More

    ಹಳ್ಳಿಮಕ್ಕಳ ಪ್ರೋಮೊಗೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ!; ಶಾಲಾ ಮಕ್ಕಳೇ ತಯಾರಿಸಿರುವ ವಿಡಿಯೋ

    ಪರೀಕ್ಷಾ ಪೆ ಚರ್ಚಾ- ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಕಾರ್ಯಕ್ರಮ. ಅದಕ್ಕೆ ಈ ವರ್ಷ ಪಶ್ಚಿಮಘಟ್ಟಗಳ ತಪ್ಪಲಿನ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆಯೊಂದರ ಮಕ್ಕಳು ಹಾಗೂ ಶಿಕ್ಷಕರು ತಯಾರಿಸಿ ಕಳಿಸಿದ ವಿಡಿಯೋ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಅತ್ಯಾಧುನಿಕ ಗೂಗಲ್ ಅರ್ಥ್ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಅದ್ಭುತ ಪ್ರಮೋಶನಲ್ ವಿಡಿಯೋ ಇದು. ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಶಿಕ್ಷಣ ವಿಭಾಗದ ನಿರ್ದೇಶಕರು, ಶಿಕ್ಷಣ ತಜ್ಞರು, ತಂತ್ರಜ್ಞಾನ ಪಂಡಿತರು ಹಾಗೂ ಶಿಕ್ಷಣಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಈ ಸಾಧನೆ ಮಾಡಿದೆ. ಡಿಡಿ ಇಂಡಿಯಾ, ಡಿಡಿ ನ್ಯೂಸ್, ಡಿಡಿ ಚಂದನ ಮೊದಲಾದ ವಾಹಿನಿಗಳಲ್ಲಿ ಹಾಗೂ ಡಿಡಿ ನ್ಯೂಸ್​ನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಈಗಾಗಲೇ ಪ್ರಸಾರವಾಗಿದೆ. ಮುಖ್ಯಶಿಕ್ಷಕ ಶೇಖರ್ ಶೆಟ್ಟಿಗಾರ್ ಮಾರ್ಗದರ್ಶನದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ ಮರಕಾಲ ನಿರ್ದೇಶನದಲ್ಲಿ ಐವರು ವಿದ್ಯಾರ್ಥಿನಿಯರು ಹಾಗೂ ಇಬ್ಬರು ವಿದ್ಯಾರ್ಥಿಗಳು ಈ ವಿಡಿಯೋ ರೂಪಿಸಿದ್ದಾರೆ. ಮಕ್ಕಳ ಮನೆ, ಶಾಲೆಯ ಸುತ್ತಲಿನ ಪ್ರದೇಶಗಳನ್ನು ವೀಕ್ಷಕರಿಗೆ ತೋರಿಸಲು ಗೂಗಲ್ ಅರ್ಥ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಮೊಬೈಲ್ ಫೋನ್ ಬಳಸಿ ಡ್ರೋನ್ ಎಫೆಕ್ಟ್​ನ ಕ್ಲಿಪ್​ಗಳನ್ನು ಸೇರಿಸಿದ್ದಾರೆ. ವಿಡಿಯೋದ ಅವಧಿ ಕೇವಲ 2 ನಿಮಿಷ 52 ಸೆಕೆಂಡ್​ಗಳಾಗಿದ್ದರೂ, ಅಷ್ಟರೊಳಗೇ 7 ವಿದ್ಯಾರ್ಥಿಗಳ ಮನದ ಮಾತುಗಳನ್ನು, ವಿದ್ಯಾರ್ಥಿಗಳ ಮನೆ ಹಾಗೂ ಶಾಲೆಯ ಸುತ್ತಲಿನ ಪ್ರದೇಶಗಳನ್ನು ಕವರ್ ಮಾಡಿರುವುದು ಗಮನಾರ್ಹ.

    ಏನಿದು ಪರೀಕ್ಷಾ ಪೆ ಚರ್ಚಾ?: ಬಹುತೇಕ ಮಕ್ಕಳಿಗೆ ಪರೀಕ್ಷೆ ಎಂಬ ಪದವೇ ನಡುಕ ಹುಟ್ಟಿಸುತ್ತದೆ, ಜ್ವರ ಬರಿಸುತ್ತದೆ. ಮನೆಯಲ್ಲಿ, ತರಗತಿಯಲ್ಲಿ ಅತ್ಯಂತ ಚೂಟಿಯಾದ ಮಕ್ಕಳೂ ಪರೀಕ್ಷೆ ಎಂಬ ಮೂರಕ್ಷರದ ಎದುರು ನಿಶ್ಚೇಷ್ಟರಾಗಿ ಮಂಡಿಯೂರುತ್ತಾರೆ. ಪರೀಕ್ಷೆಯ ಭಯವೇ ಅಂಥದ್ದು. ಭಾರತದಲ್ಲಿ ಪ್ರತಿ ವರ್ಷ ಹಲವಾರು ಮಕ್ಕಳು ಪರೀಕ್ಷೆ ಭಯದಿಂದ ಸಾವಿಗೀಡಾಗುತ್ತಾರೆ. ಮಗುವಿನ ಸಾರಸತ್ವವನ್ನು ಶೋಧಿಸಬೇಕಾದ ಪರೀಕ್ಷೆಯೇ ಅದರ ಜೀವವನ್ನು ಆಪೋಶನ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸ. ಮಕ್ಕಳ ಮನಸ್ಸಿನಿಂದ ಪರೀಕ್ಷೆಯ ಭಯ ಹೋಗಲಾಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಆರಂಭಿಸಿದ ಕಾರ್ಯಕ್ರಮವೇ ‘ಪರೀಕ್ಷಾ ಪೆ ಚರ್ಚಾ’. ಮಕ್ಕಳ ಜತೆ ಸಂವಾದ ನಡೆಸಿ, ಧೈರ್ಯ ತುಂಬುವ ಪ್ರಯತ್ನವಿದು.

    ನೀವೂ ನೋಡಿ ಈ ವಿಡಿಯೋ…: ಅಲ್ಬಾಡಿ-ಆರ್ಡಿಯ ಶಾಲಾ ಮಕ್ಕಳ ‘ಪರೀಕ್ಷಾ ಪೆ ಚರ್ಚಾ’ ಪ್ರಮೋಶನಲ್ ವಿಡಿಯೋವನ್ನು ನೀವೂ ನೋಡಬೇಕೆ? ಹಾಗಿದ್ದರೆ ನಿಮ್ಮ ಮೊಬೈಲ್ ಫೋನ್​ನಲ್ಲಿ ಈ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಿ.

    ಆನ್​ಲೈನ್​ನಲ್ಲೇ ನಡೆಯಲಿದೆ ಸಂವಾದ: ಈ ವರ್ಷ ನಡೆಯುತ್ತಿರುವುದು ನಾಲ್ಕನೇ ಆವೃತ್ತಿ. ಇನ್ನು ಕೆಲವೇ ದಿನಗಳಲ್ಲಿ ಸಂವಾದ ನಡೆಯಲಿದೆ. ಈ ಬಾರಿ ಪ್ರಧಾನಿ ಜತೆ ಸಂವಾದದಲ್ಲಿ ಭಾಗವಹಿಸಲು 10.39 ಲಕ್ಷ ಮಕ್ಕಳು ಉತ್ಸುಕರಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1500 ಮಕ್ಕಳು ಸಂವಾದ ವೀಕ್ಷಿಸಲು ಮತ್ತು 30 ಮಕ್ಕಳು ಪ್ರಧಾನಿ ಜತೆ ಮಾತನಾಡಲು ಆಯ್ಕೆಯಾಗಿದ್ದಾರೆ. ಅದರಲ್ಲಿ ಕರ್ನಾಟಕದ ಇಬ್ಬರು ಮಕ್ಕಳೂ ಸೇರಿದ್ದಾರೆ. ಉಡುಪಿ ಜಿಲ್ಲೆಯ ಆರ್ಡಿ ಶಾಲೆಯ ಅನುಷಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ತಾವರೆಕೆರೆ ಸರ್ಕಾರಿ ಶಾಲೆಯ ಮನೋಜ್ ಅವರೇ ಕರ್ನಾಟಕದಿಂದ ಆಯ್ಕೆಯಾದ ಅದೃಷ್ಟಶಾಲಿಗಳು. ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ‘ಪರೀಕ್ಷಾ ಪೆ ಚರ್ಚಾ’ ಆನ್​ಲೈನ್​ನಲ್ಲಿಯೇ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts