ವಿರೋಧಿಗಳ ಸದ್ದಡಗಿಸುವ ಹುನ್ನಾರದ ಹಿಂದೆ…

| ಚಕ್ರವರ್ತಿ ಸೂಲಿಬೆಲೆ

ಇಂಟರ್​ನೆಟ್​ನ ಕ್ರಾಂತಿಯೊಂದಿಗೆ ನ್ಯೂಸ್ ಮತ್ತು ಫೇಕ್​ನ್ಯೂಸ್​ಗಳು ಸಮ-ಸಮಕ್ಕೆ ಬೆಳೆದುನಿಂತಿವೆ. ಹಾಗಂತ ಫೇಕ್​ನ್ಯೂಸ್​ಗಳು ಇಂಟರ್​ನೆಟ್ಟಿನದ್ದೇ ಕೊಡುಗೆ ಎಂದೇನಿಲ್ಲ. ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ನಂತರ, ದಶಕಗಳಷ್ಟು ಕಾಲ ಎಡಪಂಥೀಯರು ಹೇಳಿಕೊಂಡು ಬಂದದ್ದು ಸುಳ್ಳೆಂಬುದನ್ನು ಸಾಬೀತುಪಡಿಸಲು ಸಾಧ್ಯವಾಯಿತು.

ಮಹೇಶ್ ವಿಕ್ರಂ ಹೆಗ್ಡೆಯ ಬಂಧನವಾಗಿ ಒಂದು ವಾರವೇ ಕಳೆದುಹೋಯಿತು. ಜೈನ ಮುನಿಯೋರ್ವರ ಕುರಿತಂತೆ ಆತ ಮಾಡಿದ ಟ್ವೀಟನ್ನು ಸಮಾಜ ಕಂಟಕವೆಂದು ನಿರ್ಣಯಿಸಿ ರಾಜ್ಯ ಸರ್ಕಾರ ಅವರನ್ನು ಬಂಧನದಲ್ಲಿಟ್ಟಿದೆ. ಒಂದು ಟ್ವೀಟಿಗೆ ಇಷ್ಟು ಕಠಿಣ ಪ್ರತಿಕ್ರಿಯೆಯನ್ನು ನೀಡುವ ಅಗತ್ಯ ಮುಖ್ಯಮಂತ್ರಿಗಳಿಗೆ ಬಂದಿತಾದರೂ ಏಕೆ ಎಂಬುದೇ ದೊಡ್ಡ ಪ್ರಶ್ನೆ! ರಾಮನನ್ನು ಮತ್ತು ಹಿಂದೂ ಸಂಪ್ರದಾಯವನ್ನು ಸತತವಾಗಿ ನಿಂದಿಸುತ್ತಲೇ ಬಂದ ಭಗವಾನರ ವಿರುದ್ಧ ಏನೂ ಮಾಡದ ಸರ್ಕಾರ, ಯೋಗಿ ಆದಿತ್ಯನಾಥರ ಕುರಿತಂತೆ ಸುಳ್ಳು, ಅಶ್ಲೀಲ ಚಿತ್ರಗಳನ್ನು ಪ್ರಕಟಿಸಿದ ಪ್ರಭಾ ಬೆಳವಂಗಲ ಮೇಲೆ 20 ಕೇಸುಗಳಿದ್ದರೂ ತಲೆಕೆಡಿಸಿಕೊಳ್ಳದ ಸರ್ಕಾರ ಮಹೇಶರನ್ನು ಒಂದೇ ಒಂದು ಕಂಪ್ಲೆಂಟಿಗೆ ಬಂಧಿಸಿ ಎಳೆದೊಯ್ದಿದೆ. ಅವರನ್ನು ಕೇರಳದವರೆಗೂ ಕರೆದೊಯ್ದು ಅವರು ನಡೆಸುತ್ತಿದ್ದ ಪೋಸ್ಟ್​ಕಾರ್ಡ್ ಎಂಬ ಸುದ್ದಿ ಮಾಧ್ಯಮವನ್ನು ಮುಚ್ಚಿ ಹಾಕಬೇಕೆಂಬ ಧಾವಂತಕ್ಕೆ ರಾಜ್ಯ ಸರ್ಕಾರ ಬಿದ್ದದ್ದು ಅಚ್ಚರಿಯೆನಿಸುವಂಥದ್ದು! ಫೇಕ್​ನ್ಯೂಸ್ ಎಂಬ ಗುರಾಣಿಯನ್ನು ಬಳಸಿ ಬಲಪಂಥೀಯರನ್ನೂ ಮೋದಿ ಸಮರ್ಥಕರನ್ನೂ ಮಟ್ಟಹಾಕಲು ಹೊರಟಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಹಿಡಿದ ಕೈಗನ್ನಡಿ.

ಇಂಟರ್​ನೆಟ್​ನ ಕ್ರಾಂತಿಯೊಂದಿಗೆ ನ್ಯೂಸ್ ಮತ್ತು ಫೇಕ್​ನ್ಯೂಸ್​ಗಳು ಸಮ-ಸಮಕ್ಕೆ ಬೆಳೆದುನಿಂತಿವೆ. ಹಾಗಂತ ಫೇಕ್​ನ್ಯೂಸ್​ಗಳು ಇಂಟರ್​ನೆಟ್ಟಿನದ್ದೇ ಕೊಡುಗೆ ಎಂದೇನಿಲ್ಲ. ಹಾಗೆ ನೋಡಿದರೆ ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ನಂತರ ದಶಕಗಳಷ್ಟು ಕಾಲ ಎಡಪಂಥೀಯರು ಹೇಳಿಕೊಂಡು ಬಂದದ್ದು ಸುಳ್ಳೆಂಬುದನ್ನು ಸಾಬೀತುಪಡಿಸಲು ಸಾಧ್ಯವಾಯಿತು. ಫೇಕ್​ನ್ಯೂಸ್ ಅನ್ನೋದನ್ನು ಆಧಾರವಿಲ್ಲದ, ಸತ್ಯವಿಲ್ಲದ ಗಾಳಿಮಾತು ಎನ್ನಬಹುದೇನೋ! ಸಿನಿಮಾ ನಟರು ಇದನ್ನು ಗಾಸಿಪ್ ಅಂತ ಕರೆದುಕೊಳ್ಳುತ್ತಾರೆ ಮತ್ತು ಅದನ್ನು ಆನಂದಿಸುತ್ತಾರೆ. ರಾಜಕೀಯದ ವಿಚಾರಕ್ಕೆ ಬಂದಾಗ ಮಾತ್ರ ಇದು ಆನಂದಿಸುವ ಮಟ್ಟವನ್ನು ಮೀರಿಬಿಡುತ್ತದೆ. ಒಬ್ಬ ರಾಜಕಾರಣಿಯ ಭವಿಷ್ಯವೇ ಮಸುಕಾಗುವಷ್ಟು ಫೇಕ್​ನ್ಯೂಸ್​ಗಳು ಪ್ರಭಾವ ಬೀರಬಲ್ಲವು. ಪಶ್ಚಿಮ ಫೇಕ್​ನ್ಯೂಸ್​ನ ಜನಕ. ನಮ್ಮೊಳಗೆ ಸುಳ್ಳನ್ನು ಬಿತ್ತುವುದು, ಸತ್ಯವನ್ನು ತಿರುಚುವುದು ಇವೆಲ್ಲವನ್ನೂ ಆರಂಭಿಸಿದ್ದು ಯುರೋಪಿಯನ್ನರೇ! ಆರ್ಯ ಎಂಬ ಹೊಸ ಪದವನ್ನು ಸೃಷ್ಟಿಸಿ, ಅದನ್ನೇ ವ್ಯಾಪಕವಾಗಿ ಬಳಕೆ ಮಾಡುತ್ತ ಇಡಿಯ ಭಾರತದಲ್ಲಿ ಆರ್ಯ-ದ್ರಾವಿಡ ಭೇದವನ್ನು ಬಿತ್ತಿದ್ದು ಪಶ್ಚಿಮದ ಕ್ರಿಶ್ಚಿಯನ್ ಮಿಷನರಿಗಳೇ. ಭಾರತವನ್ನು ಒಡೆಯಬೇಕೆಂದು ಅವರು ಸೃಷ್ಟಿಸಿದ ಒಂದು ಫೇಕ್​ನ್ಯೂಸ್ ಯೂರೋಪನ್ನೇ ಚೂರುಮಾಡುವ ಹಂತಕ್ಕೆ ಬಂದಿತ್ತು. ಜರ್ಮನಿ ತನ್ನನ್ನು ತಾನು ಆರ್ಯವೆಂದು ಕರೆದುಕೊಳ್ಳುತ್ತಾ ಸಾರ್ವಭೌಮತೆಯನ್ನು ಮೆರೆಸಲು ಹೋಗಿ ಮಹಾಯುದ್ಧವೇ ನಡೆದುಹೋಯಿತು. ಈ ಸಮಾಜಕಂಟಕ ಫೇಕ್​ನ್ಯೂಸನ್ನು ತಾನು ಮಾಡಿದ ತಪ್ಪು ಎಂದು ಯೂರೋಪು ಒಪ್ಪಿಕೊಂಡು ಆರ್ಯ-ದ್ರಾವಿಡ ವಾದ ಸುಳ್ಳೆಂದು ವೈಜ್ಞಾನಿಕವಾಗಿ ಸಾಬೀತುಪಡಿಸಿತು. ಪಶ್ಚಿಮದವರೇನೋ ಇದನ್ನು ಸ್ವೀಕಾರ ಮಾಡಿ ಆರ್ಯರು ಭಾರತದ ಮೂಲನಿವಾಸಿಗಳೆಂಬುದನ್ನು ಒಪ್ಪಿಕೊಂಡರು. ಆದರೆ, ಭಾರತದವರಿಗೆ ಇನ್ನೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವಿಂದಿಗೂ ಪ್ರತ್ಯೇಕ ದ್ರವಿಡ ರಾಷ್ಟ್ರದ ಬೇಡಿಕೆಯನ್ನು ಮಂಡಿಸುತ್ತಲೇ ಇದ್ದೇವೆ. ಬ್ರಿಟೀಷರ ಆಳ್ವಿಕೆಯ ಕಾಲಕ್ಕೆ ತಿರುಚಲ್ಪಟ್ಟ ಇತಿಹಾಸ ನಮ್ಮ ಪೂರ್ವಜರನ್ನು ಅರಿತು ನಾವೇ ಅಸಹ್ಯಪಟ್ಟುಕೊಳ್ಳುವಂತೆ ಮಾಡಿತು. ಸ್ವಾತಂತ್ರ್ಯ ಬಂದ ಮೇಲಾದರೂ ಬದಲಾಗಬೇಕಾಗಿತ್ತಲ್ಲ. ಭಾರತ ಈ ದೇಶವನ್ನು ಪ್ರೀತಿಸದ ಎಡಪಂಥೀಯರ ಕೈಗೆ ಸೇರಿತು. ಸಮಾಜವಾದವನ್ನು ಬೆಂಬಲಿಸುತ್ತೇನೆಂಬ ಧಾವಂತದಲ್ಲಿ ನೆಹರೂ ಕಮ್ಯುನಿಸ್ಟ್ ಸಿದ್ಧಾಂತದ ತೆಕ್ಕೆಗೆ ಹೋಗಿ ಬಿದ್ದರು. ಅದಾದ ಮೇಲೆಯೇ ಈ ದೇಶದಲ್ಲಿ ಜವಾಹರ್​ಲಾಲ್ ನೆಹರೂ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಶುರುವಾಗಿ ಅಲ್ಲಿ ಪದವಿ ಪಡೆದವರು ಅಧಿಕಾರಿಗಳಾಗಿ ಮಹತ್ವದ ಹುದ್ದೆಯನ್ನು ಅಲಂಕರಿಸಿದರು, ಉಪನ್ಯಾಸಕರಾಗಿ ಭಿನ್ನ-ಭಿನ್ನ ಕಾಲೇಜುಗಳಿಗೆ ನೇಮಕಗೊಂಡರು. ಇವರೇ ಪತ್ರಕರ್ತರಾದರು, ಕೆಲವೊಮ್ಮೆ ರಾಜಕಾರಣಿಗಳೂ ಆಗಿಬಿಟ್ಟರು. ಹೀಗಾಗಿ ಅಲ್ಲಿಂದಾಚೆಗಿನ ಪೀಳಿಗೆಗಳು ಭಾರತ-ವಿರೋಧಿ ಚಿಂತನೆಗಳನ್ನು ಬಿತ್ತುವ, ಭಾರತ-ವಿರೋಧಿ ಬೆಳೆ ತೆಗೆಯುವ ಪ್ರಬಲ ಪೀಳಿಗೆಯಾಗಿ ನಿರ್ವಣಗೊಂಡಿತು. ಅದರಿಂದಾಗಿಯೇ ಒಂದು ಪೀಳಿಗೆಯ ಹಿಂದಿನ ಪತ್ರಿಕೆಗಳು, ಪತ್ರಕರ್ತರು ಇವರೆಲ್ಲರೂ ಹಿಂದುತ್ವವನ್ನು ಕಂಡರೆ ಉರಿಬೀಳುತ್ತಿದ್ದುದು. ಅನೇಕ ಪತ್ರಿಕೆಗಳಲ್ಲಂತೂ ಬಲಪಂಥೀಯ ವಿಚಾರಧಾರೆಗೆ ನಾಲ್ಕು ಸಾಲಿನಷ್ಟೂ ಜಾಗವಿಲ್ಲದಂತಹ ಪರಿಸ್ಥಿತಿ ಇತ್ತು. ಆದರೆ, ಮಾಹಿತಿ ಕ್ರಾಂತಿಯಾಗುತ್ತಿದ್ದಂತೆ ಹೊಸ ಪೀಳಿಗೆ ಪತ್ರಿಕೋದ್ಯಮಕ್ಕೆ ಬಂತು. ಸತ್ಯದ ಹುಡುಕಾಟಕ್ಕೆ ತೊಡಗಿಸಿಕೊಂಡ ಈ ಪೀಳಿಗೆಗೆ ತಮ್ಮ ಹಿಂದಿನವರು ಹೇಳಿದ್ದೆಲ್ಲ ಸುಳ್ಳೆಂದು ಅರಿವಾಗುವಾಗ ಆಘಾತ ಕಾದಿತ್ತು. ಹಿಟ್ಲರ್​ನ ಚಿಂತನೆಗಳ ಪ್ರಚಾರದ ಜವಾಬ್ದಾರಿ ಹೊತ್ತಿದ್ದ ಗೋಬೆಲ್ ಒಂದು ದೊಡ್ಡ ಸುಳ್ಳನ್ನೇ ಪದೇ ಪದೇ ಹೇಳುತ್ತಿದ್ದರೆ ಅದೇ ಸತ್ಯವಾಗಿಬಿಡುತ್ತದೆ ಎಂದಿದ್ದನಂತೆ. ಅದೇ ಮಾತನ್ನು ಮತ್ತೆ-ಮತ್ತೆ ಉಚ್ಚರಿಸುತ್ತಲೇ ಕಮ್ಯುನಿಸ್ಟರು ಮನಸೋ ಇಚ್ಛೆ ಸುಳ್ಳುಗಳನ್ನು ಹೇಳಿ ಅದನ್ನು ನಂಬಿಸಿಯೂ ಬಿಟ್ಟರು. ಅಚ್ಚರಿಯೇನು ಗೊತ್ತೇ? ಇತ್ತೀಚೆಗೆ ಕೆಲವರು ನಡೆಸಿರುವ ಸಂಶೋಧನೆಯ ಪ್ರಕಾರ ಗೊಬೆಲ್ ಆ ಮಾತು ಹೇಳಿರುವುದೇ ಸುಳ್ಳಂತೆ!

ಫೇಸ್​ಬುಕ್ಕು, ವಾಟ್ಸಪ್, ಟ್ವಿಟರ್ ಮತ್ತು ಯೂಟ್ಯೂಬ್​ಗಳು ಈ ಹೊಸ ಪೀಳಿಗೆಗೆ ವರದಾನವಾಗಿ ಬಂದಿದೆ. ಯಾರಾದರೂ ಒಬ್ಬ ಸಂಪಾದಕ ‘ನಿನ್ನ ಬರವಣಿಗೆಗೆ ಪತ್ರಿಕೆಯಲ್ಲಿ ಜಾಗ ಕೊಡುವುದಿಲ್ಲ’ ಎಂದಾಗ ಆತ ಬೇಸರಿಸಿಕೊಳ್ಳಲಿಲ್ಲ. ತಾನೇ ಫೇಸ್​ಬುಕ್ ಖಾತೆಯನ್ನು ತೆರೆದ, ಅದಕ್ಕೆ ತಾನೇ ಸಂಪಾದಕನಾದ, ವರದಿಗಾರನಾದ, ಬರಹಗಾರನಾದ, ಓದುಗರಾರೂ ಇಲ್ಲವೆಂದರೆ ತಾನೇ ಓದುಗನೂ ಆಗಿಬಿಟ್ಟ! ಈ ಹೊಸ ಪೀಳಿಗೆಯ ತರುಣರು ಈ ಎಡಪಂಥೀಯರು ಹಬ್ಬಿಸಿದ್ದ ಸುಳ್ಳುಗಳನ್ನು ಒಂದೊಂದಾಗಿ ಬಯಲಿಗೆ ತಂದು ಬೆತ್ತಲಾಗಿ ನಿಲ್ಲಿಸಿಬಿಟ್ಟರು. ಆದರೆ ಇದರೊಟ್ಟಿಗೆ ಅನೇಕ ಬಾರಿ ಸುಳ್ಳು ಸುದ್ದಿಯೂ ಸೇರಿಕೊಳ್ಳಲಾರಂಭಿಸಿತು. ಹೀಗಾಗಿ ಅಂತರ್ಜಾಲದ ಸಮುದ್ರದಲ್ಲಿ ಸತ್ಯವೆಂಬ ಮುತ್ತನ್ನು ಹೆಕ್ಕಿ ತೆಗೆಯುವುದು ಸುಲಭ ಸಾಧ್ಯವಾಗಿರಲಿಲ್ಲ. ಆದರೂ ಇದು ಕುತ್ತಿಗೆಗೆ ಬರುವಷ್ಟು ಸಂಕಟವೇನೂ ಆಗಿರಲಿಲ್ಲ.

ಫೇಕ್​ನ್ಯೂಸ್​ನ ಅಸಲಿ ಬಣ್ಣ ವ್ಯಕ್ತವಾಗಿದ್ದು ಟ್ರಂಪ್ ಚುನಾವಣೆಯ ಸಂದರ್ಭದಲ್ಲಿ. ಹಿಲರಿ ತನ್ನ ವಿರುದ್ಧ ದಿನಕ್ಕೊಂದರಂತೆ ಪ್ರಕಟವಾಗುತ್ತಿದ್ದ ಸುಳ್ಳು ಸುದ್ದಿಗಳ ಕುರಿತಂತೆ ವಿವರಣೆ ಕೊಟ್ಟೂ ಕೊಟ್ಟೇ ಹೈರಾಣಾಗಿ ಹೋದಳು. ‘ಕೆಲವೇ ದಿನಗಳಲ್ಲಿ ಹಿಲರಿಯನ್ನು ಜೈಲಿಗೆ ತಳ್ಳುವ ನಿಮ್ಮ ಬಯಕೆ ಈಡೇರಲಿದೆ’ ಎಂಬ ಶೀರ್ಷಿಕೆಯ ಲೇಖನ ಒಂದೂವರೆ ಲಕ್ಷದಷ್ಟು ಶೇರಾಗಿತ್ತು. ಟ್ರಂಪ್​ರಂತಹವರು ಅಧ್ಯಕ್ಷ ಗಾದಿಯನ್ನೇರಬೇಕು ಎಂದು ಹಿಲರಿ ಹೇಳಿದ್ದಳೆಂಬ ಸುದ್ದಿಯೂ ಸಾಕಷ್ಟು ಸದ್ದು ಮಾಡಿತು. ವಾಷಿಂಗ್​ಟನ್ ಡಿಸಿಯಲ್ಲಿ ಬಾಲಕಿಯರ ವೇಶ್ಯಾವಾಟಿಕೆಯನ್ನು ಹಿಲರಿ ನಡೆಸುತ್ತಿದ್ದಾರೆಂಬ ಸುದ್ದಿ 10 ಲಕ್ಷಕ್ಕೂ ಹೆಚ್ಚು ಜನರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅದು ಸುಳ್ಳೆಂದು ಸಾಬೀತುಪಡಿಸಿದ ಸತ್ಯದ ಲೇಖನ ಒಂದು ಲಕ್ಷಕ್ಕೂ ಹೆಚ್ಚು ದಾಟಿರಲಿಲ್ಲ. ಆಶ್ಚರ್ಯವೇನು ಗೊತ್ತೇ? ಟ್ರಂಪರ ಪರವಾಗಿ ಬರುತ್ತಿದ್ದ ಈ ಲೇಖನಗಳ್ಯಾವುದನ್ನೂ ಬರೆಸಿದ್ದು ಟ್ರಂಪಲ್ಲ. ಬದಲಿಗೆ ಅಮೆರಿಕಾದಿಂದ ಸಾವಿರಾರು ಮೈಲು ದೂರದಲ್ಲಿರುವ ಆಗ್ನೇಯ ಯೂರೋಪಿನ ಮೆಸಿಡೋನಿಯಾದ ತರುಣರು. ಮೆಸಿಡೋನಿಯಾದ ಜನಸಂಖ್ಯೆ 45 ಸಾವಿರಕ್ಕೂ ಹೆಚ್ಚಿಲ್ಲ. ಅಲ್ಲಿ ಚಿಕ್ಕ ಮಕ್ಕಳು ಕೆಲಸ ಮಾಡುವಂತಿಲ್ಲ ಎಂಬ ಕಾನೂನು ಇರುವುದರಿಂದ ವಿದ್ಯಾರ್ಥಿಗಳೆನಿಸಿಕೊಂಡವರು ಈ ರೀತಿಯ ಆಕರ್ಷಕ ಲೇಖನಗಳನ್ನು ಬರೆದು ಅದಕ್ಕೆ ಸಿಗುವ ಹಿಟ್​ನಿಂದ ಜಾಹೀರಾತುಗಳ ಮೂಲಕ ಹಣ ಸಂಪಾದಿಸುತ್ತಿದ್ದರು. ಒಂದು ಹಿಟ್​ನಿಂದ ಒಂದು ರೂಪಾಯಿ ಸಿಗುವಂತಾದರೂ ಹತ್ತು ಲಕ್ಷ ಹಿಟ್​ಗಳಿಗೆ ಹತ್ತು ಲಕ್ಷ ರೂಪಾಯಿ ಆಯ್ತಲ್ಲ! ಮೆಸಿಡೋನಿಯಾದ 16-17 ರ ಪೋರರು 150 ಕ್ಕೂ ಹೆಚ್ಚು ಅಮೆರಿಕಾದ ವೆಬ್​ಸೈಟುಗಳನ್ನು ನಿರ್ವಿುಸಿ ಅದರಲ್ಲಿ ಈ ಬಗೆಯ ಸುಳ್ಳು ಸುದ್ದಿಯನ್ನು ಹರಿಬಿಡುತ್ತಿದ್ದರು. ಅಂಥವರಲ್ಲೊಬ್ಬನನ್ನು ಮಾತನಾಡಿಸಿದಾಗ ಆತ, ಫೇಸ್​ಬುಕ್ ಮತ್ತು ಟ್ರಂಪ್ ಇವೆರಡೂ ಒಳ್ಳೇ ಹಣ ಗಳಿಕೆಯ ಮಾರ್ಗ ಎಂದಿದ್ದ. ಆಕರ್ಷಕ ಶೀರ್ಷಿಕೆಯನ್ನು ಕೊಟ್ಟು ಜನರ ಗಮನ ಸೆಳೆದರೆ ಹಣ ಗಳಿಕೆ ಖಾತ್ರಿ ಎಂಬುದು ಆ ವಿದ್ಯಾರ್ಥಿಗಳ ವಾದ.

ಅನೇಕರಿಗೆ ಈಗ ಫೇಸ್​ಬುಕ್ ಮತ್ತು ಮೋದಿ ಹಣಗಳಿಕೆಯ ವಸ್ತುವಾಗಿಬಿಟ್ಟಿದ್ದಾರೆ. ಬಹುಶಃ ಮೋದಿಯ ಕುರಿತಂತೆ ಹರಿದಾಡುವಷ್ಟು ಫೇಕ್ ಸುದ್ದಿಗಳು, ಫೇಕ್ ಚಿತ್ರಗಳು ಇನ್ಯಾರ ಕುರಿತಂತೆಯೂ ಹರಿದಾಡಲಾರದು. ಎಡಪಂಥೀಯ ಚಿಂತಕರಿಗಂತೂ ಮೋದಿಯ ಕುರಿತಂತೆ ಸುಳ್ಳನ್ನು ಹೇಳುವುದೇ ಬಲುದೊಡ್ಡ ಚಟ. ಒಂದು ಕಾಲದಲ್ಲಿ ಅವರ ಪಾಲಿಗೆ ಬಡತನ, ಸಮಾನತೆ, ಹಸಿವು ಇವೆಲ್ಲವೂ ಜನರ ಆಸಕ್ತಿಯನ್ನು ಸೆಳೆಯಬಲ್ಲಂತಹ ಪದಗಳಾಗಿದ್ದವು. ಈಗಲೂ ಕರ್ನಾಟಕದಲ್ಲಿ ಅನ್ನ ಭಾಗ್ಯವನ್ನು ಸಮರ್ಥಿಸಿಕೊಳ್ಳಲು ಇದೇ ಬಡತನ, ಹಸಿವು ಪದಗಳನ್ನು ಬಳಸಲಾಗುತ್ತದೆ. ಮೋದಿ ವಿಕಾಸದ ಮಾತುಗಳನ್ನಾಡುತ್ತಾ ಎಡಪಂಥೀಯರ ಶಕ್ತಿಯಾಗಿದ್ದ ಈ ಪದಗಳನ್ನೆಲ್ಲಾ ಕಿತ್ತುಕೊಂಡುಬಿಟ್ಟರು. ಸ್ವಾವಲಂಬಿಯಾದ ತರುಣನ ಬಡತನವೂ ದೂರವಾಯಿತು, ಹಸಿವೂ ಇಲ್ಲವಾಯಿತು. ಸಹಜವಾಗಿಯೇ ಬೆವರು ಸುರಿಸಿ ಗಳಿಸಿದ ಹಣದಿಂದ ಆತ ಸಮಾನತೆಯನ್ನು ಪಡೆದುಕೊಂಡುಬಿಟ್ಟ. ಬೇರೆ ಮಾರ್ಗ ಕಾಣದೇ ಎಡಪಂಥೀಯರು ತಮ್ಮ ಅನ್ನ ಗಳಿಕೆಗಾಗಿ ಹಸುವನ್ನು, ಸೈನ್ಯವನ್ನು ಕೊನೆಗೆ ಮೋದಿಯನ್ನೂ ಬಳಸಲಾರಂಭಿಸಿದರು.

ಕಳೆದ ವರ್ಷ ಮೇ ತಿಂಗಳಲ್ಲಿ ನ್ಯೂಸ್ 18 ನ ಸುದ್ದಿ ನಿರ್ವಪಕಿ ಪಲ್ಲವಿ ಘೊಷ್ ಉತ್ತರ ಪ್ರದೇಶದಲ್ಲಿ ದನದ ಮಾಂಸ ತಿಂದುದಕ್ಕಾಗಿ ಹೆಣ್ಣುಮಗಳೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರಗೈಯ್ಯಲಾಗಿದೆ ಎಂದು ಟ್ವೀಟ್ ಮಾಡಿದ್ದಳು. ಪೊಲೀಸರು ಆ ಟ್ವೀಟಿಗೆ ಪ್ರತ್ಯುತ್ತರಿಸಿ ‘ಅಂಥದ್ದೇನೂ ನಮ್ಮ ಗಮನಕ್ಕೆ ಬಂದಿಲ್ಲ. ದಯವಿಟ್ಟು ಹೆಚ್ಚಿನ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ’ ಎಂದು ಹೇಳಿದಾಗ ಆಕೆ ನಾಪತ್ತೆಯಾಗಿಬಿಟ್ಟಿದ್ದಳು! ಸಾಗರಿಕಾ ಘೊಷ್ ಕೂಡಾ ದೇಶದಾದ್ಯಂತ ಮುಸಲ್ಮಾನರನ್ನು ಬರ್ಬರವಾಗಿ ಕೊಲ್ಲಲಾಗುತ್ತಿದೆ. ಕೊಲ್ಲುವವನ ವಿರುದ್ಧ ಯಾವ ನ್ಯಾಯವೂ ನಡೆಯುತ್ತಿಲ್ಲ. ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು. ಆದರೆ ಆ ಬಗೆಯ ಘಟನೆಗಳು ಎಲ್ಲಿಯೂ ನಡೆದೇ ಇರಲಿಲ್ಲ. ಎಲ್ಲರೂ ತಿರುಗಿ ಬಿದ್ದ ಮೇಲೆ 18 ಗಂಟೆಗಳಲ್ಲಿ ಆ ಟ್ವೀಟನ್ನು ಅಳಿಸಿ ಹಾಕಿದ ಸಾಗರಿಕಾ ಘೊಷ್ ‘ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿಬಿಡಿ. ಆದರೆ, ನಾನಂತೂ ಕೋಮುವಾದಿ ಕದನಗಳ ಮೇಲೆ ಒಂದು ಕಣ್ಣಿಟ್ಟಿರುತ್ತೇನೆ’ ಎಂದು ಟ್ವೀಟ್ ಮಾಡಿದ್ದರು. ಮಹೇಶ್ ವಿಕ್ರಮ್ ಹೆಗ್ಡೆಯ ಒಂದು ಸಾಮಾನ್ಯ ಟ್ವೀಟನ್ನು ಸಮಾಜ ಕಂಟಕವೆಂದು ಕರೆದಿರುವ ಸಿದ್ದರಾಮಯ್ಯನವರಿಗೆ ಸಾಗರಿಕಾ ಘೊಷ್​ರ ಟ್ವೀಟಿಗೆ ಪ್ರತಿಕ್ರಿಯಿಸಬೇಕು ಎಂದೂ ಎನಿಸಿರಲಿಲ್ಲವಲ್ಲ! ಹೌದು. ಅದೂ ಸರಿಯೇ, ಆ ಟ್ವೀಟಿಗೂ ಸಿದ್ದರಾಮಯ್ಯನವರಿಗೂ ಸಂಬಂಧವೇ ಇಲ್ಲ. ಆದರೆ ಇದೇ ಸಿದ್ದರಾಮಯ್ಯನವರು ಗುಜರಾತಿನಲ್ಲಿ ಕುದುರೆಯನ್ನು ಮನೆಯಲ್ಲಿಟ್ಟುಕೊಂಡಿದ್ದಕ್ಕೆ ದಲಿತನ ಹತ್ಯೆಯಾಗಿದೆಯೆಂಬ ಸುಳ್ಳು ಸುದ್ದಿಯನ್ನು ಉಲ್ಲೇಖಿಸಿ ನರೇಂದ್ರ ಮೋದಿಯವರ ಗುಜರಾತ್ ಮಾಡೆಲ್ಲನ್ನು ಟೀಕಿಸಿದ್ದರಲ್ಲ! ಅದು ಸುಳ್ಳು ಸುದ್ದಿಯೆಂದು ಗೊತ್ತಾದ ಮೇಲೂ ಕ್ಷಮೆ ಕೇಳದೇ ಭಂಡತನ ತೋರಿದ್ದರಲ್ಲ!

ಇದೇ ಮೊದಲೇನಲ್ಲ. ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ತಮ್ಮೆಲ್ಲಾ ಕಾರ್ಯಕರ್ತರಿಗೂ ಪ್ರತಿಯೊಬ್ಬರೂ ಎರಡು-ಮೂರಾದರೂ ಫೇಕ್ ಅಕೌಂಟುಗಳನ್ನು ಇಟ್ಟುಕೊಳ್ಳಬೇಕೆಂದು ಹೇಳಿದ್ದು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೇಕ್ ಅಕೌಂಟುಗಳನ್ನು ಸತ್ಯ ಹೇಳಲಂತೂ ಯಾರೂ ಬಳಸಲಾರರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆಗೆಲ್ಲಾ ಮೌನಕ್ಕೆ ಶರಣಾಗಿದ್ದ ಸಿದ್ದರಾಮಯ್ಯನವರು ಈಗ ತಿರುಗಿ ಬಿದ್ದಿದ್ದಾರೆ! ಹೇಗಾದರೂ ಮಾಡಿ ಹರಡುತ್ತಿರುವ ಮೋದಿಯವರ ಪ್ರಭೆಯನ್ನು ತಡೆಯಬೇಕೆಂಬುದಷ್ಟೇ ಅವರ ಪ್ರಯತ್ನ. ಆದರೆ ಜ್ವಾಲೆಯನ್ನು ಮುಚ್ಚಲು ಪ್ರಯತ್ನಿಸಿದಷ್ಟೂ ಅದು ಆವರಿಸಿಕೊಳ್ಳುತ್ತದೆ, ಸುಟ್ಟು ಭಸ್ಮ ಮಾಡುತ್ತದೆ.

ಮೋದಿ ಬೆಂಬಲಿಗರ ವಿರುದ್ಧ ಫೇಕ್​ನ್ಯೂಸ್​ನ ಅಸ್ತ್ರ ಪ್ರಯೋಗಿಸಿ ಸಿದ್ದರಾಮಯ್ಯನವರು ಜೈಲಿಗೆ ತಳ್ಳಿದಾಗ ಕುಣಿದಾಡಿದ ಕಾಂಗ್ರೆಸ್ಸು ಮತ್ತು ಅದರ ಬೆಂಬಲಿಗರು ಒಟ್ಟಾರೆ ಫೇಕ್​ನ್ಯೂಸ್​ಗಳ ವಿರುದ್ಧ, ಅದನ್ನು ಹುಟ್ಟು ಹಾಕುವವರ ವಿರುದ್ಧ ಕಾನೂನು ತರುವೆನೆಂದು ಕೇಂದ್ರ ಸರ್ಕಾರ ಹೊರಟಾಗ ತಡಬಡಾಯಿಸಿಬಿಟ್ಟರಲ್ಲ! ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ನ್ಯೂಸ್ ಬ್ರಾಡ್​ಕಾಸ್ಟರ್ಸ್ ಅಸೋಸಿಯೇಷನ್ ಇದರಡಿಯಲ್ಲೇ ವಿಚಾರಣೆ ನಡೆಸಿ ಅಪರಾಧ ಸಾಬೀತಾದರೆ ಅಂತಹ ಪತ್ರಕರ್ತರಿಗೆ ನೀಡಿದ ಸರ್ಕಾರಿ ಮಾನ್ಯತೆಯನ್ನು ಆರು ತಿಂಗಳಿಂದ ಹಿಡಿದು ಶಾಶ್ವತವಾಗಿ ತೆಗೆದುಹಾಕುವ ಕಾನೂನಿಗೆ ಪಟ್ಟಾಗಿ ವಿರೋಧಿಸಿದರಲ್ಲಾ! ಏಕೆಂದರೆ ಹಾಗೆ ಮಾಡಿದರೆ ಕಾಂಗ್ರೆಸ್ಸನ್ನು ಬೆಂಬಲಿಸುವ ಅನೇಕ ಪತ್ರಕರ್ತರು ತಾವು ಬಿತ್ತಿದ ಸುಳ್ಳು ಸುದ್ದಿಗಳಿಗಾಗಿ ಮಾನ್ಯತೆ ಕಳೆದುಕೊಳ್ಳುವುದಿರಲಿ ಜೀವಾವಧಿ ಜೈಲಿನಲ್ಲಿ ಕಾಲ ಕಳೆಯಬೇಕಾದೀತು!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

Leave a Reply

Your email address will not be published. Required fields are marked *