More

    ದೇಶ ವಿಭಜನೆ ಹೇಳಿಕೆ ಹಿಂದಿದೆ ವೋಟ್‌ಬ್ಯಾಂಕ್ ರಾಜಕಾರಣ

    ಚಿಕ್ಕಮಗಳೂರು: ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ.ಸುರೇಶ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಕಾಂಗ್ರೆಸ್ ನಾಯಕರು ಅಖಂಡ ಭಾರತ ಪ್ರತಿಷ್ಠಾಪಿಸುವ ಬದಲು ದೇಶವನ್ನು ವಿಭಜನೆ ಮಾಡುವ ಮೂಲಕ ಅವರ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
    ಸ್ವಾತಂತ್ರೃ ಬಂದಾಗಿನಿಂದಲೂ ಕಾಂಗ್ರೆಸ್ ದೇಶವನ್ನು ವಿಭಜನೆ ಹಾದಿಯಲ್ಲೇ ಕೊಂಡೊಯ್ಯುತ್ತಿದೆ. ಕಾಂಗ್ರೆಸ್ ನಾಯಕರ ಹೇಳಿಕೆ ಗಮನಿಸಿದರೆ ಅವರು ಎಂದಿಗೂ ದೇಶ ಒಗ್ಗೂಡಿಸುವ ಕೆಲಸ ಮಾಡಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಾವು ಹೇಳಬೇಕಾದ್ದನ್ನು ಅವರ ತಮ್ಮನ ಬಾಯಿಂದ ಹೇಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತನ್ನ ಸಹೋದರನ ಹೇಳಿಕೆಯ ಹೊಣೆ ಹೊತ್ತು ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ವಿಭಜನೆಯ ಧೋರಣೆ ಹೆಚ್ಚಿನ ದಿನ ನಡೆಯುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರೇ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
    ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಖಂಡಿಸುತ್ತದೆ. ಜತೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಇವರನ್ನ ತಿರಸ್ಕರಿಸಬೇಕು. ರಾಮನಗರವನ್ನು ಒಡೆಯಲು ಹೋಗಿದ್ದವರು ಈಗ ದೇಶವನ್ನು ಒಡೆಯಲು ಮುಂದಾಗಿದ್ದಾರೆ. ಈ ಹೇಳಿಕೆ ಬಾಯಿ ತಪ್ಪಿನಿಂದ ಬಂದಿರುವುದಲ್ಲ. ಬದಲಿಗೆ ಪೂರ್ವ ನಿಯೋಜಿತ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮುರುಡಪ್ಪ, ಮಾಜಿ ಎಂಎಲ್‌ಸಿ ಕ್ಯಾ. ಗಣೇಶ್ ಕಾರ್ಣಿಕ್, ಪ್ರಮುಖರಾದ ದೀಪಕ್ ದೊಡ್ಡಯ್ಯ, ಅಂಬಿಕಾ ರಾಯ್ಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts