More

    25 ವರ್ಷದಿಂದ ನೀರಿನ ಸಮಸ್ಯೆ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಕಿರಿಮಂಜೇಶ್ವರ ಗ್ರಾಮದ ಕೊಡೇರಿ 5ನೇ ವಾರ್ಡ್‌ನಲ್ಲಿ ಕಳೆದ 25 ವರ್ಷಗಳಿಂದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಮುಕ್ತಿ ಸಿಗದಿರುವ ಕಾರಣ ಮತದಾನದಿಂದ ದೂರ ಇರಲು ನಿರ್ಧರಿಸಿದ್ದಾರೆ. ಸಮುದ್ರದ ನೆಂಟಸ್ಥಿಕೆ ಉಪ್ಪಿಗೆ ಬಡತನ ಎನ್ನುವಂತೆ ಕುಡಿಯುವ ನೀರಿನ ಬರ ಎದುರಿಸುತ್ತಿರುವುದು ಮಾತ್ರ ಶೋಚನೀಯ. ಪ್ರಸ್ತುತ 1.5 ಕಿ.ಮೀ ದೂರದಿಂದ ನೀರು ಹೊತ್ತುಕೊಂಡು ಬರಬೇಕಾದ ಪರಿಸ್ಥಿತಿಯಿದೆ.

    ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡೇರಿ ಗ್ರಾಮದ 5ನೇ ವಾರ್ಡ್‌ನಲ್ಲಿ 170 ಮನೆಗಳಿವೆ. ಸುಮಾರು 1500 ಜನಸಂಖ್ಯೆ ಇದೆ. ಇದರಲ್ಲಿ ಬಹುತೇಕ ಮನೆಯವರು ನಲ್ಲಿ ನೀರನ್ನು ಅವಲಂಬಿಸಿದ್ದಾರೆ. ಇದರಲ್ಲಿ ಸುಮಾರು 60 ಮನೆಗಳು ಸುಮಾರು 25 ವರ್ಷಗಳಿಂದ ನಲ್ಲಿ ನೀರಿಗೂ ಪರದಾಡುತ್ತಿದ್ದು ಇಂದಿಗೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ. ಎಲ್ಲೆಡೆ ಚುನಾವಣೆಯ ಕಾವು, ಚರ್ಚೆಗಳ ಅಬ್ಬರ ಏರುತ್ತಿದ್ದರೂ ಈ ಪ್ರದೇಶದ ಜನರಿಗೆ ಅದು ಯಾವುದೂ ಬೇಡವಾಗಿದೆ. ಒಂದಿಷ್ಟು ನೀರು ನಲ್ಲಿಯಲ್ಲಿ ಬಂದರೆ ಸಾಕಪ್ಪ ಎನ್ನುತ್ತಾರೆ ಮಹಿಳೆಯರು.

    ನೀರಿನ ಸಮಸ್ಯೆ

    ಈ ಭಾಗದಲ್ಲಿ ಪ್ರತಿ ವರ್ಷ ಫೆಬ್ರವರಿಯಿಂದ ಮಳೆಗಾಲದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. 5ನೇ ವಾರ್ಡ್‌ಗೆ ಮೂರು ದಿನಗಳಿಗೆ ಒಮ್ಮೆ ನೀರು ಬಿಡಲಾಗುತ್ತದೆ. ಬೆಳಗ್ಗೆ ಬಿಟ್ಟ ನೀರು ಕೆಲವು ಸಂದರ್ಭದಲ್ಲಿ ಮನೆಯ ನಲ್ಲಿಗೆ ಸಂಜೆ ಆದರೂ ಬರುವುದಿಲ್ಲ. ಸುಮಾರು 2 ಕಿಲೋ ಮೀಟರ್ ದೂರದಲ್ಲಿ ತೆಮಕಯ್ಯನಮನೆ ಸಮೀಪ ನೀರು ಸರಬರಾಜು ಮಾಡುವ ಬಾವಿ ಇದೆ. 1 ಕಿ.ಮೀ. ದೂರದಲ್ಲಿ ಟ್ಯಾಂಕ್ ಇದೆ. ನೀರು ಬಿಟ್ಟರು ಆರಂಭದ ಮನೆಗಳಿಗೆ ಅನಧಿಕೃತವಾಗಿ ಒಳ ನಲ್ಲಿ ಸಂಪರ್ಕದಿಂದ ದೊಡ್ಡ ಮಟ್ಟದ ಪೈಪ್‌ಗಳನ್ನು ಅಳವಡಿಕೆ ಮಾಡಿದ್ದರ ಪರಿಣಾಮ ಗ್ರಾಮದ ಕೊನೆಯ ಸುಮಾರು 60 ಮನೆಗಳಿಗೆ ನೀರು ತಲುಪುತ್ತಿಲ್ಲ. ನೀರಿನ ಟ್ಯಾಂಕ್‌ನ ಕೆಳಗಡೆಯೆ ನೀರು ಪೊಲಾಗುತ್ತಿದ್ದರೂ ಸಹ ದುರಸ್ತಿಗೆ ಸ್ಥಳೀಯಾಡಳಿತ ಮುಂದಾಗಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

    water tank

    ಮನವಿ ಕಡತದಲ್ಲೇ ಬಾಕಿ

    ಕಿರಿಮಂಜೆಶ್ವರ ಗ್ರಾಮದಲ್ಲಿ ತಿಂಗಳ ಹಿಂದೆ ನಡೆದ ಡಿಸಿ ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರಿಗೆ ನೀರಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ್ದರು. ತಕ್ಷಣ ನೀರು ಸರಬರಾಜು ಮಾಡುವ ಬಗ್ಗೆ ಡಿಸಿ ಭರವಸೆ ನೀಡಿದ್ದರು. ಸದ್ಯ ಸಮಸ್ಯೆಗಳನ್ನು ಹೊತ್ತ ಮನವಿ ಕಡತದಲ್ಲೇ ಬಾಕಿಯಾಗಿದೆ.

    ಅನಧಿಕೃತ ಸಂಪರ್ಕ

    ಟ್ಯಾಂಕ್‌ನಿಂದ ಬರುವ ನೀರು ಕೆಲವು ಮನೆಯವರು ಇತರ ಮಾರ್ಗದ ಮೂಲಕ ಹೆಚ್ಚುವರಿಯಾಗಿ ತುಂಬಿಸಿಕೊಳ್ಳುತ್ತಾರೆ. ಇದರ ಬಗ್ಗೆ ಗ್ರಾಪಂನ ಅಧಿಕಾರಿಗಳ ಗಮನಕ್ಕೆ ತಂದಾಗ ಅಂಥವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳುತ್ತಾರೆ ಹೊರತು ಯಾವುದೇ ಸಾಹಸಕ್ಕೆ ಮುಂದಾಗಲಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಸಮಸ್ಯೆಗಳ ಬಗ್ಗೆ ಜನರು ವಾರ್ಡ್ ಸಭೆ, ಗ್ರಾಮಸಭೆಗಳಲ್ಲಿ ನಿರಂತರವಾಗಿ ಅಧಿಕಾರಿಗಳ ಸಂಬಂಧಪಟ್ಟವರ ಗಮನಕ್ಕೆ ತಂದಾಗ ನಿರ್ಣಯ ಬರೆದುಕೊಂಡು ಹೋಗುತ್ತಾರೆ ಹಾಗೂ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಬಗ್ಗೆ ಖಾತರಿ ನೀಡುತ್ತಾರೆ. ನಂತರ ಈ ಸ್ಥಳಗಳಿಗೆ ಬರುವುದೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

    ಪೈಪ್‌ಲೈನ್ ಇದೆ ನೀರು ಯಾವಾಗ?

    ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕೆಲಸ ಮಾಡಲಾಗಿದೆ. ಆದರೆ ನೀರು ಯಾವಾಗ ಬರುತ್ತದೆ ಎನ್ನುವ ಸ್ಪಷ್ಟತೆ ಇಲ್ಲ. ಈ ಯೋಜನೆಯಿಂದಾಗಿ ಗ್ರಾಪಂ ಹಣದಿಂದ ಟ್ಯಾಂಕ್ ಮೂಲಕ ನೀರು ನೀಡುವಂತೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಈಗ ಇರುವ ಸಮಸ್ಯೆಗಳಿಗೆ ಅನುದಾನ ಒದಗಿಸುವಂತೆಯೂ ಇಲ್ಲವಂತೆ.ಹಾಗಿದ್ದರೆ ಜನರ ಗೋಳು ಕೇಳುವವರು ಯಾರು ಎನ್ನುವಂತಾಗಿದೆ. ಕುಡಿಯುವ ನೀರು ನೀಡಲು ಸಾಧ್ಯವಾಗದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವ ಕುರಿತು ಗ್ರಾಮಸ್ಥರು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

    ನಿತ್ಯ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದೇವೆ. ಸಂಬಂಧಿಸಿದವರಿಗೆ ಮನವಿ ಮಾಡಿ ಸಾಕಾಗಿ ಹೋಗಿದೆ. ನಮಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಇಲದಿದ್ದರೆ ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ನಾವು ಮತ ಚಲಾಯಿಸುವುದಿಲ್ಲ.
    -ಜನಾರ್ದನ, ಹಿರಿಯ ನಾಗರಿಕ

    ಅಕ್ರಮ ಮಾರ್ಗದಿಂದ ಹೆಚ್ಚುವರಿ ನೀರಿ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನೀರು ಪೋಲಾಗದಂತೆ ತಡೆಯಬೇಕು. ಟ್ಯಾಪ್‌ಗಳನ್ನು ಅಳವಡಿಸಬೇಕು. ನೀರು ನೀಡುವ ಬಗ್ಗೆ ತುರ್ತುಕ್ರಮ ಅಗತ್ಯವಿದೆ.
    -ಆನಂದ ಪೂಜಾರಿ, ಗ್ರಾ.ಪಂ.ಸದಸ್ಯ ಕಿರಿಮಂಜೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts