More

    ಬ್ಯಾಂಕ್ ಶಾಖೆ ವಿಲೀನ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ

    ಯಳಂದೂರು : ತಾಲೂಕಿನ ಮದ್ದೂರು ಗ್ರಾಮದಲ್ಲಿ 12 ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದ್ದ ಕೆನರಾ ಬ್ಯಾಂಕ್ ಶಾಖೆಯನ್ನು ಮಾಂಬಳ್ಳಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ಗೆ ವಿಲೀನಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಶನಿವಾರ ಬ್ಯಾಂಕಿನ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

    ಈ ಬ್ಯಾಂಕ್ 12 ವರ್ಷಗಳ ಹಿಂದೆ ನಮ್ಮ ಗ್ರಾಮದಲ್ಲಿ ಶಾಖೆಯನ್ನು ತೆರೆದಿತ್ತು. ಈ ಗ್ರಾಮವೂ ಸೇರಿದಂತೆ ಆಲ್ಕೆರೆ ಅಗ್ರಹಾರ, ಬೂದಿತಿಟ್ಟು, ಯರಿಯೂರು ಸೇರಿದಂತೆ ಅನೇಕ ಗ್ರಾಮಗಳ ಜನರಿಗೆ ಇದರಿಂದ ಅನುಕೂಲವಾಗುತ್ತಿತ್ತು. ಇಲ್ಲಿ 2000ಕ್ಕೂ ಅಧಿಕ ಜನರು ತಮ್ಮ ಖಾತೆಗಳನ್ನು ತೆರೆದಿದ್ದರು. ಸಾಮಾಜಿಕ ಪಿಂಚಣಿ ಯೋಜನೆಗಳ ಲಾಭವನ್ನು ಅನೇಕರು ಪಡೆದುಕೊಳ್ಳುತ್ತಿದ್ದರು. ವಯಸ್ಸಾದವರು, ಅಂಗವಿಕಲರಿಗೆ ಇದರಿಂದ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ಈಗ ಏಕಾಏಕಿ ಶಾಖೆಯನ್ನು ಮಾಂಬಳ್ಳಿ ಶಾಖೆಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಬ್ಯಾಂಕಿನ ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ಗ್ರಾಮದಿಂದ ಹಲವು ಕಿ.ಮೀ. ದೂರದಲ್ಲಿರುವ ಮಾಂಬಳ್ಳಿ ಗ್ರಾಮಕ್ಕೆ ತೆರಳಲು ಕಷ್ಟವಾಗುತ್ತದೆ. ಹಾಗಾಗಿ ಇದನ್ನು ಇಲ್ಲೇ ಉಳಿಸಿಕೊಳ್ಳಬೇಕು ಎಂದು ಪ್ರತಿಭಟಿಸಿದರು.

    ಬ್ಯಾಂಕಿನ ವ್ಯವಸ್ಥಾಪಕ ಪ್ರದ್ಯುಮ್ನ ಮಾತನಾಡಿ. ಬ್ಯಾಂಕಿನ ನಿಯಮಗಳಿಗೆ ಅನುಸಾರವಾಗಿ ಪ್ರತಿ 3 ಕಿ.ಮೀ.ಗೆ ಒಂದರಂತೆ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಇರಬೇಕೆಂಬ ನಿಯಮವಿದೆ. ಆದರೆ ಈಗಾಗಲೇ ಯರಿಯೂರು ಗ್ರಾಮದಲ್ಲಿ ಬ್ಯಾಂಕ್ ಇರುವುದರಿಂದ ಇದನ್ನು ಮಾಂಬಳ್ಳಿ ಬ್ಯಾಂಕ್‌ಗೆ ಈ ಶಾಖೆಯನ್ನು ವಿಲೀನಗೊಳಿಸಬೇಕೆಂದು ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಈಗ ಗ್ರಾಮಸ್ಥರು ಇದು ವಿಲೀನ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು.

    ಮದ್ದೂರು ವಿರೂಪಾಕ್ಷ, ಶ್ರೀಕಂಠ, ಬೂದಿತಿಟ್ಟು ಜಗದೀಶ್, ಮಲ್ಲಿಗೆಹಳ್ಳಿ ಸುರೇಶ್, ಮಹಾದೇವ್, ಯೋಗೇಶ್, ನಟರಾಜು ಸೇರಿದಂತೆ ಅನೇಕ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts