More

    ಅಕ್ರಮ ಮದ್ಯಕ್ಕೆ ಬೆಂಕಿ ಇಟ್ಟ ಗ್ರಾಮಸ್ಥರು

    ಬ್ಯಾಡಗಿ: ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಮದ್ಯ ವಶಪಡಿಸಿಕೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ಸುಟ್ಟು ಹಾಕಿದ ಘಟನೆ ತಾಲೂಕಿನ ಬನ್ನಿಹಟ್ಟಿಯಲ್ಲಿ ಸೋಮವಾರ ಜರುಗಿದೆ.

    ಗ್ರಾಮದಲ್ಲಿ ಹಲವು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಅಬಕಾರಿ ಇಲಾಖೆ, ತಹಸೀಲ್ದಾರ್ ಕಚೇರಿ, ಗ್ರಾಮ ಸಭೆಯಲ್ಲಿ ಹಲವು ಬಾರಿ ದೂರು ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಕುಡುಕರ ಸಂಖ್ಯೆ ವಿಪರೀತವಾಗಿತ್ತು. ಯುವಪೀಳಿಗೆ ಸಂಜೆಯಾಗುತ್ತಲೆ ಮದ್ಯವ್ಯಸನ ಮಾಡುತ್ತಿದ್ದು, ಕೌಟುಂಬಿಕ ಜೀವನದ ನೆಮ್ಮದಿ ಹಾಳಾಗಿತ್ತು. ಹೀಗಾಗಿ ಗ್ರಾಮದ ಹಿರಿಯರು ಒಮ್ಮತ ಅಭಿಪ್ರಾಯದಿಂದ ಮದ್ಯ ಮಾರಾಟ ಮಾಡುವುದು ಬೇಡವೆಂದು ನಿರ್ಧರಿಸಿದರು. ಅಂಗಡಿಗಳಲ್ಲಿ ಮಾರುತ್ತಿದ್ದ ಸುಮಾರು 10 ಸಾವಿರ ರೂ. ಮೌಲದ್ಯ 150 ಮದ್ಯದ ಪೌಚ್ ಹಾಗೂ 25 ಬಾಟಲ್​ಗಳನ್ನು ವಶಪಡಿಸಿಕೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ಸುಟ್ಟು ಹಾಕಿದ್ದಾರೆ.

    ಗ್ರಾಮದ ಹಿರಿಯರು ಮಾಡಿದ ಕಟ್ಟಳೆ ಮೀರಿ ಮದ್ಯ ಮಾರಾಟ ಮಾಡಿದಲ್ಲಿ, ತಪ್ಪಿತಸ್ಥರು ಗ್ರಾಮದ ದೇವಸ್ಥಾನ ಟ್ರಸ್ಟ್​ಗೆ 1 ಲಕ್ಷ.ರೂ. ದಂಡ ತುಂಬಬೇಕು. ಮಾರುತ್ತಿರುವುದನ್ನು ಹಿಡಿದುಕೊಟ್ಟಲ್ಲಿ 20 ಸಾವಿರ ರೂ. ಬಹುಮಾನ ನೀಡುವುದಾಗಿ ನೀಡಲಾಗುವುದು ಎಂದು ಮುಖಂಡರ ಸಭೆಯಲ್ಲಿ ತೀಮಾನಿಸಲಾಗಿದೆ.

    ಗ್ರಾಮದ ಹಿರಿಯರಾದ ನಾಗಪ್ಪ ಎಲಿಗಾರ, ಜಗದೀಶ ಕೆರಕರ, ಹೇಮಂತ ಸರವಂದ, ಮಲ್ಲಪ್ಪ ಕೋಟಿಹಾಳ, ಸಿ.ಟಿ. ಬೂದಿಹಾಳ, ಡಿ.ಎಚ್. ಬುಡ್ಡನಗೌಡ್ರ, ಮಾಲತೇಶ ಪೂಜಾರ, ಪರಮೇಶ ಕುರುವತ್ತಿ, ಬಸನಗೌಡ್ರ ಮರಿಗೌಡ್ರ ಇತರರಿದ್ದರು.

    ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಎಲ್ಲರ ನೆಮ್ಮದಿ ಹಾಳಾಗಿ, ಕೌಟುಂಬಿಕ ಕಲಹಗಳಿಂದ ಅಶಾಂತಿ ವಾತಾವರಣ ಉಂಟಾಗಿದೆ. ಯುವಪೀಳಿಗೆಯಂತೂ ಯಾರಿಗೂ ಅಂಜಿಕೆಯಿಲ್ಲದೆ, ರಾಜರೋಷವಾಗಿ ಮದ್ಯಸೇವನೆ ಮಾಡುತ್ತಿದ್ದಾರೆ. ಗ್ರಾಮದ ಹಿರಿಯರು ತೆಗೆದುಕೊಂಡ ತೀರ್ವನ, ಕಟ್ಟಳೆಗೆ ಎಲ್ಲರೂ ಒಪ್ಪಿದ್ದು, ತಪ್ಪಿದಲ್ಲಿ ದಂಡ ತುಂಬಬೇಕಿದೆ. ನಮ್ಮೂರಿನ ಒಳಿತಿಗೆ, ನಾವೆಲ್ಲ ಒಳ್ಳೆಯ ನಿರ್ಧಾರ ಮಾಡಿಕೊಂಡಿದ್ದೇವೆ.

    | ಚನ್ನವೀರಗೌಡ್ರ ಬುಡ್ಡನಗೌಡ್ರ, ಗ್ರಾಮದ ಹಿರಿಯ ನಾಗರಿಕ

    ಬನ್ನಿಹಟ್ಟಿ ಗ್ರಾಮದ ಹಿರಿಯರ ತೀರ್ವನಕ್ಕೆ ಇಲಾಖೆ ಸ್ಪಂದಿಸಲಿದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಕಾನೂನು ಉಲ್ಲಂಘನೆಯಾಗಿದ್ದು, ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಗ್ರಾಮಸ್ಥರು ದೂರು ಸಲ್ಲಿಸಿದಲ್ಲಿ ಅಕ್ರಮ ಮಾರಾಟಗಾರರ ಮೇಲೆ ಇಲಾಖೆ ಕ್ರಮ ಕೈಗೊಳ್ಳಲಿದೆ.

    | ಮಂಜುನಾಥ ಹಗಳಗಾರ, ಅಬಕಾರಿ ನಿರೀಕ್ಷಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts