More

    ರಾಜಧರ್ಮ ರಾಜನೀತಿ: ಯುದ್ಧವು ಒಂದು ಜೀವನಕ್ರಮ, ಶೈಲಿ ಆಗಬಾರದು

    ರಾಜಧರ್ಮ ರಾಜನೀತಿ: ಯುದ್ಧವು ಒಂದು ಜೀವನಕ್ರಮ, ಶೈಲಿ ಆಗಬಾರದು

    ನಮ್ಮ ದೇಶದಲ್ಲಿ ಬೀಡಿ, ಸಿಗರೇಟು, ಗುಟ್ಕಾ, ಕಾಫಿ, ಟೀ, ಮೊದಲಾದವುಗಳ ಚಟ ಇರಲಿಲ್ಲ. ಮೊದಲು ಉಚಿತವಿತ್ತು, ಚಟ ಕಲಿಸಿ, ಆಮೇಲೆ ದಾಸ್ಯಕ್ಕೆ ತಳ್ಳಿದವರು ಐರೋಪ್ಯರು!

    ‘ಧೂಮಪಾನ ಪ್ರಾಣಾಪಾಯ’ ಎಂಬ ಅಡಿಟಿಪ್ಪಣಿ ಹಾಕಿಯೇ ಚಿತ್ರಗಳಲ್ಲಿ ಬೀಡಿ, ಸಿಗರೇಟು ಸೇದುವ ಮಾದರಿ, ‘ನವನಾಗರಿಕತೆಯನ್ನು’ ಪ್ರಚುರಿಸುತ್ತಾರೆ.

    ಭಾರತೀಯ ಸಂಸ್ಕೃತಿಯಲ್ಲಿ ಯುದ್ಧಕ್ಕೆ ಅನಿವಾರ್ಯ ರಕ್ಷಣೋಪಾಯ ಹಾಗೂ ಒಳ-ಹೊರ ಶತ್ರು ನಿಗ್ರಹಪೂರ್ವಕ, ಶಿಷ್ಟ ಪರಿಪಾಲನೆಗೆ, ಜೀವನಾವಶ್ಯಕ ವೃತ್ತಿಗಳ ರಕ್ಷಣೆಗೆ ಒಂದು ಉಪಕರಣ. ಸದಾ ಯುದ್ಧ, ಆಕ್ರಮಣ, ಹಿಂಸಾವಿಹಾರ, ಪರಹಿಂಸಾ ವಿನೋದ, ದುಷ್ಟ ವೈಭವೀಕರಣ-ಇವು ನಮ್ಮ ಸಂಸ್ಕೃತಿಗೆ ಬಾಹಿರ ಕಲ್ಪನೆಗಳು, ಜೀವನಧ್ಯೇಯ, ಶೈಲಿಗಳು. ಸನಾತನವೆಂಬ ನಮ್ಮ ದೇಶದ ಸಂಸ್ಕೃತಿಯ ಹೆಗ್ಗುರುತು, Unique ಎಂಬ ಶೀಲ ಇದುವೇ. ಈಗಿನ ಗೊಂದಲದ ಯುಗದಲ್ಲಿ ಇದನ್ನು ಮಂದಬುದ್ಧಿಯವರು ಮರೆತು ಇತರರನ್ನೂ ದಾರಿ ತಪ್ಪಿಸುತ್ತಿದ್ದಾರೆ. ಟಿ.ವಿ.ವಾಹಿನಿಗಳಲ್ಲಿ, ಚರ್ಚೆಗಳಲ್ಲಿ ಭಾಗವಹಿಸುವ, ಅಲ್ಲಿ ‘ಆಮದಾಗುವ’, ಅಪರಿಪಕ್ವ ವ್ಯಕ್ತಿಗಳು ದಿಕ್ಕಿಲ್ಲದೆ ಮಾತಾಡುವುದನ್ನು ಕಂಡಾಗ ಕರುಳು ಹಿಂಡುತ್ತದೆ.

    ಒಬ್ಬ ಕೇಳುತ್ತಾನೆ-‘ವಂದೇಮಾತರಂ ಒಪ್ಪದ, ಘೋಷಿಸದ ಮಾತ್ರದಿಂದ ಒಬ್ಬನು ದೇಶದ್ರೋಹಿಯಾಗುತ್ತಾನೆಯೇ?’ ಎಂದು. ಅದನ್ನು ಕಪಟಕ್ಕೆ ಒಪ್ಪಿದ ಮಾತ್ರದಿಂದಲೂ ಯಾರೂ ದೇಶಭಕ್ತರಾಗುವುದಿಲ್ಲ, ಎಂಬುದೂ ಇದೆ. ರಾಜಕೀಯ ಪಕ್ಷಗಳು ಭಯೋತ್ಪಾದಕರೊಡನೆ ಒಪ್ಪಂದ ಮಾಡಿಕೊಳ್ಳುತ್ತವೆ. ವೋಟುಬ್ಯಾಂಕುಗಳನ್ನು ಜಾತೀಯ ಅಲ್ಲದೆ ಮತೀಯ ಪುಂಡತನ ಸಮುದಾಯಗಳ ಆಧಾರದಲ್ಲೂ ಹಿಡಿಯುತ್ತವೆ. ಸತ್ಯ! ಈ ಓಲೈಕೆಯಲ್ಲಿ ಅಡಕವಾದುದೇನು? ಯುದ್ಧವನ್ನು- ಬಹಿರಂಗ, ಪ್ರಚ್ಛನ್ನ, ಗೆರಿಲ್ಲಾ, ಭಯೋತ್ಪಾದನೆಯ ನಾನಾ ವಿಧಗಳಲ್ಲಿ-ಒಪ್ಪಿದಂತಾಗುತ್ತದೆ ಎಂಬುದನ್ನು ಮರೆಸುತ್ತಾರೆ. ಅಲ್ಲಿ ಜಗತ್ತಿಗೆ ಅಪಾಯ ಇದೆ. ಇದನ್ನು ಸಾಕಷ್ಟು ವಿವರಿಸಿಯೂ ಮೂಲ ಎಳೆಗಳು ಕಾಣದಂತೆ ಹಲವು ಪಟ್ಟಭದ್ರರು ಗೊಂದಲ ಎಬ್ಬಿಸಿ, ಧೂಳೆಬ್ಬಿಸಿ, ಸತ್ಯಸೂರ್ಯನನ್ನು ಕೆಲ ಕಾಲ ಮರೆಮಾಸುತ್ತಾರೆ. ಆದುದರಿಂದ ಬೇರೊಂದು ಪ್ರಯತ್ನದಲ್ಲಿ ಬಿಡಿಸಲು ಯತ್ನಿಸುವುದು ಈಗ ತುರ್ತು ಅನಿವಾರ್ಯ.

    ಈಗಿನ ಕರೊನಾ ಸೋಂಕನ್ನು ಜಗತ್ತಿನ ಮೇಲೆ ಛೂಬಿಟ್ಟ ಕಮ್ಯುನಿಸ್ಟ್ ಚೀನಾ ನಂಬಿರುವುದು ಯುದ್ಧ ಜೀವನಶೈಲಿಯ ಅಸ್ತ್ರವನ್ನು! ಉದ್ದೇಶವೇನು? ಜಗತ್ತಿನ ಮೇಲೆ ಸ್ವಾಮ್ಯ ಸಂಪಾದಿಸಲು ‘ತಾನು ವಾಣಿಜ್ಯದಲ್ಲಿ, ಉತ್ಪಾದನೆಯಲ್ಲಿ, ರಫ್ತಿನಲ್ಲಿ, ಯುದ್ಧ ತಯಾರಿಯಲ್ಲಿ ಮೇಲುಗೈ ಸಾಧಿಸಬೇಕು. ಅಮೆರಿಕವನ್ನೂ, ಯುರೋಪ್ ರಾಷ್ಟ್ರಗಳನ್ನೂ ಹಿಂದಿಕ್ಕಬೇಕು. ಅದಕ್ಕಾಗಿ ಅವುಗಳನ್ನು ನಾಶ ಮಾಡಿಯಾದರೂ ಸರಿ, ತಾನು ಆಕ್ರಮಿಸಬೇಕು’ ಎಂಬುದು ಪ್ರಕಟ, ಅಜೆಂಡಾ, ಹೌದೆ?

    ಭಾರತೀಯ ಸಂಸ್ಕೃತಿಯ ಶ್ರದ್ಧಾಳು, ಶಾಂತಪ್ರಿಯ, ಸಾತ್ವಿಕ ಪ್ರತಿನಿಧಿಗಳು, ವ್ಯಾಸ-ವಾಲ್ಮೀಕಿಯರನ್ನು ಓದಿಕೊಂಡವರು, ನನ್ನಂಥವರು, ನಿಮ್ಮಂಥ ಓದುಗರು ಕೇಳುವ ಪ್ರಶ್ನೆ-‘ಈ ಕಾದಾಟ, ಈ ಅಹಮಿಕೆ, ಈ ಯುದ್ಧ ಮಾರಿ, ಜಗದಾಕ್ರಮಣಶೀಲತೆ ಇಲ್ಲದೆ ನೀವು ಬದುಕಲಾರಿರಾ? ಬದುಕುವುದಕ್ಕೆ ಯುದ್ಧ ಒಂದೇ ಮಾರ್ಗವೇ? ವ್ಯಾಪಾರ, ವಾಣಿಜ್ಯ ಉದ್ದಿಮೆಗಳಲ್ಲಿ ಪರಸ್ಪರ ಹೊಂದಾಣಿಕೆ ಸಾಧ್ಯವಿಲ್ಲವೇ? Cooperation-competition-ಯಾವುದು ಆಯ್ಕೆ?

    ಇದನ್ನೂ ಓದಿ: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಶಾಸಕರಿಂದಲೇ ವಿರೋಧ

    ಜಾನ್ ರಸ್ಕಿನ್ ಎಂಬ ವಿವೇಕಿ ಚಿಂತಕ, ಪಶ್ಚಿಮದ ಅರ್ಥನೀತಿಯ ಬುಡವನ್ನೇ ಅಲುಗಾಡಿಸುವಂತೆ, ಚಿಂತಿಸಿ, ಬರೆದ, ಗ್ರಂಥ-‘Unto this Last’-ಎಂಬುದರಲ್ಲಿ ನಮ್ಮ ಈ ನೀತಿಯನ್ನು ಪರೋಕ್ಷವಾಗಿ ಸಮರ್ಥಿಸುತ್ತಾನೆ. ಆಡಂ ಸ್ಮಿತ್, ಬೆಂಥಂ, ಜಾನ್ ಸ್ಟುಯೆರ್ಟ್ ಮಿಲ್, ಇಂಥವರು ಔದ್ಯೋಗೀಕರಣ ಕ್ರಾಂತಿಯ ಗ್ರಹಣ ಕಾಲದಲ್ಲಿ ಮಂಡಿಸಿದ ಅಪಾಯಕಾರಿ ವಿಚಾರಗಳನ್ನು, ಸಮರ್ಥಕರ ಬಾಯಿ ಮುಚ್ಚಿಸುವಂತೆ ಖಂಡಿಸಿದ್ದಾನೆ. ’The art of becoming rich, to the art of keeping your neighbour poor’ ಎಂಬುದು ಆಕ್ರಮಣಶೀಲ ವಾಣಿಜ್ಯದ ಉಸಿರು, ತಿರುಳು. ‘ನೆರೆಯವನನ್ನು ನೀನು ನಿರ್ಗತಿಕ ಮಾಡು, ನೀನೇ ಐಶ್ವರ್ಯವಂತನಾಗುತ್ತೀಯ’ ಎಂದು. ಹೇಗೆ? ಒಂದು ಊರಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಇಪ್ಪತ್ತು ಕೋಟಿ ರೂಪಾಯಿ ಹಣ ಇದ್ದರೆ, ಆಗ ಯಾರೂ ಇತರರಿಗಿಂತ ಧನಾಡ್ಯರಲ್ಲ. ಹೋಲಿಕೆಯಲ್ಲಿ-Relative comparissionನಲ್ಲಿ ಎಲ್ಲ ಆಗ ಬಡವರೇ! ಅದು ಬಿಟ್ಟು, ದರಿದ್ರ ಕಾಲದಲ್ಲಿ, ಒಬ್ಬನಲ್ಲಿ ಒಂದೇ ಪೈಸಾ ಇದ್ದು ಇತರರು ಭಿಕ್ಷುಕರಾದರೆ, ಆಗ ಒಂದು ಕಾಸಿನವನೇ ಧನಾಡ್ಯ! ಹೇಗಿದೆ? ಇಲ್ಲಿ ‘ನಿನ್ನಲ್ಲೇನಿದೆ?’ ಎಂಬುದು ಮುಖ್ಯವಲ್ಲ? ಇತರಲ್ಲೇನಿಲ್ಲ? ಎಂಬುದು ಮುಖ್ಯ. ಇದು Negative economy. ಇತ್ತೀಚೆಗೆ ನರೇಂದ್ರ ಮೋದಿಯವರು ‘ಭಾರತ ಸ್ವಾವಲಂಬನೆ’ ಬಗ್ಗೆ ಆಡಿದ್ದರ ಹೃದಯ, ಭಾರತೀಯ ಚಿಂತನಾಮೂಲದ ಹೃದಯದಂತಹ ಕರೆ. ಶಶಿ ತರೂರ್ ಇದನ್ನು ‘ಮೇಕ್ ಇನ್ ಇಂಡಿಯಾ ಎಂಬುದರ ಹಳೆಯರದ ರೂಪಾಂತರ’ ಎಂದು ಟೀಕಿಸಿದ್ದಾರೆ. ಹಳೆಯದೋ, ಹೊಸದೋ, ಇದು ಸಾಧುವೋ? ಅಸಾಧುವೋ? ಅಂತ ತರೂರ್ ಚಿಂತಿಸಲಿಲ್ಲ. ಅದು ವರ್ತಮಾನದ ಮಂಕ.

    ನಾನು ಪ್ರಾಧ್ಯಾಪಕನಾಗಿದ್ದಾಗ, ಕಾಲೇಜಿನಲ್ಲಿ ರಸ್ಕಿನ್, ಚಾಣಕ್ಯರ ಚಿಂತನೆಯನ್ನು ಕುರಿತು ನಾಲ್ಕಾರು ಉಪನ್ಯಾಸಗಳನ್ನು ಕೊಟ್ಟೆ. ಸಭೆಯಲ್ಲಿದ್ದ, ಸ್ವಂತಿಕೆಶೂನ್ಯ, ಅರ್ಥಶಾಸ್ತ್ರ ಬೋಧಕರೊಬ್ಬರು, ‘ಇದು Dismal economy’ ಮಂಕಿನ ಚಿಂತನೆ, ಕತ್ತಲೆಯ, ಅಂಧಕಾರ ವಿಚಾರ’ ಅಂತ ಟೀಕಿಸಿದರು. ನನ್ನ ಮರುಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ. ಅಬ್ಬರ, ಕಿರುಚಾಟದಿಂದ ಟಿ.ವಿ. ಚರ್ಚೆಗಳಲ್ಲಿ ಬಾಯಿ ಬಡಿಯುವುದಾಗುತ್ತದೆ ಹೊರತು, ಜ್ಞಾನ ಸಂಪಾದನೆಯಾಗದು. ಅದು ಅವಿವೇಕದ ಸ್ಪರ್ಧೆಯೇ!

    ನಮ್ಮ ದೇಶದಲ್ಲಿ ಬೀಡಿ, ಸಿಗರೇಟು, ಗುಟ್ಕಾ, ಕಾಫಿ, ಟೀ, ಮೊದಲಾದವುಗಳ ಚಟ ಇರಲಿಲ್ಲ. ಮೊದಲು ಉಚಿತವಿತ್ತು ಚಟ ಕಲಿಸಿ, ಆಮೇಲೆ ದಾಸ್ಯಕ್ಕೆ ತಳ್ಳಿದವರು ಐರೋಪ್ಯರು! ‘ಧೂಮಪಾನ ಪ್ರಾಣಾಪಾಯ’ ಎಂಬ ಅಡಿಟಿಪ್ಪಣಿ ಹಾಕಿಯೇ ಚಿತ್ರಗಳಲ್ಲಿ ಬೀಡಿ, ಸಿಗರೇಟು ಸೇದುವ ಮಾದರಿ, ‘ನವನಾಗರಿಕತೆಯನ್ನು’ ಪ್ರಚುರಿಸುತ್ತಾರೆ. ಪ್ಯಾಕುಗಳಲ್ಲಿ ಹಾಗೆ ಮುದ್ರಿಸಿದ ಮಾತ್ರದಿಂದ ಜನ ಚಟಮುಕ್ತರಾಗಿದ್ದಾರೆಯೇ? ಮದ್ಯ ಸೇವನೆಯೋ? ಬೇಡದ ಸುಖ ಸಾಧನಗಳನ್ನು, ಭೋಗವಸ್ತುಗಳನ್ನು ಎಗ್ಗಿಲ್ಲದೆ ಉತ್ಪಾದಿಸಿ, ಹಂಚಿ, ಹರಡಿ, ಸ್ವಾಮ್ಯ ಸಾಧಿಸುವ ಕುಟಿಲವಾಣಿಜ್ಯ ನೀತಿಗೆ ಚೀನಾ ಬದ್ಧವಾಗಿದೆ. ಅದೇ ಅಮೆರಿಕ, ಐರೋಪ್ಯರ ಹವಣಿಕೆ ಕೂಡ. ಮೂಲದಲ್ಲಿ ಐರೋಪ್ಯರು ಯುದ್ಧಶೀಲ-Waring Tribes-ಬುಡಕಟ್ಟಿನವರು. ಅವರನ್ನೇ ನಮ್ಮ ಭಾರತೀಯರು ಇಂದಿಗೂ ‘ಹೂಣ’ರೆಂದು ಕರೆಯುತ್ತಾರೆ. ಶ್ರೀಭಾಗವತದಲ್ಲೂ ಇವರ ಪ್ರಸ್ತಾಪ ಇದೆ. ಕಿರಾತರೆಂಬ ಚೀನಿಯರೂ ಯುದ್ಧಪ್ರಿಯ, ಯುದ್ಧಮಾರೀ ಉಪಾಸಕರೇ! ಶಾಂತಿ ಬೇಡದವರು. ಅವರು ಏನನ್ನೂ ತಿನ್ನುತ್ತಾರೆ. ಯಾರನ್ನೂ ಕೊಲ್ಲುತ್ತಾರೆ. ಪ್ರಾಣಿಗಳನ್ನು, ಹಾವು, ಹಲ್ಲಿ, ಇಲಿ, ಬೆಕ್ಕು, ನಾಯಿಗಳನ್ನು ಸುಲಭವಾಗಿ ಕೊಂದು ತಿನ್ನುವ ಪರಿಪಾಠದವರು, ಮನುಷ್ಯರನ್ನು ಬಿಟ್ಟಾರೆ?

    ಇದನ್ನೂ ಓದಿ: ಯುಎಸ್​ ಔಷಧ ತಯಾರಿಕಾ ಸಂಸ್ಥೆಯಿಂದ ಗುಡ್​ನ್ಯೂಸ್​: ಕೊವಿಡ್​ ಲಸಿಕೆ ಮೊದಲ ಪ್ರಯೋಗದಲ್ಲಿ ಪಾಸ್​ !

    ಅದು ಕರೊನಾ ಪ್ರಯೋಗದ ಅರ್ಥ. ಭಾರತದಲ್ಲಿ ಐದಾರು ಸಾವಿರ ವರ್ಷಗಳ ಹಿಂದೆ ಈ ಕುಟಿಲ ನೀತಿಯನ್ನು ಇಲ್ಲಿಗೆ ತಂದವರು-ಶಕುನಿ, ಅವನ ಗುರು ಕಣಿಕನೆಂಬ ಭಾರದ್ವಾಜ ಗೋತ್ರದ ಬ್ರಾಹ್ಮಣ. ಅದು ಶಂಬರನ ನೀತಿ. ಮಹಾಭಾರತದಲ್ಲಿ ಇದರ ನಿದರ್ಶನಕ್ಕೆ ಒಂದು ಕಥೆ ಆದಿಪರ್ವದಲ್ಲಿ ಹೀಗಿದೆ. ಒಂದು ಕಾಡಿನಲ್ಲಿ ನರಿ, ಹುಲಿ, ಇಲಿ, ತೋಳಗಳಂತೆ ಒಂದು ಮುಂಗಸಿಯೂ-ಪರಸ್ಪರ ವಿರುದ್ಧ, ಸಾಂಗತ್ಯ ರಹಿತ ಘಟಬಂಧನ ಮಾಡಿಕೊಂಡವು, ಒಂದು ಜಿಂಕೆಯನ್ನು ಹಿಡಿಯಲು. ನರಿ ಆ ಎಲ್ಲವನ್ನೂ ಸಂಘಟಿಸಿತ್ತು. ಹೇಗೆ? ಮಲಗಿದ್ದಾಗ ಜಿಂಕೆಯ ಕಾಲನ್ನು ಇಲಿ ಕಡಿದು ಹಾಕಿ, ಓಡದಂತೆ ಮಾಡಿತ್ತು. ಹುಲಿ ಕೊಂದಿತ್ತು. ನರಿ ಇವಕ್ಕೆ ‘ಸ್ನಾನ ಮಾಡಿ ಒಬ್ಬೊಬ್ಬರಾಗಿ ಬನ್ನಿ, ಮಡಿ, ಆಮೇಲೆ ತಿನ್ನೋಣ’ ಎನ್ನುತ್ತ ಕಾವಲಿಗೆ ಕೂತಿತ್ತು. ಮೊದಲು ಬಂದ ಹುಲಿಗೆ ನರಿ ಹೇಳಿತು-‘ಇಲಿ ನಿನ್ನನ್ನು ದೂಷಿಸಿತು, ನಾನಿಲ್ಲದಿದ್ದರೆ ಹುಲಿಗೆ ಆಹಾರವೆಲ್ಲಿ?’ ಎಂದು ಹಂಗಿಸಿತು’ ಎಂದಾಗ, ಹುಲಿಗೆ ಬೇಟೆ ವೈರಾಗ್ಯ ಬಂದು ಬೇರೆ ಮಾಂಸಕ್ಕೆ ಬೇಟೆಗೆ ಹೋಯಿತು. ಈಗ ಇಲಿ ಬಂದಾಗ, ಅದಕ್ಕೆ ನರಿ ಹೇಳಿತು, ‘ಮುಂಗುಸಿಯ ಮಾಂಸ ವಿಷ ಅಂತ ನಿನ್ನನ್ನೇ ತಿನ್ನಲು ಬರುತ್ತಿದೆ’ ಅಂತ. ಇಲಿ ಓಡಿಹೋಯಿತು. ತೋಳ ಬಂದಾಗ ನರಿ ಹೇಳಿತು, ‘ಹುಲಿಗೆ ಕೋಪ ಬಂದಿದೆ. ನಿನ್ನನ್ನು ತಿನ್ನಲು ಕುಟುಂಬಸಮೇತ ಬರುವುದಾಗಿ ಹೇಳಿ ಹೋಗಿದೆ. ಈಗ ಬರುತ್ತದೆ’ ಅಂತ. ತೋಳ ಭಯದಿಂದ ಓಡಿತು. ಮುಂಗುಸಿ ಬಂದಾಗ ನರಿ ಹೇಳಿತು-‘ಉಳಿದವರನ್ನೆಲ್ಲ ನನ್ನ ಬಾಹುಬಲದಿಂದ ಸೋಲಿಸಿ ಓಡಿಸಿ ಕಳುಹಿಸಿದ್ದೇನೆ, ನೀನೂ ನನ್ನನ್ನು ಗೆದ್ದು ತಿನ್ನು’ ಎಂದಾಗ ಹೆದರಿ ಮುಂಗುಸಿಯು ಓಡಿತು-ಎಂದು ಕಣಿಕನ ನೀತಿ (ಆದಿಪರ್ವ-139).

    ಚೀನಾ ಈಗ ಅಮೆರಿಕ, ಯುರೋಪು, ಪಾಕ್, ಇನ್ನಿತರ ಆಫ್ರಿಕಾ, ಅರಬ್ಬಿ ರಾಷ್ಟ್ರಗಳ ಮೇಲೆ ಸ್ವಾಮ್ಯ ಸಾಧಿಸಲು ಹೊರಟು, ಭಾರತವನ್ನೂ ನುಂಗಲು ಮಾಡಿರುವ ಯತ್ನ ಆ ನರಿಬುದ್ಧಿಯ ಮೋಸದ ಕಥೆ! ಯುದ್ಧವಿರಲಿ, ಮೋಸವೂ ಒಂದು ಜೀವನಶೈಲಿ ಆಗಬಹುದೆ? ಭಾರತವು ಇಲಿಯಲ್ಲ, ತೋಳವಲ್ಲ, ಮುಂಗುಸಿಯಲ್ಲ, ನರಿಯೂ, ಹುಲಿಯೂ ಅಲ್ಲ. ಭಾರತ ಒಂದು ಸಿಂಹ! ಇದರ ಗರ್ಜನೆಗೆ ಇತರ ಎಲ್ಲವೂ-ಇಲ್ಲಿನ ಪ್ರತಿಪಕ್ಷ ದ್ರೋಹಿಗಳೂ ಬಾಲ ಮುದುಡಿಕೊಂಡು ಓಡುತ್ತಾರೆ. ಆ ವಿಶ್ವಾಸ ನಮಗೆ ಕುದುರಬೇಕು. ಗುಲಾಮಗಿರಿಯ ಗ್ರಹಣ ಬಿಟ್ಟಾಗ, ಇಲ್ಲಿ ತಬ್ಲಿಘಿಗಳೂ, ಭಯೋತ್ಪಾದಕರೂ, ವಿರೋಧಿಗಳೂ ನಿಗ್ರಹಿತರಾಗುತ್ತಾರೆ. ‘ತತ್ತ್ವಮಸಿ’ ಅರ್ಥ ಅದೇ. ‘ನೀನು ಸಿಂಹ, ನರಿಯಲ್ಲ’ ಎಂದಾಗ ಮರುಳು ಮೀರಿ ಸಿಂಹ, ನೀರಿನಲ್ಲಿ ಮುಖ ನೋಡಿ, ನಿಜ ಅರಿಯಿತಂತೆ. ಶಾಂತಿಗೆ ಬದ್ಧ ದೇಶ ನಮ್ಮದು ಒಂದೇ! ಯುದ್ಧಕ್ಕೆ ಸಿದ್ಧ ಎಂಬುದು ಎರಡನೆಯ ಮಾತು. ಶಾಂತಿ, ಮೊದಲ ಮಾತು!

    (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts