More

    ಲಕ್ಷಾಂತರ ಭಕ್ತರ ವಿಠ್ಠಲ-ರುಕ್ಮಿಣಿ ದರ್ಶನ

    ಉಮದಿ (ಮಹಾರಾಷ್ಟ್ರ): ನಗರದ ಎಲ್ಲೆಲ್ಲೂ ಲಕ್ಷಾಂತರ ಭಕ್ತರಿಂದ ಜೈ ಹರಿ ವಿಠ್ಠಲ, ಶ್ರೀ ಹರಿ ವಿಠ್ಠಲ, ಬೋಲಾ ಪುಂಢಲೀಕ ವರದೇಹರಿ ವಿಠ್ಠಲ, ಶ್ರೀ ಜ್ಞಾನದೇವ ತುಕಾರಾಮ ಮಹಾರಾಜಕೀ ಜೈ ಎಂಬ ಉದ್ಘೋಷ..! ಅಬಾಲವೃದ್ಧರಾದಿಯಾಗಿ ಹರಿನಾಮದ ಸ್ಮರಣೆಯಲ್ಲಿ ತಲ್ಲೀನರಾಗಿರುವ ಮನಮೋಹಕ ದೃಶ್ಯ…!

    ಇದು ಭೂವೈಕುಂಠ ಪಂಢರಪುರದಲ್ಲಿ ಗುರುವಾರ ಕಂಡು ಬಂದ ಸನ್ನಿವೇಶ. ಶ್ರೀ ವಿಠ್ಠಲ-ರುಕ್ಮಿಣಿ ದೇವರ ಕಾರ್ತಿಕ (ಪ್ರಭೋದಿನಿ) ಏಕಾದಶಿ ಯಾತ್ರೆಯ ನಿಮಿತ್ತ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳಿಂದ ನೂರಾರು ಮೈಲಿಗಿಂತಲೂ ದೂರದಿಂದ ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಆಗಮಿಸಿದ್ದ ನಾಲ್ಕು ಲಕ್ಷಕ್ಕೂ ಅಧಿಕ ವೈಷ್ಣವ ಭಕ್ತರಲ್ಲಿ ಕೆಲವರು ಧರ್ಮದರ್ಶನ ಸಾಲಿನ ಮೂಲಕ ವಿಠ್ಠಲ-ರುಕ್ಮಿಣಿಯ ದರ್ಶನ ಪಡೆದರೆ, ಇನ್ನು ಕೆಲವರು ಪಂಢರಿನಾಥನ ಶಿಖರ ದರ್ಶನ ಪಡೆಯುತ್ತಿರುವುದು ಕಂಡುಬಂತು. ಹಲವು ಭಕ್ತರು ಮಂದಿರ ಪರಿಸರದಲ್ಲಿ ದೀರ್ಘದಂಡ ನಮಸ್ಕಾರಗಳನ್ನು ಹಾಕುವ ಮೂಲಕ ದೇವರಿಗೆ ಭಕ್ತಿಯಿಂದ ನಮಿಸಿ ಶರಣಾಗುವುದು ಕಂಡುಬಂತು. ಪಂಢರಿನಾಥನ ಈ ಭೂವೈಕುಂಠಕ್ಕೆ ಬಂದರೆ ಸಾಕು ಇಲ್ಲಿ ಸಂತರ ದರ್ಶನ ಪಡೆಯುವುದೇ ಭಾಗ್ಯ ಎನ್ನುತ್ತಾರೆ ಭಕ್ತ ಕೃಷ್ಣಾಜಿ ಯಾದವ.

    ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು

    ಕರ್ನಾಟಕ ಮಹಾರಾಷ್ಟ್ರ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಂದ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ವೈಷ್ಣವ ಭಕ್ತರು ಪಂಢರಪುರಕ್ಕೆ ಪ್ರಭೋದಿನಿ ಏಕಾದಶಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಬಂದ ಭಕ್ತರಿಗೆ ಹಾಗೂ ಧರ್ಮ ದರ್ಶನದ ಸಾಲಿನಲ್ಲಿ ನಿಂತ ಭಕ್ತರಿಗೆ ಸ್ವಯಂ ಪ್ರೇರಿತರಾಗಿ ವಿವಿಧ ಸಂಘ-ಸಂಸ್ಥೆಗಳಿಂದ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಭಕ್ತರು ಪಂಢರಿನಗರದಕ್ಕೆ ಬಂದು ಚಂದ್ರಭಾಗಾ (ಭೀಮಾ) ನದಿಯಲ್ಲಿ ಪುಣ್ಯಸ್ನಾನ ಮಾಡಿ, ಗಂಗಾಮಾತೆಗೆ ಬಾಗಿನ ಅರ್ಪಿಸಿ, ನಂತರ ದೇವರ ಪೂಜೆಗೆ ಆಗಮಿಸುವುದು ಕಂಡುಬಂತು. ಜಿಲ್ಲಾಡಳಿತ ನದಿ ತೀರದಲ್ಲಿಯೂ ಸಕಲ ವ್ಯವಸ್ಥೆಯನ್ನು ಮಾಡಿತ್ತು.

    ಸರ್ಕಾರಿ ಮಹಾಪೂಜೆ

    ಕಾರ್ತಿಕ (ಪ್ರಭೋದಿನಿ) ಏಕಾದಶಿ ನಿಮಿತ್ತ ಶ್ರೀ ವಿಠ್ಠಲ -ರುಕ್ಷ್ಮೀಣಿ ದೇವರ ಸರ್ಕಾರಿ ಮಹಾ ಪೂಜೆಯನ್ನು ಮಹಾರಾಷ್ಟ್ರ ರಾಜ್ಯದ ಉಪ ಮುಖ್ಯಮಂತ್ರಿ ದೇವೆಂದ್ರ ಫಢ್ನವಿಸ್ ದಂಪತಿ ನೆರವೇರಿಸಿದರು.

    ಪ್ರತಿವರ್ಷದಂತೆ ಈ ವರ್ಷ ಪ್ರಥಮ ವಾರಕಾರಿ ಎಂದು ನಾಸಿಕ್ ಜಿಲ್ಲೆಯ ಮಾಳೆ ದುಮಾಲಾ ಗ್ರಾಮದ ವತ್ಸಲಾ ಬಬನ್ ಧುಗೆ ದಂಪತಿಯನ್ನು ಗುರುತಿಸಿ ಸರಕಾರಿ ಮಹಾಪೂಜೆಯಲ್ಲಿ ಪಾಲ್ಗೊಳುವ ಅವಕಾಶ ಮಾಡಲಾಗಿತ್ತು.ಶಾಸಕರಾದ ಚಂದ್ರಕಾಂತ ಪಾಟೀಲ, ಸುರೇಶ ಖಾಡೆ, ಜಿಲ್ಲಾಧಿಕಾರಿ ಕುಮಾರ ಆರ್ಶೀವಾದ, ಮಂದಿರ ಸಮಿತಿಯ ಪದಾಧಿಕಾರಿಗಳು ಮಹಾ ಪೂಜೆಯಲ್ಲಿ ಭಾಗವಹಿಸಿದ್ದರು.

    ಸರ್ಕಾರಿ ಮಹಾಪೂಜೆ ವಾರಕರಿ ಸಂಪ್ರದಾಯದ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜ್ಯದ ಎಲ್ಲ ಜನತೆಗೆ ಸುಖ ಸಮೃದ್ಧಿ ದಯಪಾಲಿಸಲಿ ಹಾಗೂ ಮಳೆಯ ಅಭಾವದಿಂದ ಚಿಂತಾಗ್ರಸ್ಥರಾದ ರೈತರಿಗೆ ಧೈರ್ಯ ನೀಡಲಿ. ಮುಂಬರುವ ದಿನಗಳಲ್ಲಿ ರೈತರಿಗೆ ಒಳ್ಳೆಯ ದಿನಗಳು ಬರಲಿ ಎಂದು ಶ್ರೀ ಪಾಂಡುರಂಗನಲ್ಲಿ ಬೇಡಿಕೊಂಡಿರುವುದಾಗಿ ಹೇಳಿದ ಅವರು, ಮರಾಠಾ ಬಂಧವರ ಮರಾಠಾ ಮೀಸಲಾತಿ ಬೇಡಿಕೆಯನ್ನು ಶೀಘ್ರದಲ್ಲಿಯೇ ಬಗೆಹರಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts