ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ 2ನೇ ಕ್ಯಾಂಪ್ ಮತ್ತು ಲಿಂಗಾಪುರ ಅವಳಿ ಗ್ರಾಮಗಳಲ್ಲಿ ಗ್ರಾಮ ದೇವತೆಗಳಾದ ಮಾರಿಯಮ್ಮ ದೇವಿ ಹಾಗೂ ಮುತ್ತು ಮಾರಿಯಮ್ಮ ದೇವಿಯರ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ಸಂಜೆ ಗ್ರಾಮದ ಮಹಿಳೆಯರು ದೇವಾಲಯಕ್ಕೆ ತೆರಳಿ ಸಿಹಿ ಪ್ರಸಾದ, ಉಡಿಯಕ್ಕಿ, ಹಣ್ಣು-ಕಾಯಿ, ಸೀರೆಯನ್ನು ದೇವಿಯರಿಗೆ ಅರ್ಪಿಸಿದರು.
ಮಂಗಳವಾರ ಮಾರಿಯಮ್ಮ ದೇವಿ ಹಾಗೂ ಮುತ್ತು ಮಾರಿಯಮ್ಮ ಮತ್ತು ಕನ್ನಿಯಮ್ಮ ದೇವಿ ಮೂರ್ತಿಗಳನ್ನು ಹೂವಿನಿಂದ ಅಲಂಕರಿಸಿದ ಕರಗಗಳಿಗೆ ಬಾಲನಾಯಕನ ಕೆರೆಯ ಏರಿಯ ಮೇಲೆ ಇರುವ ಮುನೀಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರು ಕರಗವನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮೂಲಕ ಗ್ರಾಮ ಪ್ರವೇಶಿಸಿದರು.
ಮಧ್ಯಾಹ್ನದ ಸುಮಾರಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ, ಮಹಿಳೆಯರು ದೇವಿಯರಿಗೆ ರಾಗಿ ಅಂಬಲಿ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು.
ಸಂಜೆ ದೇವಿಗೆ ಬಲಿ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬುಧವಾರ ಸಂಜೆ ಕರಗ ಉತ್ಸವ ಮೂರ್ತಿಗಳ ವಿಸರ್ಜನಾ ಪೂಜೆ ನಡೆಸುವ ಮೂಲಕ ಉತ್ಸವ ಅಂತ್ಯಗೊಳಿಸಲಾಗುವುದು.