More

    ಹಳ್ಳಿ ಜನರು ಸರ್ಕಾರದ ಮಾರ್ಗಸೂಚಿ ತಪ್ಪದೆ ಪಾಲಿಸಿ: ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಕಿವಿಮಾತು

    ಕೂಡ್ಲಿಗಿ: ಹಳ್ಳಿಗಳಲ್ಲೂ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮೀಣ ಭಾಗದ ಜನರು ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

    ಪಟ್ಟಣದ ಹೊರವಲಯದ ಡಿಪ್ಲೊಮಾ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತಾನಾಡಿದರು. ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಜತೆಗೆ ಆರೋಗ್ಯ ಸಮೀಕ್ಷೆ ನಡೆಸುವಂತೆ ಟಿಎಚ್‌ಒಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಚ್‌ಒ ಡಾ.ಷಣ್ಮುಖ ನಾಯ್ಕ, ಈಗಾಗಲೇ ಪ್ರತಿ ಹಳ್ಳಿಯಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ನಡೆಸುತ್ತಿದ್ದಾರೆ. ತಾಂಡಾಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಆರೋಗ್ಯ ಸಿಬ್ಬಂದಿ ತೆರಳಿ ಜನರ ಆರೋಗ್ಯ ಪರೀಕ್ಷಿಸಿ ರೋಗ ಲಕ್ಷಣ ಕಂಡು ಬಂದವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

    ಕರೊನಾ ಆರೈಕೆ ಕೇಂದ್ರಗಳ ಅಗತ್ಯವಿದ್ದರೆ ಮಾಹಿತಿ ನೀಡುವಂತೆ ಶಾಸಕರು ಕೇಳಿದರು. ಗುಡೇಕೋಟೆಯಲ್ಲಿ ಆರಂಭಿಸಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಾನಹೊಸಹಳ್ಳಿಯಲ್ಲಿ ಆರಂಭಿಸಬೇಕಿದೆ ಎಂದು ಟಿಎಚ್‌ಒ ತಿಳಿಸಿದರು. ಶಾಸಕರು ಸಚಿವ ಆನಂದ ಸಿಂಗ್ ಜತೆ ಚರ್ಚಿಸುವೆ ಎಂದರು. ತಾಲೂಕು ಆಸ್ಪತ್ರೆಗೆ 40 ಆಕ್ಸಿಜನ್ ಸಿಲಿಂಡರ್ ಬೇಕಿದೆ ಎಂದು ಟಿಎಚ್‌ಒ ತಿಳಿಸುತ್ತಿದ್ದಂತೆ ಸಚಿವರಿಗೆ ಕರೆ ಮಾಡಿ ಚರ್ಚಿಸಿದರು. ಅದಕ್ಕೆ ಸ್ಪಂದಿಸಿದ ಸಚಿವ ಆನಂದ ಸಿಂಗ್, ಅಗತ್ಯ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದರು. ಆಸ್ಪತ್ರೆಗೆ ಬೇಕಾದ ಸೌಲಭ್ಯಗಳ ಪಟ್ಟಿ ನೀಡಿದರೆ ಸರ್ಕಾರದ ಗಮನಕ್ಕೆ ತರುವುದಾಗಿ ಶಾಸಕರು ತಿಳಿಸಿದರು.

    ಬಳಿಕ 15 ದಿನಗಳ ಹಿಂದೆ ಸಿಡಿಲಿನಿಂದ ಮೃತಪಟ್ಟ ನಾಲ್ಕು ಜನರ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ಡಿವೈಎಸ್ಪಿ ಹರೀಶ್, ತಹಸೀಲ್ದಾರ್ ಮಹಾಬಲೇಶ್ವರ, ಕೊಟ್ಟೂರು ತಹಸೀಲ್ದಾರ್ ಅನಿಲ್ ಕುಮಾರ, ತಾಪಂ ಇಒ ಜಿಎಂ ಬಸಣ್ಣ, ಪ್ರೊಬೆಷನರಿ ಇಒ ವಿವೇಕ್, ಮುಖಂಡರಾದ ಕೆ.ಎಚ್.ವೀರನಗೌಡ, ಕೆ.ಎಂ.ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts