More

    ವಿಸ್ಟಾಡೋಮ್‌ನಲ್ಲಿ ಪಶ್ಚಿಮಘಟ್ಟ ಸೌಂದರ್ಯ ಕಣ್ತುಂಬಿಕೊಳ್ಳಿ!

    ಮಂಗಳೂರು/ಹಾಸನ: ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ ಮಾರ್ಗದ ಹಗಲು ರೈಲುಗಳ ಪ್ರಯಾಣಿಕರು ಜುಲೈ 7ರಿಂದ ಪಶ್ಚಿಮ ಘಟ್ಟದ ಸೌಂದರ್ಯವನ್ನು ರೈಲಿನಲ್ಲಿ ಕುಳಿತು ಕಣ್ತುಂಬಿಕೊಳ್ಳಬಹುದು. ಇದಕ್ಕಾಗಿ ನೈಋತ್ಯ ರೈಲ್ವೆ 2 ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸಲು ಮುಂದಾಗಿದ್ದು, ಬುಕ್ಕಿಂಗ್ ಜು.3ರಂದು ಪ್ರಾರಂಭವಾಗಲಿದೆ.

    ನೈಋತ್ಯ ರೈಲ್ವೆ ಮಾಹಿತಿ ಪ್ರಕಾರ ವಾರಕ್ಕೆ ಮೂರು ದಿನ ಸಂಚರಿಸುವ (ರೈಲು ಸಂಖ್ಯೆ 06211/06212) ಯಶವಂತಪುರ- ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಜು.7ರಿಂದ ಯಶವಂತಪುರದಿಂದ ಮತ್ತು 8ರಿಂದ ಮಂಗಳೂರು ಜಂಕ್ಷನ್‌ನಿಂದ ವಿಸ್ಟಾಡೋಮ್ ಬೋಗಿಯನ್ನು ಪಡೆಯಲಿದೆ. ವಾರಕ್ಕೆ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಜು.8ರಿಂದ ಯಶವಂತಪುರದಿಂದ ಮತ್ತು 9ರಿಂದ ಮಂಗಳೂರು ಜಂಕ್ಷನ್‌ನಿಂದ ಹೊಸ ಬೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಿದೆ.

    ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ನಡುವೆ (ರೈಲು ಸಂಖ್ಯೆ 06539/06540) ಸಾಪ್ತಾಹಿಕ ವಿಶೇಷ ರೈಲು ಜು.10ರಂದು ಯಶವಂತಪುರದಿಂದ ಮತ್ತು 11ರಿಂದ ಮಂಗಳೂರು ಜಂಕ್ಷನ್‌ನಿಂದ ವಿಸ್ಟಾಡೋಮ್ ಬೋಗಿಗಳನ್ನು ಎಳೆದುತರಲಿದೆ. ಇದಕ್ಕಾಗಿ ರೈಲುಗಳಲ್ಲಿ ಈಗಿರುವ ಒಂದು ಸಾಮಾನ್ಯ ಸೆಕೆಂಡ್ ಕ್ಲಾಸ್ ಬೋಗಿಯನ್ನು ಕೈಬಿಡಲಾಗುತ್ತದೆ.

    ಸರ್ಕಸ್‌ಗೆ ಬ್ರೇಕ್: ಈವರೆಗೆ ಪಶ್ಚಿಮಘಟ್ಟ ವ್ಯಾಪ್ತಿಯ ಕಡಿದಾದ ಮಾರ್ಗದಲ್ಲಿ ಚಲಿಸುವ ರೈಲಿನ ಕಿಟಕಿ, ಬೋಗಿಗಳಲ್ಲಿ ತಲೆ ಹೊರಗೆ ಹಾಕಿ, ಕ್ಯಾಮರಾ ಆಚೆಗೆ ಇರಿಸಿ ನದಿ-ತೊರೆಗಳು, ಹಸಿರು ಬೆಟ್ಟಗಳನ್ನು ಮುತ್ತಿಕ್ಕುವ ಮೋಡಗಳ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದ ಪ್ರಯಾಣಿಕರು ಇನ್ನು ಆರಾಮದಾಯಕ ರೆಕ್ಲೈನರ್ ಸೀಟುಗಳಲ್ಲಿ ಕುಳಿತು ಪಶ್ಚಿಮ ಘಟ್ಟ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

    ಬೋಗಿಯ ಮೇಲೆ ಹಾರುವ ಮೋಡಗಳನ್ನು, ಹಸಿರು ಕಾಡು, ಸೇತುವೆ ಕೆಳಗೆ ರಭಸವಾಗಿ ಹರಿಯುವ ನದಿಯ ಮೋಹಕತೆಯನ್ನು ಕಣ್ತುಂಬಿಕೊಳ್ಳಬಹುದು. ಎಲ್ಲಕ್ಕಿಂತಲೂ ಹಗಲಿನಲ್ಲಿ ದಿಢೀರನೆ ಸುರಂಗದೊಳಗೆ ನುಗ್ಗುವ ರೈಲನ್ನು ನುಂಗುವ ಕಡುಗತ್ತಲೆಯ ರೋಮಾಂಚಕ ಅನುಭವ ತಮ್ಮದಾಗಿಸಿಕೊಳ್ಳಬಹುದು.
    ಫೆಬ್ರವರಿಯಲ್ಲಿಯೇ ಹಾಸನ-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸುವ ಉದ್ದೇಶವನ್ನು ನೈಋತ್ಯ ರೈಲ್ವೆ ಹೊಂದಿತ್ತು. ಆದರೆ, ಕೋವಿಡ್ 2ನೇ ಅಲೆಯ ಹೊಡೆತದಿಂದ ರೈಲುಗಳ ಸಂಚಾರ ವ್ಯತ್ಯಯವಾಗಿದ್ದರಿಂದ ಈಗ ಯೋಜನೆ ಕಾರ್ಯಗತವಾಗುತ್ತಿದೆ.

    ಬೋಗಿಯಲ್ಲೇನಿರುತ್ತದೆ?: ವಿಸ್ಟಾಡೋಮ್ ಬೋಗಿಗಳು ಪಾರದರ್ಶಕ ಸೀಲಿಂಗ್, ವಿಶಾಲ ಕಿಟಕಿಗಳನ್ನು ಹೊಂದಿರುತ್ತವೆ. 80 ಡಿಗ್ರಿ ತಿರುಗುವ ರೆಕ್ಲೈನರ್ ಆಸನಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ರೈಲಿನ ಒಳಗೆ ಸುರಕ್ಷಿತವಾಗಿ ಕುಳಿತಿದ್ದರೂ ಹೊರಗಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

    ಗರಿಗೆದರಲಿದೆ ಪ್ರಕೃತಿ ಪ್ರವಾಸೋದ್ಯಮ: ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ ರೈಲು ಮಾರ್ಗ ಪ್ರಕೃತಿಪ್ರಿಯರಿಗೆ ಯಾವಾಗಲೂ ಕುತೂಹಲದ ಕೇಂದ್ರಬಿಂದುವೇ ಆಗಿದೆ. ಸಾಕಷ್ಟು ಜನರು ಈ ಮಾರ್ಗದಲ್ಲಿ ಪ್ರಯಾಣಿಸುವ ಅನುಭವಕ್ಕಾಗಿಯೇ ರೈಲು ಹತ್ತುತ್ತಾರೆ. ವಿಸ್ಟಾಡೋಮ್ ಬೋಗಿ ಅಳವಡಿಕೆಯಿಂದ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವ ನಿರೀಕ್ಷೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts