More

    2ನೇ ವಾರ್ಡ್‌ನಲ್ಲಿ ರಸ್ತೆ, ಮನೆಗಳಿಗೆ ನುಗ್ಗುತ್ತಿದೆ ಕೊಳಚೆ ನೀರು ; ಮಾಹಿತಿಯೇ ಇಲ್ಲ ಅಂದ್ರು ಎಇಇ ಮಧುಸೂದನ್

    ತುಮಕೂರು: ನಗರದ 2ನೇ ವಾರ್ಡ್ ಶಿರಾಗೇಟ್‌ನಿಂದ ಸತ್ಯಮಂಗಲ, ದೇವರಾಯನದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೊಳಚೆ ನೀರು ಮನೆ ಹಾಗೂ ರಸ್ತೆಗೆ ನುಗ್ಗುತ್ತಿದೆ.
    ಈ ಮಾರ್ಗದಲ್ಲಿರುವ ಎಚ್.ಕೆ.ಎಸ್. ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ರಾಜಗಾಲುವೆಯನ್ನು ಅವೈಜ್ಞಾನಿಕವಾಗಿ ಮುಚ್ಚಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ. ಈ ಬಗ್ಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

    ಸ್ಮಾರ್ಟ್‌ಸಿಟಿ, ಪಾಲಿಕೆ ಹಾಗೂ ವಾಟರ್ ಬೋರ್ಡ್ ಅಧಿಕಾರಿಗಳು ಪರಸ್ಪರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮಾತುಗಳನ್ನಾಡುತ್ತಿದ್ದಾರೆ. ಸ್ಥಳೀಯ ಸದಸ್ಯರಾದ ಮಂಜುನಾಥ್ ಕೂಡ ಸಮಸ್ಯೆಯನ್ನು ಅಧಿಕಾರಿಗಳ ಮೂಲಕ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಮಂಜುನಾಥ್ ಅಧಿಕಾರಿಗಳಿಂದ ಕೆಲಸ ಮಾಡಿಸದೆ ಸಾರ್ವಜನಿಕರಂತೆಯೇ ಅಧಿಕಾರಿಗಳನ್ನು ದೂರಿದ್ದಾರೆ.

    ಸ್ಮಾರ್ಟ್‌ಸಿಟಿ ಅಧಿಕಾರಿಗಳನ್ನು ಕೇಳಿದರೆ, ಇದು ನಮಗೆ ಸಂಬಂಧಪಟ್ಟಿದ್ದಲ್ಲ, ವಾಟರ್ ಬೋರ್ಡ್‌ಗೆ ಸಂಬಂಧಿಸಿದ್ದು, ಅವರು ದುರಸ್ತಿ ಮಾಡಬೇಕಿದೆ ಎನ್ನುತ್ತಾರೆ. ವಾಟರ್‌ಬೋರ್ಡ್‌ನವರನ್ನು ಕೇಳಿದರೆ ಪಾಲಿಕೆ ಜಟ್ಟಿಂಗ್ ಮಷಿನ್ ಸರಿಯಿಲ್ಲ, ಅದಕ್ಕೆ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತಿಲ್ಲ ಎಂದು ಒಬ್ಬರ ಮೇಲೊಬ್ಬರು ದೂರುತ್ತಿದ್ದಾರೆ.
    ಮಳೆಗಾಲದಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದ್ದು, ರಾಜಗಾಲುವೆ ಮುಚ್ಚುವ ಮುಂಚೆ ಪರ್ಯಾಯ ಯೋಜನೆ ರೂಪಿಸದಿರುವುದೇ ಸಮಸ್ಯೆಗೆ ಕಾರಣವಾಗಿದೆ.

    ಯಾವ ರಾಜಕಾಲುವೆಯನ್ನೂ ಮುಚ್ಚಿಲ್ಲ, ಮನೆಗಳಿಗೆ ಹಾಗೂ ರಸ್ತೆಯಲ್ಲಿ ಕೊಳಚೆ ನೀರು ಹರಿಯುವುದು ನಮ್ಮ ಗಮನಕ್ಕೆ ಬಂದಿಲ್ಲ. ಪಾಲಿಕೆ ಸದಸ್ಯರು ಗಮನಕ್ಕೆ ತಂದರೆ ಹೋಗಿ ಪರಿಶೀಲಿಸಲಾಗುವುದು.
    ಮಧುಸೂದನ್, ಎಇಇ, ಪಾಲಿಕೆ ಇಂಜಿನಿಯರಿಂಗ್ ವಿಭಾಗ

    15 ದಿನದಿಂದ ಚರಂಡಿ ನೀರು ಮನೆಗಳು ಹಾಗೂ ನೀರಿನ ತೊಟ್ಟಿಗಳಿಗೆ ನುಗ್ಗಿ ಸಾಂಕ್ರಾಮಿಕ ರೋಗಗಳ ಸೃಷ್ಟಿಗೆ ಕಾರಣವಾಗಿದೆ. ಸಮಸ್ಯೆ ಬಗ್ಗೆ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ನಾಗರಿಕರ ಆಕ್ರೋಶ ವ್ಯಕ್ತಪಡಿಸಿದ ನಂತರ ಸ್ಥಳಕ್ಕೆ ಬಂದ ಪಾಲಿಕೆ ಸದಸ್ಯರು ಅಧಿಕಾರಿಗಳ ಮೇಲೆ ಹೇಳುತ್ತಾರೆ, ಅಧಿಕಾರಿಗಳು ಮತ್ತೊಂದು ಇಲಾಖೆ ಮೇಲೆ ಹೇಳುತ್ತಿದ್ದಾರೆ.
    ಕೆ.ಎಸ್.ನಾರಾಯಣ, ಸ್ಥಳೀಯ ನಿವಾಸಿ

    ಶಿರಾಗೇಟ್‌ನಿಂದ ಸತ್ಯಮಂಗಲ, ದೇವರಾಯನದುರ್ಗ ರಸ್ತೆಯ ಮುಂಭಾಗದಲ್ಲಿದ್ದ ರಾಜಗಾಲುವೆಯನ್ನು ಅಧಿಕಾರಿಗಳು ಮುಚ್ಚಿದರು, ಅದನ್ನು ನೋಡಿಕೊಂಡು ಪಾಲಿಕೆ ಸದಸ್ಯರು ಮೌನವಾಗಿದ್ದರು. ಹಾಗಾಗಿ, ಮಳೆಯ ನೀರು ಎಲ್ಲಿಯೂ ಹರಿಯದೆ ರಸ್ತೆ ಹಾಗೂ ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಜವಾಬ್ದಾರಿ ಹೊರಬೇಕಾದವರು ಒಬ್ಬರ ಮೇಲೊಬ್ಬರ ಮೇಲೆ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸುವವರೇ ಇಲ್ಲವಾಗಿದೆ.
    ಮಂಜುಳ, ಸ್ಥಳೀಯ ನಿವಾಸಿ, 2ನೇ ವಾರ್ಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts