More

    ರೈತರು ಕಾಯಂ ಭೂ ಒಡೆಯರಾಗಿರಲಿ:ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದನೆ


    ಹರಪನಹಳ್ಳಿ: ಕೇಂದ್ರ ಸರ್ಕಾರ ಕೈಗಾರಿಕಾ ಕಾರಿಡರ್ ನಿರ್ಮಾಣ ಮಾಡುತ್ತಿರುವುದಕ್ಕೆ ಯಾವುದೇ ಅಭ್ಯಂತರವಿಲ್ಲ, ಆದರೆ ರೈತರು ಕಾಯಂ ಭೂ ಒಡೆಯರಾಗಿ ಮುಂದುವರಿಯಬೇಕು ಎಂದು ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


    ತಾಲೂಕಿನ ಕಡಬಗೇರಿಯಲ್ಲಿ ನಿರ್ಮಿಸಿರುವ ವಿನಾಯಕ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ದ್ವಾರ ಬಾಗಿಲು ಉದ್ಘಾಟನೆ, ಕರಗಲ್ಲು ಪ್ರತಿಷ್ಠಾಪನಾ ಸಮಾರಂಭದ ಸಾನ್ನಿಧ್ಯವಹಿಸಿ ಶುಕ್ರವಾರ ಮಾತನಾಡಿದರು.
    ರೈತರ ಜಮೀನುಗಳನ್ನು ವಶಪಡಿಸಿಕೊಂಡ ಕಂಪನಿ ಪರಿಹಾರವಾಗಿ ರೈತರಿಗೆ ಒಂದೇ ಬಾರಿ ಇಡಗಂಟು ನೀಡಬಾರದು. ಪ್ರತಿ ವರ್ಷ ರೈತರಿಗೆ ಹಣ ಸಂದಾಯ ಮಾಡುತ್ತಿರಬೇಕು. ರೈತನ ಕೈಗೆ ಹಣ ಬಂದರೆ ಉಳಿಯುವುದಿಲ್ಲ. ಸಂಬಂಧಿಕರ ಪಾಲಾಗಿ ರೈತ ನಿರ್ಗತಿಕನಾಗುತ್ತಾನೆ. ಅಲ್ಲದೇ ಕಂಪನಿ ಮುಳುಗಡೆಯಾದರೇ ಭೂ ಒಡೆತನ ಮತ್ತೆ ರೈತನಿಗೆ ಉಳಿಯಬೇಕು. ಇದರಿಂದ ರೈತ ಹಾಗೂ ಕಂಪನಿಗೆ ಅನುಕೂಲವಾಗುತ್ತದೆ. ಈ ರೀತಿ ಕಾನೂನು ರಚಿಸಿದರೆ ಒಳ್ಳೆಯದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ಸಲಹೆ ನೀಡಿದ್ದೇನೆ ಎಂದರು.


    ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರ್ಕಾರ ಎನ್ನುವುದು ಮುಖ್ಯವಾಗಬಾರದು, ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕಿದೆ. ಗಂಗಾ, ತುಂಗಾ, ಕಾಶಿ ಕ್ಷೇತ್ರಗಳಿಗೆ ಯಾತ್ರಿಗಳಾಗಿ ಹೋಗಿ ಪ್ರವಾಸಿಗರಾಗಿ ಹೋಗಬೇಡಿ. ನಮ್ಮ ಸಂಸ್ಕೃತಿ ಮೋಜು ಮಸ್ತಿ ಮಾಡುವುದಲ್ಲ, ಜಾನಪದ ಕುಣಿತ, ಹಾಡು, ನಾಟಕ, ಕಲೆಗೆ ಅದ್ಯತೆ ನೀಡುವುದು. ಮುಂದಿನ ವರ್ಷ ಕಡಬಗೇರಿಯಲ್ಲಿ ತೇರು ರಥ ಸಾಗಲಿ ಎಂದು ಆರ್ಶೀವಚನ ನೀಡಿದರು.


    ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ನಾನು ಮತ್ತು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತಿಂಗಳಲ್ಲಿ ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.


    ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಕೂಡ್ಲಿಗಿ, ಕೊಟ್ಟೂರು ತಾಲೂಕಿನಲ್ಲಿ ತರಳಬಾಳು ಗುರುಗಳ ಆಶೀರ್ವಾದದಿಂದ ಕೆರೆಗಳಿಗೆ ನೀರು ಹರಿದಿದೆ. ತಾಲೂಕಿನಲ್ಲಿ ಬ್ರಿಡ್ಜ್ ಕಂ.ಬ್ಯಾರೇಜ್ ಕಾಮಗಾರಿ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಹರಪನಹಳ್ಳಿ ಕೆರೆಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
    ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಅಧ್ಯಕ್ಷ ಜಿ.ನಂಜನಗೌಡ್ರು, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಬಂದೋಳ್ ಮಂಜುನಾಥ, ಮಹಾಬಲೇಶ್ವರಗೌಡ್ರು ಎಂ.ಪಿ.ವೀಣಾ ಮಹಾಂತೇಶ್, ಕ.ರಾ.ಸಾ.ನಿ. ನಿರ್ದೇಶಕ ಅರುಂಡಿ ನಾಗರಾಜ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅನಸೂಯ ಮಂಜುನಾಥ್, ಉಪಾಧ್ಯಕ್ಷೆ ಗೀತಾ ತಿರುಪತಿ, ಪ್ರಮುಖರಾದ ಯಶವಂತಗೌಡ, ಎನ್.ಕೊಟ್ರೇಶ್, ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಟೇಲ್, ಉಪನ್ಯಾಸಕಿ ಸುಮತಿ ಜಯ್ಯಪ್ಪ, ಸಾಸ್ವೆಹಳ್ಳಿ ಚನ್ನಬಸವನಗೌಡ್ರು, ನಾಗನಗೌಡ ಪಟೇಲ್, ಬಸವರಾಜ್, ಸಿದ್ದೇಶ್, ಜಿ.ಭರಮನಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts