More

    ಸ್ವಾರ್ಥ ತ್ಯಜಿಸಿ ಜಗದ ಹಿತ ಬಯಸೋಣ

    ಮಹಾವೀರ ಜಯಂತಿಯಂದು ಪ್ರತಿ ವರ್ಷ ಜೈನರು ಬಸದಿಗಳಲ್ಲಿ ಒಟ್ಟುಸೇರಿ ಪೂಜೆ, ಉತ್ಸವಗಳನ್ನು ಏರ್ಪಡಿಸುತ್ತಾರೆ. ಬಾಲಕ ಮಹಾವೀರನಿಗೆ ರಾಜಕುಮಾರನಂತೆ ಕಿರೀಟ ಕಟ್ಟಿ ಚಿನ್ನದೊಡವೆ, ಅಂಗಿ, ಕುಲಾಯಿ ಹಾಕಿ ತೊಟ್ಟಿಲಲ್ಲಿಟ್ಟು ತೂಗುತ್ತಾರೆ. ದೇವೆಂದ್ರ ಜಿನಬಾಲಕನಿಗೆ ಅಭಿಷೇಕಾದಿಗಳನ್ನು ಮಾಡುತ್ತಾರೆ.

    ಈ ಎಲ್ಲ ಆಚರಣೆಗಳ ಜತೆಗೆ ಮಹಾವೀರನ ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ಅಪರಿಗ್ರಹ ಇತ್ಯಾದಿ ಪಂಚಾಣುವ್ರತಗಳ ಬಗ್ಗೆ ಚಿಂತನ-ಮಂಥನಗಳು ನಡೆಯುತ್ತವೆ. ಮಹಾವೀರನ ಅಹಿಂಸೆಯಲ್ಲಿ ‘ಬದುಕು ಮತ್ತು ಬದುಕಗೊಡು’ ಎಂಬ ಉದಾತ್ತ ನೀತಿ ಅಡಗಿದೆ. ಈ ಭೂಮಿಯಲ್ಲಿ ನಾವಷ್ಟೇ ಬದುಕಿದರೆ ಸಾಲದು. ಎಲ್ಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಅನುಕೂಲ, ಅನನುಕೂಲ ಯಾವುದೇ ಪರಿಸ್ಥಿತಿ ಇರಲಿ ಜೀವಿಗಳು ಬದುಕಲು ಬಯಸುತ್ತವೆ. ‘ಜೀವೇಷಣೆ’ ಬದುಕುವ ಇಚ್ಛೆ ಎಲ್ಲ ಜೀವಿಗಳ ಪ್ರಬಲವಾದ ಇಚ್ಛೆ. ಆದ್ದರಿಂದ ‘ನಾನು ಕ್ಷೇಮವಾಗಿದ್ದರೆ ಸಾಲದು. ಎಲ್ಲರೂ ಕ್ಷೇಮವಾಗಿರಬೇಕು’ ಎನ್ನುವ ಸಂಕಲ್ಪ ಇದರಲ್ಲಿ ಅಡಗಿದೆ ಎನ್ನುತ್ತಾರೆ ಮಹಾವೀರರು.

    ಸ್ವಾರ್ಥ ತ್ಯಜಿಸಿ ಜಗದ ಹಿತ ಬಯಸೋಣ‘ಏಕೇಂದ್ರಿಯದಿಂದ ಪಂಚೇಂದ್ರಿಯದವರೆಗಿನ ಜೀವಿಗಳು ಮಾತ್ರವಲ್ಲ ವನಸ್ಪತಿಕಾಯಿಕ, ಜಲಕಾಯಿಕ, ಪೃಥ್ವಿಕಾಯಿಕ, ವಾಯುಕಾಯಿಕ ಅಂದರೆ ವನಸ್ಪತಿಗಳು, ಜಲವನ್ನೇ ಉಸಿರಾಗಿಸಿಕೊಂಡಿರುವ ಜೀವಿಗಳು, ವಾಯುಮಂಡಲದಲ್ಲಿರುವ ಜೀವ, ಈ ಮಣ್ಣಿನಲ್ಲಿ ವಾಸವಾಗಿರುವ ಅನಂತ ಜೀವರಾಶಿಗಳು, ಅಗ್ನಿಯನ್ನೇ ಅಂದರೆ ಬಿಸಿಯಲ್ಲೇ ವಾಸಿಸುವ ಜೀವಿಗಳು ಈ ಎಲ್ಲ ಜೀವಿಗಳಿಗೆ ನನ್ನಿಂದ ಹಾನಿಯಾಗಿದ್ದರೆ, ಭಿನ್ನ ಭಿನ್ನವಾಗಿದ್ದರೆ, ಸ್ಥಳಾಂತರಿಸಲ್ಪಟ್ಟಿದ್ದರೆ, ಯಾವುದೇ ರೀತಿಯ ಹಿಂಸೆ ನನ್ನಿಂದ ಆಗಿದ್ದರೆ ಅದು ಮಿಥ್ಯೆಯಾಗಲಿ. ಅದಕ್ಕೆ ಕ್ಷಮೆ ಇರಲಿ’ ಎನ್ನುವುದು ಶ್ರಾವಕರ ದಿನನಿತ್ಯದ ಪ್ರತಿಕ್ರಮಣ. ಅಂದರೆ ಒಂದು ರೀತಿಯಲ್ಲಿ ತಪ್ಪೊಪ್ಪಿಕೊಳ್ಳುವ ಮಂತ್ರ.

    ಇವತ್ತು ಮಾನವ ಜೀವಿ ತನ್ನೆಲ್ಲ ಬುದ್ಧಿವಂತಿಕೆ, ಶ್ರೇಷ್ಠತೆಯ ಹೊರತಾಗಿಯೂ ಬಹಳ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಅದರಿಂದ ಪಾರಾಗಲು ಬೇಕಾದ ಯಾವುದೇ ಉಪಾಯ ಇದುವರೆಗೆ ಲಭ್ಯವಾಗಿಲ್ಲ. ಆದ್ದರಿಂದ ‘ಬದುಕು ಬದುಕಗೊಡು’ ಎಂಬ ಸಂದೇಶದಂತೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದರ ಜೊತೆಗೆ ಇಡೀ ಸಮಾಜವನ್ನು, ಮನುಕುಲವನ್ನು ರಕ್ಷಿಸಬೇಕಾದ ಹೊಣೆಗಾರಿಕೆ ನಮ್ಮದಾಗಿದೆ.

    ಜೈನ ಧರ್ಮದಲ್ಲಿ ಆತ್ಮನಿಗೆ ಉಂಟಾಗುವ ಶುಭ-ಅಶುಭ ಅಥವಾ ಪುಣ್ಯ-ಪಾಪ-ಕರ್ಮಬಂಧಗಳನ್ನು ಹಾಗೂ ಅದರ ಪರಿಣಾಮ, ವರ್ತನೆಗಳನ್ನು ಆರು ಲೇಶ್ಯೆಗಳ ಮೂಲಕ ವಿವರಿಸುತ್ತಾರೆ. ಈ ಲೇಶ್ಯಾ ಕ್ರಮವನ್ನು ಪ್ರಪಂಚದ ಎಲ್ಲ ಜೀವಿಗಳ ವರ್ಗೀಕರಣಕ್ಕೂ ಅನ್ವಯಿಸುತ್ತಾರೆ. ಲೇಶ್ಯೆಯಲ್ಲಿ ಒಳಗೊಳ್ಳುವ ಆರು ವರ್ಗಗಳು ಹೀಗಿವೆ: 1) ಕೃಷ್ಣ 2) ನೀಲ 3) ಕಾಪೋತ- ಇವು ಮೂರು ಅಶುಭ ಲೇಶ್ಯೆಗಳು. 4) ಪೀತ 5) ಪದ್ಮ 6) ಶುಕ್ಲ -ಇವು ಮೂರು ಶುಭ ಲೇಶ್ಯೆಗಳು. ಅಶುಭ ಲೇಶ್ಯೆಗಳು ಜೀವಿಯ ನರಕಗತಿಗೆ, ಪಾಪಕ್ಕೆ, ದುಃಖಕ್ಕೆ ಕಾರಣವಾದರೆ, ಶುಭ ಲೇಶ್ಯೆಗಳು ದೇವಗತಿಗೆ, ಪುಣ್ಯಬಂಧ, ಸುಖಕ್ಕೆ ಕಾರಣವಾಗುತ್ತವೆ. ಇವನ್ನು ಪ್ರಕೃತಿಯ ಆರು ಬಣ್ಣಗಳಿಂದ ಸ್ಪಷ್ಟಪಡಿಸಿರುವುದು, ಮನಃಶಾಸ್ತ್ರೀಯ ಹಿನ್ನೆಲೆಯಲ್ಲಿ ಅರ್ಥಗರ್ಭಿತವೂ ಆಗಿದೆ. ಏಕೆಂದರೆ ನಾವೇ ನಮ್ಮ ಮನಸ್ಥಿತಿಯ ಸ್ವರೂಪವನ್ನು, ನಮಗೆ ಇಷ್ಟವಾಗುವ ಬಣ್ಣಗಳಿಂದ ನಿರ್ಧರಿಸಿಕೊಳ್ಳಬಹುದು. ಕ್ರೂರ-ಕ್ರೂರತಮ ವಿಚಾರವಿರುವುದು ಕೃಷ್ಣ ಲೇಶ್ಯೆಯಲ್ಲೂ; ಶುಭ-ಶುಭತರ ವಿಚಾರವಿರುವುದು ಶುಕ್ಲ ಲೇಶ್ಯೆಯಲ್ಲೂ ಎಂದು ಪರಿಗಣಿಸುತ್ತಾರೆ. ಉಳಿದ ಲೇಶ್ಯೆಗಳ ವಿಚಾರಕ್ಕೆ ಸಂಬಂಧಿಸಿದಂತೆ, ಅಶುಭ, ಶುಭಗಳ ಮಿಶ್ರಣವಾಗಿರುತ್ತವೆ.

    ಆರು ಜನ ದಾರಿಹೋಕರು ದಾರಿತಪ್ಪಿ ದಟ್ಟವಾದ ಅರಣ್ಯಕ್ಕೆ ಬರುತ್ತಾರೆ. ತೀವ್ರ ಆಯಾಸ, ಹಸಿವೆಗಳಿಂದ ಬಳಲಿದ್ದಾರೆ. ಆಗ ಫಲಭರಿತವಾದ ಮರವನ್ನು ನೋಡುತ್ತಾರೆ. ಮೊದಲನೆಯವನು ಮರವನ್ನು ಬುಡದಿಂದಲೇ ಕಡಿದು ಹಣ್ಣುಗಳನ್ನು ತಿನ್ನಲು ಆಸೆ ಪಡುತ್ತಾನೆ. ಎರಡನೆಯವನು ಮರದ ಮಧ್ಯಭಾಗವನ್ನು ಕಡಿದು, ಮೂರನೆಯವನು ಮರದ ದೊಡ್ಡ ಗೆಲ್ಲುಗಳನ್ನು ಕಡಿದು ಹಣ್ಣುಗಳನ್ನು ತಿನ್ನಲು ಬಯಸುತ್ತಾನೆ. ನಾಲ್ಕನೆಯವನು ಸಣ್ಣ ಗೆಲ್ಲುಗಳನ್ನು ಕತ್ತರಿಸಿ, ಐದನೆಯವನು ಮರ ಹತ್ತಿ ಪಕ್ವವಾದ ಹಣ್ಣುಗಳನ್ನು ತಿನ್ನಲು ಬಯಸುತ್ತಾನೆ. ಆರನೆಯವನು ತಾನು ಮರಕ್ಕೆ ಹಾನಿ ಮಾಡದೆ, ಪಕ್ವವಾಗಿ ಬಿದ್ದ ಹಣ್ಣುಗಳನ್ನು ತಿಂದು ಸಂತೋಷ ಪಡುತ್ತೇನೆ ಎಂದು ಹೇಳುತ್ತಾನೆ. ಹೀಗೆ ಒಂದೇ ಉದ್ದೇಶವನ್ನು ಬೇರೆ-ಬೇರೆ ದೃಷ್ಟಿಕೋನದಿಂದ ನೋಡಿ ಪ್ರಯತ್ನಿಸುವುದು ಮನುಷ್ಯನ ಸ್ವಭಾವವಾಗಿದೆ. ಅವರಿಗೆಲ್ಲ ಬೇಕಾಗಿರುವುದು ಹಣ್ಣು ಮಾತ್ರ. ಆದರೆ, ಕೆಲವರು ಮರದ ಬಗ್ಗೆ ಯೋಚಿಸದೆ ಹಿಂಸಾಮತಿಗಳಾಗಿ ಮರವನ್ನು ಕಡಿದು, ಹಣ್ಣನ್ನು ಪಡೆಯುವ ದುಷ್ಟ ಪ್ರವೃತ್ತಿಯನ್ನು ತೋರುತ್ತಾರೆ. ಇಂಥ ಪ್ರವೃತ್ತಿಯ ಜನರು ನಮ್ಮ ಸಮಾಜ, ದೇಶ, ಪ್ರಪಂಚದಾದ್ಯಂತ ತುಂಬಿಕೊಂಡಿದ್ದಾರೆ. ಸ್ವಾರ್ಥಿಗಳಾದ ಇವರು ಅನ್ಯರ ಬಗ್ಗೆ, ಅವರ ಸುಖ-ದುಃಖಗಳ ಬಗ್ಗೆ ಆಲೋಚಿಸುವುದೇ ಇಲ್ಲ.

    ಈ ಮೇಲಿನ ದೃಷ್ಟಾಂತದ ಕೊನೆಯ ಮೂವರು ಅಹಿಂಸೆಯ ಪಾಲಕರು. ಮಾನವೀಯತೆಯನ್ನು ಮರೆಯದವರು. ಹಣ್ಣನ್ನು ಪಡೆಯಲು ಮರವನ್ನು ಬುಡಸಹಿತ ಕತ್ತರಿಸುವ ಕ್ರೌರ್ಯಕ್ಕೆ ಹೋಗುವುದಿಲ್ಲ. ಈ ಪ್ರವರ್ತನೆಯ ಜನರು ಲೋಕಕ್ಕೆ ಮಾರ್ಗದರ್ಶಕರಾಗಲು ಯೋಗ್ಯರು. ಪ್ರಪಂಚಕ್ಕೆ ಬೆಳಕು ನೀಡಬಲ್ಲವರು. ‘ಪರಸ್ಪರೋಪಗ್ರಹೋ ಜೀವಾನಾಮ್- ಜೀವಿ-ಜೀವಿಗೆ ನೆರವಾಗಬೇಕು. ತಾನೂ ಬದುಕಿ ಇತರರನ್ನೂ ಬದುಕಲು ಬಿಡಬೇಕು. ಈ ತತ್ತ್ವಗಳು ಆರು ಲೇಶ್ಯೆಗಳಲ್ಲಿ ಅಡಕವಾಗಿವೆ.

    ಬಹ್ವಾರಂಭ ಪರಿಗ್ರಹತ್ವಂ ನಾರಕಾಯುಷ್ಯಃ -ಅಂದರೆ ಬಹಳಷ್ಟು ಪರಿಗ್ರಹಗಳನ್ನು ಸಂಗ್ರಹಿಸುವ ವ್ಯಕ್ತಿ ನರಕಗತಿಗೆ ಹೋಗುತ್ತಾನೆ ಎಂದಿದ್ದಾರೆ. ಪರಿಗ್ರಹಗಳ ಸಂಗ್ರಹದ ಹಿಂದೆ ಓಡುತ್ತಿರುವ ಮನುಷ್ಯರಿಂದಾಗಿ ಇಂದು ಪ್ರಕೃತಿ ಬರಡಾಗುತ್ತಿದೆ, ಬರಿದಾಗುತ್ತಿದೆ. 99ನ್ನು 100 ಮಾಡುವಷ್ಟರಲ್ಲಿ ಜೀವನವೇ ಮುಗಿದುಹೋಗುತ್ತದೆ.

    ಮಹಾವೀರ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾವು ನಮ್ಮ ಮನೆಗಳಲ್ಲಿ ಕುಳಿತು ಆತನ ಉದಾತ್ತ ಚಿಂತನೆಗಳನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳಬೇಕಾಗಿದೆ. ಈ ಶುಭ ಚಿಂತನೆಗಳ ಫಲವಾಗಿ ದೇಶದಲ್ಲಿ ಮತ್ತೆ ಸುಭಿಕ್ಷೆ, ಶಾಂತಿಗಳು ನೆಲೆಸಲೆಂದು ಹಾರೈಸೋಣ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಲಾಕ್​ಡೌನ್​ನಿಂದ ಪರಿಶುದ್ಧದೆಡೆಗೆ ಗಂಗಾ ಜಲ: ಬೆಂಗಳೂರಿನಲ್ಲಿ 65 ರಷ್ಟು ವಾಯುಮಾಲಿನ್ಯ ಕಡಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts