More

    ಶಾಲೆ ಶತಮಾನೋತ್ಸವಕ್ಕೆ ಗ್ರಾಮಾಭಿವೃದ್ಧಿ

    ಕೋಲಾರ: ರಾಜಕಲ್ಲಹಳ್ಳಿಯ ಸರ್ಕಾರಿ ಶಾಲೆಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯ ರೀತಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

    ತಾಲೂಕು ಕ್ಯಾಲನೂರು ಸಮೀಪದ ರಾಜಕಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಸೋಮವಾರ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಆಯೋಜಿಸಿದ್ದ ಶತಮಾನೋತ್ಸವ ಸಂಭ್ರಮ, ಗುರುವಂದನಾ ಹಾಗೂ ರಂಗಮಂಟಪ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
    ಒಂದು ಶಾಲೆ ನೂರು ವರ್ಷಗಳು ಪೂರೈಸುವ ಸಂದರ್ಭದ ಹಿಂದೆ ಬಹಳಷ್ಟು ಶ್ರಮ ಇರುತ್ತದೆ. ಇಲ್ಲಿಂದಲೇ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಟ್ಟಿದ್ದಾರೆ. ಇಂತಹ ಗ್ರಾಮವನ್ನು ಮಾದರಿ ಮಾಡಲು ಮುಂದಿನ 15 ದಿನಗಳಲ್ಲಿ ಗ್ರಾಮದಲ್ಲಿ ಸಭೆ ಮಾಡಿ ಸಮಸ್ಯೆಗಳ ಜತೆಗೆ ಕಾಮಗಾರಿಗಳ ಪಟ್ಟಿ ಮಾಡಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
    ಈಗಾಗಲೇ ಸಿದ್ದರಾಮಯ್ಯ ಅವರು 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಜತೆಗೆ ನಾನೂ ಶಿಕ್ಷಣ, ಆರೋಗ್ಯ, ಉದ್ಯೋಗ, ಮತ್ತು ಕೃಷಿಗೆ ಆಧ್ಯತೆ ನೀಡಿ ಸರ್ಕಾರದ ಅನುದಾನ ತಂದು ಗ್ರಾಮಾಭಿವೃದ್ಧಿ ಮಾಡಲಾಗುವುದು ಎಂದರು.
    ನಗರೂರು ಶೈಲೇಶ್ವರ ಗಾಣಿಗರ ಸಂಸ್ಥಾನ ಮಠದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಮಾತನಾಡಿ, ಸಾವಿರಾರು ಕುಟುಂಬಗಳಿಗೆ ಬೆಳಕು ನೀಡುವ ನಿಟ್ಟಿನಲ್ಲಿ ರಾಜಕಲ್ಲಹಳ್ಳಿ ಶಾಲೆಯು ನಡೆದುಕೊಂಡು ಬಂದಿದೆ. ಶಾಲೆಯ ಹಳೇ ವಿದ್ಯಾರ್ಥಿಗಳು ಶಾಲೆ ಅಭಿವೃದ್ಧಿ ಮಾಡಲು ಮುಂದಾಗಿದ್ದು, ಮುಂದಿನ ಮನುಷ್ಯ ಜನ್ಮಕ್ಕೆ ಸಹಕಾರಿಯಾಗುತ್ತದೆ ಎಂದರು.
    ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಸರ್ಕಾರಿ ಶಾಲೆಗಳನ್ನು ಗುರುತಿಸಿ ಮೂಲ ಸೌಕರ್ಯಗಳನ್ನು ಒದಗಿಸಿದ್ದೇ ಆದಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಈಗಾಗಲೇ ಕೋಲಾರದ ಪೇಟೆಚಾಮನಹಳ್ಳಿ ಶಾಲೆಯ ಶತಮಾನೋತ್ಸವ ಅಂಗವಾಗಿ ಸುಮಾರು 30 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಶಾಲೆಗೂ ಶೌಚಗೃಹ ದುರಸ್ಥಿ ಮಾಡಲು ಅನುದಾನ ಕೇಳಲಾಗಿದೆ ಎಂದರು.
    ವಿಧಾನ ಪರಿಷತ್​ ಮಾಜಿ ಸಭಾಪತಿ ವಿ.ಆರ್​ ಸುದರ್ಶನ್​ ಮಾತನಾಡಿ, ಖಾಸಗಿ ಶಾಲೆಗಳ ಮೇಲೆ ಪಾಲಕರು ವ್ಯಾಮೋಹ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ನೂರು ವರ್ಷಗಳು ಪೂರೈಸಿದ ಶಾಲೆಗಳನ್ನು ಪಟ್ಟಿ ಮಾಡಿ ಅಭಿವೃದ್ಧಿ ಮಾಡಬೇಕು. ಇಲ್ಲದೇ ಹೋದರೆ ಮುಂದೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಕಷ್ಟ. ಜತೆಗೆ ಸಂವಿಧಾನವು ನಮಗೆಲ್ಲ ಹಕ್ಕು ಮತ್ತು ಜವಾಬ್ದಾರಿ ಕೊಟ್ಟಿದ್ದು, ಅವುಗಳನ್ನು ಜಾರಿ ಮಾಡಬೇಕು. ಸಂವಿಧಾನದ ಬಗ್ಗೆ ಶಾಲಾ ಹಂತದಲ್ಲಿ ಮಕ್ಕಳಿಗೆ ಮನವರಿಕೆ ಮಾಡಬೇಕು ಎಂದರು.
    ಗ್ರಾಮದ ಅಪ್ಪಯ್ಯಣ್ಣ ಮತ್ತು ಮಂಜುನಾಥ್​ ಕುಟುಂಬದವರು ಶಾಲೆ ಆವರಣದಲ್ಲಿ ನಿರ್ಮಿಸಿದ ರಂಗಮಂಟಪವನ್ನು ಕೊಡುಗೆಯಾಗಿ ಹಸ್ತಾಂತರಿಸಿದರು.

    ವೇದಿಕೆಯಲ್ಲಿ ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಸ್ವಾಮೀಜಿ, ಶಿವನಾಪುರದ ಶ್ರೀ, ಪ್ರಣವಾನಂದಪುರಿ ಸ್ವಾಮೀಜಿ, ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​, ಬಿಇಒ ಕನ್ನಯ್ಯ, ತಾಪಂ ಇಒ ಮುನಿಯಪ್ಪ, ಟಿಎಪಿಸಿಎಂಎಸ್​ ನಿರ್ದೇಶಕ ನಾಗನಾಳ ಸೋಮಣ್ಣ, ವೇಮಗಲ್​ ಸೊಸೈಟಿ ಅಧ್ಯಕ್ಷ ನಂಜುಂಡಗೌಡ, ಚಂಜಿಮಲೆ ರಮೇಶ್​, ಮೈಲಾಂಡಹಳ್ಳಿ ಮುರಳಿ, ಜನಪನಹಳ್ಳಿ ನವೀನ್​ಕುಮಾರ್​, ವೆಂಕಟರಾಮೇಗೌಡ, ಮುತ್ತಣ್ಣ, ಲೋಕೇಶ್​, ಸುರೇಶ್​, ಕೆ.ಎಸ್​ ಮಂಜುನಾಥ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts