More

    ಗದಗ ಜಿಲ್ಲೆಯ 76 ಹಳ್ಳಿಗಳಲ್ಲಿ ಜಲಕ್ಷಾಮ

    ಶಿವಾನಂದ ಹಿರೇಮಠ ಗದಗ
    ಜಿಲ್ಲೆಯ 76 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ. ಗ್ರಾಮಿಣ ಕುಡಿಯುವ ನೀರು ವಿಭಾಗದಿಂದ ಜಾರಿಯಾದ ಯೋಜನೆಗಳು ತಲುಪದ, ಕಾಲುವೆ ಮತ್ತು ನೀರಿನ ಮೂಲಗಳಿಂದ ದೂರ ಇರುವ ಹಾಗೂ ಕೊಳವೆಬಾವಿ ಸಂಪೂರ್ಣ ಬತ್ತಿದ 76 ಹಳ್ಳಿಗಳಲ್ಲಿ ಜಲಕ್ಷಾಮ ಸಾಧ್ಯತೆ ದಟ್ಟವಾಗಿದೆ.
    ತುಂಗಭದ್ರಾ ಮತ್ತು ಮಲಪ್ರಭಾ ನದಿ ಮೂಲಗಳಿಂದ ಜಿಲ್ಲೆಯ ಗ್ರಾಮೀಣ ಭಾಗದ 342 ಹಳ್ಳಿಗಳಿಗೆ ನೀರು ಪೂರೈಸುವ ಜವಾಬ್ದಾರಿಯನ್ನು ತಹಲ್ ಮತ್ತು ಎಲ್​ಆಂಡ್​ಟಿ ಕಂಪನಿಗಳು ವಹಿಸಿಕೊಂಡಿವೆ. ರೋಣ ಮತ್ತು ನರಗುಂದ ಭಾಗದ ಹಳ್ಳಿಗಳಿಗೆ ತಹಲ್ ಖಾಸಗಿ ಕಂಪನಿ ನೀರು ಪೂರೈಕೆ ಮತ್ತು ಪೈಪ್​ಲೈನ್ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿದೆ. ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಭಾಗದ ಹಳ್ಳಿಗಳಿಗೆ ಎಲ್​ಆಂಡ್​ಟಿ ಕಂಪನಿ ನೀರು ಪೂರೈಕೆ ಜವಾಬ್ದಾರಿ ವಹಿಸಿಕೊಂಡಿದೆ.
    ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೈಮೀರುವ ಮೊದಲೇ ಸಭೆ ನಡೆಸಿರುವ ಜಿಲ್ಲಾಧಿಕಾರಿ ವೈಶಾಲಿ ಅವರು, ಆಯಾ ತಾಲೂಕು ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಗ್ರಾಮಿಣ ಕುಡಿಯುವ ನೀರು ಪೂರೈಕೆ ಪ್ರಕ್ರಿಯೆ ಮೇಲೆ ನಿಗಾ ಇಡಲು ಆದೇಶಿಸಿದ್ದಾರೆ.
    ಟೆಂಡರ್ ಪ್ರಕ್ರಿಯೆ: ಕುಡಿಯುವ ನೀರು ಸಮಸ್ಯೆ ಇರುವ ಹಳ್ಳಿಗಳಿಗೆ ಶುದ್ಧ ನೀರು ಪೂರೈಸಲು ಗ್ರಾಮೀಣ ಕುಡಿಯುವ ನೀರು ವಿಭಾಗವು ಟ್ಯಾಂಕರ್ ಮಾಲೀಕರಿಂದ ಟೆಂಡರ್ ಆಹ್ವಾನಿಸಿದೆ. 76 ಹಳ್ಳಿಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಪ್ರತಿ ವ್ಯಕ್ತಿಗೆ ತಲಾ 10 ಲೀಟರ್ ಪ್ರತಿನಿತ್ಯ ಪೂರೈಸುವಂತೆ ಟೆಂಡರ್ ಪ್ರಕ್ರಿಯೆಗೆ ಅನುಮತಿ ನೀಡಲಾಗಿದೆ. ಶಿರಹಟ್ಟಿ ಹೊರತುಪಡಿಸಿ ಇನ್ನುಳಿದ ತಾಲೂಕುಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ.

    ಯೋಜನೆ 1
    ಯೋಜನೆ 1ರಲ್ಲಿ ರೋಣ ಮತ್ತು ನರಗುಂದ ತಾಲೂಕಿನ 123 ಹಳ್ಳಿ, 129 ಜನವಸತಿ ಪ್ರದೇಶಗಳು ಒಳಗೊಳ್ಳುತ್ತವೆ. ಈ ಭಾಗದ ಹಳ್ಳಿಗಳಿಗೆ ಸವದತ್ತಿಯ ರೇಣುಕಾ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ನಿತ್ಯ 26 ಮಿಲಿಯನ್ ಲೀಟರ್(ಎಂಎಲ್​ಡಿ) ನೀರು ಅಗತ್ಯವಿದ್ದು, 20 ಎಂಎಲ್​ಡಿ ನೀರು ಪೂರೈಕೆ ಆಗುತ್ತಿದೆ. ನರಗುಂದ ತಾಲೂಕಿನಲ್ಲಿ 18 ಹಾಗೂ ರೋಣ ತಾಲೂಕಿನಲ್ಲಿ 21 ಜನವಸತಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಕಾಲುವೆ ಮೂಲಕ ನೀರು ಸರಬರಾಜು ಮತ್ತು ನಿರ್ವಹಣೆಯನ್ನು ತಹಲ್ ಕಂಪನಿ ವಹಿಸಿಕೊಂಡಿದೆ. ಈಗಾಗಲೇ ರೇಣುಕಾ ಜಲಾಶಯದಿಂದ ನಿತ್ಯ 1800 ಕ್ಯುಸೆಕ್ ನೀರು ಬಿಡುಗಡೆ ಆಗುತ್ತಿದ್ದು, ರೋಣ ಭಾಗದ ಹಳ್ಳಿಗಳಲ್ಲಿನ ಕೆರೆಗಳನ್ನು ತುಂಬಿಸಲಾಗಿದೆ. ನರಗುಂದ ಭಾಗದ ಹಳ್ಳಿಗಳಿಗೆ ಇನ್ನೂ ನೀರು ಪೂರೈಸಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ. ಎರಡೂ ತಾಲೂಕಿನ ಒಟ್ಟು ಜನಸಂಖ್ಯೆ 2.82 ಲಕ್ಷ.

    ಯೋಜನೆ 2
    ಈ ಯೋಜನೆಯಲ್ಲಿ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ 194 ಹಳ್ಳಿ, 213 ಜನವಸತಿ ಪ್ರದೇಶಗಳು ಒಳ್ಳಗೊಳ್ಳುತ್ತವೆ. ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಬ್ಯಾರೇಜ್ ಮೂಲಕ ನೀರು ಪೂರೈಸಲಾಗುತ್ತಿದೆ. ಎಲ್​ಆಂಡ್​ಟಿ ಕಂಪನಿ ನೀರು ಪೂರೈಕೆ ಮತ್ತು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. 40 ಎಂಎಲ್​ಡಿ ನೀರಿನ ಅವಶ್ಯಕತೆ ಇದ್ದು 34 ಎಂಎಲ್​ಡಿ ನೀರು ಲಭ್ಯವಿದೆ. ಮುಂಡರಗಿಯ 7, ಗದಗ ತಾಲೂಕಿನ 14 ಹಾಗೂ ಶಿರಹಟ್ಟಿ ತಾಲೂಕಿನ 16 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಬಹುದು. ಮೂರು ತಾಲೂಕಿನ ಗ್ರಾಮಗಳ ಒಟ್ಟು ಜನಸಂಖ್ಯೆ 4.74 ಲಕ್ಷ.


    ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳು
    ಗದಗ ತಾಲೂಕು: ಎಚ್.ಎಸ್. ವೆಂಕಟಾಪುರ, ನಾಗಸಮುದ್ರ, ಸೊರಟೂರು, ಅಡವಿಸೋಮಾಪುರ, ಯಲಿಶಿರೂರು, ತಿಮ್ಮಾಪುರ, ಹಿರೇಹಂದಿಗೊಳ, ಕೋಟಮುಚಗಿ,ಕದಡಿ, ಗರಗವಾಡ, ಚಿಂಚಲಿ, ಸಾರಿಗೆ ನಗರ, ಲಿಂಗದಾಳ, ಹೊಂಬಳ.
    ಮುಂಡರಗಿ: ಹಳ್ಳಿಕೇರಿ, ಚಿಕ್ಕವಡ್ಡಟ್ಟಿ, ಪೇಟಾಲೂರು, ಹೈತಾಪುರ, ಬೆಣ್ಣಿಹಳ್ಳಿ, ಗುಡ್ಡದ ಬೂದಿಹಾಳ, ಚಿಕ್ಕವಡ್ಡಟ್ಟಿ.
    ನರಗುಂದ: ಹದಲಿ, ಗಂಗಾಪುರ, ಕುರ್ಲಗೇರಿ, ಶಿರೋಳ, ಕಲ್ಲಾಪುರ, ಕಪ್ಪಲಿ, ಕೊಣ್ಣೂರು, ಬೂದಿಹಾಳ, ರಡ್ಡೇರ ನಾಗನೂರು, ಖಾನಾಪುರ, ವಾಸನ, ಬೆಳ್ಳೆರಿ, ಹಿರೇಕೊಪ್ಪ, ಕುರಗೋವಿನಕೊಪ್ಪ, ಬೆನಕೊಪ್ಪ, ಸಂಕದಾಳ, ಮೂಗನೂರು, ಬೈರನಹಟ್ಟಿ.
    ಗಜೇಂದ್ರಗಡ: ಮಾಟರಂಗಿ, ಗೌಡಗೇರಿ, ನಾಗರಸಿಕೊಪ್ಪ, ಲಕ್ಕಲಕಟ್ಟಿ
    ರೋಣ: ಸ್ಥಳಾಂತರಗೊಂಡ ಮೆಣಸಗಿ, ಮಲವಾಡ, ಹೊಳೆಮಣ್ಣೂರು, ಭೂಪಲಾಪುರ, ಗುಡಗೋಳಿ, ಕುರವಿನಕೊಪ್ಪ, ಬಸರಕೋಡ, ಹೊಳೆಆಲೂರು, ಸವಡಿ, ಅಬ್ಬಿಗೇರಿ, ಹಿರೇಹಾಳ, ಬಳಗೋಡ, ಹೊನ್ನಿಗನೂರು, ಚಿಕ್ಕಮಣ್ಣೂರು, ಮಾಡಲಗೇರಿ, ಮುದೇನಗುಡಿ.
    ಶಿರಹಟ್ಟಿ: ಮಾಗಡಿ, ಬನ್ನಿಕೊಪ್ಪ, ಕಡಕೋಳ, ಹೆಬ್ಬಾಳ, ಚವಡಾಳ, ಬೂದಿಹಾಳ, ಹೊಸೂರು, ಗೊಜನೂರು, ಯತ್ತಿನಹಳ್ಳಿ, ಮಾಡಳ್ಳಿ, ಬಾಳೆಹೊಸೂರು, ಆದ್ರಳ್ಳಿ, ಹುಲ್ಲೂರು, ಅಕ್ಕಿಗುಂದ ಮತ್ತು ಅಕ್ಕಿಗುಂದ ತಾಂಡ.



    ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ವಿಪತ್ತು ನಿರ್ವಹಣೆ ಅನುದಾನ ಬಳಸಿಕೊಳ್ಳಲಾಗುವುದು. ತುಂಗಭದ್ರಾ ಮತ್ತು ರೇಣುಕಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಕೆಲ ಭಾಗದಲ್ಲಿ ಕೆರೆಗಳನ್ನು ಭರ್ತಿ ಮಾಡಲಾಗಿದೆ. | ವೈಶಾಲಿ ಎಂ.ಎಲ್. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts