More

    ಶ್ರೀಮಂತ ಕ್ರೀಡೆ ಕ್ರಿಕೆಟ್​ನಲ್ಲಿ ಬಡವನಾದ ವಿನೋದ್​ ಕಾಂಬ್ಳಿ! ಮಾಜಿ ಕ್ರಿಕೆಟಿಗ ಕೆಲಸವಿಲ್ಲದೆ ಪರದಾಟ…

    ಮುಂಬೈ: ಭಾರತದಲ್ಲಿ ಕ್ರಿಕೆಟ್​ ಶ್ರೀಮಂತ ಆಟ. ಆದರೆ ಕ್ರಿಕೆಟಿಗರೆಲ್ಲರೂ ಶ್ರೀಮಂತರಲ್ಲ. ಇದಕ್ಕೆ ತಾಜಾ ಉದಾಹರಣೆ ವಿನೋದ್​ ಕಾಂಬ್ಳಿ. ಒಂದು ಕಾಲದಲ್ಲಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ಗಿಂತಲೂ ಪ್ರತಿಭಾವಂತ ಎನಿಸಿಕೊಂಡ ಬ್ಯಾಟ್ಸ್​ಮನ್​. ಆದರೆ ಈಗ ಕಾಂಬ್ಳಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ಅವರ ಜೀವನ ನಿರ್ವಹಣೆಗೆ ಬಿಸಿಸಿಐ ನೀಡುವ 30 ಸಾವಿರ ರೂ. ನಿವೃತ್ತಿ ವೇತನವೇ ಆಧಾರವಾಗಿದೆ. 50 ವರ್ಷದ ಕಾಂಬ್ಳಿ ಕೈಯಲ್ಲಿ ಸೂಕ್ತ ಕೆಲಸವೂ ಇಲ್ಲದೆ ಪರದಾಡುತ್ತಿದ್ದಾರೆ.

    ಮುಂಬೈ ಪತ್ರಿಕೆಯೊಂದರ ಜತೆಗೆ ಮಾತನಾಡಿರುವ ಕಾಂಬ್ಳಿ, “ನಾನು ಶ್ರೀಮಂತನಾಗಿ ಜನಿಸಲಿಲ್ಲ. ಜೀವನದಲ್ಲಿ ಕ್ರಿಕೆಟ್​ ಆಟದಿಂದ ಮಾತ್ರ ನಾನು ಹಣ ಸಂಪಾದಿಸಿದ್ದೇನೆ. ಬಾಲ್ಯದಲ್ಲಿ ಸಾಕಷ್ಟು ಬಡತನ ನೋಡಿದ್ದೆ. ಕೆಲ ದಿನ ಉಪವಾಸವೂ ಇದ್ದೆ. ಶಾರದಾಶ್ರಮ ಶಾಲೆ ಸೇರಿದ ಬಳಿಕ ಊಟದ ತೊಂದರೆ ಇರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

    ತಾನು ಮದ್ಯ ವ್ಯಸನಿ ಎಂಬ ದೂರನ್ನು ಕಾಂಬ್ಳಿ ನಿರಾಕರಿಸಿದ್ದಾರೆ. ಕುಡಿತದ ಚಟವಿಲ್ಲ. ಆದರೆ ಕೆಲವೊಮ್ಮೆ ಸಮಾರಂಭಗಳಲ್ಲಿ ಮಾತ್ರ ಕುಡಿಯುತ್ತೇನೆ ಎಂದಿದ್ದಾರೆ. ವ್ಯಕ್ತಿಯೊಬ್ಬ ಕುಡಿತದ ಅಮಲಿನಲ್ಲಿ ಮುಂಬೈ ಬೀದಿಯಲ್ಲಿ ವಾಲಾಡುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು ಮತ್ತು ಅದು ವಿನೋದ್​ ಕಾಂಬ್ಳಿ ಎಂದು ಹೇಳಲಾಗಿತ್ತು. ಆದರೆ ಅದು ತಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
    ಕಾಂಬ್ಳಿ ಕುಟುಂಬದಲ್ಲಿ ಈಗ ಪತ್ನಿ ಆಂಡ್ರಿಯಾ ಜತೆಗೆ 12 ವರ್ಷದ ಪುತ್ರ ಮತ್ತು 7 ವರ್ಷದ ಪುತ್ರಿ ಇದ್ದಾರೆ. 1993ರಿಂದ 2000ದವರೆಗೆ ಅವರು, 17 ಟೆಸ್ಟ್​ಗಳಲ್ಲಿ 4 ಶತಕ ಸಹಿತ 1,084 ರನ್​ ಮತ್ತು 104 ಏಕದಿನಗಳಲ್ಲಿ 2 ಶತಕ ಸಹಿತ 2,477 ರನ್​ ಬಾರಿಸಿದ್ದರು.

    ಕರೊನಾ ಸಮಯದಲ್ಲಿ ಕಾಂಬ್ಳಿ ಸಂಕಷ್ಟ ಹೆಚ್ಚಾಗಿತ್ತು. ಹಿಂದೆಲ್ಲ ಕಾಂಬ್ಳಿ ಎಂದರೆ ಕೊರಳಿನಲ್ಲಿ ಚಿನ್ನದ ಸರ, ಕೈಯಲ್ಲಿ ಬ್ರೇಸ್​ಲೆಟ್​ ಮತ್ತು ಗ್ರಾಂಡ್​ ಕೈಗಡಿಯಾರ ಎದ್ದು ಕಾಣಿಸುತ್ತಿತ್ತು. ಆದರೆ ಈಗ ಅದೆಲ್ಲ ಮಾಯವಾಗಿದ್ದು, ಕೈಯಲ್ಲಿರುವ ಒಂದು ಮೊಬೈಲ್​ನ ಸ್ಕ್ರೀನ್​ನಲ್ಲೂ ಡ್ಯಾಮೇಜ್​ಗಳಾಗಿವೆ. ಬಿಳಿ ಗಡ್ಡದಿಂದಾಗಿ ಅವರನ್ನು ಸುಲಭವಾಗಿ ಗುರುತು ಹಿಡಿಯುವುದು ಕೂಡ ಕಠಿಣವೆನಿಸಿದೆ.

    ಗೆಳೆಯ ಸಚಿನ್​ ನೆರವು
    ಬಾಲ್ಯದ ಗೆಳೆಯ ಸಚಿನ್​ ತೆಂಡುಲ್ಕರ್​ಗೂ ನನ್ನ ಸಂಕಷ್ಟಗಳ ಬಗ್ಗೆ ಗೊತ್ತಿದೆ. ಹೀಗಾಗಿ ತಮ್ಮ ತೆಂಡುಲ್ಕರ್​ ಮಿಡಲ್​ಸೆಕ್ಸ್​ ಗ್ಲೋಬಲ್​ ಅಕಾಡೆಮಿಯಲ್ಲಿ ಕೆಲಸವೊಂದನ್ನು ನೀಡಿದ್ದರು. ಆದರೆ ನವಿ ಮುಂಬೈನ ನರೆಲುನಲ್ಲಿ ಈ ಅಕಾಡೆಮಿ ಇದ್ದು, ಅಷ್ಟುದೂರಕ್ಕೆ ಪ್ರತಿ ದಿನ ಓಡಾಡುವುದು ಕಷ್ಟಕರವೆನಿಸಿದ ಕಾರಣ ಆ ಕೆಲಸ ಬಿಟ್ಟೆ ಎಂದು ಕಾಂಬ್ಳಿ ತಿಳಿಸಿದ್ದಾರೆ. 2019ರ ಮುಂಬೈ ಟಿ20 ಲೀಗ್​ನಲ್ಲಿ ಕಾಂಬ್ಳಿ ತಂಡವೊಂದರ ಕೋಚ್​ ಆಗಿದ್ದರು. ಆದರೆ ಕರೊನಾ ನಂತರ ಈ ಟೂರ್ನಿ ನಡೆಯದ ಕಾರಣ ಕಾಂಬ್ಳಿ ಮತ್ತೆ ನಿರುದ್ಯೋಗಿಯಾಗಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts