More

    ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಮಣ್ಣು

    ವಿಟ್ಲ: ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ವಚ್ಛ ಮಾಡುವ ನೆಪದಲ್ಲಿ ಪಟ್ಟಣ ಪಂಚಾಯಿತಿ ತ್ಯಾಜ್ಯ ತುಂಬಿದ ಮಣ್ಣನ್ನು ಕಾಶಿಮಠ ಪ್ರದೇಶದ ಜನರು ವಾಸಿಸುವ ಪ್ರದೇಶದಲ್ಲಿ ಸುರಿದು ಸ್ಥಳೀಯರಿಗೆ ತೊಂದರೆ ಉಂಟು ಮಾಡಿದೆ.

    ಪಟ್ಟಣ ಪಂಚಾಯಿತಿಯ ಪಳಿಕೆ ತ್ಯಾಜ್ಯ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೆವಾರಿ ಮಾಡಿದ ಪರಿಣಾಮ ಪ್ಲಾಸ್ಟಿಕ್ ಸಹಿತ ಮಣ್ಣು ತುಂಬಿಕೊಂಡಿದೆ. ಈ ಮಣ್ಣು ತೆರವು ಮಾಡದೇ ಹೋದರೆ ನೂತನವಾಗಿ ನಿರ್ಮಾಣವಾಗುವ ತ್ಯಾಜ್ಯ ಘಟಕಕ್ಕೆ ಅಗತ್ಯ ಸ್ಥಳಾವಕಾಶದ ಕೊರತೆಯಾಗುತ್ತದೆ. ಪಟ್ಟಣ ಪಂಚಾಯಿತಿ ಈ ಮಣ್ಣು ತೆರವು ಮಾಡಲು ಗುತ್ತಿಗೆ ನೀಡಿದ್ದು, ವೈಜ್ಞಾನಿಕವಾಗಿ ಮಣ್ಣು ಸ್ಥಳಾಂತರ ಮಾಡುವ ಬದಲಾಗಿ ಊರಿಗೆ ರೋಗ ಹರಡುವ ರೀತಿಯಲ್ಲಿ ಮಣ್ಣು ವಿಲೇವಾರಿ ಮಾಡಿದ್ದಾರೆ.

    ಕಾಶಿಮಠ ಪ್ರದೇಶದಲ್ಲಿ ನಿರುಪಯುಕ್ತ ಕ್ವಾರಿಗಳನ್ನು ಸಮತಟ್ಟು ಮಾಡುವ ನೆಪದಲ್ಲಿ ಪಳಿಕೆ ತ್ಯಾಜ್ಯ ಘಟಕದ ತ್ಯಾಜ್ಯ ತುಂಬಿದ ಮಣ್ಣನ್ನು ಟಿಪ್ಪರ್ ಮೂಲಕ ತಂದು ಸುರಿಯಲಾಗಿದೆ. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಮಣ್ಣು ಸುರಿಯುವುದನ್ನು ನಿಲ್ಲಿಸಲಾಗಿದೆ. ಆದರೆ ಹಾಕಿದ ಮಣ್ಣನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ. ಈ ಭಾಗದಲ್ಲಿ ಸುಮಾರು 25ಕ್ಕೂ ಅಧಿಕ ಮನೆಗಳಿದ್ದು, ಈಗ ಮಳೆ ತೀವ್ರವಾಗಿ ಸುರಿಯುತ್ತಿರುವ ಕಾಣ ಈ ಭಾಗದಲ್ಲಿ ಸೊಳ್ಳೆಗಳು ಹೆಚ್ಚಾಗಿ ಜ್ವರ ಬಾಧೆ ಕಾಣಿಸಿಕೊಳ್ಳಲು ಆರಂಭವಾಗಿದೆ.

    ಮಣ್ಣು ತೆರವಿಗೆ ಮನವಿ: ಏಪ್ರಿಲ್ ತಿಂಗಳಲ್ಲಿ ಮಣ್ಣು ಸುರಿಯುತ್ತಿದ್ದಂತೆ ಸ್ಥಳೀಯ ನಾಗರೀಕರು ಪಟ್ಟಣ ಪಂಚಾಯಿತಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಸೇರಿ ವಿವಿಧ ಇಲಾಖೆಗಳಿಗೆ ರೋಗದ ಭೀತಿ ಬಗ್ಗೆ ಮನವಿ ಸಲ್ಲಿಸಿ, ಮಣ್ಣು ತೆರವು ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಈ ಬಗ್ಗೆ ಯಾವೊಬ್ಬ ಅಧಿಕಾರಿಯೂ ಗಂಭೀರವಾಗಿ ಪರಿಗಣಿಸದೆ ತ್ಯಾಜ್ಯ ಮಣ್ಣು ಊರಿಗೆ ಮಾರಿಯಾಗಿ ಪರಿಣಮಿಸಿದೆ.

    ತ್ಯಾಜ್ಯದ ಮೇಲೆ ಉತ್ತಮ ಮಣ್ಣು: ಅಧಿಕಾರಿಗಳಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ತ್ಯಾಜ್ಯದ ಮೇಲೆ ಉತ್ತಮ ಮಣ್ಣು ಹಾಕಿ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಪರಿಹಾರ ಮಾಡಿಕೊಡುವುದಾಗಿ ಹೇಳುತ್ತಾರೆ. ಆದರೆ ಇದು ಎಷ್ಟು ವೈಜ್ಞಾನಿಕ ಎಂಬ ಬಗ್ಗೆ ಮಾತ್ರ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ.

    ತ್ಯಾಜ್ಯ ಮಣ್ಣು ಸಂಪೂರ್ಣ ತೆರವು ಮಾಡಲು ಈ ಹಿಂದೆಯೇ ಸೂಚನೆ ನೀಡಲಾಗಿದೆ. ಆದರೆ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ತಕ್ಷಣ ಕ್ರಮಕೈಗೊಳ್ಳಲು ಸೂಚನೆ ನೀಡಲಾಗುವುದು.
    -ಗಾಯತ್ರಿ ನಾಯಕ್
    ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts