More

    ಜೀವಜಲಕ್ಕೆ ಜಿಲ್ಲೆಯಲ್ಲಿ ಪರದಾಟ ; ಹಳ್ಳಹಿಡಿದ ಬಹುಗ್ರಾಮ ಕುಡಿಯುವ ನೀರು ಯೋಜನೆ

    ತುಮಕೂರು: ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲದೆ ಜನ, ಜಾನುವಾರುಗಳು ಪರಿತಪಿಸುತ್ತಿವೆ.

    ಜಿಪಂ ಅಂಕಿ, ಅಂಶದಲ್ಲಿಯೇ 633 ಸಮಸ್ಯಾತ್ಮಕ ಗ್ರಾಮಗಳು ಎಂದು ಗುರುತಿಸಲಾಗಿದ್ದು, ವಾಸ್ತವದಲ್ಲಿ 800ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ದಿನ ಬೆಳಕಾಗುವಷ್ಟರಲ್ಲಿ ಕೊಳವೆಬಾವಿಗಳಲ್ಲಿ ನೀರು ಬತ್ತುತ್ತಿದೆ, ತುಮಕೂರು ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯೂ ಹಳ್ಳಹಿಡಿದಿದ್ದು ನೀರಿಲ್ಲದಿದ್ದರೂ ಬೃಹತ್ ಯಂತ್ರಗಳನ್ನು ಅಳವಡಿಸಿ ಹಣ ಪೋಲು ಮಾಡಲಾಗಿದೆ.

    ಬಿಸಿಲಿನ ತಾಪ ಹೆಚ್ಚಳವಾಗಿರುವ ಹಿನ್ನೆಲೆಯಲ್ಲೆ ಕೆರೆಗಳಲ್ಲಿ ತಳಮುಟ್ಟಿದ್ದ ನೀರು ಹಾವಿಯಾಗಲಾರಂಭಿಸಿದೆ, ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಅಡಕೆ ಬೆಳೆದಿರುವ ರೈತರಂತೂ ತೋಟ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಇಂಧನ ಬೆಲೆ ಹೆಚ್ಚಳದ ಕಾರಣಕ್ಕೆ ಕೊಳವೆಬಾವಿ ಕೊರೆಸುವುದು ದುಭಾರಿಯಾಗಿದ್ದು ರೈತರು ತಲೆಯ ಮೇಲೆ ಕೈಹೊತ್ತು ಕೂರುವಂತಾಗಿದೆ.
    ಜಿಪಂ, ಗ್ರಾಪಂ ಅಗ್ಗಜಗ್ಗಾಟ: ಸಮಸ್ಯೆ ಇರುವ ಗ್ರಾಮಗಳಲ್ಲಿ ಶಾಶ್ವತ ವ್ಯವಸ್ಥೆಗೆ ಕೊಳವೆಬಾವಿ ಕೊರೆಸುವುದೆ ಪರಿಹಾರವಾಗಿದ್ದು ಲಕ್ಷಾಂತರ ರೂ. ಅಗತ್ಯವಿದೆ. ಈ ಹಣವನ್ನು ಗ್ರಾಪಂ 15ನೇ ಹಣಕಾಸು ಯೋಜನೆ ನಿಧಿಯಿಂದಲೇ ಬಳಸಬೇಕು ಎಂದು ಜಿಪಂ ಸೂಚನೆ ಗ್ರಾಪಂಗಳ ನೆಮ್ಮದಿ ಕೆಡಿಸಿದೆ. ಇರುವ ಸಣ್ಣ ಅನುದಾನವನ್ನೆಲ್ಲಾ ಕುಡಿಯುವ ನೀರಿಗೆ ಬಳಸಿದರೆ ಗ್ರಾಮಗಳ ಅಭಿವೃದ್ಧಿಯ ಗತಿಏನು ಎಂದು ಚಿಂತಿಸಲಾರಂಭಿಸಿದ್ದಾರೆ.

    ಅನುದಾನ ಬಳಕೆಯಲ್ಲಿ ಜಿಪಂ ಹಾಗೂ ಗ್ರಾಪಂ ಹಗ್ಗಜಗ್ಗಾಟ ಆರಂಭವಾಗಿದ್ದು, ಗ್ರಾಮೀಣ ಜನರು ಸಂಕಷ್ಟ ಪಡುವಂತಾಗಿದೆ, ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗಾದರೂ ಸರ್ಕಾರ ಕೂಡಲೇ ಹಣ ನೀಡುವ ಅಗತ್ಯವಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗುಲಿ ಗ್ರಾಪಂ ತಾರಿಕಟ್ಟೆ, ಹೊಸಕೆರೆ ಮತ್ತಿತರ ಗ್ರಾಮಗಳಲ್ಲಿ ಕೊಳವೆಬಾವಿಗಳು ಕೈಕೊಟ್ಟು ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಕೊಳವೆಭಾವಿ ಕೊರೆಯಲು ಜಿಪಂ, ತಾಪಂಗೆ ಮಾಡಿಕೊಳ್ಳುತ್ತಿರುವ ಮನವಿಗೆ ಸೊಪ್ಪು ಹಾಕಿಲ್ಲ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
    ಬೆಳಗುಲಿ ಗ್ರಾಪಂ ತಾರಿಕಟ್ಟೆ, ಹೊಸಕರೆ ಮತ್ತಿತರರ ಗ್ರಾಮಗಳಲ್ಲಿ ಕಳೆದ 15 ದಿನಗಳಿಂದಲೂ ಕನಿಷ್ಠ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ, ಗ್ರಾಪಂ ಅನುದಾನದಲ್ಲಿ ಕೊಳವೆಬಾವಿ ಕೊರೆಸಬೇಕು ಎಂದು ಜಿಪಂ ಅಧಿಕಾರಿಗಳು ಕೈಚೆಲ್ಲಿರುವುದು ಸಮಸ್ಯೆಯನ್ನು ಬಿಗಡಾಯಿಸಿದೆ, ಬೇಸಿಗೆ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಗ್ರಾಪಂಗಳಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು.
    ಜಿ.ಶಾಂತರಾಜು ಉಪಾಧ್ಯಕ್ಷ, ಬೆಳಗುಲಿ ಗ್ರಾಪಂ

    ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಬಗ್ಗೆ ಅರಿವಿದೆ, ಈವರೆಗೆ 633 ಹಳ್ಳಿಗಳಲ್ಲಿ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದ್ದು, ಮುಂಜಾಗ್ರತೆ ವಹಿಸಲಾಗಿದೆ. ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆಯಲು ಅವಕಾಶವಿದೆ, ಟ್ಯಾಂಕರ್ ಮೂಲಕವೂ ಸರಬರಾಜು ಮಾಡಲಾಗುತ್ತಿದೆ, ಶಾಶ್ವತ ವ್ಯವಸ್ಥೆಯಾಗಿ ಹೊಸ ಕೊಳವೆಬಾವಿ ಕೂಡ ಕೊರೆಸಲಾಗುತ್ತಿದೆ.
    ಕೆ.ಮುತ್ತಪ್ಪ ಇಇ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts