More

    ಪಜಿರಡ್ಕ ಅಣೆಕಟ್ಟಿನಲ್ಲಿ ನೀರು ಸಂಗ್ರಹ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 4.5 ಕೋಟಿ ರೂ. ಅನುದಾನದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಪ್ರಾಯೋಗಿಕವಾಗಿ ನೀರು ಸಂಗ್ರಹಿಸಲಾಗಿದೆ.

    ಪಜಿರಡ್ಕ ಎಂಬಲ್ಲಿ ಮೃತ್ಯುಂಜಯ- ನೇತ್ರಾವತಿ ನದಿಗಳು ಸಂಗಮಗೊಂಡು ಇಲ್ಲಿಂದ ನೇತ್ರಾವತಿ ನದಿ ಮುಂದುವರಿಯುತ್ತದೆ. ಸಂಗಮ ಸ್ಥಳದಿಂದ 100 ಮೀಟರ್ ಕೆಳಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದೆ. ಇದರ ಸಮೀಪವೇ ಸೇತುವೆ ನಿರ್ಮಾಣಗೊಂಡಿರುವುದರಿಂದ ನದಿಯ ಇನ್ನೊಂದು ಬದಿಯಲ್ಲಿರುವ ಇದೇ ಗ್ರಾಮದ ಆನಂಗಳ್ಳಿ, ಪರಾರಿ, ಸಿದ್ದಬೈಲು, ಕರಿಯನೆಲ ಸಹಿತ ಉಜಿರೆ, ಧರ್ಮಸ್ಥಳಕ್ಕೆ ಸಂಪರ್ಕ ಹತ್ತಿರವಾಗಲಿದೆ.

    ಪ್ರಸ್ತುತ ಗ್ರಾಮದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಮಳೆಗಾಲದಲ್ಲಿ ಬರಬೇಕಾದರೆ 12 ಕಿಮೀ ದೂರ ಕ್ರಮಿಸಬೇಕು. ಈ ಸೇತುವೆ ನಿರ್ಮಾಣವಾಗಿರುವುದರಿಂದ ಒಂದು ಕಿ.ಮೀ. ಕ್ರಮಿಸಿದರೆ ಸಾಕು.

    ಕಿಂಡಿ ಅಣೆಕಟ್ಟು ನಿರ್ಮಾಣವಾದ ಕಾರಣ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಯ ನೀರು ಸಂಗ್ರಹಕ್ಕೆ ಸಹಕಾರವಾಗಲಿದೆ. ಇದು ಕುಡೆಂಚಿ, ಆನಂಗಳ್ಳಿ ಕಡಂಬಳ್ಳಿ, ಮೂಲಾರು ಭಾಗದ ಸಾವಿರಾರು ಎಕರೆ ಕೃಷಿಭೂಮಿಗೆ ಉಪಯೋಗವಾಗುವುದು. ಈ ಪ್ರದೇಶಗಳ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ.

    ದೇವರ ಮೀನುಗಳಿಗೆ ಆಧಾರ: ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುವ ಪ್ರದೇಶದ ಸಮೀಪ ಸಂಗಮ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನವಿದ್ದು, ಇಲ್ಲಿನ ನದಿಯಲ್ಲಿ ದೇವರ ಮೀನುಗಳಿವೆ. ಕಿಂಡಿ ಅಣೆಕಟ್ಟಲ್ಲಿ ಸಂಗ್ರಹಗೊಳ್ಳುವ ನೀರು ಈ ಮೀನುಗಳಿಗೆ ಬೇಸಿಗೆಯಲ್ಲಿ ಆಧಾರವಾಗಲಿದೆ.

    ಯೋಜನೆಯ ವಿವರ: 4.5 ಕೋಟಿ ರೂ. ವೆಚ್ಚದಲ್ಲಿ 76.3ಮೀ. ಉದ್ದದ ಸೇತುವೆ ಹಾಗೂ ಅಣೆಕಟ್ಟು, 2.5 ಮೀ.ಎತ್ತರ ನೀರು ಸಂಗ್ರಹಣಾ ಸಾಮರ್ಥ್ಯದೊಂದಿಗೆ ಸುಮಾರು 30 ಕಿಂಡಿಗಳ ಅಣೆಕಟ್ಟು ನಿರ್ಮಾಣಗೊಂಡಿದೆ. 8 ಪಿಲ್ಲರ್‌ಗಳುಳ್ಳ 5ಮೀಟರ್ ಎತ್ತರದ 2.5 ಅಗಲದ ಸಂಪರ್ಕ ಸೇತುವೆ ಕಿಂಡಿ ಅಣೆಕಟ್ಟಿನ ಸಮೀಪ ರಚನೆಯಾಗಿದೆ. ಸೇತುವೆಗೆ ಸಂಪರ್ಕ ಕಲ್ಪಿಸುವ ಸುಮಾರು ಒಂದು ಕಿ.ಮೀ. ದೂರದ ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಗ್ರಾಮದ ಇನ್ನೊಂದು ಭಾಗಕ್ಕೆ ಹೋಗಲು ಅನುಕೂಲವಾಗಿದೆ.

    ಪಜಿರಡ್ಕದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಲ್ಲಿ ಪ್ರಾಯೋಗಿಕವಾಗಿ ನೀರು ಸಂಗ್ರಹಿಸಲಾಗಿದೆ. ಇದರ ಲೋಕಾರ್ಪಣೆ ಕುರಿತು ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಿ ದಿನಾಂಕ ನಿಗದಿಪಡಿಸಲಾಗುವುದು. ತಾಲೂಕಿನಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಿಂಡಿ ಅಣೆಕಟ್ಟುಗಳ ಕಾಮಗಾರಿ ಭರದಿಂದ ಸಾಗುತ್ತಿದೆ.
    – ರಾಕೇಶ್, ಇಂಜಿನಿಯರ್, ಸಣ್ಣ ನಿರಾವರಿ ಇಲಾಖೆ, ಬೆಳ್ತಂಗಡಿ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts