More

    ರಣ ಬಿಸಿಲು, ಜನರು ಕಂಗಾಲು!

    ಬೆಳಗಾವಿ: ಗಡಿನಾಡಲ್ಲಿ ನೆತ್ತಿ ಸುಡುತ್ತಿರುವ ರಣ ಬಿಸಿಲಿಗೆ ಕೃಷಿಕರು, ಕೂಲಿಕಾರರು, ಬೀದಿ ವ್ಯಾಪಾರಸ್ಥರು ಹೈರಾಣಾಗುತ್ತಿದ್ದಾರೆ. ಇತ್ತ ಬೆಳಗಾವಿಯಲ್ಲಿ ಲೋಕಸಭಾ ಉಪ ಚುನಾವಣೆ ಭರಾಟೆ ಆರಂಭಗೊಂಡಿದೆ. ಆದರೆ, ವಿಪರೀತ ಬಿಸಿಲಿನ ಝಳದಿಂದಾಗಿ ಪ್ರಚಾರ ಕಾರ್ಯಕ್ಕೂ ಜನರು ಸಿಗದೆ ಪಕ್ಷಗಳ ನಾಯಕರನ್ನು ಹಾಗೂ ಅಭ್ಯರ್ಥಿಗಳನ್ನು ಕಂಗೆಡುವಂತೆ ಮಾಡಿದೆ.

    ಸತತ ಎರಡು ವರ್ಷದಿಂದ ಪ್ರವಾಹದ ಸುಳಿಗೆ ಸಿಲುಕಿ ನಲುಗಿದ್ದ ಜಿಲ್ಲೆಯಲ್ಲೀಗ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳಗ್ಗೆ 11 ಗಂಟೆಯ ಬಳಿಕ ಏರುತ್ತ ಹೋಗುವ ತಾಪ, ಮಧ್ಯಾಹ್ನದ ಹೊತ್ತಿಗೆ ಮನೆಯಿಂದ ಹೊರಬರಲು ಆಗದಷ್ಟು ಇಪರೀತವಾಗುತ್ತಿದೆ. ಈ ಅವಧಿಯಲ್ಲೇ ಉಪ ಚುನಾವಣೆಯೂ ಇರುವುದರಿಂದ ಜನರಷ್ಟೇ ಅಲ್ಲ, ರಾಜಕಾರಣಿಗಳೂ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಕೃಷಿಗೆ ತೊಡಕು: ಕಳೆದ ಎರಡು ದಿನಗಳಿಂದ ಬಿಸಿಲ ತಾಪ ಹೆಚ್ಚುತ್ತಿರುವುದರಿಂದ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕೃಷಿ ಚಟುವಟಿಕೆಗಳಿಗೆ ತೊಡಕು ಉಂಟಾಗಿದೆ. ಬಿಸಿಲ ಬೇಗೆ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಕೆಲಸದ ಸಮಯವನ್ನು ಬದಲಿಸಿಕೊಂಡಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಕೃಷಿ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇದೀಗ ಬೆಳಗ್ಗೆ 7ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ ಸಂಜೆ 4ರಿಂದ 7ರ ವರೆಗೆ ಕೆಲಸ ಮಾಡುತ್ತಿದ್ದಾರೆ. ಬಿಸಿಲು ಹೆಚ್ಚುತ್ತಿರುವುದರಿಂದ ಕೂಲಿಯನ್ನೂ ಹೆಚ್ಚು ಕೇಳುತ್ತಿರುವ ಕೆಲಸಗಾರರು 200ರಿಂದ 250 ರೂ. ಕೊಟ್ಟರಷ್ಟೇ ಬರುತ್ತಿದ್ದಾರೆ. ಇದರಿಂದ ನಮಗೂ ಇನ್ನಷ್ಟು ಆರ್ಥಿಕ ಹೊರೆಯಾಗಿದೆ ಎನ್ನುತ್ತಾರೆ ರೈತರಾದ ಬಸವರಾಜ ಎಸ್. ಮೊಡಲಗಿ, ಅಂಜನಪ್ಪ ಹಡಪದ.

    ಸಂಜೆ 4ರಿಂದ ರಾತ್ರಿ 8ರ ವರೆಗೆ ಪ್ರಚಾರ: ಅತಿಯಾದ ಬಿಸಿಲಿನಿಂದಾಗಿ ಉಪಚುನಾವಣೆ ಪ್ರಚಾರ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ನಿರೀಕ್ಷಿಸಿದಷ್ಟು ಜನರು ಪ್ರಚಾರ ಕಾರ್ಯಕ್ಕೆ ಆಗಮಿಸದ್ದರಿಂದ ಪಕ್ಷಗಳ ಅಭ್ಯರ್ಥಿಗಳು, ನಾಯಕರು ಬೆಳಗಿನ ಸಮಯದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಆದರೆ, ಈ ಸಮಯದಲ್ಲಿ ಹಳ್ಳಿಗಳಲ್ಲಿ ಜನರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವುದರಿಂದ ಮತಯಾಚನೆಗೆ ಕಷ್ಟವಾಗುತ್ತಿದೆ.

    ಈ ಇಕ್ಕಟ್ಟಿನಿಂದ ಪಾರಾಗಲು ಅಭ್ಯರ್ಥಿಗಳು ನಗರ, ಪಟ್ಟಣ ಪ್ರದೇಶಗಳನ್ನು ಹೊರತು ಪಡಿಸಿ ಹಳ್ಳಿಗಳಲ್ಲಿ ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ಪ್ರಚಾರ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು 4ರಿಂದ 5 ಬೃಹತ್ ಸಮಾವೇಶ ಆಯೋಜಿಸಲು ತೀರ್ಮಾನಿಸಿದ್ದರು. ಆದರೆ, ಬಿಸಿಲ ಕಾರಣದಿಂದ ಕೆಲ ಬೃಹತ್ ಸಮಾವೇಶ ಕೈಬಿಟ್ಟು ರ‌್ಯಾಲಿ ಹಾಗೂ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಾಗುತ್ತಿದೆ ಎಂದು ರಾಜಕೀಯ ಮುಖಂಡರು ತಿಳಿಸಿದ್ದಾರೆ.

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts