More

    ಸಮುದ್ರ ಮಧ್ಯೆ ಸಿಹಿನೀರು ಉತ್ಪಾದನೆ

    ಮಂಗಳೂರು: ಆಳ ಸಮುದ್ರ ಮೀನುಗಾರಿಕೆ ಬೋಟ್‌ಗಳಲ್ಲಿ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಘಟಕ ಅಳವಡಿಸಲು ಸಹಾಯಧನ ಒದಗಿಸುವ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

    ಮಂಗಳೂರು ಹಳೇ ಬಂದರು ದಕ್ಕೆಯ ಅಳಿವೆಬಾಗಿಲು ಬಳಿ ಶುಕ್ರವಾರ ಪ್ರವಾಸಿ ಬೋಟ್‌ನಲ್ಲಿ ಉಪ್ಪು ನೀರನ್ನು ಸಿಹಿಯನ್ನಾಗಿಸುವ ಘಟಕದ ಪ್ರಾತ್ಯಕ್ಷಿಕೆಯನ್ನು ಇಲಾಖೆ ಅಧಿಕಾರಿಗಳೊಂದಿಗೆ ವೀಕ್ಷಿಸಿ ಮಾತನಾಡಿದರು.

    ಈ ಘಟಕ ಮೀನುಗಾರರಿಗೆ ಉಪಯುಕ್ತವಾಗಲಿದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಸಂದರ್ಭ ಕನಿಷ್ಠ 4ರಿಂದ 15 ದಿನ ಮೀನುಗಾರರಿಗೆ ಕುಡಿಯಲು, ಸ್ನಾನ ಹಾಗೂ ಇತರ ಕೆಲಸಗಳಿಗೆ ಅಗತ್ಯವಾದ ಸಿಹಿ ನೀರನ್ನು ಮೀನುಗಾರಿಕಾ ದೋಣಿಯಲ್ಲಿ ಒಯ್ಯಬೇಕಾಗುತ್ತದೆ. ಇದರ ಬದಲು ಈ ಘಟಕವನ್ನು ಬೋಟ್‌ಗಳಲ್ಲಿ ಅಳವಡಿಸಿದರೆ ನೀರನ್ನು ಹೊತ್ತೊಯ್ಯುವ ಅವಶ್ಯಕತೆ ಇರುವುದಿಲ್ಲ. ಜತೆಗೆ ಬೋಟ್ ಹೆಚ್ಚುವರಿ ದಾಸ್ತಾನು ಹಾಗೂ ಸಾಮರ್ಥ್ಯ ಪಡೆಯಲಿದೆ ಎಂದರು.

    ಈ ತಂತ್ರಜ್ಞಾನವನ್ನು ಈಗಾಗಲೇ ಯೂರೋಪ್ ಸಹಿತ ಹಲವು ರಾಷ್ಟ್ರಗಳಲ್ಲಿ ಮೀನುಗಾರರು ಬಳಕೆ ಮಾಡುತ್ತಿದ್ದಾರೆ. ನಮ್ಮ ಮೀನುಗಾರರಿಗೂ ಇದು ಅತಿ ಉಪಯುಕ್ತವಾಗಲಿದೆ. ದೇಶದಲ್ಲಿ ಇದು ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮೀನುಗಾರ ಮುಖಂಡ ರಾಮಚಂದರ್ ಬೈಕಂಪಾಡಿ ತಿಳಿಸಿದರು.

    ಘಟಕದ ಕುಡಿಯುವ ನೀರಿನ ಗುಣಮಟ್ಟ ಕುರಿತಂತೆ ಪ್ರಾಮಾಣೀಕೃತ ಇಲಾಖೆಯಿಂದ ದೃಢೀಕರಣ ಪಡೆಯಬೇಕಾಗುತ್ತದೆ. ಸಮುದ್ರ ಮಧ್ಯೆ ಉಪಕರಣದಲ್ಲಿ ದೋಷ ಕಂಡು ಬಂದಲ್ಲಿ ನೀರಿಗಾಗಿ ಪರದಾಡಬೇಕಾಗಬಹುದು. ಅಂತಹ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಲಾಗುತ್ತದೆ ಎಂಬ ಕುರಿತೂ ಚರ್ಚಿಸುವ ಬಗ್ಗೆ ಸಚಿವರ ಗಮನ ಸೆಳೆಯಲಾಗಿದೆ.
    – ರಾಮಾಚಾರ್ಯ, ನಿರ್ದೇಶಕ, ಮೀನುಗಾರಿಕಾ ಇಲಾಖೆ

    2 ಸಾವಿರ ಲೀಟರ್ ಸಾಮರ್ಥ್ಯ: ಮೀನುಗಾರಿಕಾ ದೋಣಿಗಳಲ್ಲಿ ಸಮುದ್ರ ನೀರು ಸಂಸ್ಕರಣ ನಡೆಸುವ ಆಧುನಿಕ ತಂತ್ರಜ್ಞಾನದ ಘಟಕ ಸುಮಾರು 4.5 ಲಕ್ಷ ರೂ ಮೌಲ್ಯವನ್ನು ಹೊಂದಿದೆ. ಈ ಯಂತ್ರ ದಿನದಲ್ಲಿ ಸುಮಾರು 2 ಸಾವಿರ ಲೀಟರ್ ನೀರು ಶುದ್ಧೀಕರಣಗೊಳಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts