More

    ಪ್ರಾಣಿಗಳನ್ನು ಕಾಡುತ್ತಿದೆ ನೀರಿನ ಸಮಸ್ಯೆ ; ಬೆಟ್ಟ-ಗುಡ್ಡಗಳಲ್ಲಿ ಹೆಚ್ಚುತ್ತಿದೆ ರೋದನ

    ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ನೀರಿನ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಜಲದಾಹಕ್ಕೆ ಜನಜಾನುವಾರು ಹಾಗೂ ಕಾಡು ಪ್ರಾಣಿಗಳ ರೋದನೆ ಹೆಚ್ಚಾಗಿದೆ.

    ಗ್ರಾಮಗಳ ಸುತ್ತಲಿನ ಅರಣ್ಯ ಪ್ರದೇಶ, ಬೆಟ್ಟ-ಗುಡ್ಡಗಳ ನಡುವೆ ನೀರು ಸಿಗದ ಹಿನ್ನೆಲೆಯಲ್ಲಿ ಕೋತಿ, ಜಿಂಕೆ, ಕಾಡಹಂದಿ, ಮೊಲಗಳು ಜನ ವಸತಿ ಪ್ರದೇಶಗಳತ್ತ ಬರುತ್ತಿವೆ. ಈಗಾಗಲೇ 50ಕ್ಕೂ ಹೆಚ್ಚು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಮುಂಬರುವ ದಿನಗಳಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವುದು ನಿಚ್ಚಳವಾಗಿದೆ. ಇದರ ನಡುವೆ ಅರೆಮಲೆನಾಡು ಎನಿಸಿಕೊಂಡಿರುವ ಮಂಚೇನಹಳ್ಳಿ, ನಂದಿ ಗಿರಿಧಾಮ, ಸ್ಕಂದಗಿರಿ, ಹನುಮಂತಪುರದ ಜಾಲಾರಿ ನರಸಿಂಹಸ್ವಾಮಿ ಬೆಟ್ಟ, ಆವಲಬೆಟ್ಟ ಸೇರಿ ವಿವಿಧ ತಾಣಗಳಲ್ಲಿ ಮೂಕಜೀವಿಗಳ ರೋದನೆ ಕಂಡು ಬರುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರಿಂದ ಕೋತಿಗಳು ನೀರಿನ ಬಾಟಲ್, ತಂಪು ಪಾನಿಯಗಳನ್ನು ಕಿತ್ತುಕೊಳ್ಳುತ್ತಿವೆ. ಮತ್ತೊಂದೆಡೆ ಗುಬ್ಬಚ್ಚಿ, ಕಾಗೆ, ಹಸು, ಎಮ್ಮೆ, ಕರುಗಳು ಮನೆ ಇಲ್ಲವೇ, ನಲ್ಲಿಗಳ ಬಳಿ ನೀರಿಗಾಗಿ ಎಡತಾಕುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ನೀರಿನ ಬಿಂದಿಗೆ, ಬಕೆಟ್ ಕಾಣಿಸುತ್ತಿದ್ದಂತೆ ಧಾವಿಸಿ ಬರುತ್ತಿವೆ.

    ನೀರುಣಿಸುವ ಅಭಿಯಾನ ಅಗತ್ಯ : ಪ್ರತಿ ವರ್ಷವೂ ಸಂಘ ಸಂಸ್ಥೆಗಳು, ಬಳಗಗಳು ಮೂಕ ಜೀವಿಗಳಿಗಾಗಿ ಮನೆಯ ಮಹಡಿ, ಕಟ್ಟಡಗಳ ಮೇಲೆ ಪ್ರಾಣಿ ಪಕ್ಷಿಗಳಿಗೆ ಮಡಿಕೆಯಲ್ಲಿ ನೀರಿಡುವ ಅಭಿಯಾನವನ್ನು ಕೈಗೊಳ್ಳುತ್ತಿವೆ. ಇದು ಈ ಬಾರಿಯೂ ಮತ್ತಷ್ಟು ಚುರುಕಾಗಿ ನಡೆಯಬೇಕೆಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ. ಹಿಂದೆ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗದ ವೀರದಿಮ್ಮಮ್ಮನ ಕಣಿವೆಯಲ್ಲಿನ ಪ್ರಾಣಿ ಪಕ್ಷಿಗಳಿಗಾಗಿ ಬೇಸಿಗೆಯಲ್ಲಿ ಸಿಮೆಂಟ್ ತೊಟ್ಟಿಗಳನ್ನಿಟ್ಟು ನೀರುಣಿಸಲಾಗುತ್ತಿತ್ತು. ಕೆಲ ಖಾಸಗಿ ಶಾಲಾ-ಕಾಲೇಜುಗಳ ಪ್ರಾಂಶುಪಾಲರ ನೇತೃತ್ವದಲ್ಲಿ ಕಟ್ಟಡದ ಮೇಲೆ ನೀರಿಡುವ ಅಭಿಯಾನ ನಡೆಯುತ್ತಿತ್ತು. ಇದು ಈ ಸಾಲಿನಲ್ಲೂ ಹೆಚ್ಚಿಗೆ ನಡೆಯಬೇಕಾಗಿದೆ. ಇತ್ತೀಚೆಗೆ ಉಷ್ಣಾಂಶ ಹೆಚ್ಚಾಗಿದೆ. ಈಗಲೇ ಗರಿಷ್ಠ 32 ಡಿಗ್ರಿ ಸೆಲಿಯಷ್ಸ್ ಮುಟ್ಟಿದೆ. ಇದರ ತಾಪಕ್ಕೆ ಉಂಟಾಗುತ್ತಿರುವ ದಾಹ ನೀಗಿಸಿಕೊಳ್ಳಲು ಜನರು ಎಳನೀರು, ತಂಪು ಪಾನಿಯ, ಕಲ್ಲಂಗಡಿ, ಕರಬೂಜ, ಐಸ್ ಕ್ರೀಮ್ ಮೊರೆ ಹೋಗುತ್ತಿದ್ದಾರೆ. ಆದರೆ, ಮೂಕಜೀವಿಗಳಿಗೆ ನೋವು ಹೇಳಿಕೊಳ್ಳಲಾಗುವುದಿಲ್ಲ. ಇದನ್ನು ಪ್ರಜ್ಞಾವಂತ ನಾಗರಿಕರೇ ಅರಿತು ನೀರುಣಿಸಬೇಕು ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.

    ಬೇಸಿಗೆಯಲ್ಲಿ ಮೂಕಜೀವಿಗಳು ಅನುಭವಿಸುತ್ತಿರುವ ರೋದನೆಯನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಪ್ರತಿಯೊಬ್ಬರೂ ಕೈಲಾದಷ್ಟು ಸ್ಥಳಗಳಲ್ಲಿ ಮಡಕೆ, ತೊಟ್ಟಿಗಳಲ್ಲಿ ನೀರನ್ನಿಟ್ಟರೆ ಪ್ರಾಣಿ ಪಕ್ಷಿಗಳು ಕುಡಿಯುತ್ತವೆ.
    ಗುಂಪು ಮರದ ಆನಂದ್, ಪರಿಸರ ಪ್ರೇಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts