More

    ಮತದಾನಕ್ಕೆ ಕರೆಯೋಲೆ ನೀಡಿದ ಗ್ರಾಪಂ : ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ಪ್ರಯತ್ನ

    ಕವಡಿಮಟ್ಟಿ: ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ತಾಲೂಕಿನ ಕವಡಿಮಟ್ಟಿ ಗ್ರಾಪಂ ಸಿಬ್ಬಂದಿ ಹೊಸ ಪ್ರಯತ್ನ ನಡೆಸಿದ್ದು, ಮದುವೆಯ ಮಾದರಿಯ ಕರೆಯೋಲೆ ಮುದ್ರಿಸಿ ಮನೆಮನೆಗೆ ತೆರಳಿ ವಿತರಿಸಿ ಮತದಾನಕ್ಕೆ ಆಹ್ವಾನಿಸುತ್ತಿದ್ದಾರೆ.

    ಮಹಿಳಾ ಸಿಬ್ಬಂದಿ ಮಹಿಳೆಯರಿಗೆ ಕರೆಯೋಲೆ ನೀಡಿ ಕುಂಕುಮ ಹಚ್ಚಿ ಮತದಾನಕ್ಕೆ ಕಡ್ಡಾಯವಾಗಿ ಬರುವಂತೆ ಮನವಿ ಮಾಡುತ್ತಿದ್ದಾರೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮದ ಮಹಿಳೆಯರಿಗೆ ಅರಿಶಿನ-ಕುಂಕುಮ ಹಚ್ಚಿ ಮತದಾನದ ಮಮತೆಯ ಕರೆಯೋಲೆಯನ್ನು ನೀಡಿ ಮೇ 10ರಂದು ನಡೆಯುವ ಚುನಾವಣೆ ಹಬ್ಬಕ್ಕೆ ಕುಟುಂಬದೊಡನೆ ಬಂದು ಮತ ಚಲಾಯಿಸುವಂತೆ ಆಮಂತ್ರಿಸಲಾಯಿತು.

    ಗ್ರಾಪಂ ಸಿಬ್ಬಂದಿ, ಆಶಾ ಹಾಗೂ ಇದಕ್ಕಾಗಿ ನಿಯೋಜಿಸಿದ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿ ಪಾಲ್ಗೊಂಡು ಮತದಾನ ಜಾಗೃತಿ ಮೂಡಿಸಿದರು.

    ಭಾವನಾತ್ಮಕ ಸಂದೇಶಕ್ಕೆ ಸಾಕ್ಷಿ: ಮತದಾನ ಜಾಗೃತಿ ಅಂಗವಾಗಿ ಮುದ್ರಿಸಿದ ಮತದಾನ ಮಮತೆಯ ಕರೆಯೋಲೆ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ವರ ಮತದಾನ, ವಧು ಪ್ರಜಾಪ್ರಭುತ್ವ ಎಂದು ಕಾರ್ಡ್‌ನಲ್ಲಿ ನಮೂದಿಸಲಾಗಿದೆ. ಚುನಾವಣಾ ಆಯೋಗ ನಿಶ್ಚಯಿಸಿದಂತೆ ಮೇ 10ರಂದು ನಡೆಯುವ ಶುಭ ಸಮಾರಂಭದಲ್ಲಿ ಭಾರತಮಾತೆಯ ಸುಪುತ್ರ ಮತದಾನ ಎಂದು ವಿವರಿಸಲಾಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ವಿಶೇಷ ಸೂಚನೆ ಗಮನ ಸೆಳೆಯುವಂತಿದೆ. ಇದರಲ್ಲಿ ಮತದಾನದ ಕರೆಯೋಲೆಯಲ್ಲಿ ಉಡುಗೊರೆ ಇರುವುದಿಲ್ಲ, ಹಣ, ಹೆಂಡ, ಇತರೆ ದುಷ್ಟ ಆಮಿಷಕ್ಕೆ ಒಳಗಾಗದೇ ನೈತಿಕ ಮತದಾನ ಮಾಡಿದರೆ ಅದೇ ನಿಮ್ಮ ಉಡುಗೊರೆ ಮತ್ತು ಆಶೀರ್ವಾದ ಎಂದು ತಿಳಿಸಲಾಗಿದೆ. ಮತದಾನದ ಸಮಯ ಸ್ಥಳ ಆಯಾ ಗ್ರಾಮದ ಎಲ್ಲ ಮತಗಟ್ಟೆಗಳು ಎಂದು ತಿಳಿಸಲಾಗಿದ್ದು ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆವರೆಗೆ ಎಂಬ ಮಾಹಿತಿ ನೀಡಲಾಗಿದೆ.

    ಈ ಬಾರಿ ಶೇ. 100ರಷ್ಟು ಮತ ಪ್ರಮಾಣ ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಮತದಾನ ಮಮತೆಯ ಕರೆಯೋಲೆ ಪತ್ರಿಕೆಗಳನ್ನು ಮುದ್ರಿಸಿ ಪ್ರಜಾಪ್ರಭುತ್ವ ಹಬ್ಬಕ್ಕೆ ಆಮಂತ್ರಿಸಲಾಗುತ್ತಿದೆ. ಮತದಾನದಿಂದ ಯಾರು ವಂಚಿತರಾಗದೆ ಎಲ್ಲರೂ ಮತ ಚಲಾಯಿಸಬೇಕು ಎಂದು ವಿನಂತಿಸುತ್ತೇವೆ

    ಪಿ.ಎಸ್. ಕಸನಕ್ಕಿ, ಪಿಡಿಒ ಗ್ರಾಪಂ ಕವಡಿಮಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts