More

    ಮತ ಹಾಕಿದರೆ ಮೂರು ದಿನದ ಕೂಲಿ!

    ಬೆಳಗಾವಿ: ಗ್ರಾಂ ಪಂಚಾಯಿತಿ ಚುನಾವಣೆ ಪ್ರಚಾರದ ಕಾವು ಗ್ರಾಮೀಣ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಏರುತ್ತಿದ್ದು, ಉದ್ಯೋಗಕ್ಕಾಗಿ ಪರ ಊರುಗಳಿಗೆ ಗುಳೆ ಹೋಗಿರುವ ಮತದಾರರನ್ನು ಕರೆತರಲು ಅಭ್ಯರ್ಥಿಗಳು ಕಸರತ್ತು ಆರಂಭಿಸಿದ್ದಾರೆ.

    ಜಿಲ್ಲೆಯ 477 ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣದಲ್ಲಿ ಕೂಲಿ ಕಾರ್ಮಿಕರಿದ್ದು, ಅವರೆಲ್ಲ ಜೀವನ ನಿರ್ವಹಣೆಗೆ ನೆರೆಯ ಗೋವಾ, ಮಹಾರಾಷ್ಟ್ರ , ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ. ಇದೀಗ ಅವರನ್ನೆಲ್ಲ ಮತದಾನ ದಿನದಂದು ಕರೆತರಲು ಅವರವರ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದಾರೆ. ಅವರ ಪ್ರಯಾಣ ವೆಚ್ಚ ಭರಿಸಲು ಸಿದ್ಧರಿರುವ ಅಭ್ಯರ್ಥಿಗಳು, ಪರ ಊರುಗಳಲ್ಲಿರುವ ವಲಸೆ ಮತದಾರರನ್ನು ಕರೆತರಲು ವಾಹನ ವ್ಯವಸ್ಥೆಗೂ ಮುಂದಾಗಿದ್ದಾರೆ.

    ವಾಹನಗಳ ಬುಕ್ಕಿಂಗ್: ಕೋವಿಡ್-19

    ಲಾಕ್‌ಡೌನ್ ಮುಗಿದ ಬಳಿಕ ರಾಮದುರ್ಗ, ಸವದತ್ತಿ, ಗೋಕಾಕ, ಅಥಣಿ, ಬೈಲಹೊಂಗಲ, ಕಿತ್ತೂರು ತಾಲೂಕು ವ್ಯಾಪ್ತಿಯಲ್ಲಿ 250ಕ್ಕೂ ಅಧಿಕ ಹಳ್ಳಿಗಳಲ್ಲಿನ ಮತದಾರರು, ಸರ್ಕಾರಿ ಮತ್ತು ವಿವಿಧ ಖಾಸಗಿ ಕಂಪನಿಗಳ ನೌಕರರು ವಾಪಸ್ ಪರ ಊರುಗಳಿಗೆ ಹೋಗಿದ್ದಾರೆ. ನೂರಾರು ಕೂಲಿ ಕಾರ್ಮಿಕರ ಕುಟುಂಬಗಳು ಗುಳೆ ಹೋಗಿದ್ದು, ಮತದಾನದ ದಿನದಂದು ಆಗಮಿಸಿ ಮತ ಹಾಕಿದರೆ ಮೂರು ದಿನದ ಕೂಲಿ ನೀಡುವ ಭರವಸೆಯನ್ನೂ ಕೆಲ ಅಭ್ಯರ್ಥಿಗಳು ನೀಡಿದ್ದಾರೆ. ಇನ್ನು, ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ನೌಕರರು ಮತದಾನ ಮಾಡಲು ಬರಲೆಂದು ಅವರಿಗಾಗಿ ಈಗಾಗಲೇ ವಾಹನ ಬುಕ್ಕಿಂಗ್ ಕೆಲಸ ಆರಂಭಿಸಿದ್ದಾರೆ.

    ವಾರ್ಡ್‌ಗಳಲ್ಲಿ ಬಾಡೂಟ ಹವಾ

    ಗ್ರಾಪಂ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಬಾಡೂಟ ವ್ಯವಸ್ಥೆ ಮಾಡುತ್ತಿದ್ದಾರೆ. ಕೆಲ ಅಭ್ಯರ್ಥಿಗಳು ಡಾಬಾ ಮತ್ತು ಮಾಂಸಾಹಾರಿ ಹೋಟೆಲ್‌ಗಳಲ್ಲಿ ಕೂಪನ್ ವ್ಯವಸ್ಥೆ ಮಾಡಿದ್ದು, ಮತದಾನದ ಒಳಗಾಗಿ ಒಮ್ಮೆ ಊಟ ಮಾಡಬಹುದು. ಸಸ್ಯಾಹಾರಿಗಳಿಗೆ ಪ್ರತ್ಯೇಕವಾಗಿ ವಾರ್ಡ್ ಗಳಲ್ಲಿಯೇ ಸಾಮೂಹಿಕವಾಗಿ ಊಟ ಹಾಕಿಸಲಾಗುತ್ತಿದೆ ಎಂದು ರಾಯಬಾಗ, ರಾಮದುರ್ಗ ತಾಲೂಕಿನ ವಿವಿಧ ಗ್ರಾಮಸ್ಥರು ತಿಳಿಸಿದ್ದಾರೆ.

    ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮತದಾನದ ದಿನ ಊರಿಗೆ ಬರುವಂತೆ ವಿನಂತಿಸಿದ್ದಾರೆ. 10 ರಿಂದ 15 ಜನರು ಒಟ್ಟಿಗೆ ಬಂದರೆ ವಾಹನ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದ್ದಾರೆ. ಬಸ್ ಮೂಲಕ ಬಂದರೆ ಸಾರಿಗೆ ವೆಚ್ಚದ ಜತೆ 3 ದಿನದ ಕೂಲಿ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಇದೀಗ ಆರಂಭವಾಗಿದ್ದು, ಕೆಲಸ ಬಿಟ್ಟು ಊರಿಗೆ ಹೋಗುವುದು ಕಷ್ಟವಾಗಲಿದೆ.
    | ಮಾರುತಿ ಭಜಂತ್ರಿ, ರಾಮಪ್ಪ ಮಾದರ ಪರ ಊರಿನಲ್ಲಿರುವ ರಾಮದುರ್ಗ ತಾಲೂಕು ನಿವಾಸಿಗರು

    ಹಳ್ಳಿ ಜನರು ಉದ್ಯೋಗ ಹುಡುಕಿಕೊಂಡು ಪರ ಊರುಗಳಿಗೆ ಹೋಗಿದ್ದಾರೆ. ಅವರನ್ನು ಕರೆತರಲು ಅಭ್ಯರ್ಥಿಗಳು ಪ್ರಯತ್ನಿಸುತ್ತಿರುವುದು ನಿಜ. ಆದರೆ, ಮತದಾರರು ಸ್ವಯಂ ಪ್ರೇರಣೆಯಿಂದ ಬಂದು ಮತ ಚಲಾಯಿಸಬೇಕು. ಹಣ, ಸೌಲಭ್ಯ ಮತ್ತಿತರ ಆಮಿಷಕ್ಕೆ ಒಳಗಾಗಿ ಮತದಾನ ಮಾಡುವುದು ಸರಿಯಲ್ಲ.
    | ಶಿವನಗೌಡ ಎಸ್.ಪಾಟೀಲ ಗ್ರಾಪಂ ಮಾಜಿ ಸದಸ್ಯ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts