮೀಟರ್: ಪ್ರಸ್ತುತ ತುಂಬೆ ಡ್ಯಾಂನಿಂದ ಓವರ್‌ಹೆಡ್ ಟ್ಯಾಂಕ್‌ವರೆಗೆ ನೀರು ಸರಬರಾಜು ಸಂದರ್ಭ ಸಾಕಷ್ಟು ಪ್ರಮಾಣದಲ್ಲಿ ನೀರು ಸೋರಿಕೆ ಆಗುತ್ತಿದೆ. ಇದನ್ನು ತಡೆಗಟ್ಟಲು ಪಾಲಿಕೆ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ತುಂಬೆ ಜಾಕ್‌ವೆಲ್‌ನಿಂದ ಓವರ್‌ಹೆಡ್‌ವರೆಗೆ ನೀರು ಸರಬರಾಜು ಮಾರ್ಗ ಮಧ್ಯೆ 181 ಸಗಟು ನೀರು ಹರಿಯುವಿಕೆ ಮೀಟರ್(ಬಲ್ಕ್ ಫ್ಲೋ ಮೀಟರ್) ಅಳವಡಿಸಲು ಉದ್ದೇಶಿಸಲಾಗಿದೆ. ನೀರು ಸೋರಿಕೆ ಎಲ್ಲಿ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ತುಂಬೆಯಿಂದ ಪಂಪ್ ಮಾಡಿದ ಪ್ರಮಾಣದಲ್ಲಿಯೇ ನೀರು ಟ್ಯಾಂಕ್‌ವರೆಗೂ ಬರುತ್ತಿದೆಯೇ ಎಂಬುದನ್ನು ಇಲೆಕ್ಟ್ರಾನಿಕ್ ಡಿವೈಸ್ ಮೂಲಕ ಪರಿಶೀಲಿಸಲಾಗುತ್ತದೆ. ನಗರದಲ್ಲಿ ಒಟ್ಟು 96,300 ನೀರಿನ ಸಂಪರ್ಕಗಳನ್ನು ಗುರುತಿಸಲಾಗಿದ್ದು, ಮನೆಗಳಿಗೆ ನೀರು ವಿತರಣಾ ಜಾಲದ ಉನ್ನತೀಕರಣದ ಉದ್ದೇಶವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಂಗಳೂರಿನಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ‘ಜಲಸಿರಿ’ ಯೋಜನೆಯ ಕಾಮಗಾರಿ ಆರಂಭವಾಗಿದೆ. ನಗರದ 20 ಕಡೆಗಳಲ್ಲಿ ಬೃಹತ್ ಜಲಸಂಗ್ರಹಾಗಾರ ಸ್ಥಾವರ ನಿರ್ಮಾಣವಾಗಲಿದೆ. ಹಳೇ ಹಾಗೂ ಸೋರಿಕೆಯಾಗುವ ನೀರು ವಿತರಣಾ ಜಾಲವನ್ನು ಹೊಸ ಸಂಪರ್ಕಕ್ಕೆ ಬದಲಾಯಿಸಲಾಗುವುದು.
    ಅಕ್ಷಿ ಶ್ರೀಧರ್ ಆಯುಕ್ತರು, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts