More

    ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತೆ ಎನ್​​ಡಿಎ ಸಖ್ಯ ಕಡಿದುಕೊಳ್ಳುವರೇ?

    ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಈಚೆಗೆ ನಿತೀಶ್​ಕುಮಾರರನ್ನು ಭೇಟಿಯಾಗಿದ್ದರು. ಆಗ ಏನು ಮಾತುಕತೆ ನಡೆಯಿತೆಂಬ ಮಾಹಿತಿ ಲಭ್ಯವಿಲ್ಲವಾದರೂ, ಮಹಾಘಟಬಂಧನ ಮತ್ತೆ ಚಿಗುರಬಹುದೆಂಬ ಊಹಾಪೋಹಕ್ಕೆ ಇದು ಕಾರಣವಾಯಿತು. ಆದರೆ ನಂತರದಲ್ಲಿ ಖುದ್ದು ನಿತೀಶ್​ಕುಮಾರರೇ ಈ ಸಾಧ್ಯತೆ ತಳ್ಳಿಹಾಕಿದರು.

    ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತೆ ಎನ್​​ಡಿಎ ಸಖ್ಯ ಕಡಿದುಕೊಳ್ಳುವರೇ?ಸಮಕಾಲೀನ ಭಾರತದ ರಾಜಕಾರಣದ ಚಾಣಾಕ್ಷ ರಾಜಕಾರಣಿಗಳಲ್ಲಿ ಜನತಾದಳ (ಸಂಯುಕ್ತ) ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್​ಕುಮಾರ್ ಸಹ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಆಡಳಿತದ ದೃಷ್ಟಿಯಿಂದಲೂ ಅವರ ವಿರುದ್ಧ ಬೊಟ್ಟುತೋರುವವರು ಕಡಿಮೆ. ಆದರೆ ಅವರ ರಾಜಕೀಯ ನಡೆ ಮಾತ್ರ ಮೀನಿನ ಹೆಜ್ಜೆಯಂತೆಯೇ ಸರಿ ಎಂಬುದು ರಾಜಕೀಯ ವಿಶ್ಲೇಷಕರ ಅಂಬೋಣ. ಕೆಲವರಂತೂ ಒಂದು ಹೆಜ್ಜೆ ಮುಂದೆಹೋಗಿ ಅವರದು ಸಮಯಸಂದರ್ಭ ನೋಡಿಕೊಂಡು ದಾಳ ಉರುಳಿಸುವ ಪಕ್ಕಾ ‘ಅವಕಾಶವಾದಿ ರಾಜಕಾರಣ’ ಎಂದೂ ಹೇಳುತ್ತಾರೆ. ಇದೇನೇ ಇದ್ದರೂ, ಚಾಲ್ತಿಯಲ್ಲಿರಲು ಏನೇನು ಬೇಕೋ ಅದನ್ನೆಲ್ಲ ನಿತೀಶ್​ಕುಮಾರ್ ಮಾಡುತ್ತಾರೆ ಎಂಬುದಂತೂ ಖರೆ. ಈ ವರ್ಷದ ಅಕ್ಟೋಬರ್​ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿಕ್ಕಿದ್ದು, ನಿತೀಶ್ ನಡೆಯ ಮೇಲೆ ಎಲ್ಲರ ಕುತೂಹಲದ ಕಣ್ಣು ನೆಟ್ಟಿದೆ.

    ಬಹುವರ್ಷಗಳ ಕಾಲ ಬಿಜೆಪಿ ನೇತೃತ್ವದ ಎನ್​ಡಿಎ ಜತೆಗೆ ನಂಟು ಹೊಂದಿದ್ದ ನಿತೀಶ್​ಕುಮಾರ್ (ವಾಜಪೇಯಿ ಅವಧಿಯಲ್ಲಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು) 2014ರಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಕ್ರಮಕ್ಕೆ ಅಸಮಾಧಾನಗೊಂಡು ಎನ್​ಡಿಎ ದೋಸ್ತಿಗೆ ಬೈ ಹೇಳಿದರು. ತಾನು ಮುಂದೊಂದು ದಿನ ಪ್ರಧಾನಿಯಾಗಬೇಕು ಎಂಬ ಬಯಕೆ ಅಥವಾ ಪ್ರಧಾನಿಯಾಗಲು ಸಮರ್ಥ ಎಂಬ ಭಾವನೆ ಅವರಲ್ಲಿತ್ತಾ? ಗೊತ್ತಿಲ್ಲ. ಅಂತೂ ಮೋದಿ ಹೆಳೆಯಲ್ಲಿ ಬಿಜೆಪಿ ಗೆಳೆತನ ಕಡಿದುಕೊಂಡರು. ಆದರೆ ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ನಿತೀಶ್​ಗೆ ಭಾರಿ ಆಘಾತ ಕಾದಿತ್ತು. ಬಿಜೆಪಿಯೊಂದೇ 22 ಸೀಟುಗಳನ್ನು ಗೆದ್ದರೆ ನಿತೀಶರ ಜೆಡಿಯು ಗೆದ್ದಿದ್ದು ಬರೀ ಎರಡು ಸೀಟು (ಹಿಂದಿನ ಸಲ ಅದು 20 ಸ್ಥಾನ ಗೆದ್ದಿತ್ತು). ಆ ಹಿನ್ನಡೆಯ ನೈತಿಕ ಹೊಣೆ ಹೊತ್ತ ನಿತೀಶ್ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ತಯಾರಾದರು. 2015ರ ಆ ಚುನಾವಣೆ ನಿತೀಶ್​ಗೆ ಬಹುದೊಡ್ಡ ಸವಾಲಾಗಿತ್ತು. ಆಗೇನಾದರೂ ಅವರಿಗೆ ಹಿನ್ನಡೆಯಾಗಿದ್ದರೆ ಅವರ ರಾಜಕೀಯ ಜೀವನವೇ ಅಂತ್ಯದ ಅಂಚಿಗೆ ಬಂದು ನಿಲ್ಲುತ್ತಿತ್ತು.

    ಹೀಗಾಗಿ ಅವರು ತಮ್ಮ ರಾಜಕೀಯ ಕಡುವಿರೋಧಿ ಲಾಲು ಪ್ರಸಾದ್ ಅವರ ರಾಷ್ಟ್ರೀಯ ಜನತಾ ದಳದ ಜತೆಗೆ ಚುನಾವಣಾ ಮೈತ್ರಿಗೆ ಮುಂದಾದರು. ಗಾಳಿಯ ದಿಕ್ಕು ನೋಡಿ ನಿರ್ಣಯ ತೆಗೆದುಕೊಳ್ಳುವ ನಿತೀಶ್ ಆರ್​ಜೆಡಿ ಮತ್ತು ಕಾಂಗ್ರೆಸ್ ಜತೆ ಸೇರಿ ಮಹಾಘಟಬಂಧನ ಮಾಡಿಕೊಂಡರು. ಇದು ಕೆಲಸ ಮಾಡಿತು. ಒಟ್ಟು 243 ಸದಸ್ಯಬಲದ ವಿಧಾನಸಭೆಯಲ್ಲಿ ಜೆಡಿಯು 71, ಆರ್​ಜೆಡಿ 80 ಸೀಟುಗಳನ್ನು ಗೆದ್ದರೆ ಬಿಜೆಪಿಗೆ 53 ಸ್ಥಾನಗಳು ದಕ್ಕಿದವು. ಇಂಥದೊಂದು ವಿಚಿತ್ರ ಸಮ್ಮಿಶ್ರಣದ ಒಕ್ಕೂಟ ಬಹುದಿನ ಬಾಳುವ ಬಗ್ಗೆ ಎಲ್ಲರಿಗೂ ಸಂದೇಹವಿತ್ತು. ಅದು ನಿಜವಾಯಿತು. ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರದ ಆಪಾದನೆ ಕೇಳಿಬಂದಾಗ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ನಿತೀಶ್ ಸೂಚಿಸಿದರು. ಆದರೆ ತೇಜಸ್ವಿ ಯಾದವ್ ಮತ್ತು ಅವರ ಪಕ್ಷ ಈ ಸೂಚನೆಯನ್ನು ಧಿಕ್ಕರಿಸಿದರು. ತಾನು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಲು ಮತ್ತು ತನ್ನ ಕ್ಲೀನ್ ಇಮೇಜ್ ಕಾಪಾಡಿಕೊಳ್ಳುವ ಉದ್ದೇಶದಿಂದ ನಿತೀಶ್​ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಡಮಾಡದೆ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸರ್ಕಾರ ರಚಿಸಿದರು. ನಿತೀಶ್ ತಂತ್ರಕ್ಕೆ ಅತ್ತ ಜೈಲಲ್ಲಿದ್ದ ಲಾಲು ಪ್ರಸಾದ್ ಯಾದವ್ ಒಳಗೊಳಗೇ ಕುದಿದರು.

    ಹೀಗಿದ್ದರೂ ನಿತೀಶ್ ನಡೆ ಕುರಿತು ಕೆಲವರಿಗೆ ಅನುಮಾನ ಇದ್ದೇ ಇದೆ. ಉದಾಹರಣೆಗೆ- ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಜೆಡಿಯು ಬೆಂಬಲಿಸಿದೆ. ಆದರೆ, ಅದೇ ಹೊತ್ತಿಗೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್​ಪಿಆರ್)ಯನ್ನು ವಿರೋಧಿಸಿದೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬಿಹಾರ ವಿಧಾನಸಭೆ ಎನ್​ಪಿಆರ್ ವಿರುದ್ಧ ನಿರ್ಣಯವನ್ನೂ ಅಂಗೀಕರಿಸಿದೆ. ‘ನನ್ನ ತಾಯಿಯ ಜನ್ಮದಿನಾಂಕ ನನಗೆ ನೆನಪಿಲ್ಲ’ ಎಂದು ಹೇಳುವ ಮೂಲಕ ನಿತೀಶ್​ಕುಮಾರ್ ಅವರೇ ಎನ್​ಪಿಆರ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಈಚೆಗೆ ನಿತೀಶ್​ಕುಮಾರರನ್ನು ಭೇಟಿಯಾಗಿದ್ದರು. ಆಗ ಏನು ಮಾತುಕತೆ ನಡೆಯಿತೆಂಬ ಮಾಹಿತಿ ಲಭ್ಯವಿಲ್ಲವಾದರೂ, ಮಹಾಘಟಬಂಧನ ಮತ್ತೆ ಚಿಗುರಬಹುದೆಂಬ ಊಹಾಪೋಹಕ್ಕೆ ಇದು ಕಾರಣವಾಯಿತು. ಆದರೆ ನಂತರದಲ್ಲಿ ಖುದ್ದು ನಿತೀಶ್​ಕುಮಾರರೇ ಈ ಸಾಧ್ಯತೆ ತಳ್ಳಿಹಾಕಿದರು. ‘ನಾವು ಎನ್​ಡಿಎ ಜತೆಗಿದ್ದೇವೆ. ಅಲ್ಲೇ ಮುಂದುವರಿಯುತ್ತೇವೆ’ಎಂದು ಅವರು ಸ್ಪಷ್ಟನೆ ನೀಡಿದರು. ಇನ್ನೊಂದೆಡೆ, ತೇಜಸ್ವಿ ಯಾದವ್ ಕೂಡ, ನಿತೀಶ್ ವಿರುದ್ಧದ ಟೀಕಾಸ್ತ್ರಗಳನ್ನು ಮುಂದುವರಿಸಿದ್ದಾರೆ. ‘ಎನ್​ಪಿಆರ್​ಗೆ ವಿರೋಧ ತೋರಿದಂತೆ ಸಿಎಎ ವಿರುದ್ಧ ಗೊತ್ತುವಳಿ ಅಂಗೀಕರಿಸಲಿ ನೋಡೋಣ. ನಿತೀಶ್​ಕುಮಾರ್ ರಾಜಕೀಯ ಸಂಕಲ್ಪಶಕ್ತಿ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಕೇಂದ್ರ ಸರ್ಕಾರದೊಂದಿಗೆ ಯತ್ನಿಸಿ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಅಥವಾ ವಿಶೇಷ ಸ್ಥಾನಮಾನ ತರಲು ಅವರಿಂದ ಆಗಿಲ್ಲ’ ಎಂದು ತೇಜಸ್ವಿ ಯಾದವ್ ಅವರು ಆರ್​ಜೆಡಿ ಹಮ್ಮಿಕೊಂಡಿರುವ ‘ಬೇರೋಜ್​ಗಾರಿ ಹಟಾವೋ ಯಾತ್ರಾ’ ರ್ಯಾಲಿಗಳಲ್ಲಿ ಹೇಳುತ್ತಿದ್ದಾರೆ. ಹೀಗಾಗಿ ಮಹಾಘಟಬಂಧನ ಮರುಚಾಲನೆ ಬಹುತೇಕ ಅಸಂಭವ ಎಂದೇ ಹೇಳಲಾಗುತ್ತಿದೆ.

    ಇನ್ನು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಿತೀಶ್ ಎನ್​ಡಿಯತ್ತಲೇ ಒಲವು ತೋರುತ್ತಿರುವುದರ ಹಿಂದೆ ಮತ್ತೊಂದು ಕಾರಣವೂ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಜೆಡಿಯು ಜತೆಗಿನ ಮೈತ್ರಿ ಮುರಿದುಬಿದ್ದಿದ್ದರ ಕಹಿ ಅನುಭವ ಒಂದೆಡೆ, ಪಕ್ಷದ ವರಿಷ್ಠ ಲಾಲು ಪ್ರಸಾದ್ ಯಾದವ್ ಸಕ್ರಿಯ ರಾಜಕಾರಣದಲ್ಲಿ ಇಲ್ಲದ್ದು ಮತ್ತೊಂದೆಡೆ- ಹೀಗೆ ಆರ್​ಜೆಡಿ ಈಗ ಅಯೋಮಯ ಸ್ಥಿತಿಯಲ್ಲಿದೆ. ವಿಧಾನಸಭಾ ಚುನಾವಣೆ ಹೊತ್ತಿಗೆ ಪಕ್ಷಕ್ಕೆ ಚೇತನ ತುಂಬಲು ಶತಾಯಗತಾಯ ಯತ್ನಿಸುತ್ತಿರುವ ಆರ್​ಜೆಡಿ ನಾಯಕರು, ಹಳೆಯ ಸೂತ್ರವೊಂದನ್ನು ಮತ್ತೆ ಚಾಲ್ತಿಗೆ ತರಲು ಯತ್ನಿಸುತ್ತಿದ್ದಾರಂತೆ. ಅದೆಂದರೆ: ಮುಸ್ಲಿಂ-ಯಾದವ (ಎಂ-ವೈ) ಸೋಷಿಯಲ್ ಇಂಜಿನಿಯರಿಂಗ್. ರಾಜ್ಯದಲ್ಲಿ ಯಾದವರ ಪ್ರಮಾಣ ಸುಮಾರು ಶೇಕಡ 14ರಷ್ಟಿದ್ದು, ಮುಸ್ಲಿಮರು ಶೇ.16ರಷ್ಟಿದ್ದಾರೆ. ಇವರ ಜತೆಗೆ, ಆರ್​ಜೆಡಿಯ ಪಾಲುದಾರ ಪಕ್ಷವಾದ ಕಾಂಗ್ರೆಸ್ಸಿನ ಅಲ್ಪಸ್ವಲ್ಪ ಮತಗಳೂ ಸೇರಿದರೆ ಏನಿಲ್ಲೆಂದರೂ ಕನಿಷ್ಠೇ ಶೇ.30 ಮತಗಳು ಪಕ್ಕಾ ಎಂಬುದು ಆರ್​ಜೆಡಿ ನಾಯಕರ ಲೆಕ್ಕಾಚಾರ. ಸಿಎಎ, ಎನ್​ಪಿಆರ್ ಮತ್ತು ಎನ್​ಆರ್​ಸಿ ಇತ್ಯಾದಿ ಕಾರಣಗಳಿಂದಾಗಿ ಮುಸ್ಲಿಮರ ವೋಟು ಒಂದು ಪಕ್ಷದೆಡೆಗೆ ವಾಲುವ ಸಾಧ್ಯತೆ ಕಂಡುಬರುತ್ತಿದೆ. ಜೆಡಿಯು ಬಿಜೆಪಿ ಜತೆಗೆ ಮೈತ್ರಿ ಹೊಂದಿರುವುದರಿಂದಾಗಿ ಆ ಪಕ್ಷಕ್ಕೆ ಮುಸ್ಲಿಮರು ಮತ ಹಾಕುವುದು ಅಸಂಭವ ಎಂಬುದು ರಾಜಕೀಯ ವಿಶ್ಲೇಷಕರ ಅಂಬೋಣ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ಮತಹಾಕೋಣ ಎಂದರೆ, ಅದು ಬಹುಮತದತ್ತ ಬರುವ ಅವಕಾಶ ಕ್ಷೀಣಾತಿ ಕ್ಷೀಣ. ಹೀಗಾಗಿ ಇದ್ದುದರಲ್ಲಿ ಆರ್​ಜೆಡಿಯೇ ವಾಸಿ ಎಂದು ಮುಸ್ಲಿಮರು ಲೆಕ್ಕಿಸಬಹುದಾಗಿದೆ. ಇನ್ನು, ಯಾದವರಂತೂ ಲಾಲು ಪಕ್ಷದ ಜತೆಗಿದ್ದಾರೆ. ಆದ್ದರಿಂದ ‘ಎಂ-ವೈ’ ಸಮೀಕರಣ ಕೈಹಿಡಿಯಬಹುದು ಎಂಬುದು ಆರ್​ಜೆಡಿ ನಾಯಕರ ಅಂದಾಜು.

    ಈ ಲೆಕ್ಕಾಚಾರಗಳು ಏನೇ ಇದ್ದರೂ, ಚುನಾವಣೆಗೆ ಇನ್ನೂ ಆರೇಳು ತಿಂಗಳಿದೆ. ಅಷ್ಟರಲ್ಲಿ ವಾತಾವರಣ ಬದಲಾಗದು ಎಂದು ಹೇಳಲಾಗದು. ಅದರಲ್ಲೂ, ನಿತೀಶ್ ಕುಮಾರ್ ಚಾಣಾಕ್ಷ ರಾಜಕಾರಣಿ. ಈ ಹಿಂದೆ, ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ, ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಇಮೇಜ್ ವರ್ಧಿಸಿಕೊಂಡ ಅವರು, ಕಳೆದ ಚುನಾವಣೆಯಲ್ಲಿ ಮಹಿಳಾ ಮತದಾರರ ಮನವಿಗೆ ಓಗೊಟ್ಟು ಪಾನನಿಷೇಧಕ್ಕೆ ಸೈ ಎಂದವರು. ಹಾಗಂತ ಬಿಜೆಪಿ ಮತ್ತು ಜೆಡಿಯು ನಡುವೆ ಎಲ್ಲವೂ ಸರಿಯಿದೆ ಎಂದೇನಲ್ಲ. ಸಣ್ಣಪುಟ್ಟ ಮುನಿಸು ಇದ್ದೇ ಇದೆ. ವರ್ಷದ ಹಿಂದೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಂಜಯ್ ಪಾಸ್ವಾನ್ ಸಣ್ಣದೊಂದು ವರಾತ ತೆಗೆದಿದ್ದರು. ‘ನಾವು ನಿತೀಶ್​ಕುಮಾರ್ ಅವರಲ್ಲಿ ಅಪಾರ ವಿಶ್ವಾಸವಿಟ್ಟಿದ್ದೇವೆ. 15 ವರ್ಷ ಅವರನ್ನು ಮುಖ್ಯಮಂತ್ರಿಯಾಗಿ ಒಪ್ಪಿದ್ದೇವೆ. ಈಗ ಒಂದು ಅವಧಿಗೆ ಬಿಜೆಪಿ ಸಿಎಂ (ಹಾಲಿ ಉಪಮುಖ್ಯಮಂತ್ರಿ ಸುಶೀಲ್​ಕುಮಾರ್ ಮೋದಿ) ಆಗಲು ಅವರು ಒಪ್ಪಬೇಕು’ ಎಂದು ಪಾಸ್ವಾನ್ ಹೇಳಿದ್ದರು. ‘ನಿತೀಶ್ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ’ ಎಂದು ಖುದ್ದು ಅಮಿತ್ ಷಾ ಅವರೇ ಸ್ಪಷ್ಟನೆ ನೀಡುವ ಮೂಲಕ ವಿಷಯಕ್ಕೆ ತೆರೆಯೆಳೆದಿದ್ದಾರೆ. ಇನ್ನೊಂದೆಡೆ, ಮುಸ್ಲಿಂ ಸಮುದಾಯ ನಿತೀಶ್ ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಕಡಿಮೆ. ಹಿಂದೆಲ್ಲ ನಿತೀಶ್ ಬಿಜೆಪಿ ಜತೆಗಿದ್ದರೂ ಮುಸ್ಲಿಮರು ಬೆಂಬಲಿಸಿದ್ದರು. ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಹೀಗಾಗಿ ನಿತೀಶ್​ಕುಮಾರ್ ಬಿಜೆಪಿ ಮತಬ್ಯಾಂಕ್ ಮೇಲೆ ಅವಲಂಬಿತವಾಗಬೇಕಾದ ಸನ್ನಿವೇಶ ಇದೆ ಎಂದೂ ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆದ್ದರಿಂದ, ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಗೆ ಅದು ಕೇಳಿದ್ದಕ್ಕಿಂತ ಕಡಿಮೆ ಸೀಟು ದಕ್ಕಬಹುದು ಎಂದೂ ಅವರು ಊಹಿಸುತ್ತಾರೆ. ಇನ್ನು, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪವನ್​ಕುಮಾರ್ ವರ್ವ ಈಗ ನಿತೀಶ್ ಜತೆಗಿಲ್ಲ. ಆದರೂ, ಮೋದಿ ನಾಮಬಲ ಮತ್ತು ನಿತೀಶ್ ಇಮೇಜ್ ಸೇರಿದರೆ ಅಧಿಕಾರ ಪಕ್ಕಾ ಎಂಬುದು ಎನ್​ಡಿಎ ಪಾಳಯದ ನಂಬಿಕೆ. ಅತ್ತ ಆರ್​ಜೆಡಿ ಮರುಚೇತರಿಕೆಯ ಯತ್ನದಲ್ಲಿದೆ. ಅಂತೂ ಬಿಹಾರದಲ್ಲಿ ಭರ್ಜರಿ ಹಣಾಹಣಿ ನಿಕ್ಕಿ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ದೊಡ್ಡ ಮರ ಬಿದ್ದಾಗ ಭೂಮಿ ನಡುಗುತ್ತದೆ ಎಂದು ನಿಮ್ಮಂತೆ ಹೇಳಲಿಲ್ಲ: ಹಳೇ ಘಟನೆ ಕೆದಕಿ ಕಾಂಗ್ರೆಸ್​ಗೆ ಅಮಿತ್​ ಷಾ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts