More

    ತರಕಾರಿಯಂತೆ ಬೀದಿಗಳಲ್ಲಿ ಕುಡಿವ ನೀರು ಮಾರಾಟ!; ಇದು ಬಳ್ಳಾರಿ ತಾಲೂಕಿನ ಗಡಿ ಗ್ರಾಮಗಳ ದುಸ್ಥಿತಿ..

    | ರೇಣುಕಾರಾಧ್ಯ ಕೆ.ಎಂ.ವಿ. ಬಳ್ಳಾರಿ

    ‘ದೂರದ ಬೆಟ್ಟ ನುಣ್ಣಗೆ’ ಎಂಬಂತೆ ಹೊರಗಿನ ಜನರಿಗೆ ಗಣಿ ಜಿಲ್ಲೆ ಅಂದರೆ ಕೋಟ್ಯಂತರ ರೂ. ಆದಾಯ ಬರುತ್ತದೆ. ಇದು ಶ್ರೀಮಂತ ಜಿಲ್ಲೆ ಎನ್ನಿಸುತ್ತೆ. ಆದರೆ, ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಒಮ್ಮೆ ಸಂಚರಿಸಿದರೆ ಸಾಕು, ಇದೆಂಥ ನರಕ… ಎಂದು ರಾಗ ಎಳೆವ ಸನ್ನಿವೇಶಗಳಿವೆ. ಅದಕ್ಕೆ ಸಾಕ್ಷಿ ಎನ್ನುವಂತೆ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನೋಡಲು ಸಿಗುತ್ತದೆ. ಕುಡಿಯುವ ನೀರನ್ನು ತರಕಾರಿಯಂತೆ ಬೀದಿ ಬೀದಿಯಲ್ಲಿ ಮಾರಾಟಮಾಡುವ ದೃಶ್ಯ ಕಂಡು ಬರುತ್ತವೆ.

    ಬಳ್ಳಾರಿ ತಾಲೂಕಿನ ಶಂಕರಬಂಡೆ, ಕಮ್ಮರಚೇಡು, ಧನಲಕ್ಷ್ಮೀ ಕ್ಯಾಂಪ್, ಮಾಳಗಡ್ಡೆ ಕ್ಯಾಂಪ್ ಸೇರಿ ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರನ್ನು ಕೊಂಡು ಕುಡಿಯುವ ಅನಿವಾರ್ಯತೆ ಇದೆ. ಟಾಟಾ ಏಸ್, ಆಟೋಗಳಲ್ಲಿ ಸಿಂಟೆಕ್ಸ್ ಇಟ್ಟುಕೊಂಡು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಿ ಕುಡಿಯುವ ನೀರನ್ನು ಮಾರಾಟ ಮಾಡಲಾಗುತ್ತಿದೆ. ನೀರು ಮಾರುವ ವಾಹನಗಳು ಬಂದಾಗ ಒಂದು ಬಿಂದಿಗೆ ನೀರಿಗೆ ಐದು ರೂಪಾಯಿ ಕೊಟ್ಟು ಜನ ಕೊಂಡುಕೊಳ್ಳಬೇಕು. ನಿಗದಿತ ಸಮಯಕ್ಕೆ ನೀರು ಮಾರುವ ವಾಹನ ಬರೋದಿಲ್ಲ, ಹೀಗಾಗಿ ನೀರು ಕೊಳ್ಳುವುದಕ್ಕೆ ಕೆಲವರು ಕಲಸಕ್ಕೂ ಹೊಗದೇ ಕಾದು ಕುಳಿತುಕೊಳ್ಳುವ ಸ್ಥಿತಿ ಇದೆ.

    ಪದೇಪದೆ ಕೆಡುತ್ತಿವೆ ಫಿಲ್ಟರ್​ಗಳು: ಗ್ರಾಮೀಣ ಭಾಗಗಳಲ್ಲಿ ಸರ್ಕಾರ ಆರ್​ಒ ಪ್ಲಾಂಟ್​ಗಳನ್ನು ಅಳವಡಿಸಿದೆ. ಆದರೆ, ಫಿಲ್ಟರ್ ಮೆಮ್ರೇನ್​ಗಳು ಪದೇಪದೆ ಕೆಟ್ಟು ಹೋಗುತ್ತಿವೆ. ಇಷ್ಟಿಷ್ಟಕ್ಕೆ ದುರಸ್ತಿ ಮಾಡಿಸಲು ಅಧಿಕಾರಿಗಳು ಮೀನ-ಮೇಷ ಎಣಿಸುತ್ತಾರೆ ಎಂದು ಸ್ಥಳೀಯರ ಆರೋಪ.

    ಶಾಸಕರ ಬಗ್ಗೆ ಜನರಲ್ಲಿದೆ ಬೇಸರ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಬಗ್ಗೆ ಜನರಲ್ಲಿ ಬೇಸರ ಇದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವುದು ಅವರಿಗೆ ಗೊತ್ತಿದೆ. ಆದರೂ ಈವರೆಗೆ ಸಮಸ್ಯೆ ಬಗೆ ಹರಿಸಲು ಆಸಕ್ತಿ ತೋರಿಸುತ್ತಿಲ್ಲ. ಅಧಿಕಾರಿಗಳದ್ದೂ ಇದೆ ಕತೆ ಎನ್ನುತ್ತಾರೆ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬರುವ ಎಲ್ಲ ರೀತಿಯ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುವುದಾಗಿ ಹೇಳಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಸರ್ಕಾರ ಕುಡಿಯುವ ನೀರು ಸೇರಿ ಮೂಲಭೂತ ಸೌಲಭ್ಯಕ್ಕಾಗಿ ನೂರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೂ ನಮ್ಮೂರಿನಲ್ಲಿ ಕುಡಿಯುವ ನೀರಿಗಾಗಿ ನಾವು ಪರದಾಡುವಂತಾಗಿದೆ.

    | ವಿಶ್ವನಾಥ ಶಂಕರಬಂಡೆ ಗ್ರಾಮದ ನಿವಾಸಿ

    ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಆರ್​ಒ ಪ್ಲಾಂಟ್​ಗಳು ಹಳೆಯದಾಗಿವೆ. ಕೆಲವು ಹಾಳಾಗಿವೆ. ಇದೇ ಸಮಸ್ಯೆಗೆ ಮೂಲ ಕಾರಣ. ಕೂಡಲೇ ದುರಸ್ತಿ ಮಾಡಿಸಿ ಜನರ ನೀರಿನ ಪರದಾಟ ತಪ್ಪಿಸಲಾಗುವುದು.

    | ಬಿ. ನಾಗೇಂದ್ರ ಬಳ್ಳಾರಿ ಗ್ರಾಮೀಣ ಶಾಸಕ

    ಸಮಸ್ಯೆ ನಿವಾರಿಸಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ತಿಳಿಸಲಾಗಿದೆ. ಕೆಲವು ಕಡೆ ಆರ್​ಒ ಪ್ಲಾಂಟ್​ಗಳು ಕೆಟ್ಟು ಹೋಗಿವೆ. ಟೆಂಡರ್​ದಾರರು ನಿರ್ಲಕ್ಷ್ಯ ಮಾಡಿದ್ದಾರೆ. ಅಂತಹವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು.

    | ಶ್ರೀಧರ್ ಬಾರೇಕರ್ ಬಳ್ಳಾರಿ ತಾಲೂಕು ಇಒ

    ಎಲ್ಲಿ ಹೋಗುತ್ತದೆ ಅನುದಾನ?: ಸರ್ಕಾರ ಪ್ರತಿ ವರ್ಷ ಕುಡಿಯುವ ನೀರಿಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಾ ಇದೆ. ಆದರೆ, ಇಂತಹ ಶಾಪಗ್ರಸ್ಥ ಹಳ್ಳಿಗಳನ್ನು ನೋಡಿದಾಗ ಸರ್ಕಾರ ಕೊಟ್ಟ ಹಣ ಎಲ್ಲಿ ಹೋಯ್ತು ಎನ್ನುವ ಪ್ರಶ್ನೆ ಉದ್ಭವವಾಗತ್ತದೆ. ಅದರಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಖನಿಜ ನಿಧಿಯನ್ನೂ ಅನುದಾನದಲ್ಲೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬಳಸಿಕೊಳ್ಳಲಾಗುತ್ತದೆ. ಆದರೂ ಈ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.

    ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts