More

    20 ಸಾವಿರ ಹೆಕ್ಟೇರ್ ಭತ್ತಕ್ಕೆ ನೀರಿನ ಸಂಕಷ್ಟ – ಏ.10 ರವರೆಗೆ ನಾಲೆಗೆ ನೀರು ಹರಿಸದಿದ್ದರೆ ಹಾನಿ ಸಾಧ್ಯತೆ

    ಅಶೋಕ ಬೆನ್ನೂರು ಸಿಂಧನೂರು
    ತಾಲೂಕಿನಲ್ಲಿ ನಾಟಿ ಮಾಡಲಾಗಿರುವ ಭತ್ತದ ಬೆಳೆಗೆ ಏ.10 ವರೆಗೆ ನೀರು ಹರಿಸಿದರೆ ರೈತರು ಸಂಕಷ್ಟದಿಂದ ಪಾರಾಗಬಹುದಾಗಿದೆ. ಇಲ್ಲದಿದ್ದರೆ ಅಂದಾಜು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ. ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಈ ಪೈಕಿ 40 ಸಾವಿರ ಹೆಕ್ಟೇರ್ ತುಂಗಭದ್ರಾ ಎಡದಂಡೆ ಮುಖ್ಯನಾಲೆ ಕೆಳ ಭಾಗದಲ್ಲಿರುವುದರಿಂದ ನೀರು ಸರಾಗವಾಗಿ ಹರಿಯುತ್ತದೆ. ಅವಧಿಗೆ ಮೊದಲೇ ಭತ್ತ ನಾಟಿ ಮಾಡಿರುವುದರಿಂದ ಏಪ್ರಿಲ್ ಮೊದಲ ವಾರದಲ್ಲಿ ಕಟಾವು ಮಾಡಲಾಗುತ್ತದೆ. ಇದರಿಂದಾಗಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಾಧಿಸುವುದಿಲ್ಲ.

    ಆದರೆ, 15 ದಿನ ತಡವಾಗಿ ಭತ್ತ ನಾಟಿ ಮಾಡಿರುವ 32, 36 ಮತ್ತು 54ನೇ ಉಪಕಾಲುವೆ ಕೆಳ ಭಾಗದಲ್ಲಿ ಭತ್ತ ಇನ್ನೂ ಕಾಳು ಕಟ್ಟುವ ಹಂತದಲ್ಲಿದ್ದು, ಏ.10 ರವರೆಗೆ ಬೆಳೆಗೆ ನೀರು ಹರಿಸಬೇಕಾಗಿದೆ. ನೀರಾವರಿ ಸಲಹಾ ಸಮಿತಿ ಎಡದಂಡೆ ನಾಲೆಗೆ ಮಾ.31 ರವರೆಗೆ 3500 ಕ್ಯೂಸೆಕ್ ನೀರು ಹರಿಸಲು ತೀರ್ಮಾನಿಸಿದೆ. ಇದರಿಂದಾಗಿ ಮುಂದಿನ 10 ರಿಂದ 15 ದಿನ ಭತ್ತದ ಬೆಳೆಗೆ ನೀರಿನ ಕೊರತೆ ಎದುರಾಗಲಿದೆ. ಈಗ ಜಲಾಶಯದಲ್ಲಿ ನೀರಿನ ಸಂಗ್ರಹ ಕೂಡ ಗಣನೀಯವಾಗಿ ಕುಸಿದಿದೆ. ಈಗಿರುವ ನೀರಿನ ಲಭ್ಯತೆ ಆಧಾರದಲ್ಲಿ ಮಾ.31 ವರೆಗೆ ನೀರು ಹರಿಸುವುದೇ ಕಷ್ಟ ಸಾಧ್ಯವಾಗಿದೆ.

    ಭದ್ರಾ ಜಲಾಶಯದತ್ತ ನೋಟ

    ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಭತ್ತದ ಬೆಳೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸುವುದು ಕಷ್ಟವಾಗುವ ಬಗ್ಗೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಈ ಭಾಗದ ಶಾಸಕರು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ 3 ಟಿಎಂಸಿ ನೀರನ್ನು ಹರಿಸುವ ಭರವಸೆ ನೀಡಿರುವುದು ಬೆಳೆ ರಕ್ಷಣೆಯ ಆಶಾಭಾವನೆ ಮೂಡಿಸಿದೆ. ಮಾ.31 ರವರೆಗೆ ನೀರು ಹರಿಸಿದ ನಂತರವೇ ಮುಂದಿನ ದಿನಗಳಲ್ಲಿ ನೀರು ಹರಿಸುವ ನಿರ್ಧಾರ ಹೊರ ಬೀಳಲಿದೆ. ಅಲ್ಲಿವರೆಗೆ ನಾಲೆ ಕೆಳ ಭಾಗದ ರೈತರು ಬೆಳೆ ರಕ್ಷಣೆಗೆ ಹರ ಸಾಹಸ ಪಡುವುದು ತಪ್ಪುವುದಿಲ್ಲ. ನಾಲೆ ಮೇಲ್ಭಾಗದಲ್ಲಿ ಭತ್ತ ಕಟಾವು ಹಂತಕ್ಕೆ ಬಂದಿದ್ದು, ಅಲ್ಲಿನ ಉಪಕಾಲುವೆಗಳ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ನೀರು ಕಡಿತಗೊಳಿಸಿ, ಕೆಳಭಾಗಕ್ಕೆ ಹರಿಸುವಂತೆ ನೀರಾವರಿ ಇಲಾಖೆ ನೋಡಿಕೊಳ್ಳಬೇಕಿದೆ. ಈ ಪ್ರಯತ್ನ ಮೊದಲಿನಿಂದಲೂ ನಡೆದಿಲ್ಲ. ಇದರಿಂದ ನೀರು ಹಳ್ಳ, ನಾಲಾಗಳಿಗೆ ಹರಿದು ಪೋಲಾಗುತ್ತಿದೆ.

    ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಇಳಿಮುಖವಾಗಿದ್ದು, ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಮಾ.31 ವರೆಗೆ ನಾಲೆಗೆ 3500 ಕ್ಯೂಸೆಕ್ ನೀರು ಹರಿಯಲಿದೆ. ಏ.10 ರವರೆಗೆ ನೀರು ಹರಿಸುವ ಬಗ್ಗೆ ಚಿಂತನೆ ನಡೆದಿದೆ. ಭದ್ರಾ ಜಲಾಶಯದಿಂದ 3 ಟಿಎಂಸಿ ನೀರು ಹರಿಸುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಲಾಗಿದ್ದು, ಸೂಕ್ತ ಸ್ಪಂದನೆ ವ್ಯಕ್ತವಾಗಿದೆ.

    ವೆಂಕಟರಾವ ನಾಡಗೌಡ, ಶಾಸಕ, ಸಿಂಧನೂರು

    ತುಂಗಭದ್ರಾ ಎಡದಂಡೆ ನಾಲೆಗೆ ಏ.10 ರಿಂದ 20 ವರೆಗೆ ನೀರು ಹರಿಸಿದರೆ ಮಾತ್ರ ಟೇಲೆಂಡ್ ಭಾಗದಲ್ಲಿ ಭತ್ತದ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯ. ನಾಲೆಯ ಮೇಲ್ಭಾಗದಲ್ಲಿ ಯಥೇಚ್ಛ ನೀರು ಬಳಕೆಯಾಗುತ್ತಿರುವುದರಿಂದ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿದು ಬರುತ್ತಿಲ್ಲ. ಭತ್ತ ಕಾಳುಕಟ್ಟುವ ಹಂತದಲ್ಲಿದ್ದು ನೀರಿನ ಅವಶ್ಯ ಇದೆ. ಸರ್ಕಾರ ನೆರವಿಗೆ ಬರಬೇಕು.
    ಬಸನಗೌಡ ಮಾ.ಪಾ. ರೈತ, ರೌಡಕುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts