More

    ವಿಆರ್​ಡಿಎಲ್ ಪ್ರಯೋಗಾಲಯ ಶೀಘ್ರ ಆರಂಭ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿಆರ್​ಡಿಎಲ್) ಸ್ಥಾಪನಾ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳುತ್ತಿರುವ ವಿಆರ್​ಡಿಎಲ್ ಪ್ರಯೋಗಾಲಯ ಬಹು ಉಪಯೋಗಿಯಾಗಿದ್ದು, ಕೋವಿಡ್ ವೈರಾಣು ಪತ್ತೆ ಪರೀಕ್ಷೆ ಜೊತೆಗೆ ಇತರ ಕಾಯಿಲೆ ಪತ್ತೆಗೂ ಈ ಪ್ರಯೋಗಾಲಯ ಬಳಕೆ ಮಾಡಬಹುದಾಗಿದೆ. ಪ್ರಯೋಗಾಲಯ ಸ್ಥಾಪನೆಯಿಂದ ಜಿಲ್ಲೆಯ ವೈದ್ಯಕೀಯ ಸೌಲಭ್ಯ ಉನ್ನತೀಕರಣಗೊಳ್ಳಲಿದೆ ಎಂದರು.

    ವಿಆರ್​ಡಿಎಲ್ ಪ್ರಯೋಗಾಲಯವನ್ನು ಅಂದಾಜು 1.3 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 25 ಚ.ಮೀ. ಜಾಗದಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ಲ್ಯಾಬರೋಟರಿ ಉಪಕರಣಗಳು ಒಂದೆರಡು ದಿನದಲ್ಲಿ ಜಿಲ್ಲೆಗೆ ಆಗಮಿಸಲಿದ್ದು, ಉಪಕರಣಗಳ ಜೋಡಣೆ ಕಾರ್ಯ ಕೈಗೊಂಡು ಸಾರ್ವಜನಿಕ ಸೇವೆಗೆ ತೆರವುಗೊಳಿಸಲಾಗುವುದು. ಈಗಾಗಲೇ ಲ್ಯಾಬರೋಟರಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯಕೀಯ ಮತ್ತು ಅರೆವೈದ್ಯಕೀಯ ಲ್ಯಾಬ್ ಟೆಕ್ನಿಷಿಯನ್ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಜಿಲ್ಲಾಸ್ಪತ್ರೆ ಮೈಕ್ರೋಬಯಾಲಾಜಿಸ್ಟ್ ಓರ್ವ ವೈದ್ಯರನ್ನು ಹಾಗೂ ಇಬ್ಬರು ಲ್ಯಾಬ್ ಟೆಕ್ನಿಷಿಯನ್​ಗಳನ್ನು ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಿ ತರಬೇತಿ ಕೊಡಿಸಲಾಗಿದೆ ಎಂದರು.

    ಮುನ್ನೆಚ್ಚರಿಕೆ ಕ್ರಮ: ಜುಲೈ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗಲಿವೆ ಎಂಬ ವರದಿಯ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಅಂದಾಜು 3,307 ಜನರಿಗೆ ಸೋಂಕು ಕಾಣಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ಸಂಖ್ಯೆಯಲ್ಲಿ ಸೋಂಕು ಕಾಣಿಸಿದರೂ ಇದನ್ನು ನಿಭಾಯಿಸಲು ಜಿಲ್ಲಾಡಳಿತ ಸಮರ್ಥವಾಗಿದೆ. ಈಗಾಗಲೇ 20 ಕೇಂದ್ರೀಕೃತ ಐಸಿಯು ವಾರ್ಡ್​ಗಳಿವೆ.

    14 ವೆಂಟಿಲೇಟರ್ ವ್ಯವಸ್ಥೆಯಿದೆ. ಆರು ವೆಂಟಿಲೇಟರ್ ಪೂರೈಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್ ಪ್ರಕರಣದಲ್ಲಿ ವೆಂಟಿಲೇಟರ್ ಬಳಕೆ ಕೊನೆಯ ಹಂತದ್ದಾಗಿದೆ. ಜಿಲ್ಲೆಯಲ್ಲಿ ಈವರೆಗೆ ವೆಂಟಿಲೇಟರ್ ಬಳಸುವ ಪ್ರಕರಣ ಉದ್ಭವಿಸಿಲ್ಲ. 50 ಬೆಡ್ ಹಾಸಿಗೆ ವ್ಯವಸ್ಥೆಯಿದೆ. ಹಿರೇಕೆರೂರ, ಸವಣೂರ, ಶಿಗ್ಗಾಂವಿ ತಾಲೂಕಿನಲ್ಲಿ 30 ಬೆಡ್ ಆಕ್ಸಿಜನ್ ವ್ಯವಸ್ಥೆಯಿರುವ ವಾರ್ಡ್​ಗಳು ಸಿದ್ಧವಾಗಿವೆ. ಜಿಲ್ಲೆಯಲ್ಲಿ ಒಟ್ಟಾರೆ 150 ಹಾಸಿಗೆ ಸೌಲಭ್ಯವಿದೆ. 250ರಿಂದ 500 ಕೇಸ್​ಗಳು ಬಂದರೂ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಕೋವಿಡ್ ಸಂದರ್ಭದಲ್ಲಿ ಈವರೆಗೆ ಜಿಲ್ಲೆಯ ವೈದ್ಯಕೀಯ ಸೌಕರ್ಯಗಳು ಉತ್ತಮಗೊಂಡಿವೆ. ಈಗಾಗಲೇ ಮನೆಮನೆ ಸರ್ವೆ, ಕ್ವಾರಂಟೈನ್ ಅವಧಿಗಳು ಮುಕ್ತಾಯ ಹಂತದಲ್ಲಿವೆ. ಈ ಹಂತದಲ್ಲಿ ಸೋಂಕು ಹೆಚ್ಚಾಗಿ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಜುಲೈನಲ್ಲಿ ನಮ್ಮಲ್ಲಿ ಸೋಂಕು ಹೆಚ್ಚಳವಾಗುವ ಲಕ್ಷಣಗಳಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಹೋಟೆಲ್, ಸರ್ಕಾರಿ ಸಮುದಾಯ ಭವನವನ್ನು ಕ್ವಾರಂಟೈನ್​ಗೆ ಗುರುತಿಸಿ ಕಾಯ್ದಿರಿಸಿಕೊಳ್ಳುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು.

    ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿದ್ದರು.

    ವೈದ್ಯಕೀಯ ಕಾಲೇಜ್​ಗೆ ಶಂಕುಸ್ಥಾಪನೆ: ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜ್​ಗೆ ಶೀಘ್ರವೇ ಶಂಕುಸ್ಥಾಪನೆ ಕಾರ್ಯ ಕೈಗೊಳ್ಳಲಾಗುವುದು. ಈಗಾಗಲೇ ಕಾಮಗಾರಿ ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ರೈಲ್ವೆ ಅಂಡರ್ ಪಾಸ್ ಹಾಗೂ ಜಮೀನು ಸ್ವಾಧೀನ ಸಮಸ್ಯೆಯನ್ನು ಸಭೆ ನಡೆಸಿ ಇತ್ಯರ್ಥ ಪಡಿಸಲಾಗಿದೆ. ವೈದ್ಯಕೀಯ ಕಾಲೇಜ್​ನ ಉಸ್ತುವಾರಿಗಾಗಿ ಈಗಾಗಲೇ ಸರ್ಕಾರ ಡಾ. ಮುಳಗುಂದ ಎಂಬುವರನ್ನು ನೇಮಿಸಿದೆ. ಕಾಲೇಜ್​ಗೆ ಅಗತ್ಯವಿರುವ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿಸಿದ್ದು, ಶೀಘ್ರವೇ ವೈದ್ಯಕೀಯ ಕಾಲೇಜ್​ನ ಎಲ್ಲ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದರು.

    ಹಾವೇರಿ ಜಿಲ್ಲೆ ಕರೊನಾ ಸೋಂಕು ಮುಕ್ತ: ಹಾವೇರಿ ಜಿಲ್ಲೆಯಲ್ಲಿ ಪತ್ತೆಯಾದ ಎಲ್ಲ 21 ಕರೊನಾ ಸೋಂಕಿತರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಹಾವೇರಿ ಈಗ ಕರೊನಾ ಮುಕ್ತ ಜಿಲ್ಲೆಯಾಗಿ ಮಾರ್ಪಟ್ಟಿದೆ.

    ಕರೊನಾ ಸೋಂಕಿನ ವಲಯದಲ್ಲಿ ಜಿಲ್ಲೆಯು ಶುಕ್ರವಾರದಿಂದ ಕೇಸರಿ ವಲಯದಿಂದ ಹಸಿರು ವಲಯಕ್ಕೆ ತಿರುಗಿದಂತಾಗಿದೆ. ಗುರುವಾರದವರೆಗೆ 14 ಜನರು ಗುಣವಾಗಿ ಬಿಡುಗಡೆಯಾಗಿದ್ದು, ಏಳು ಜನರು ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಉಳಿದ ಎಲ್ಲ ಏಳು ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಬಹುತೇಕ ಎಲ್ಲ ಸೋಂಕಿತರು ಮಹಾರಾಷ್ಟ್ರ ನಂಟು ಹೊಂದಿದವರೇ ಆಗಿದ್ದರು.

    ದೆಹಲಿ ಪ್ರಯಾಣ ಬೆಳೆಸಿದ್ದ ಜಿಲ್ಲೆಯ ರಾಣೆಬೆನ್ನೂರ ಮೂಲದ ವ್ಯಕ್ತಿಯೋರ್ವನಿಗೆ ಕರೊನಾ ಸೋಂಕು ತಗುಲಿರುವುದು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಆತನಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ವ್ಯಕ್ತಿಯನ್ನು ರಾಜ್ಯ ಆರೋಗ್ಯ ಇಲಾಖೆ ಹಾವೇರಿ ಜಿಲ್ಲೆಯವನು ಎಂದು ಪರಿಗಣಿಸಿದ್ದರಿಂದ ಆರೋಗ್ಯ ಇಲಾಖೆ ಬುಲೆಟಿನ್​ನಲ್ಲಿ ಜಿಲ್ಲೆಯಲ್ಲಿ 22 ಸೋಂಕಿತರು ಎಂಬ ಮಾಹಿತಿಯಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಎಲ್ಲರೂ ಗುಣವಾಗಿದ್ದಾರೆ.

    129 ಜನರ ಮಾದರಿ ಪರೀಕ್ಷೆಗೆ: ಕರೊನಾ ಲಕ್ಷಣಗಳ ಆಧಾರದ ಮೇಲೆ ಶುಕ್ರವಾರ 129 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಎಲ್ಲರ ವರದಿಗಳು ನೆಗೆಟಿವ್ ಬಂದಿವೆ ಎಂದು ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ. ಕರೊನಾ ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿರುವ 506 ಜನರನ್ನು ಕ್ವಾರಂಟೈನ್​ನಲ್ಲಿಟ್ಟು ನಿಗಾ ವಹಿಸಲಾಗಿದೆ. ಕರೊನಾ ಲಕ್ಷಣಗಳ ಆಧಾರದ ಮೇಲೆ ಈವರೆಗೆ ಒಟ್ಟು 8,201 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 8,131 ಜನರ ವರದಿ ನೆಗೆಟಿವ್ ಬಂದಿವೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts