More

    ವೇದ ದರ್ಶನ 92| ವೇದಗಳಲ್ಲಿ ಏಕದೇವಭಾವ

    ಸೃಷ್ಟಿ, ಸ್ಥಿತಿ, ಲಯಗಳೂ ಒಂದಕ್ಕೊಂದು ಹೇಗೆ ಸಂಬಂಧಿಸಿವೆ? ಯಾವುದಕ್ಕಾಗಿ ಯಾವುದು ಇದೆ ಎಂದರೆ: 1) ಸೃಷ್ಟಿಗಾಗಿ ಸೃಷ್ಟಿಯಲ್ಲ – ಸ್ಥಿತಿಗಾಗಿ ಸೃಷ್ಟಿ, 2) ಲಯಕ್ಕಾಗಿ ಸೃಷ್ಟಿಯಲ್ಲ – ಸ್ಥಿತಿಗಾಗಿ ಲಯ, 3) ಸ್ಥಿತಿಗಾಗಿ ಸ್ಥಿತಿ; ಸ್ಥಿತಿಗಾಗಿ ಸೃಷ್ಟಿ; ಸ್ಥಿತಿಗಾಗಿ ಲಯ. – ಅಂದರೆ ದೇವರು ಎಲ್ಲರನ್ನೂ ರಕ್ಷಿಸಲು, ರಕ್ಷಕತ್ತ್ವವನ್ನೇ ಪ್ರಧಾನವನ್ನಾಗಿ ಹೊಂದಿ, ಲಯದಿಂದಲೂ, ಪುನಃಸೃಷ್ಟಿಯಿಂದಲೂ, ಜಗದ್ಧಿತವನ್ನೇ ಆಚರಿಸುತ್ತಿದ್ದಾನೆಂಬುದು ಭಾಗವತದ ಮಾರ್ವಿುಕ ಕಥೆಯ ಒಳ ಮರ್ಮ, ತಾತ್ಪರ್ಯವೇ ವಿನಾ ದೇವತಾಂತರ ದೂಷಣವಲ್ಲ.

    ಒಂದು ಮಣಿಹಾರದಲ್ಲಿ ಎಲ್ಲ ಬಣ್ಣದ ಸಮಾಕಾರದ ಮಣಿಗಳಿದ್ದರೂ, ದೊಡ್ಡದಾದ ‘‘ನಾಯಕಮಣಿ’’ ಎಂಬುದೊಂದಿದೆಯಷ್ಟೆ. ಇದು ಮಧ್ಯದಲ್ಲಿ ಬರುವಂತೆ ಹಾರವನ್ನು ಧರಿಸುವುದು ಚೆನ್ನಾಗಿ ಕಾಣುವುದು. ಪರಮಾತ್ಮನ ಮುಖಗಳಲ್ಲಿ ಎಲ್ಲವೂ ಮುಖ್ಯವಾದರೂ, ಸಂಕ್ಷೇಪದಲ್ಲಿ ಸಮಗ್ರವಾಗಿ ಧ್ಯಾನಿಸಲು, ಎಲ್ಲವನ್ನೂ ಪ್ರತಿನಿಧಿಸುವ ಒಂದಾನೊಂದನ್ನು ಆರಿಸಿಕೊಳ್ಳಬೇಕಾಗುವುದು. ಈ ಆರಿಸುವುದು ಹೇಗೆ? ಎಂಬ ವಿಷಯಕ್ಕೆ ಈ ಕೆಳಕಂಡ ಋಕ್ಸೂಕ್ತವಿರುವುದು. (10-121):

    ಈ ಸೂಕ್ತದ ಹತ್ತು ಮಂತ್ರಗಳಲ್ಲಿ ಪ್ರತಿಯೊಂದರ ಕೊನೆಯಲ್ಲೂ ‘‘ಕಸ್ಮೈ ದೇವಾಯ ಹವಿಷಾ ವಿಧೇಮ’’ ಎಂಬ ವಾಕ್ಯವಿರುವುದು. ಇದು ಪ್ರಶ್ನೆಯೂ, ಉತ್ತರವೂ ಏಕಕಾಲಕ್ಕೆ ಆಗಿರುವುದು. ಹವಿಸ್ಸೆಂದರೆ ನಮ್ಮ ಆತ್ಮಾತ್ಮೀಯ ಅರ್ಪಣೆಯ ಸಾಂಕೇತಿಕವಾದ ಆಜ್ಯ ಸಮರ್ಪಣೆ ಒಂದು ಅರ್ಥ: ಹೀಗೆ ಸೂಕ್ತದ ಒಂದೊಂದು ಮಂತ್ರದಲ್ಲೂ ಭಗವತ್ಸ್ವರೂಪದ ವಿಶೇಷ ವರ್ಣನೆ ಇದ್ದು, ಕೊನೆಯ ಪ್ರಶ್ನೆಗೆ ‘‘ಇವನಿಗೆ, ಇಂತಹ ಪರವಸ್ತುವಿಗಲ್ಲದೆ ಬೇರೆ ಯಾರಿಗೆ ಆತ್ಮಾರ್ಪಣೆ?’’ ಎಂಬ ದಿಟ್ಟ ಉತ್ತರದ ಧ್ವನಿಯೂ ಇದೆ. ವೇದಗಳಲ್ಲಿ ಏಕದೇವಭಾವಕ್ಕೆ ಶ್ರೇಷ್ಠ ನಿದರ್ಶನವಾಗಿರುವ ಈ ಸೂಕ್ತದಲ್ಲಿ ಅಸಂಖ್ಯೇಯ ಧ್ವನಿಗಳಿರುವುದನ್ನು ಗಮನಿಸಬಹುದು. ಇದರ ಸ್ಥೂಲ ಸಂಗ್ರಹವನ್ನು ಹೀಗೆ ಮಾಡಬಹುದು:

    ‘‘ಸಕಲ ಚರಾಚರ ಸೃಷ್ಟಿಗೂ ಪೂರ್ವದಲ್ಲಿ ಪರಮಾತ್ಮನು, ತಾನೊಬ್ಬನೇ ಅದ್ವಿತೀಯನಾಗಿ ಇದ್ದನು. ಪ್ರಳಯಕಾಲದಲ್ಲಿ ಹಾಳಾಗಿಯೇ ಹೋಗಬಹುದಾಗಿದ್ದ ಈ ಜಗತ್ತನ್ನು ಚಿನ್ನದ ಅದುರಿನಂತೆ ತನ್ನ ಗರ್ಭದಲ್ಲಿಯೇ ಇಟ್ಟುಕೊಂಡು ರಕ್ಷಿಸಿ, ಮುಂದೆ ಸೂಕ್ತ ಕಾಲದಲ್ಲಿ ಹೊರತಂದು ಪೃಥಿವೀದ್ಯುಲೋಕಾದಿಗಳನ್ನು ತಾನೇ ಧರಿಸಿ, ಭರಿಸಿ, ಎಲ್ಲ ವಿಧದಿಂದಲೂ ರಕ್ಷಕನಾಗಿ, ಸರ್ವಜಗತ್ಪತಿಯಾಗಿ, (ಪ್ರಜಾಪತಿಯಾಗಿ) ‘ಹಿರಣ್ಯಗರ್ಭ’ನಾದ ಈ ‘ಯಾವನೋ ಒಬ್ಬನಿಗೆ’ (ಇವನಿಗಲ್ಲದೆ ಮತ್ತೆ ಯಾರಿಗೆ?) ನಮ್ಮನ್ನು ನಾವು ಹವಿಸ್ಸಿನ ರೂಪದಲ್ಲಿ ಅರ್ಪಿಸಿಕೊಳ್ಳೋಣ. (ಇದಲ್ಲದೆ ಮತ್ತೇನು ಪ್ರತಿಫಲ ಕೊಡಬಲ್ಲೆವು ಅವನ ಈ ಅನುಗ್ರಹ ವಿಶೇಷಕ್ಕೆ?) ಯಾವನು ನಮಗೆ ಚೈತನ್ಯ ಕೊಟ್ಟಿರುವನೋ, ನಮ್ಮೊಳಗೆ ತನ್ನನ್ನೇ ದಾನ ಮಾಡಿಕೊಂಡು ಅಂತರ್ಯಾಮಿ ಯಾಗಿರುವನೋ, ಯಾವನ ಮಾರ್ಗದರ್ಶನರೂಪವಾದ ಆಜ್ಞೆಯನ್ನು ಎಲ್ಲ ಜೀವಿಗಳೂ ದೇವತೆಗಳೂ ಪಾಲಿಸುವರೋ, ಅಮೃತವೂ ಮೃತ್ಯುವೂ ಯಾವನ ನೆರಳುಗಳೋ, ಇಂತಹ ಈ ಯಾವನೋ ಒಬ್ಬನಿಗೆ’’ (ಇವನಿಗಲ್ಲದೆ ಮತ್ತೆ ಯಾರಿಗೆ) ಆತ್ಮಾರ್ಪಣದ ಹೊರತು ಕೊಡಲು ನಮ್ಮಲ್ಲೇನುಂಟು? (ಇದನ್ನಾದರೂ ನಾವು ಮಾಡದಿದ್ದರೆ ಕೃತಘ್ನರಲ್ಲವೇ?)

    ಏನು ಮಹಾ ಉಪಕಾರ ಮಾಡಿದ್ದಾನೆ ಈ ಯಾವನೋ ಒಬ್ಬನು? ಎಂದು ಕೇಳಿದರೆ; ಎಷ್ಟಾದರೂ, ನಮಗೆ ನೋಡಲು ಕಣ್ಣನ್ನೂ ಉಸಿರಾಡಲು ಉಸಿರನ್ನೂ ಕೊಟ್ಟನಲ್ಲವೆ? ಮನುಷ್ಯರಿರಲಿ, ಚತುಷ್ಪಾದಿಗಳಾದ ಪಶುಗಳೂ ಸಹ ಈ ವರಗಳನ್ನು ಪಡೆದವೆಂದಮೇಲೆ (ನಿರ್ವ್ಯಾಜವಾದ, ವಿಶ್ವವ್ಯಾಪಿಯಾದ, ಅವನಿಗೆ ಸಹಜವಾದ ಈ ಕರುಣೆಯನ್ನು ಏನೆಂದು ಕೊಂಡಾಡೋಣ?) ಈ ಒಬ್ಬನಿಗೆ ಆತ್ಮಾರ್ಪಣೆಗಿಂತ ಮತ್ತೇನು ಮಾಡಬಲ್ಲೆವು? (ಉಸಿರನ್ನು ಅವನೇ ಕೊಟ್ಟದ್ದರಿಂದ, ನಮ್ಮದೆಂಬುದು ಏನೂ ಇಲ್ಲವಷ್ಟೆ?) ಹಿಮದಿಂದ ಮುಚ್ಚಿದ ಬೆಟ್ಟಗಳೂ, ರಸದಿಂದ ತುಂಬಿದ ನದಿಗಳೂ, ಈ ನದಿಗಳಿಂದ ತುಂಬಿದ ಸಮುದ್ರಗಳೂ, ಈ ದೇವದೇವೋತ್ತಮನಾದ ಯಾವನೋ ಒಬ್ಬನ ಶರೀರದಲ್ಲಿ ಸಣ್ಣ ಅಂಶಗಳಾಗಿ, ಅವನ ನಿರತಿಶಯ ಮಹಿಮೆಗೆ ಸಾಕ್ಷಿಗಳು. (ಇಷ್ಟು ದೊಡ್ಡ ಒಬ್ಬನಿಗೆ ಏನನ್ನು ತಾನೇ ಕೊಡಬಲ್ಲೆವು, ಎಂದು ಸಂಕೋಚಭಾವ.)

    (ಲೇಖಕರು- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts