More

    ಚಿಕ್ಕಮಧುರೆಗೆ ಬೇಕು ಪ್ರಗತಿಯ ಗೆರೆ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ತಾಲೂಕು ಕೇಂದ್ರ ಚಳ್ಳಕೆರೆಯಿಂದ 12 ಕಿಮೀ ದೂರದಲ್ಲಿರುವ ಚಿಕ್ಕಮಧುರೆ ಗ್ರಾಮದ ನಿವಾಸಿಗಳು ಕೃಷಿ ಹಾಗೂ ಕಂಬಳಿ ನೇಯ್ಗೆಯನ್ನೇ ನೆಚ್ಚಿಕೊಂಡು ಬದುಕು ಕಟ್ಟಿ ಕೊಂಡ ಶ್ರಮಜೀವಿಗಳು.

    ಎರಡು ಸಾವಿರ ಜನಸಂಖ್ಯೆ ಹೊಂದಿದ ಈ ಗ್ರಾಮದಲ್ಲಿ ಎಸ್ಸಿ, ಎಸ್ಟಿ, ಕುರುಬ, ಲಿಂಗಾಯತ, ರೆಡ್ಡಿ, ಮಡಿವಾಳ ಹಾಗೂ ಇತರ ಸಮುದಾಯದ ಜನರಿದ್ದಾರೆ. ಎಲ್ಲರೂ ಸಹೋದರರಂತಿದ್ದಾರೆ.

    ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಆಶ್ರಯ ನಿವಾಸಿಗಳಿಗೆ ಹಕ್ಕುಪತ್ರ ನೀಡಿಕೆ ಅಪೂರ್ಣವಾಗಿದೆ. ಸ್ಮಶಾನ ಭೂಮಿ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸಿ ಸುತ್ತಲೂ ಬೌಂಡರಿ ಗುರುತಿಸುವ ಕೆಲಸ ಆಗಬೇಕು.

    ಒಂದಷ್ಟು ಅಭಿವೃದ್ಧಿ ಸೋಕಿದ್ದರೂ ಆಗಬೇಕಾದ ಕೆಲಸಗಳು ಇನ್ನೂ ಸಾಕಷ್ಟಿವೆ. ಆಶ್ರಯ ನಿವಾಸಿಗಳಿಗೆ ಹಕ್ಕುಪತ್ರ, ಸ್ಮಾಶನ ಜಾಗ ಒತ್ತುವರಿ ತೆರವು, ಶಾಲಾ ಕೊಠಡಿ, ಸಮುದಾಯ ಭವನ ಹಾಗೂ ಸಿಸಿ ರಸ್ತೆಗಳ ನಿರ್ಮಾಣ ಕಾರ್ಯದ ತುರ್ತು ಅಗತ್ಯತೆ ಇಲ್ಲಿದೆ.

    ಬಹುಸಂಖ್ಯಾತ 150 ಕುರುಬ ಕುಟುಂಬಗಳು ಕುಲ ಕಸುಬು ಕಂಬಳಿ ನೇಯ್ಗೆಯಲ್ಲಿ ಜೀವನ ಕಂಡುಕೊಂಡಿದ್ದಾರೆ. ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಒಂದು ಕಂಬಳಿ ನೇಯ್ದು ಕುಟುಂಬ ಸಾಕುವುದು ಕಷ್ಟವಾದ ಕಾರಣ ಹಲವರು ಕಸುಬು ತ್ಯಜಿಸಿದ್ದಾರೆ.

    ಮೂಲ ಕಸುಬು ಉಳಿಸಲು ಉಣ್ಣೆ ಕೈಮಗ್ಗ ನೇಕಾರರ ಸಹಕಾರ ಸಂಘ, ಶೆಟ್ಲುಮಗ್ಗ ಸ್ಥಾಪಿಸಿದ್ದರೂ ಆರ್ಥಿಕ ಸಮಸ್ಯೆಗೆ ಮುಕ್ತಿ ದೊರೆತಿಲ್ಲ. ಮಗ್ಗದ ಘಟಕಕ್ಕೆ ತಲಾ 1 ಲಕ್ಷ ರೂ. ವೆಚ್ಚದ 25 ಮಿಷನ್ ಅಳವಡಿಸಬೇಕಿದೆ. ಜವಳಿ ಇಲಾಖೆಯಿಂದ ಕಸುಬುದಾರರು ನೆರವು ನಿರೀಕ್ಷಿಸುತ್ತಿದ್ದಾರೆ.

    ವಸತಿ ರಹಿತ ಕುಟುಂಬಗಳಿಗೆ ನಿಯೋಜನೆ ಮಾಡಲಾದ ಆಶ್ರಯ ನಿವೇಶನ ಹಂಚಿಕೆಯಲ್ಲಿ 90 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. ಗ್ರಾಮದ ಸ್ಮಶಾನ ಭೂಮಿ ಒತ್ತುವರಿ ತೆರವು ತೆರವುಗೊಳಿಸಿ ಸುತ್ತಲೂ ಬೌಂಡರಿ ಗುರುತಿಸಬೇಕಿದೆ.

    ಭೂತಪ್ಪನ ಗುಡಿಯಿಂದ ಕುರುಡಿಹಳ್ಳಿ ರಸ್ತೆವರೆಗೆ ಮೆಟ್ಲಿಂಗ್ ರಸ್ತೆ, ಮೈಲಾರ ಲಿಂಗೇಶ್ವರ ದೇವಸ್ಥಾನದಿಂದ ಕಾಂತಪ್ಪನ ಮನೆವರೆಗೆ ಸಿಸಿ ರಸ್ತೆ ಮಾಡುವ ಜತೆಗೆ 2 ಸಮುದಾಯ ಭವನ ನಿರ್ಮಿಸಬೇಕು ಎನ್ನುತ್ತಾರೆ ಸ್ಥಳೀಯರಾದ ಎಸ್.ಶ್ರುತಿ, ಟಿ.ಶಿವಣ್ಣ, ಜವಳಿ ಮಲ್ಲೇಶಪ್ಪ, ಬಿ.ಮಲ್ಲಿಕಾರ್ಜುನ, ಡಿ.ಟಿ.ಶಶಿಧರ, ಬಿ.ಕಾಂತರಾಜ್, ಟಿ.ನಿಂಗಪ್ಪ, ಎಂ.ಲಿಂಗರಾಜ ಇತರರು.

    ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಎಸ್‌ಬಿಐ ಬ್ಯಾಂಕ್ ಸೇವೆ ಇದೆ. ಆದರೆ, ಸಿಬ್ಬಂದಿ ಕೊರತೆಯಿಂದ ಗ್ರಾಮಕ್ಕೆ ಯಾವ ಇಲಾಖೆ ಸೇವೆಯೂ ಸಕಾಲಕ್ಕೆ ಲಭ್ಯವಿಲ್ಲ.

    74 ವಿದ್ಯಾಥಿಗಳು
    ಗ್ರಾಮದಲ್ಲಿ 1ರಿಂದ 7ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಪ್ರಸ್ತುತ 74 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎರಡು ಕೊಠಡಿಗಳ ಅವಶ್ಯಕತೆ ಇದೆ. ಕಾಂಪೌಂಡ್, ಅಡುಗೆ ಕೋಣೆ, ರಂಗಮಂದಿರ, ಮಕ್ಕಳ ಸಂಖ್ಯೆಗೆ ಅನುಗುಣ ಇಬ್ಬರ ಶಿಕ್ಷಕರ ನಿಯೋಜನೆ ಆಗಬೇಕಿದೆ ಎನ್ನುತ್ತಾರೆ ಶಾಲಾ ಸಮಿತಿ ಅಧ್ಯಕ್ಷ ಟಿ.ನಿಜಲಿಂಗಪ್ಪ.

    ಗ್ರಾಮದ ಬೇಡಿಕೆಗಳು
    ಸರ್ಕಾರಿ ಬಸ್ ಸೌಲಭ್ಯ.
    ಉಣ್ಣೆ ಮಗ್ಗ ಕಸುಬು ರಕ್ಷಣೆಗೆ ಶೆಟ್ಲುಮಗ್ಗ ಸ್ಥಾಪನೆಗೆ ನೆರವು.
    ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ.
    ಸಮುದಾಯ ಭವನ ಮತ್ತು ರಂಗಮಂದಿರ.
    ಶಾಲಾ ಕೊಠಡಿಗಳ ನಿರ್ಮಾಣ.
    ಸಮಯದಾಯ ಭವನ
    ಸ್ಮಶಾನ ಜಾಗದ ಒತ್ತುವರಿ ತೆರವು.

    ಹಳ್ಳಿಯಲ್ಲಿರುವ ದೇವರು
    ಮಲ್ಲೇಶ್ವರ, ಸವದತ್ತಿ ರೇಣುಕ ಯಲ್ಲಮ್ಮ, ಮೈಲಾರ ಲಿಂಗೇಶ್ವರ, ದುರ್ಗಾ ಪರಮೇಶ್ವರಿ, ಮಾರಿಕಾಂಬಾ, ಪೀರಲ ದೇವರಿರುವ ಗ್ರಾಮದಲ್ಲಿ ಡಿಸೆಂಬರ್ ಮಾಸದಲ್ಲಿ ವಿಶೇಷವಾಗಿ ಮಲ್ಲೇಶ್ವರ ಕಾರ್ತಿಕೋತ್ಸವ ಆಚರಿಸಲಾಗುತ್ತದೆ. ರಣೆ ಮಾಡಲಾಗುತ್ತದೆ. ಈ ಸಂಭ್ರಮದಲ್ಲಿ ರಥೋತ್ಸವ, ಮಾರಮ್ಮ, ಭೂತಪ್ಪ, ಎತ್ತಿನಹಬ್ಬ ಒಟ್ಟಿಗೆ ಆಚರಿಸುವುದು ಇಲ್ಲಿನ ವಿಶೇಷ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts