More

    ಮುಂಜಾಗ್ರತೆ ಮರೆತು ಸಾರ್ವಜನಿಕರ ಓಡಾಟ: ಅಂತರ ಕಾಯ್ದುಕೊಳ್ಳದ ಜನ

    ರಾಮನಗರ: ಜಿಲ್ಲೆಯಲ್ಲಿ ಕರೊನಾ ಸೋಂಕು ಕಳೆದ 10 ದಿನಗಳಿಂದಲೂ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಕರೊನಾ ವಿರುದ್ಧ ಜವಾಬ್ದಾರಿಯುತವಾಗಿ ಹೋರಾಟ ಮಾಡಬೇಕಾದ ಜನತೆಯನ್ನು ನಿಯಂತ್ರಣ ಮಾಡುವುದು ಮಾತ್ರ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

    ಜಿಲ್ಲೆಯಲ್ಲಿ ಅ.22ರ ಅಂತ್ಯಕ್ಕೆ ಸೋಂಕಿತರ ಸಂಖ್ಯೆ 7 ಸಾವಿರ ಗಡಿಗೆ ತಲುಪಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಗುಣಮುಖರಾದವರೂ ಇದ್ದು, ಈಗ ಕೊಂಚ ಮಟ್ಟಿಗೆ ಆತಂಕ ಕಡಿಮೆಯಾಗಿದೆ. ಇದರ ನಡುವೆ ಅಧಿಕಾರಿಗಳು, ನ್ಯಾಯಾಧೀಶರು, ಕರೊನಾ ವಾರಿಯರ್ಸ್ ಬೀದಿಗೆ ಇಳಿದು ಕರೊನಾ ವಿರುದ್ಧ ಗೆಲುವು ಸಾಧಿಸಲು ಮಾಸ್ಕ್ ಧರಿಸುವುದು ಸೇರಿದಂತೆ ಹಲವಾರು ಅಗತ್ಯ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನತೆ, ಮಾರುಕಟ್ಟೆ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳದೆ ನಿರ್ಭಯವಾಗಿ ಓಡಾಡುತ್ತಿದ್ದಾರೆ.

    ಕನಕಪುರ, ಮಾಗಡಿ, ಚನ್ನಪಟ್ಟಣ, ರಾಮನಗರ, ಹಾರೋಹಳ್ಳಿ, ಬಿಡದಿ, ಕುದೂರುಗಳಲ್ಲಿ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಜನತೆ ಕರೊನಾ ಭಯವೇ ಇಲ್ಲದ್ದು ಕಂಡು ಬಂತು. ಹಬ್ಬಗಳು ಸಾಲು ಸಾಲು ಇರುವ ಸಂದರ್ಭದಲ್ಲಿ ಖರೀದಿಗಾಗಿ ಪಟ್ಟಣ ಪ್ರದೇಶಗಳಿಗೆ ಬರುವ ಜನತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಧರಿಸದೇ ವ್ಯಾಪಾರ ಮಾಡುವ ದೃಶ್ಯಗಳು ಕಂಡು ಬಂದವು. ಅಂಗಡಿ ಮಳಿಗೆಗಳಲ್ಲಿ ಮಾಸ್ಕ್ ಧರಿಸುವಂತೆ ಸೂಚನಾ ಫಲಕಗಳನ್ನು ಹಾಕಿ ಕಾಟಾಚಾರಕ್ಕೆ ಎನ್ನುವಂತೆ ಸ್ಯಾನಿಟೈಜರ್ ಇಡಲಾಗಿದೆಯಾದರೂ ಇವುಗಳನ್ನು ತಪ್ಪದೇ ಬಳಕೆ ಮಾಡಿ ಎಂದು ಹೇಳವ ಗೋಜಿಗೆ ಹೋಗುತ್ತಿಲ್ಲ.

    ದಂಡಕ್ಕೂ ಬಗ್ಗುತ್ತಿಲ್ಲ

    ಸರ್ಕಾರ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಓಡಾಟ ಮಾಡುವವಿಗೆ ದಂಡ ವಿಧಿಸುವ ಆದೇಶವನ್ನು ಹೊರಡಿಸಿದೆ. ಇದರ ಫಲವಾಗಿ ಅಧಿಕಾರಿಗಳು ಅದರಲ್ಲೂ ಪೊಲೀಸ್ ಇಲಾಖೆ ನಿರಂತರವಾಗಿ ದಂಡ ಪ್ರಯೋಗ ಮಾಡುತ್ತಿದೆಯಾದರೂ, ನೂರು ರೂಪಾಯಿ ತಾನೆ ಕಟ್ಟಿದರಾಯಿತು ಎನ್ನುವ ಮನೋಭಾವದಲ್ಲಿ ಸಾರ್ವಜನಿಕರು ಮೈ ಮರೆತಿದ್ದಾರೆ. ಜಿಲ್ಲೆಯ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ದಂಡ ಹಾಕುವ ಪ್ರಕ್ರಿಯೆ ಚಾಲ್ತಿಯಲ್ಲಿ ಇದೆಯಾದರೂ ಇದಕ್ಕೆ ಜನತೆ ಖ್ಯಾರೆ ಎನ್ನುತ್ತಿಲ್ಲ. ದಂಡ ಕಟ್ಟೋದು ಮುಖ್ಯವಲ್ಲ ಮಾಸ್ಕ್ ಹಾಕಿಕೊಳ್ಳಿ ಇದರಿಂದ ರೋಗ ನಮಗೆ ಬಾರದಂತೆ ಮತ್ತು ಮತ್ತೊಬ್ಬರಿಗೆ ಹರಡದಂತೆ ತಡೆಯಬಹುದು ಎನ್ನುವ ಸೂಚನೆಯನ್ನು ದಂಡ ಹಾಕುವ ವೇಳೆ ನೀಡಿದರೂ, ಕರೊನಾ ಏನಾಗಲ್ಲ ಬಿಡಿ ಸಾರ್ ಎನ್ನುವ ಉತ್ತರ ಕೊಡುತ್ತಾರೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.

    ಕರೊನಾ ಇಲ್ಲವಾಗಿಸಬೇಕಾದರೆ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ಜಿಲ್ಲೆಯಲ್ಲಿ ಸದ್ಯಕ್ಕೆ ಕರೊನಾ ನಿಯಂತ್ರಣಕ್ಕೆ ಬರುತ್ತಿದೆ. ಇದು ಮುಂದುವರಿಯಬೇಕಾದರೆ ಪ್ರತಿಯೊಬ್ಬರು ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಜರ್ ಬಳಕೆ ಮಾಡುವುದನ್ನು ತಪ್ಪಿಸಬಾರದು. ಈ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.

    | ಡಾ.ಬಿ.ಎಸ್.ನಿರಂಜನ್ ಡಿಎಚ್​ಒ ರಾಮನಗರ

    ಸಿಬ್ಬಂದಿ ಅಸಹಾಯಕತೆ

    ದಂಡ ಹಾಕುವ ಪ್ರಕ್ರಿಯೆ ಜತೆಗೆ ಆಗ್ಗಾಗೆ ವಿವಿಧ ಮಾಧ್ಯಮಗಳ ಮೂಲಕ ಕರೊನಾ ವಿರುದ್ಧ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆದರೆ, ಹೋಟೆಲ್​ಗಳು, ಅಂಗಡಿ ಮುಂಗಟ್ಟುಗಳು, ಮಾರುಕಟ್ಟೆಗಳ, ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಗಳಲ್ಲಿ ಜನತೆ ನಡೆದುಕೊಳ್ಳುತ್ತಿರುವ ರೀತಿ ಸಂಪೂರ್ಣವಾಗಿ ನಗೆಪಾಟಲಿಗೀಡಾಗಿದೆ. 6 ಅಂತರ ಕಾಯ್ದುಕೊಳ್ಳುವ ಮಾತಿರಿಲಿ, ಕನಿಷ್ಠ ಹತ್ತಿರ ನಿಂತು ಮಾತನಾಡುವ ಮಾಸ್ಕ್ ಧರಿಸುವ ಗೋಜಿಗೂ ಹೋಗದೇ ಇರುವುದು ಅಧಿಕಾರಿಗಳು ಮತ್ತು ಪೊಲೀಸ್ ವರ್ಗ ಅಸಾಯಕರಾಗುವಂತೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts