More

    ಹಳ್ಳಿಗರಿಗೆ ಆರೋಗ್ಯಭಾಗ್ಯ: 247 ಚಿಕಿತ್ಸೆ, ಅತ್ಯಾಧುನಿಕ ಸವಲತ್ತು, ಸರ್ಕಾರದ ಸಂಕಲ್ಪ…

    ಬೆಂಗಳೂರು: ಗ್ರಾಮೀಣ ಜನತೆಗೆ ದಿನದ 24 ಗಂಟೆಯೂ ಹಳ್ಳಿಗಳಲ್ಲೇ ಉನ್ನತ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸುವತ್ತ ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ. ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗುರುವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಅಧಿಕಾರಿಗಳ ತಂಡದ ಜತೆ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಾತ್ಯಕ್ಷಿಕೆ, ಯೋಜನೆ ಸ್ವರೂಪದ ಬಗ್ಗೆ ರ್ಚಚಿಸಿದ ಬಳಿಕ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಘೋಷಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಬೇಕಾದ ಅನುದಾನವನ್ನು ಮುಂದಿನ ಬಜೆಟ್​ನಲ್ಲಿ ಕಾದಿರಿಸಲಾಗುವುದು. ಸರ್ಕಾರದ 20 ಅಂಶಗಳ ಕಾರ್ಯಕ್ರಮದಲ್ಲಿ 2380 ಪಿಎಚ್​ಸಿಗಳಲ್ಲಿ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಸವಲತ್ತು, ವೈದ್ಯರು ಮತ್ತು ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

    ಪ್ರಧಾನಿ ಮೋದಿ ಆಶಯ: ಹೊಸ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಜನರು ಚಿಕಿತ್ಸೆಗಾಗಿ ತಾಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪಲಿದೆ. ಅಲ್ಲದೆ, ಅತ್ಯಾಧುನಿಕ ಉಪಕರಣಗಳನ್ನು ಒದಗಿಸುವುದರಿಂದ ಉತ್ತಮ ಗುಣಮಟ್ಟದ ಸೇವೆಯೂ ಲಭ್ಯವಾಗಲಿದೆ. ಜನರ ಯೋಗಕ್ಷೇಮದ ಕುರಿತು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ ಆಶಯದಂತೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ದಿನದ 24 ತಾಸು ಹಾಗೂ ವಾರದ ಎಲ್ಲ ದಿನಗಳಲ್ಲಿ ಕಾರ್ಯನಿರ್ವಹಿಸುವ ಪಿಎಚ್​ಸಿ ಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು. ಪ್ರಾತ್ಯಕ್ಷಿಕೆ, ಯೋಜನೆ ಕುರಿತು ಚರ್ಚಾ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಗ್ರಾಮೀಣ ಸೇವೆ ಕಡ್ಡಾಯ

    ಎಂಬಿಬಿಎಸ್ ಮುಗಿಸಿದ ವೈದ್ಯರಿಗೆ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದರಿಂದ ಉನ್ನತೀಕರಿಸಿದ ಪಿಎಚ್​ಸಿಗಳಿಗೆ ಬೇಕಾದ ವೈದ್ಯರ ಕೊರತೆ ನೀಗಲಿದೆ. ಸಮರ್ಪಕ ವಸತಿ ಸೌಲಭ್ಯವಿಲ್ಲವೆಂಬ ಕಾರಣಕ್ಕೆ ವೈದ್ಯರು, ಸಿಬ್ಬಂದಿ ಪಿಎಚ್​ಸಿ ಸೇವೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ಮಾದರಿ ಪಿಎಚ್​ಸಿಗಳ ಆವರಣದಲ್ಲಿ ವೈದ್ಯರು, ಸಿಬ್ಬಂದಿಗೆ ಸುಸಜ್ಜಿತ ವಸತಿಗೃಹ ನಿರ್ವಿುಸಲಿದ್ದು, ಆಂಬುಲೆನ್ಸ್ ಸೇವೆಯನ್ನೂ ಒದಗಿಸಲಾಗುತ್ತದೆ ಎಂದು ಬಿಎಸ್​ವೈ ತಿಳಿಸಿದರು.

    ಯೋಜನೆಯ ಮುಖ್ಯಾಂಶಗಳು

    •  2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಧುನಿಕತೆಯ ಸ್ಪರ್ಶ
    •  ದಿನದ 24 ಗಂಟೆ ಹಾಗೂ ವಾರದ ಏಳು ದಿನವೂ ಕಾರ್ಯ ನಿರ್ವಹಣೆ
    •  ಮಹಿಳಾ ವೈದ್ಯರು, ಆಯುಷ್ ಸೇರಿದಂತೆ 3-4 ಜನ ವೈದ್ಯರ ಲಭ್ಯತೆ
    •  ಹಾಸಿಗೆಗಳ ಸಾಮರ್ಥ್ಯ 6 ರಿಂದ 20ಕ್ಕೇರಿಕೆ, 2 ಎಕರೆ ಪ್ರದೇಶದಲ್ಲಿ ಹೊಸ ಪಿಎಚ್​ಸಿಗಳ ನಿರ್ವಣ, 6-8 ಕೋಟಿ ರೂ. ಖರ್ಚು
    •  ರೇಡಿಯಾಲಜಿ ವಿಭಾಗದಲ್ಲಿ ಎಕ್ಸ್​ರೇ ಹಾಗೂ ಅಲ್ಟ್ರಾ ಸೌಂಡ್ ಸೌಲಭ್ಯ
    •  ಪ್ರತ್ಯೇಕ ಸಣ್ಣ ಶಸ್ತ್ರಚಿಕಿತ್ಸಾ ಕೊಠಡಿ, ತುರ್ತು ಚಿಕಿತ್ಸಾ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಾಥಮಿಕ ಹಂತದ ಪ್ರಯೋಗಾಲಯ
    •  ಮಧುಮೇಹ ಪರೀಕ್ಷೆ, ರಕ್ತ ಪರೀಕ್ಷೆ ಸೇರಿ ನಾನಾ ಪರೀಕ್ಷೆಗಳನ್ನು ಉಚಿತ ವಾಗಿ ಮಾಡುವ ವ್ಯವಸ್ಥೆ ಇರಲಿದೆ
    •  ಸಣ್ಣ ಆಸ್ಪತ್ರೆಗಳಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆವರೆಗೂ ಅಂತರ್ಜಾಲ ಬಳಸಿ ಸಂಪರ್ಕ ಕಲ್ಪಿಸುವ ಇ-ಆಸ್ಪತ್ರೆ ಸೌಲಭ್ಯ
    •  ನವಜಾತ ಶಿಶುವಿನ ಕಾಳಜಿವಹಿಸುವ ಘಟಕ ಹಾಗೂ ಹಾಲುಣಿಸುವ ಕೊಠಡಿ
    •  ಹೊರಗಿನ ಬೆಳಕು ಸುಲಭವಾಗಿ ಒಳಗೆ ಬರುವಂತಹ ವ್ಯವಸ್ಥೆ, ಹಸಿರು ತುಂಬಿದ ತಾರಸಿ
    •  ರೋಗಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರಲು ಯೋಗ ಹಾಗೂ ವೆಲ್​ನೆಸ್ ಕೇಂದ್ರ
    •  ವೈದ್ಯರಿಗೆ 2 ಹಾಸಿಗೆ ಕೊಠಡಿಗಳುಳ್ಳ ವಸತಿ, ಎಎನ್​ಎಂ ಸಿಬ್ಬಂದಿ ಮತ್ತು ನರ್ಸ್​ಗಳಿಗೆ 1 ಹಾಸಿಗೆ ಕೊಠಡಿಯುಳ್ಳ ವಸತಿ ಸೌಲಭ್ಯ
    •  ಜಾಗಿಂಗ್ ಪಥ, ಔಷಧೀಯ ಸಸ್ಯಗಳ ಉದ್ಯಾನ, ಮಕ್ಕಳಿಗೆ ಆಟವಾಡಲು ಹೊರಾಂಗಣ ಮೈದಾನ ನಿರ್ಮಾಣ
    •  80 ಸಾವಿರ ಜನಸಂಖ್ಯೆಗೆ ಒಂದರಂತೆ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಕೂಡ ಮೇಲ್ದರ್ಜೆಗೇರಿಸಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು
    •  200 ಹಾಸಿಗೆಗಳ ಜಿಲ್ಲಾಸ್ಪತ್ರೆಗಳು ಮುಂದಿನ ದಿನಗಳಲ್ಲಿ 500-700 ಹಾಸಿಗೆಯ ಆಸ್ಪತ್ರೆಯಾಗಿ ಅಭಿವೃದ್ಧಿಯಾಗಲಿವೆ. ಬೆಂಗಳೂರು, ಹುಬ್ಬಳ್ಳಿಗೆ ಆರೋಗ್ಯ ಕೇಂದ್ರಗಳು ಕೇಂದ್ರೀಕೃತವಾಗದೆ ಎಲ್ಲ ಕಡೆಗೂ ವಿಸ್ತರಿಸಲಾಗುವುದು
    •  1 ಲಕ್ಷ ಜನಸಂಖ್ಯೆಗೆ ಒಂದು ಮಾತ್ರವಿದ್ದ ಆಂಬುಲೆನ್ಸ್ ಸೇವೆಯನ್ನು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಸ್ತರಿಸಲಾಗುವುದು
    •  ವಾಹನ ನಿಲುಗಡೆಗೂ ವ್ಯವಸ್ಥೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts