More

    ವಿಶ್ವ ಸಾಹಿತ್ಯ ಸಮ್ಮೇಳನ ನಾಳೆಯಿಂದ

    ಕಲಬುರಗಿ: ನಗರದಲ್ಲಿ ಅಖಿಲ ಭಾರತ ಅಕ್ಷರ ಜಾತ್ರೆ ಸಿದ್ಧತೆ ಮಧ್ಯೆಯೇ ವಿಶ್ವ ಸಾಹಿತ್ಯ ಸಮ್ಮೇಳನ ಸಂಭ್ರಮ ಕಾಣಲಿದೆ. ಶರಣಬಸವ ವಿಶ್ವವಿದ್ಯಾಲಯವು ಶುಕ್ರವಾರ ಮತ್ತು ಶನಿವಾರ ವಿಶ್ವ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ವಿವಿ ಕುಲಾಧಿಪತಿಯಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಸರ್ವಾಧ್ಯಕ್ಷರಾಗಿದ್ದಾರೆ.
    ಬುಧವಾರ ಸುದ್ದಿಗೋಷ್ಠಿ ನಡೆಸಿದ ಶ್ರೀ ಡಾ.ಅಪ್ಪ, ಬಹುಭಾಷಾ ಸಾಹಿತ್ಯದ ಸಭೆ, ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ, ಹಿಂದಿ, ಉರ್ದು  ಸೇರಿ ವಿವಿಧ ಭಾಷೆಗಳ ಸಾಹಿತ್ಯ ಸಮೃದ್ಧಿ ಮತ್ತು ಪ್ರಾಮುಖ್ಯತೆ ಉದ್ದೇಶದೊಂದಿಗೆ ಈ ವಿಶ್ವ ಸಾಹಿತ್ಯ ಸಮ್ಮೇಳನ ನಡೆಯಲಿದೆ. 31ರಂದು ಮಧ್ಯಾಹ್ನ 12.30ಕ್ಕೆ ಮಾಜಿ ಸಿಎಂ ಎಂ.ವೀರಪ್ಪ ಮೋಯ್ಲಿ ಉದ್ಘಾಟಿಸುವರು. ಮೈಸೂರು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ವೆಂಕಟೇಶ ಆಶಯ ಭಾಷಣ ಮಾಡುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾತೋಶ್ರೀ ದಾಕ್ಷಾಯಿಣಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.
    ಸಂಘದ ಕಾರ್ಯದರ್ಶಿ  ಬಸವರಾಜ ದೇಶಮುಖ, ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ, ಸಮ ಕುಲಪತಿ ಎನ್.ಎಸ್. ದೇವರಕಲ್, ಡಾ.ವಿ.ಡಿ. ಮೈತ್ರಿ, ಡಾ.ಅನಿಲಕುಮಾರ ಬಿಡವೆ ಮುಖ್ಯ ಅತಿಥಿಗಳಾಗಿರುವರು. ವೈದ್ಯೆ ಡಾ.ಉಮಾ ದೇಶಮುಖ ರಚಿಸಿದ ಡಾ.ಶರಣಬಸವಪ್ಪ ಅಪ್ಪ ಅವರ 108 ನಾಮಾವಳಿಗಳ ಧ್ವನಿ ಸುರುಳಿ ಬಿಡುಗಡೆ ನಂತರ ಅಧ್ಯಕ್ಷೀಯ ಭಾಷಣ ಇರಲಿದೆ ಎಂದರು.
    ಬೆಳಗ್ಗೆ 8ಕ್ಕೆ ನೋಂದಣಿ, 9ಕ್ಕೆ ಸಮಕುಲಪತಿ ದೇವರಕಲ್ ಅಧ್ಯಕ್ಷತೆಯಲ್ಲಿ ಹಿಂದಿ ಗೋಷ್ಠಿ ಜರುಗಲಿದೆ. ಡಾ.ಚಂದ್ರಕಾಂತ ಪಾಟೀಲ್, ಡಾ.ವಿಜಯಲಕ್ಷ್ಮೀ ದುಮ್ಮಾಳೆ ವಿಷಯ ಮಂಡಿಸುವರು. 10ಕ್ಕೆ ಕಾವ್ಯ ಕುಂಚ ಗಾಯನ ಡಾ.ಶಾಂತಲಾ ನಿಷ್ಠಿ ಅಧ್ಯಕ್ಷತೆಯಲ್ಲಿ ಜರುಗಲಿದೆ. ಮಧ್ಯಾಹ್ನ 3ಕ್ಕೆ ಡಾ.ಎಂ.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ಕನ್ನಡ ಗೋಷ್ಠಿ ನಡೆಯಲಿದ್ದು, ಡಾ.ಅಪ್ಪ ಅವರ ಶಿವಜೀವನ ಕುರಿತು ಡಾ.ಎಸ್.ಎಂ. ಹಿರೇಮಠ ಮಾತನಾಡುವರು. ವಿಜಯಪುರದ ಡಾ.ವಿಜಯಾದೇವಿ ಶ್ರೀ ಶರಣಬಸವಪ್ಪ ಅಪ್ಪ ವಿರಚಿತ ಮಹಾದಾಸೋಹ ಸೂತ್ರಗಳು ಕುರಿತು ವಿಷಯ ಮಂಡಿಸುವರು. ಪೂಜ್ಯ ಅಪ್ಪ ಅವರ ಅಂತರ್ದೃಷ್ಟಿ ಕುರಿತು ಡಾ.ಶಿವರಾಜ ಶಾಸ್ತ್ರಿ ಮಾತನಾಡುವರು. ಸಂಜೆ 5.15ಕ್ಕೆ ಡಾ.ಲಕ್ಷ್ಮೀ ಮಾಕಾ ಅಧ್ಯಕ್ಷತೆಯಲ್ಲಿ ಜಾನಪದ ಸಾಹಿತ್ಯ ಗೋಷ್ಠಿ ಜರುಗಲಿದ್ದು, ಬೀದರ್ನ ಡಾ.ಜಗನ್ನಾಥ ಹೆಬ್ಬಾಳೆ, ಡಾ.ಕಲ್ಯಾಣರಾವ ಪಾಟೀಲ್, ಹಂಪಿಯ ಡಾ.ವೆಂಕಟಗಿರಿ ದಳವಾಯಿ ಉಪನ್ಯಾಸ ಮಂಡಿಸುವರು. 7ಕ್ಕೆ ಖ್ಯಾತ ವೈದ್ಯ ಡಾ.ಮಲ್ಲಿಕಾಜರ್ುನ ನಿಷ್ಠಿ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ಜರುಗಲಿದೆ. ಡಾ.ವಿ.ಡಿ.ಮೈತ್ರಿ, ಟಿ.ವಿ.ಶಿವಾನಂದನ್ ಮುಖ್ಯ ಅತಿಥಿಗಳಾಗಿರುವರು ಎಂದು ವಿವರಿಸಿದರು.
    ಫೆ.1ರಂದು ಬೆಳಗ್ಗೆ 9ಕ್ಕೆ ಡಾ.ಮಲ್ಲೇಪುರಂ ಜಿ.ವೆಂಕಟೇಶ ಅಧ್ಯಕ್ಷತೆಯಲ್ಲಿ ಸಂಸ್ಕೃತ ಗೋಷ್ಠಿ ಜರುಗಲಿದ್ದು, ಡಾ.ಲಿಂಗರಾಜ ಶಾಸ್ತ್ರಿ, ಡಾ.ಕೃಷ್ಣ ಕಾಕಲವಾರ, ಡಾ.ಗುರುಮಧ್ವಾಚಾರ್ಯ ನವಲಿ, ಡಾ.ಸುರೇಶ ಹೇರೂರ ವಿಷಯ ಮಂಡಿಸುವರು. 11ಕ್ಕೆ ಮರಾಠಿ ಗೋಷ್ಠಿ ಡಾ.ವಿಜಯಾ ತೆಲಂಗ ಅಧ್ಯಕ್ಷತೆಯಲ್ಲಿ ಜರುಗಲಿದೆ. ಪ್ರಾಧ್ಯಾಪಕ ಸರ್ವೋತ್ತಮರಾವ್ ಸತಳಕರ್ ಮುಖ್ಯ ಅತಿಥಿಯಾಗಿರುವರು. ಪ್ರೊ.ವಿಜಯಕುಮಾರ ಚೌಧರಿ, ಪ್ರೊ.ಗುರಯ್ಯ ಆರ್.ಸ್ವಾಮಿ, ಪ್ರೊ.ಪ್ರಭಾಕರ ಸಲಗರ ವಿವಿಧ ವಿಷಯ ಬಗ್ಗೆ ಉಪನ್ಯಾಸ ನೀಡುವರು.
    ಮಧ್ಯಾಹ್ನ 2ಕ್ಕೆ ಡಾ.ಎಸ್.ಜಿ ಡೊಳ್ಳೆಗೌಡರ್ ಅಧ್ಯಕ್ಷತೆಯಲ್ಲಿ ಇಂಗ್ಲಿಷ್ ಗೋಷ್ಠಿ ನಡೆಯಲಿದ್ದು, ಡಾ.ಬಸವರಾಜ ಮಠಪತಿ ಮುಖ್ಯ ಅತಿಥಿಯಾಗಿರುವರು. ಡಾ.ಪ್ರಕಾಶ ಬಾಳೆಕಾಯಿ, ಡಾ.ಆರ್.ಜಿ.ಹೆಗಡೆ ಮಾತನಾಡುವರು. ಸಂಜೆ 4ಕ್ಕೆ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರದ ದಶಮಾನೋತ್ಸವ ಜರುಗಲಿದೆ. ಮಂಗಳೂರಿನ ಡಾ.ಮೆಲ್ವಿನ್ ಪಿಂಟೊ ಮುಖ್ಯ ಅತಿಥಿ, ಡಾ.ಶಿವರಾಜ ಶಾಸ್ತ್ರಿ ಹೆರೂರ ಅತಿಥಿಯಾಗಿರುವರು. ಸಂಜೆ 6ಕ್ಕೆ ಉರ್ದು ಗೋಷ್ಠಿ ಪ್ರೊ.ಹಮೀದ್ ಅಕ್ಬರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ.ವಾಹಬ್ ಅಂದಲಿಬ್ ಮುಖ್ಯ ಅತಿಥಿ, ಡಾ. ಮಾಜಿದ್ ದಾಗಿ, ಡಾ.ಮಂಜು ದಖನಿ ಅತಿಥಿಗಳಾಗಿರುವರು. ಸಂಜೆ 8ಕ್ಕೆ ಸಮ್ಮೇಳನ ಸಮಾರೋಪ ಮಾತೋಶ್ರೀ ದಾಕ್ಷಾಯಿಣಿ ಸಾನ್ನಿಧ್ಯದಲ್ಲಿ ಜರುಗಲಿದೆ. ಡಾ.ಗೆಸುದರಾಜ್ ಸೈಯದ್ ಷಾ ಖುಸ್ರೋ ಹುಸೇನಿ ಸಾಹೇಬ್, ಪ್ರೊ.ಕಾಳೇಗೌಡ ನಾಗವಾರ ಮುಖ್ಯ ಅತಿಥಿಗಳಾಗಿರುವರು ಎಂದು ಡಾ.ಶರಣಬಸವಪ್ಪ ಅಪ್ಪ ವಿವರಿಸಿದರು.
    ವಿವಿ ಕುಲಪತಿ ಡಾ.ನಿರಂತನ್ ನಿಷ್ಠಿ, ಸಮ ಕುಲಪತಿ ಡಾ.ವಿ.ಡಿ. ಮೈತ್ರಿ, ಕುಲಸಚಿವರಾದ ಡಾ.ಅನಿಲಕುಮಾರ ಬಿಡವೆ, ಡಾ.ಲಿಂಗರಾಜ ಶಾಸ್ತ್ರಿ, ಶಿವರಾಜ ಶಾಸ್ತ್ರಿ, ಡಾ.ಲಕ್ಷ್ಮೀ ಮಾಕಾ, ಟಿ.ವಿ.ಶಿವಾನಂದನ್ ಇದ್ದರು. 

    ಅಖಿಲ ಭಾರತ ಕನ್ನಡ ಸಾಹಿತ್ಯ
    ಸಮ್ಮೇಳನಕ್ಕೆ ಪರ್ಯಾಯ ಅಲ್ಲ
    ವಿಶ್ವ ಸಾಹಿತ್ಯ ಸಮ್ಮೇಳನವು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಲ್ಲ. ವಿಶ್ವ ಸಾಹಿತ್ಯ ಸಮ್ಮೇಳನ ವಿಶಿಷ್ಟ ಹಾಗೂ ಬಹುಭಾಷಾ ಸಾಹಿತ್ಯಕ ಸಭೆಯಾಗಿದೆ. ಯಾವುದೇ ಅರ್ಥದಲ್ಲಿ ಹೋಲಿಸಲಾಗದು. ಪ್ರತಿಸ್ಪರ್ಧೆ  ಸಾಹಿತ್ಯ ಸಭೆ ಎಂದು ಪರಿಗಣಿಸಲೂ ಆಗಲ್ಲ ಎಂದು ಶ್ರೀ ಡಾ.ಶರಣಬಸವಪ್ಪ ಅಪ್ಪ ಸ್ಪಷ್ಟಪಡಿಸಿದರು. ಅಖಿಲ ಭಾರತ ಕನ್ನಡ ಸಮ್ಮೇಳನ ಸಂಘಟನೆಯಲ್ಲಿ ಶರಣಬಸವೇಶ್ವರ ಸಂಸ್ಥಾನವನ್ನು ನಿರ್ಲಕ್ಷಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಸಾಪ ಅಥವಾ ಸರ್ಕಾರ ಈ ಬಗ್ಗೆ ಸಮಾಲೋಚಿಸಿಲ್ಲ. ಆರ್ಥಿಕ ಸಹಾಯವನ್ನೂ ಕೋರಿಲ್ಲ. ಆದರೆ ಸ್ಥಳೀಯ ಬರಹಗಾರರು ಮತ್ತು ಸಾಹಿತಿಗಳನ್ನು ಕಸಾಪ ನಿರ್ಲಕ್ಷಿಸಿದೆ ಎಂಬ ಗ್ರಹಿಕೆ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts